ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆ.3 ರಿಂದ ಸುರಪುರದ ವಿಶಿಷ್ಟ ‘ಹಾಲೋಕುಳಿ’ ಜಾತ್ರೆ

ಪ್ರಜಾವಾಣಿ ವಾರ್ತೆ
Last Updated 1 ಸೆಪ್ಟೆಂಬರ್ 2018, 16:49 IST
ಅಕ್ಷರ ಗಾತ್ರ

ಸುರಪುರ: ಇಲ್ಲಿನ ಐತಿಹಾಸಿಕ ವೇಣುಗೋಪಾಲಸ್ವಾಮಿ ಜಾತ್ರಾ ಮಹೋತ್ಸವ ಸೆಪ್ಟೆಂಬರ್‌ 3ರಿಂದ 5ರವರೆಗೆ ನಡೆಯಲಿದ್ದು, ಅಂದು ಬೆಳಿಗ್ಗೆ 5 ಗಂಟೆಗೆ ಸುಪ್ರಭಾತದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ ಎಂದು ದೇವಸ್ಥಾನದ ಮುಖ್ಯ ಅರ್ಚಕ ಆಂಜನೇಯಚಾರ್ಯುಲು ತಿಳಿಸಿದ್ದಾರೆ.

ನಂತರ ಪಂಚಾಮೃತಾಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ನಡೆಯಲಿದೆ. ಸಂಜೆ 6 ಗಂಟೆಗೆ ಉಯ್ಯಾಲ ಸೇವೆ, ರಾತ್ರಿ 8 ಗಂಟೆಗೆ ತೀರ್ಥ ವಿನಿಯೋಗ ನಡೆಯಲಿದೆ. ಸೆ. 4 ರಂದು ಬೆಳಿಗ್ಗೆ ಸುಪ್ರಭಾತ, ಅಭಿಷೇಕ, ಅಲಂಕಾರ, ಸಂಜೆ 5 ಗಂಟೆಗೆ ದೇವರಸ್ತಂಭಾರೋಹಣ, 7 ಗಂಟೆಗೆ ಪಲ್ಲಕ್ಕಿ ಉತ್ಸವ. ಸೆ. 5 ರಂದು ಬೆಳಿಗ್ಗೆ 11 ಗಂಟೆಗೆ ದೇವಸ್ಥಾನ ಆವರಣದಲ್ಲಿ ಕುಸ್ತಿ ಪಂದ್ಯ ಆಯೋಜಿಸಲಾಗಿದ್ದು, ಸಂಜೆ 5 ಗಂಟೆಗೆ ರಣಸ್ತಂಭಾರೋಹಣ ಜರುಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಗೋಸಲ ವಂಶಸ್ಥ ರಾಜ ಪೀತಾಂಬರ ಬಹರಿ ಪಿಡ್ಡನಾಯಕ ಕ್ರಿ.ಶ 1710ರಲ್ಲಿ ನಿರ್ಮಿಸಿದ ಈ ದೇವಾಲಯದ ಜಾತ್ರೆಯು ಕಳೆದ 3 ಶತಮಾನಗಳಿಂದ ನಡೆಯುತ್ತಾ ಬಂದಿದೆ.

ವೈಷ್ಣವ ಮತಾವಲಂಬಿಗಳಾದ ಇಲ್ಲಿನ ಅರಸರ ಆರಾಧ್ಯ ದೈವ ವೇಣುಗೋಪಾಲಸ್ವಾಮಿ. ಹಾಗಾಗಿ ಈ ಭಾಗದ ಜನರು ಕೃಷ್ಣ ಜಯಂತಿಯನ್ನು ‘ಹಾಲೋಕುಳಿ’ ಎಂದೇ ಆಚರಿಸುತ್ತಾರೆ. ಶ್ರಾವಣ ಬಹುಳ ರೋಹಿಣಿ ನಕ್ಷತ್ರ ಬರುವ ದಿನದಂದು ಪ್ರತಿ ವರ್ಷ ಜಾತ್ರೆಯನ್ನು ಆಚರಿಸುತ್ತಾ ಬರಲಾಗಿದೆ.

ಮನರಂಜನೆಯ ಹಾಲೋಕುಳಿ :ಹಾಲಿನಿಂದ ಓಕುಳಿ ಆಡುವುದನ್ನು ಹಾಲೋಕುಳಿ ಎಂದು ಕರೆಯುತ್ತಾರೆ. ದಶಕಗಳ ಹಿಂದೆ ಗೋಸಂಪತ್ತು ಅಧಿಕವಾಗಿತ್ತು. ವಿಶೇಷವಾಗಿ ಸಿದ್ಧಪಡಿಸಿದ ಚರ್ಮದ ಪಿಚಗಾರಿಯಲ್ಲಿ ಹಾಲನ್ನು ತುಂಬಿಕೊಂಡು ಸ್ತಂಭಾರೋಹಿಗಳಿಗೆ ಮತ್ತು ಜನರಿಗೆ ಎರಚುವ ಪದ್ಧತಿ ಇತ್ತು. ಕ್ರಮೇಣ ಹಾಲಿನ ಬದಲಿಗೆ ನೀರನ್ನು ಉಪಯೋಗಿಸಲಾಗುತ್ತಿದೆ.

ದೇಶದ ವಿರಳ ಹಾಗೂ ವಿಶಿಷ್ಟ ಸ್ತಂಭಾರೋಹಣ ಈ ಜಾತ್ರೆಯ ವಿಶೇಷ. ದೇವಸ್ಥಾನದ ಕೆಳಗಡೆ ಇರುವ ಆವರಣದಲ್ಲಿ 50 ಅಡಿ ಉದ್ದವಿರುವ ದೊಡ್ಡಗಾತ್ರದ 5 ಕಂಬಗಳನ್ನು ನೆಡಲಾಗಿರುತ್ತದೆ. ವಲ್ಲಭಭಾಯ್‌ ಪಟೇಲ್‌ ಪುತ್ಥಳಿ ಹತ್ತಿರದಲ್ಲಿ ಇದೇ ರೀತಿಯ 2 ಕಂಬಗಳನ್ನು ಹಾಕಲಾಗಿರುತ್ತದೆ. ಕಂಬಗಳಿಗೆ ಅರದಾಳ, ಬೆಣ್ಣೆಬಾಳ (ಜಾರುವ ಪದಾರ್ಥಗಳು) ಗಳನ್ನು ಸವರಿ ನುಣ್ಣಗೆ ಮಾಡಲಾಗಿರುತ್ತದೆ. ಕಂಬಗಳ ತುದಿಯಲ್ಲಿ ನೀರು ತುಂಬಿದ ಮಡಿಕೆಗಳನ್ನು ಇಟ್ಟುಕೊಂಡು ಇಬ್ಬರು ಕೂಡುವಷ್ಟು ಸ್ಥಳವುಳ್ಳ ಮಂಟಪವನ್ನು ಕಟ್ಟಿರುತ್ತಾರೆ. ಮಂಟಪದ ಕೆಳಭಾಗದಲ್ಲಿ ಬಾಳೆಹಣ್ಣು ಮತ್ತು ಕುಂಬಳಕಾಯಿ ಹೋಳುಗಳನ್ನು ಕಟ್ಟಿರುತ್ತಾರೆ.

ಕಂಬಗಳನ್ನು ಎರುವ ಜನರಿಗೆ ಕೆಳಗಿರುವ ಜನರು ಪಿಚಗಾರಿಯಿಂದ ನೀರನ್ನು ಚಿಮ್ಮಿಸುತ್ತಾರೆ. ಮಂಟಪದಲ್ಲಿ ಕುಳಿತ ವ್ಯಕ್ತಿ ಮೇಲಿನಿಂದ ನೀರು ಸುರಿಯುತ್ತಾರೆ. ಇದರಿಂದ ಕಂಬ ಹತ್ತುವವರು ಜಾರಿ ಜಾರಿ ಕೆಳಗೆ ಬೀಳುವುದು ಮನರಂಜನೆ ಒದಗಿಸುತ್ತದೆ. ಎರಡು ಮೂರು ಗಂಟೆ ಕಷ್ಟಪಟ್ಟು ಕೊನೆಗೂ ಒಬ್ಬರ ಸಹಾಯದಿಂದ ಒಬ್ಬರು ಮೇಲೆ ಹತ್ತಿ ಹಣ್ಣುಗಳ ಹೋಳುಗಳನ್ನು ಹರಿಯುತ್ತಾರೆ. ನೆರೆದ ಜನಸ್ತೋಮ ಹೋ.. ಎಂದು ಕರತಾಡನದ ಮೂಲಕ ಸಂಭ್ರಮಿಸುತ್ತಾರೆ.

ಕುಸ್ತಿ ಪಂದ್ಯಗಳ ರೋಚಕತೆ

ದಸರಾ ಉತ್ಸವ ಮಾದರಿಯಲ್ಲಿ ಕುಸ್ತಿ ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಇಲ್ಲಿನ ಕುಸ್ತಿ ರಾಜ್ಯದಲ್ಲೆ ಹೆಸರುವಾಸಿ. ರಾಜ್ಯ ಮತ್ತು ನೆರೆ ರಾಜ್ಯಗಳಿಂದ ಹೆಸರಾಂತ ಜಟ್ಟಿಗಳು ಭಾಗವಹಿಸುತ್ತಾರೆ.ಕುಸ್ತಿ ವೀಕ್ಷಿಸಲು ಸಹಸ್ರಾರು ಜನ ಸೇರಿರುತ್ತಾರೆ.

ವಯಸ್ಸು ಮತ್ತು ತೂಕದ ಆಧಾರದಲ್ಲಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ವಿಜೇತರಿಗೆ ಬೆಳ್ಳಿ ಕಡಗ, ನಗದು ಬಹುಮಾನ ನೀಡಿ ಗೌರವಿಸಲಾಗುತ್ತದೆ. ಅವರನ್ನು ಮೆರವಣಿಗೆಯಲ್ಲಿ ಅರಮನೆಗೆ ಕರೆ ತಂದು ಅರಸರಿಂದ ಸತ್ಕರಿಸಲಾಗುತ್ತದೆ.

ವೈಷ್ಣವ ಮತಾವಲಂಬಿಗಳಾದ ನಾವು ವೇಣುಗೋಪಾಲಸ್ವಾಮಿಯ ಜಾತ್ರೆಯನ್ನು ಶತಮಾನಗಳಿಂದ ಆಚರಿಸುತ್ತಾ ಬಂದಿದ್ದೇವೆ.
- ರಾಜಾ ಕೃಷ್ಣಪ್ಪನಾಯಕ, ಸಂಸ್ಥಾನಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT