ಗುರುವಾರ , ಮೇ 26, 2022
22 °C

ಮಳೆ ಅವಾಂತರ: ಥಾನುನಾಯಕ ತಾಂಡಾ ರಸ್ತೆ ಸಂಪರ್ಕ ಕಡಿತ

ತೋಟೇಂದ್ರ ಎಸ್. ಮಾಕಲ್ Updated:

ಅಕ್ಷರ ಗಾತ್ರ : | |

ಯರಗೋಳ (ಯಾದಗಿರಿ): ಕಳೆದ ಒಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ಥಾನು ನಾಯಕ ತಾಂಡಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ಹಳ್ಳದ ನೀರು ಹರಿಯುತ್ತಿದ್ದು, ಸಾರ್ವಜನಿಕ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

250 ಜನಸಂಖ್ಯೆ ಇರುವ ತಾಂಡಾದಲ್ಲಿ ಅಂಗನವಾಡಿ ಕೇಂದ್ರ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಒಬ್ಬ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ.

ಪ್ರತಿವರ್ಷ ಮಳೆಯಿಂದಾಗಿ ತಾಂಡಾ ರಸ್ತೆ ಮೇಲಿಂದ 'ಬಿದರಳ್ಳ' ತುಂಬಿ ಹರಿಯುವುದರಿಂದ  ಕೃಷಿಕರು,  ಜಾನುವಾರು, ಕಾರ್ಮಿಕರು ಹೊಲಗಳಿಗೆ ಹೋಗಲು ಪರದಾಡುವಂತಾಗಿದೆ.

ದಿನನಿತ್ಯ ಎಸ್ ಆರ್ ಎಸ್ ಕಟ್ಟಡ ನಿರ್ಮಾಣ ಸಂಸ್ಥೆಯ ನೂರಾರು ಸಂಖ್ಯೆಯ ಟಿಪ್ಪರ್ , ಜೀಪುಗಳು ಸೇರಿದಂತೆ ಇನ್ನಿತರ ವಾಹನಗಳ ಓಡಾಟದಿಂದ ರಸ್ತೆಯು ಮತ್ತೊಂದಿಷ್ಟು ಹದಗೆಟ್ಟಿದೆ.

'ಕೋಟ್ಯಂತರ ರೂಪಾಯಿ ಮೌಲ್ಯದ  ಕಟ್ಟಡ ನಿರ್ಮಾಣ  ಕಂಪನಿಯು ಹಳಕ್ಕೆ ಅಡ್ಡಲಾಗಿ ಮಿನಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲು ಮುಂದಾಗುತ್ತಿಲ್ಲ' ಎಂದು ಹೆಸರೇಳಲಿಚ್ಛಿಸದ ನಿವಾಸಿಯೊಬ್ಬರು ತಿಳಿಸಿದರು.

'ಬ್ರಿಡ್ಜ್ ನಿರ್ಮಿಸುವಂತೆ ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ, ನಮ್ಮ ಹಣೆಬರಹ, ನಾವೇ ಅನುಭವಿಸಬೇಕು' ಎಂದು  ಕೃಷಿಕರು ತಮ್ಮ ಅಳಲು ತೋಡಿಕೊಂಡರು.

ತಾಂಡಾ ನಿವಾಸಿಗಳಿಗೆ ಆರೋಗ್ಯ ಸಮಸ್ಯೆಯಾದರೆ ಸರ್ಕಾರಿ  ಆರೋಗ್ಯ ಸಿಬ್ಬಂದಿ ಹೋಗಲು ಆಗುವುದಿಲ್ಲ. ಶಾಲೆ, ಅಂಗನವಾಡಿ ಚಟುವಟಿಕೆಗಳು ಸ್ಥಗಿತವಾಗಿದೆ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಹಳ್ಳದಲ್ಲಿ ಜಿಗಳೆಗಳು ಹೆಚ್ಚಾಗಿದ್ದು, ಕಾಲಿಗೆ ಗಾಯವಾದವರು, ಹಳ್ಳದಾಟಲು ಹಿಂಜರಿಯುತ್ತಿದ್ದಾರೆ. ಹಲವರಿಗೆ ಕಾಲಿಗೆ ಮೆತ್ತಿಕೊಂಡ ಜಿಗಳೆಗಳಿಂದ ರಕ್ತ ಸ್ರಾವವಾಗಿದೆ. ತಾಂಡಾ ನಿವಾಸಿಗಳ ನೋವು ಯಾರು ಕೇಳೋರಿಲ್ಲದಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದೆ‌ ಎಂದು ತಾಂಡಾ ನಿವಾಸಿಗಳ ಆಗ್ರಹವಾಗಿದೆ.

**
ಮಳೆಗಾಲದಲ್ಲಿ ಥಾನು ನಾಯಕ ತಾಂಡಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹಳ್ಳದ ನೀರು ಹರಿಯುತ್ತದೆ. ಇದರಿಂದಾಗಿ ಶಾಲೆಗೆ ತೆರಳಲು ತೊಂದರೆ ಯಾಗುತ್ತದೆ.
-ಸಣ್ಣಮೀರ, ಶಿಕ್ಷಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು