ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರದ ಇತಿಹಾಸದಲ್ಲೇ ಭೀಕರ ಮಳೆ,  300ಮಿ.ಮೀ ವರ್ಷಧಾರೆ

Last Updated 28 ಜೂನ್ 2020, 7:51 IST
ಅಕ್ಷರ ಗಾತ್ರ

ಶಹಾಪುರ: ಶಹಾಪುರ ತಾಲ್ಲೂಕಿನಲ್ಲಿ ಭಾನುವಾರ ಬೆಳಗಿನ ಜಾವ 1 ಗಂಟೆಗೆ ಆರಂಭವಾದ ಮಳೆಯು 5 ಗಂಟೆಯವರೆಗೆ ಮುಂದುವರೆಯಿತು. ಮಳೆಯ ಹೊಡೆತಕ್ಕೆ ತಗ್ಗು ಪ್ರದೇಶದ 300ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಅವೈಜ್ಞಾನಿಕ ಚರಂಡಿ ನಿರ್ಮಾಣ ಹಾಗೂ ಹಳ್ಳವನ್ನು ಒತ್ತುವರಿ ಮಾಡಿ ಮನೆಗಳನ್ನು ನಿರ್ಮಿಸಿದ್ದರಿಂದ ತೊಂದರೆ ಅನುಭವಿಸುವಂತೆ ಆಗಿದೆ.

'ಮಳೆಯಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ. 300 ಮಿ.ಮೀ ಮಳೆಯಾಗಿದೆ' ಎಂದು ತಹಶೀಲ್ದಾರ ಜಗನಾಥರಡ್ಡಿ ತಿಳಿಸಿದ್ದಾರೆ.

'ಶಹಾಪುರ ಇತಿಹಾಸದಲ್ಲಿ ಒಂದೇ ದಿನ ಇಷ್ಟೊಂದು ಭೀಕರ ಮಳೆಯಾಗಿರುವ ಬಗ್ಗೆ ವರದಿಯಿಲ್ಲ. ಇದು ಇತಿಹಾಸವಾಗಿದೆ' ಎನ್ನುತ್ತಾರೆ ಅವರು.

ನಗರದ ಹೃದಯ ಭಾಗದಲ್ಲಿ ಸೀಳಿಕೊಂಡು ಹೋಗಿರುವ ಹಳೆ ಬಸ್ ನಿಲ್ದಾಣ- ಬಸವೇಶ್ವರ ನಗರ ಮಧ್ಯ ಬರುವ ಹಳ್ಳವನ್ನು ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಲಾಗಿತ್ತು. ಹಳ್ಳಕ್ಕೆ ತಡೆಗೊಡೆ ನಿರ್ಮಿಸಿದ್ದರಿಂದ ನೀರಿನ ರಭಸವು ಹೆಚ್ಚಾಗಿ ಹಳ್ಳದ ಅಕ್ಕ ಪಕ್ಕದ ಮನೆಗಳಿಗೆ ನೀರು ನುಗ್ಗಿದೆ. ಅಲ್ಲದೆ ಹಳ್ಳದ ತಗ್ಗು ಪ್ರದೇಶದಲ್ಲಿದ್ದ ಅಂಗಡಿಯಲ್ಲಿ ನೀರು ನಿಂತಿವೆ. ಬೀದರ್-ಶ್ರೀರಂಗಪಟ್ಟಣದ ಹೆದ್ದಾರಿಯ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೈದಾನದಲ್ಲಿ ನೀರು ಸಂಗ್ರಹವಾಗಿ ಮತ್ತು ರಸ್ತೆ ಮೇಲೆ ನೀರು ಹರಿದ ಪರಿಣಾಮ ಕೆಲ ಹೊತ್ತು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.

ಅಲ್ಲದೆ ನಗರದ ಬಸವೇಶ್ವರ ವೃತ್ತದಲ್ಲಿ ಅಕ್ಕ ಪಕ್ಕದ ಮಳಿಗೆ ನೀರು ನುಗ್ಗಿವೆ. ಇಲ್ಲಿ ಚರಂಡಿ ಮೇಲೆ ಮಳಿಗೆ ನಿರ್ಮಿಸಿರುವುದು ಹಾಗೂ ಅವೈಜ್ಞಾನಿಕ ಚರಂಡಿ ನಿರ್ಮಾಣ ಮತ್ತು ತ್ಯಾಜ್ಯ ವಸ್ತುಗಳನ್ನು ಚರಂಡಿಯಲ್ಲಿ ಎಸೆದಿರುವುದರಿಂದ ಚರಂಡಿಯಲ್ಲಿ ಮಳೆ ನೀರು ಸರಾಗವಾಗಿ ಸಾಗದೆ ರಸ್ತೆಯ ತಗ್ಗು ಪ್ರದೇಶಕ್ಕೆ ನೀರು ನುಗ್ಗಿದೆ. ನಗರದ ಮಾವಿನಕೆರೆ ಹಾಗೂ ನಾಗರಕೆರೆಗೆ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿದ್ದು, ಎರಡು ಕೆರೆಗಳು ಭರ್ತಿಯಾಗುವ ಹಂತದಲ್ಲಿ ಇವೆ. ನಾಗರಕೆರೆ ಕೆಳ ಭಾಗದ ಜನತೆಗೆ ಭೀತಿ ಹೆಚ್ಚಿಸಿದೆ.

ಹಳ್ಳದ ಅಕ್ಕಪಕ್ಕದ ನಿವಾಸಿಗರಿಗೆ ತಕ್ಷಣ ನೆಲೆ ಕಲ್ಪಿಸಲಾಗಿದ್ದು,ನಿರಾಶ್ರಿತರ ಕೇಂದ್ರ ಸ್ಥಾಪಿಸಿ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT