ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಹೆದ್ದಾರಿಯೇ ಕುರಿ, ಮೇಕೆ ಮಾರುಕಟ್ಟೆ!

ಕೋವಿಡ್‌ ಕಾರಣದಿಂದ ಎಪಿಎಂಸಿಗೆ ಪ್ರವೇಶವಿಲ್ಲ; ವಾಹನ ದಟ್ಟಣೆ ಕಿರಿಕಿರಿ
Last Updated 23 ಸೆಪ್ಟೆಂಬರ್ 2020, 3:53 IST
ಅಕ್ಷರ ಗಾತ್ರ

ಯಾದಗಿರಿ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಗಂಣದಲ್ಲಿ ಕುರಿ ಮತ್ತು ಮೇಕೆ ಮಾರುಕಟ್ಟೆ ಇದ್ದರೂ ಅನುಮತಿ ಸಿಗದ ಕಾರಣ ರೈತರು ಜೀವ ಭಯದಲ್ಲಿಹೆದ್ದಾರಿ ಮೇಲೆಪ್ರತಿ ಮಂಗಳವಾರ ಸಂತೆನಡೆಸುತ್ತಿದ್ದಾರೆ.

ಕೋವಿಡ್‌–19 ಕಾರಣ ಎಪಿಎಂಸಿ ಒಳಗೆ ಜಾನುವಾರುಮಾರಾಟಕ್ಕೆ ಅನುಮತಿ ಸಿಕ್ಕಿಲ್ಲ. ಇದರಿಂದ ಹಲವಾರು ದಿನಗಳಿಂದ ರಸ್ತೆ ಬದಿಯೇ ಮಾರಾಟ ಮತ್ತು ಖರೀದಿ ಪ್ರಕ್ರಿಯೆ ನಡೆದಿದೆ ಎಂದು ರೈತರು ಮಾಹಿತಿ ನೀಡುತ್ತಾರೆ.

ಹೆದ್ದಾರಿಯೇ ಮಾರುಕಟ್ಟೆ: ಗಂಜ್‌ ಹಿಂಭಾಗದ ರಾಜ್ಯ ಹೆದ್ದಾರಿ ಮೇಲೆಯೇ ಸಂತೆ ನಡೆಯುತ್ತದೆ. ಅರ್ಧ ರಸ್ತೆಯನ್ನು ವ್ಯಾಪಾರಿಗಳು ಆಕ್ರಮಿಸಿಕೊಂಡಿರುತ್ತಾರೆ. ಅರ್ಧ ದಾರಿಯಲ್ಲಿ ಮಾತ್ರ ವಾಹನಗಳು ಹರಸಾಹಸ ಪಟ್ಟು ಸಂಚರಿಸಬೇಕಾಗಿದೆ. ಸ್ವಲ್ಪ ಯಾಮಾರಿದರೂ ಜೀವಕ್ಕೆ ಅಪಾಯವಿದೆ. ಇದನ್ನು ಲೆಕ್ಕಿಸದೇ ರೈತರು ವ್ಯಾಪಾರದಲ್ಲಿ ತೊಡಗಿಸಿಕೊಂಡಿರುತ್ತಾರೆ.

ಪ್ರತಿ ಮಂಗಳವಾರಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆ ತನಕ ಕುರಿ, ಮೇಕೆ ಸಂತೆ ನಡೆಯುತ್ತದೆ. ಜಿಲ್ಲೆ ಅಲ್ಲದೆ ನೆರೆಯ ಜಿಲ್ಲೆಗಳಿಂದಲೂ ವ್ಯಾಪಾರಿಗಳು ಆಗಮಿಸುತ್ತಾರೆ. ಆದರೆ, ರೈತರಿಗೆ ಯಾವುದೇ ಸೌಲಭ್ಯವಿಲ್ಲ. ಮಳೆ ಬಂದರೆ ತೊಯ್ದುಕೊಂಡೆ ವ್ಯಾಪಾರ ನಡೆಸಬೇಕಾಗುತ್ತದೆ.

ಕುರಿ, ಮೇಕೆ ಮಾರಾಟಗಾರರು ತಮ್ಮ ವಾಹನವನ್ನು ತಂದು ರಸ್ತೆ ಮೇಲೆಯೇ ನಿಲ್ಲಿಸುತ್ತಾರೆ. ಟಂಟಂ ಇನ್ನಿತರ ವಾಹನಗಳಲ್ಲಿ ಕುರಿಗಳನ್ನು ತಂದು ಇಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಕೆಲ ಗಂಟೆಗಳ ಕಾಲ ಆ ಪ್ರದೇಶದಲ್ಲಿ ಟ್ರಾಫಿಕ್‌ ಜಾಂ ಉಂಟಾಗುತ್ತದೆ.

ಕೃಷಿ ಉಪಕರಣ ಜೊತೆಗೆ ರಾಸುಗಳಿಗೆ ಬೇಕಾದ ಅಲಂಕಾರಿಕ ವಸ್ತುಗಳು ಅಲ್ಲಿ ಮಾರಾಟಕ್ಕೆ ಇಡಲಾಗುತ್ತಿದೆ.ಮಾರಾಟಗಾರರ ಜೊತೆಗೆಟೀ, ತಿಂಡಿ ವ್ಯಾಪಾರ ಕೂಡ ನಡೆಯುತ್ತದೆ. ಆಟೊಗಳನ್ನು ನಿಲ್ಲಿಸಿಕೊಂಡು ಚಾಲಕರು ಪ್ರಯಾಣಿಕರಿಗಾಗಿ ಕಾಯುತ್ತಾರೆ. ತಾಡಪತ್ರಿ,ಮೀನು ಬಲೆ, ಐಸ್ಕ್ರಿಮ್‌, ಜ್ಯೂಸ್‌ ಇನ್ನಿತರ ವ್ಯಾಪಾರಿಗಳು ಅಲ್ಲಿ ಜಮಾಯಿಸುತ್ತಾರೆ.

‘ಎಪಿಎಂಸಿ ಹೊರಗಡೆ ಮಾರಾಟ ಮಾಡುತ್ತಿದ್ದರೂ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ವ್ಯಾಪಾರಿಗಳು ಪ್ರತಿ ಮಂಗಳವಾರ ರಸ್ತೆಯನ್ನೇ ಆಕ್ರಮಿಸಿಕೊಂಡಿರುತ್ತಾರೆ. ನಾವೇ ಸಮಾಧಾನ ಮಾಡಿಕೊಂಡು ನಿಧಾನವಾಗಿ ತೆರಳುತ್ತೇವೆ’
ಎನ್ನುತ್ತಾರೆ ವಾಹನ ಚಾಲಕ ಮಹಮದ್‌ ಇಮ್ರಾನ್‌.

‘ನಾನು ರಾಯಚೂರು ಜಿಲ್ಲೆಯ ದೇವದುರ್ಗದಿಂದ ಬಂದಿದ್ದೇನೆ. ಇಲ್ಲಿ ಮಾತ್ರ ರಸ್ತೆ ಮೇಲೆ ಮಾರುಕಟ್ಟೆ ನಡೆಯುತ್ತಿದೆ. ಬೇರೆ ಕಡೆ ಎಲ್ಲವೂ ಎಪಿಎಂಸಿ ಪ್ರಾಂಗಣದಲ್ಲಿ ನಡೆಯುತ್ತಿದೆ’ ಎನ್ನುತ್ತಾರೆಕುರಿ ವ್ಯಾಪಾರಿ ಬೂದೆಪ್ಪ ರಾಠೋಡ.

ಎಪಿಎಂಸಿ ಪ್ರಾಂಗಣದಲ್ಲಿ 2015–16 ನೇ ಸಾಲಿನ ಆರ್‌ಕೆಆರ್‌ವೈ ಯೋಜನೆಯಡಿ ಕುರಿ ಮತ್ತು ಮೇಕೆ ಮಾರುಕಟ್ಟೆ ನಿರ್ಮಿಸಲಾಗಿದೆ. ಅಲ್ಲಿ ನೀರಿನ ವ್ಯವಸ್ಥೆ ಇಲ್ಲ. ರೈತರು ತೆರಳಲು ಸರಿಯಾದ ರಸ್ತೆ ಇಲ್ಲ. ಅಕ್ರಮ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ ಎಂದು ವ್ಯಾಪಾರಿಗಳು ದೂರುತ್ತಾರೆ.

‘ಕೊರೊನಾ ಕಾರಣದಿಂದ ಎಪಿಎಂಸಿ ಒಳಗೆ ಅವಕಾಶವಿರಲಿಲ್ಲ. ಅಲ್ಲದೆ ನೀರಿನ ಸಮಸ್ಯೆಯೂ ಇದೆ.ನೀರಿನ ವ್ಯವಸ್ಥೆ ಮಾಡಿದ ನಂತರ ರೈತರಿಗೆ ಪ್ರವೇಶ ನೀಡಲಾಗುವುದು. ಕೋವಿಡ್‌ ಕಾರಣದಿಂದ ಪೈಪ್‌ಲೈನ್‌ ಕಾಮಗಾರಿ ನನೆಗುದಿಗೆ ಬಿದ್ದಿದೆ. ರೈತರ ಸಮಸ್ಯೆಗಳನ್ನು ನೀಗಿಸಲು ಪ್ರಯತ್ನಿಸಲಾಗುವುದು’ ಎನ್ನುತ್ತಾರೆಎಪಿಎಂಸಿ ಕಾರ್ಯದರ್ಶಿ ಸುಮಂಗಲಾ ಹೂಗಾರ.

***

ಹಲವಾರು ದಿನಗಳಿಂದ ರಸ್ತೆ ಮೇಲೆಯೇ ಸಂತೆ ನಡೆಯುತ್ತಿದ್ದು, ಎಪಿಎಂಸಿ ಒಳಗೆ ಕುರಿ, ಮೇಕೆ ಕರೆದೊಯ್ಯಲು ಅನುಮತಿ ಸಿಕ್ಕಿಲ್ಲ

ಬೂದೆಪ್ಪ ರಾಠೋಡ ವ್ಯಾಪಾರಿ

***

ರಾಜ್ಯ ಹೆದ್ದಾರಿ ಮೇಲೆಯೇ ಮಾರುಕಟ್ಟೆ ನಡೆಯುತ್ತಿದ್ದು, ಜೀವ ಭಯದಲ್ಲಿ ಖರೀದಿಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ. ಅಧಿಕಾರಿಗಳು ಇತ್ತ ಗಮನಹರಿಸಲಿ

ನಿಂಗಪ್ಪ ದೋರನಹಳ್ಳಿ, ಗ್ರಾಹಕ

***

ರಸ್ತೆ ಮೇಲೆ ಕುರಿ ಮತ್ತು ಮೇಕೆ ವ್ಯಾಪಾರ ಗಮನಕ್ಕೆ ಬಂದಿದೆ. ಮುಂದಿನ ವಾರದಿಂದ ಎಪಿಎಂಸಿ ಪ್ರಾಗಂಣದಲ್ಲಿರುವ ಮಾರುಕಟ್ಟೆಯಲ್ಲಿ ಅವಕಾಶ ಕಲ್ಪಿಸಲಾಗುವುದು

ಸುಮಂಗಲಾ ಹೂಗಾರ ಎಪಿಎಂಸಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT