ಇಲ್ಲಿ ಬಯಲೇ ಶೌಚಾಲಯ, ರಸ್ತೆಯೇ ಚರಂಡಿ

ಬುಧವಾರ, ಜೂನ್ 26, 2019
24 °C
ಗುರುಮಠಕಲ್ ತಾಲ್ಲೂಕಿನ ಚಂಡರಕಿಯಲ್ಲಿ ಸೌಕರ್ಯಗಳದ್ದೇ ಕೊರತೆ

ಇಲ್ಲಿ ಬಯಲೇ ಶೌಚಾಲಯ, ರಸ್ತೆಯೇ ಚರಂಡಿ

Published:
Updated:
Prajavani

ಯಾದಗಿರಿ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಜೂನ್ 21ರಂದು ಗ್ರಾಮ ವಾಸ್ತವ್ಯ ಮಾಡಲಿರುವ ಗುರುಮಠಕಲ್ ತಾಲ್ಲೂಕಿನ ಚಂಡರಕಿ ಗ್ರಾಮವು ಸೌಕರ್ಯಗಳ ತೀವ್ರ ಕೊರತೆ ಎದುರಿಸುತ್ತಿದೆ.

ಇಲ್ಲಿ ಅಕ್ಷರಶಃ ಬಯಲೇ ಶೌಚಾಲಯ. ತೆಗ್ಗುದಿಣ್ಣೆಗಳಿಂದ ಕೂಡಿರುವ ರಸ್ತೆ ಮೇಲೆಯೇ ಚರಂಡಿ ನೀರು ಹರಿಯುತ್ತದೆ. ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದರೂ ಇಲ್ಲಿ ಬ್ಯಾಂಕ್, ರೈತ ಸಂಪರ್ಕ ಕೇಂದ್ರ ಮತ್ತು ಆಸ್ಪತ್ರೆ ಇಲ್ಲ. ರಸ್ತೆಯ ಎರಡೂ ಬದಿಯಲ್ಲೂ ತಿಪ್ಪೆಗುಂಡಿಗಳ ರಾಶಿಯಿದೆ.

5,000ಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಶೇ 20ರಷ್ಟು ಮಾತ್ರ ಶೌಚಾಲಯ ಇದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಶುಚಿತ್ವದ ಕುರಿತು ಜಾಗೃತಿ ಮೂಡಿಸಿದರೂ ಬಹುತೇಕ ಮನೆಗಳಲ್ಲಿ ಶೌಚಾಲಯಗಳಿಲ್ಲ.

ಚಂಡರಕಿ ಗ್ರಾಮ ಪಂಚಾಯಿತಿಗೆ 19 ಮಂದಿ ಸದಸ್ಯರು ಇದ್ದಾರೆ. ಈ ಗ್ರಾಮಪಂಚಾಯಿತಿಗೆ ಮಡೆಪಲ್ಲಿ, ಕೇಶ್ವಾರ, ಕೇಶ್ವಾರ ತಾಂಡಾ ಒಳಪಟ್ಟಿದೆ. ಈ ಗ್ರಾಮದವರೇ ಪಂಚಾಯಿತಿಗೆ ಅಧ್ಯಕ್ಷ, ಉಪಾಧ್ಯಕ್ಷರು. ಒಬ್ಬರು ತಾಲ್ಲೂಕು ಪಂಚಾಯಿತಿ ಸದಸ್ಯರೂ ಇದ್ದಾರೆ. ಆದರೆ ಸಮಸ್ಯೆಗಳು ನಿವಾರಣೆಯಾಗಿಲ್ಲ. ಗ್ರಾಮಕ್ಕೆ ಸೌಲಭ್ಯಗಳು ದಕ್ಕಿಲ್ಲ.

ಕೆಲವರು ತಮ್ಮ ಮನೆಗಳಿಗೆ ಶೌಚಾಲಯ ನಿರ್ಮಿಸಿಕೊಂಡಿದ್ದರೆ, ಶೌಚಾಲಯ ಕಟ್ಟಿಕೊಂಡರೂ ಸರ್ಕಾರದಿಂದ ಹಣ ಬರುವುದಿಲ್ಲ ಎಂದು ಗ್ರಾಮಸ್ಥರು ಅದರ ಉಸಾಬದರಿಗೆ ಹೋಗಿಲ್ಲ.

ಇಲ್ಲಿ ನೀರಿನದ್ದೇ ದೊಡ್ಡ ಸಮಸ್ಯೆಯಾಗಿದೆ. ಸರ್ಕಾರಿ ಶಾಲಾ ಆವರಣದಲ್ಲಿಯೇ ಸುಮಾರು 8–10 ಕೊಳವೆ ಬಾವಿಗಳಿವೆ. ನೀರಿಲ್ಲದೇ ಕೆಲವು ಬತ್ತಿವೆ. ಈಗ ಖಾಸಗಿ ಕೊಳವೆ ಬಾವಿಯಿಂದ ಗ್ರಾಮಕ್ಕೆ ಪೈಪ್ ಲೈನ್ ಮೂಲಕ ನೀರು ಸರಬರಾಜು ವ್ಯವಸ್ಥೆ ಮಾಡಲಾಗಿದೆ. ಆದರೂ ನೀರಿಗಾಗಿ ಪರದಾಟ ತಪ್ಪಿಲ್ಲ.

‘ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಹೂಳು ಎತ್ತಿದ್ದೇವೆ. ಆದರೆ ಎರಡು ವರ್ಷಗಳಿಂದ ಕೂಲಿ ಹಣ ಬಂದಿಲ್ಲ. ಕೆಲಸ ಇಲ್ಲದೇ ಕಂಗಾಲು ಆಗಿ ಕೆಲವರು ಗ್ರಾಮದಲ್ಲಿಯೇ ಉಳಿದುಕೊಂಡಿದ್ದರೆ, ಕೆಲಸ ಹುಡುಕಿಕೊಂಡು ಕೆಲವರು ಕಲಬುರ್ಗಿ, ಬೆಂಗಳೂರು ಮತ್ತು ಹೈದರಾಬಾದ್‌ಗೆ ಗುಳೆ ಹೋಗಿದ್ದಾರೆ’ ಎಂದು ಗ್ರಾಮಸ್ಥರು ತಿಳಿಸಿದರು.

‘ಗ್ರಾಮಕ್ಕೆ ಬಸ್‌ ವ್ಯವಸ್ಥೆಯು ಸಮರ್ಪಕವಾಗಿಲ್ಲ. ಸಕಾಲಕ್ಕೆ ಬಸ್‌ ಬಾರದ ಕಾರಣ ವಿದ್ಯಾರ್ಥಿಗಳು ಶಾಲಾಕಾಲೇಜಿಗೆ ತಡವಾಗಿ ಹೋಗುತ್ತಾರೆ. ಇಲ್ಲಿ ಹಳೆಯ ಬಸ್‌ಗಳೇ ಹೆಚ್ಚು ಸಂಚರಿಸುವ ಕಾರಣ ಅವು ಗುಡ್ಡಗಾಡು ಪ್ರದೇಶದಲ್ಲಿ ಏರುವುದಿಲ್ಲ. ಹೀಗಾಗಿ ಕೆಲ ಸಂದರ್ಭಗಳಲ್ಲಿ ಪ್ರಯಾಣಿಕರೇ ಬಸ್‌ನ್ನು ತಳ್ಳಬೇಕಾಗುತ್ತದೆ’ ಎಂದು ಅವರು ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !