ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ

ಜಿಲ್ಲೆಯಲ್ಲಿ 15 ಎಂ.ಎಂ. ಮಳೆ, ಸೇತುವೆ ಜಲಾವೃತ, ಬೆಳೆ–ಮನೆಗಳಿಗೆ ಹಾನಿ
Last Updated 9 ಸೆಪ್ಟೆಂಬರ್ 2022, 2:32 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು ಬಹುತೇಕ ಕಡೆ ಬೆಳೆಗಳಿಗೆಹಾನಿಯಾಗಿದ್ದು, ಹೆಚ್ಚಿನ ಮನೆಗಳು ಕುಸಿದಿವೆ. ಕೆಲವೆಡೆ ಸೇತುವೆಗಳು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದ್ದು, ಜನರು ಪರದಾಡುವಂತಾಗಿದೆ. ಜಿಲ್ಲೆಯಲ್ಲಿ ಒಟ್ಟು 15 ಮಿ.ಮೀ. ಮಳೆಯಾಗಿದೆ.

ನಗರದಲ್ಲಿ ಗುರುವಾರ ಸಂಜೆ ವರೆಗೆ 28 ಮಿ.ಮೀ. ಮಳೆಯಾಗಿದ್ದು, ನಗರದ ರಸ್ತೆಗಳು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿತ್ತು. ಅಲ್ಲದೇ ನಗರದ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ಮನೆಗಳಲ್ಲಿರುವ ಅಗತ್ಯ ವಸ್ತುಗಳು ನೀರುಪಾಲಾಗಿದ್ದವು. ಪಾದಚಾರಿಗಳು, ಬೈಕ್‌ ಸವಾರರು ರಸ್ತೆ ಜಲಾವೃತಗೊಂಡಿದ್ದರಿಂದ ತೊಂದರೆ ಅನುಭವಿಸಿದರು.

ತಾಲ್ಲೂಕುಗಳಲ್ಲಿ ಧಾರಾಕಾರ ಮಳೆ: ಉಳಿದಂತಾ ತಾಲ್ಲೂಕುಗಳಾದ ಸುರಪುರ, ಹುಣಸಗಿ, ಕೆಂಭಾವಿ ವಲಯದಲ್ಲಿ ಬುಧವಾರ ರಾತ್ರಿ ಧಾರಾಕಾರ ಮಳೆಯಾಗಿದೆ.

ವಡಗೇರಾ ತಾಲ್ಲೂಕಿನ ಅನಸುಗೂರ ಗ್ರಾಮದಲ್ಲಿ ಅಂಗನವಾಡಿ ಜಲಾವೃತಗೊಂಡಿದ್ದರಿಂದ, ಮಕ್ಕಳು ನೀರಿನಲ್ಲಿಯೇ ಮನೆಗೆ ತೆರಳಬೇಕಾಯಿತು. ಧಾರಾಕಾರ ಮಳೆಗೆ ನಾಯ್ಕಲ್‌ ಗ್ರಾಮದಲ್ಲಿ ಕುಂಬಾರರ ಮನೆಗಳು ಜಲಾವೃತವಾಗಿವೆ. ಸರಿಯಾದ ರಸ್ತೆ, ಚರಂಡಿ ಇಲ್ಲದ ಕಾರಣ ಮಳೆ ನೀರು ಮನೆಯೊಳಗೆ ನುಗ್ಗಿವೆ ಎಂದು ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಳ್ಹಾರ ಗ್ರಾಮದ ರೈತರು ಹೊಲಗದ್ದೆಗಳಿಗೆ ತೆರಳುವ ಮಾರ್ಗದಲ್ಲಿ ಹಾದುಹೋಗುವ ಮಸಿಬಿನ ಹಳ್ಳ ತುಂಬಿ ಹರಿಯುತ್ತಿರುವುದರಿಂದ ತೆರಳಲು ಪರದಾಡುವಂತ ಪರಿಸ್ಥಿತಿ ಎದುರಾಗಿದೆ. ಗ್ರಾಮದ ಪರಿಶಿಷ್ಟರ ವಾರ್ಡ್‌ನಲ್ಲಿರುವ ಮನೆಗಳಿಗೆ ನೀರು ನುಗ್ಗಿವೆ.

****

ನೆರವಿಗೆ ಬಾರದ ಸರ್ಕಾರ

ಯಾದಗಿರಿ: ನೆರೆಯಿಂದಾಗಿ ಜನರು ಸಾಕಷ್ಟು ತೊಂದರೆಯಲ್ಲಿ ಇದ್ದು, ಸರ್ಕಾರ ಅವರ ಬೆನ್ನಿಗೆ ನಿಲ್ಲದಿರುವುದು ನಾಚಿಕೆಗೇಡು ಸಂಗತಿ ಎಂದು ಕಾಂಗ್ರೆಸ್ ನಾಯಕ ಡಾ. ಶರಣಬಸವಪ್ಪ ಕಾಮರೆಡ್ಡಿ ಬೆಂಡೆಬೆಂಬಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿ ಅಧಿಕ ಮಳೆಯಿಂದಬೆಳೆ ಹಾನಿ, ಮನೆಗಳು ಜಖಂ, ಮನೆಗೆ ಮಳೆ ನೀರು ನುಗ್ಗಿ ದವಸ ಧಾನ್ಯಗಳು ಹರಿದುಕೊಂಡು ಹೋಗಿವೆ. ಜೀವನ ನಡೆಸಲು ಕಷ್ಟವಾಗುತ್ತದೆ. ಇಂಥ ಹೊತ್ತಿನಲ್ಲಿ ಸಮರೋಪಹಾದಿಯಲ್ಲಿ ಕೆಲಸ ಮಾಡಿ ನೊಂದವರ ಬೆನ್ನಿಗೆ ನಿಲ್ಲಬೇಕಾದ ಸರ್ಕಾರ ಮಾತ್ರ ದೂರ ಉಳಿದುಕೊಂಡಿದೆ. ಅಧಿಕಾರದ ಅಮಲು ನೆತ್ತಿಗೇರಿದೆ.ಇದನ್ನು 2023ರ ವಿಧಾನಸಭೆ ಚುನಾವಣೆಯಲ್ಲಿ ಜನರು ಇಳಿಸುವುದು ಪಕ್ಕಾ ಆಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಜನರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಆದರೆ, ಸರ್ಕಾರ ಮಾತ್ರ ಇದಕ್ಕೂ ತನಗೂ ಕಿಂಚಿತ್‌ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದೆ. ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸುವುದರಲ್ಲಿ ಅನುಮಾನವೇ ಇಲ್ಲ ಎಂದಿದ್ದಾರೆ.

ಈ ಸರ್ಕಾರಕ್ಕೆ ಜನರು ನಿತ್ಯ ಶಾಪ ಹಾಕಿ ಜೀವನ ನಡೆಸುತ್ತಿದ್ದಾರೆ. ಬಿಜೆಪಿ ಸರ್ಕಾರ ನಾಡಿನ ಜನರ ಪಾಲಿಗೆ ಜೀವಂತ ಶವವಾಗಿದೆ ಎಂದು ಕಿಡಿಕಾರಿದ್ದಾರೆ.

****

ಜಿಲ್ಲೆಯಲ್ಲಿ ಕೇಂದ್ರ ನೆರೆ ಅಧ್ಯಯನ ತಂಡ ಪ್ರವಾಸಇಂದು

ಯಾದಗಿರಿ: ಜಿಲ್ಲೆಯಾದ್ಯಂತ ವಿವಿಧ ಭಾಗಗಳಲ್ಲಿ ಮಳೆ, ನೆರೆಯಿಂದ ಆಗಿರುವ ಹಾನಿ ಪರಿಶೀಲಿಸಲು ಕೇಂದ್ರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯದ ನಿರ್ದೇಶಕ ಡಾ.ಕೆ.ಮನೋಹರನ್ ನೇತೃತ್ವದ ಆಂತರಿಕ ಸಚಿವಾಲಯದ ತ್ರಿಸದಸ್ಯ ತಂಡವು ಸೆ.9 ಶುಕ್ರವಾರ ಯಾದಗಿರಿಗೆ ಆಗಮಿಸಿ ಈ ಕೆಳಕಂಡ ಸ್ಥಳಗಳಿಗೆ ಭೇಟಿ ನೀಡಿ ಹಾನಿ ಕುರಿತು ಪರಿಶೀಲಿಸಲಿದೆ.

ಈ ತಂಡವು ಅಂದು ಬೆಳಿಗ್ಗೆ 7-30 ಗಂಟೆಗೆ ನಗರದ ಸರ್ಕ್ಯೂಟ್ ಹೌಸ್‌ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆಯಲಿದೆ.

ನಂತರ ಬೆಳಿಗ್ಗೆ 7-35 ಗಂಟೆಗೆ ನಗರ ಸಮೀಪದ ಗುರುಸಣಗಿ ಬೆಳೆಹಾನಿ ಪರಿಶೀಲಿಸಲಿದೆ. ನಂತರ ಬೆಳಿಗ್ಗೆ 7-45ಕ್ಕೆ ನಾಯ್ಕಲ್ ಗ್ರಾಮದಲ್ಲಿ ಮನೆ ಹಾನಿ ಪ್ರದೇಶ ಪರಿಶೀಲನೆ, ಬೆಳಿಗ್ಗೆ 8-45ಕ್ಕೆ ಸುರಪುರ ಸಮೀಪ ರಸ್ತೆ ಹಾನಿ ಪರಿಶೀಲನೆ ಮಾಡಲಿದೆ.

ಅಂದು ಬೆಳಿಗ್ಗೆ 9-25ಕ್ಕೆ ಕೆಂಭಾವಿ ಮನೆ ಹಾನಿ ಪ್ರದೇಶಗಳಿಗೆ ಭೇಟಿ, 9-45ಕ್ಕೆ ಮಲ್ಲಾ ಬಿ ರೈತರ ಜಮೀನುಗಳಿಗೆ ಭೇಟಿ ಬೆಳೆ ಹಾನಿ, ಬೆಳಿಗ್ಗೆ 10-15 ಕ್ಕೆ ಗೋಗಿ ಕೆ.ಗ್ರಾಮದಲ್ಲಿ ಬೆಳೆ ಹಾನಿ ಬಗ್ಗೆ ಪರಿಶೀಲನೆ, 10-35 ಕ್ಕೆ ಹೊತಪೇಠ ಮನೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ನಂತರ ಈ ತಂಡವು ಶಹಾಪುರ ತಾಲ್ಲೂಕು ಭೀಮರಾಯನಗುಡಿಯಲ್ಲಿ ಪುನಃ ಅಧಿಕಾರಿಗಳೊಂದಿಗೆ ಚರ್ಚಿಸಲಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್., ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT