ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ: ಹೂಳೆತ್ತಿದ ಹೊಸಕೇರಾ ಕೆರೆ ಭರ್ತಿ

₹1 ಕೋಟಿ ಅನುದಾನದಲ್ಲಿ 20.20 ಎಕರೆ ವಿಸ್ತೀರ್ಣದ ಕೆರೆ ಅಭಿವೃದ್ಧಿ
Last Updated 24 ಸೆಪ್ಟೆಂಬರ್ 2020, 2:56 IST
ಅಕ್ಷರ ಗಾತ್ರ

ಶಹಾಪುರ: ಹರಿಯುವ ನೀರು ತಡೆದು ನಿಲ್ಲಿಸಬೇಕು. ನಿಂತ ನೀರು ಇಂಗಿಸಬೇಕು ಎಂಬ ಮಹತ್ವಾಕಾಂಕ್ಷೆ ಯೋಜನೆ ಅಡಿಯಲ್ಲಿ ತಾಲ್ಲೂಕಿನ ಹೊಸಕೇರಾ ಗ್ರಾಮದ ಬಳಿ ಕೆರೆ ಹೂಳೆತ್ತಿ ನೀರು ಸಂಗ್ರಹಿಸುವ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡಿದ್ದರಿಂದ ಹಾಗೂ ಪ್ರಸಕ್ತ ಬಾರಿ ಉತ್ತಮ ಮಳೆಯಾಗಿದ್ದ ರಿಂದ ಕೆರೆ ಒಡಲು ತುಂಬಿಕೊಂಡಿದೆ.

‘ತಾಲ್ಲೂಕಿನ ಹೊಸಕೇರಾ ಕೆರೆ ಹೂಳೆತ್ತಿ ನೀರು ಸಂಗ್ರಹಕ್ಕಾಗಿ 2018-19ನೇ ಸಾಲಿನಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ಯೋಜನೆ ಅಡಿಯಲ್ಲಿ ₹1 ಕೋಟಿ ಅನುದಾನ ಬಿಡುಗಡೆಯಾಗಿತ್ತು. 20 ಎಕರೆ 20 ಗುಂಟೆ ವಿಸ್ತೀರ್ಣ ಹೊಂದಿರುವ ಕೆರೆಯನ್ನು ಅಭಿವೃದ್ಧಿಪಡಿಸುವುದು ಹಲವು ವರ್ಷದ ಬೇಡಿಕೆಯಾಗಿತ್ತು. ಗ್ರಾಮಸ್ಥರ ಸಹಕಾರದಿಂದ ಬೇಸಿಗೆ ಕಾಲದಲ್ಲಿ ಕೆರೆಯಂಗಳದಲ್ಲಿ ಬಿದ್ದಿರುವ ತ್ಯಾಜ್ಯ ವಸ್ತುಗಳನ್ನು ಹೊರ ಹಾಕಲಾಯಿತು. ಆಳವಾಗಿ ಹೂಳು ತೆಗೆದು ಹಾಗೂ ಕೆರೆಯ ಬದುವನ್ನು ದುರಸ್ತಿಗೊಳಿಸಿ ಸಂಪೂರ್ಣವಾಗಿ ನೀರು ಸಂಗ್ರಹವಾಗಿ ಅನುಕೂಲ ಮಾಡಲಾಗಿತ್ತು. ನಿರೀಕ್ಷೆಗೂ ಮೀರಿ ಮಳೆಯಾಗಿದ್ದರಿಂದ ಈಗ ನೀರು ಸಂಗ್ರಹವಾಗಿದೆ. ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.

ಹೊಸಕೇರಾ ಗ್ರಾಮದ ಸುತ್ತಮುತ್ತ ಲಿನ ಹಳ್ಳಿಗಳಿಗೆ ಕಾಲುವೆ ನೀರಿನ ಭಾಗ್ಯವಿಲ್ಲ. ಇಲ್ಲಿನ ಪ್ರದೇಶ ಎತ್ತರವಾಗಿದ್ದ ರಿಂದ ಕಾಲುವೆ ನೀರು ಹರಿಸಲು ಸಾಧ್ಯವಾಗಿಲ್ಲ. ಅನಿವಾರ್ಯವಾಗಿ ರೈತರು ಕೊಳವೆಬಾವಿ, ಕೃಷಿಹೊಂಡ ಮುಂತಾದ ನೀರಿನ ಮೂಲವನ್ನು ಕಂಡು ಹಿಡಿದು ವ್ಯವಸಾಯ ಮಾಡುತ್ತೇವೆ. ಸಮರ್ಪಕವಾಗಿ ಮಳೆ ಬಾರದ ಕಾರಣ ಬೇಸಿಗೆಯಲ್ಲಿ ಅಂತರ್ಜಲಮಟ್ಟ ಕುಸಿತದಿಂದ ನೀರಿನ ಸಮಸ್ಯೆ ಉಂಟಾಗುತ್ತಿತ್ತು. ಈಗ ಕೆರೆಯನ್ನು ಅಭಿವೃದ್ಧಿಪಡಿಸಿ ನೀರು ಸಂಗ್ರಹಗೊಳಿಸಿದ್ದರಿಂದ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗುವುದಿಲ್ಲ. ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎನ್ನುತ್ತಾರೆ ಹೊಸಕೇರಾ ಗ್ರಾಮಸ್ಥರು.

ಐತಿಹಾಸಿಕ ಕೊಂಡಿ: ಸುರಪುರ ಸಂಸ್ಥಾನದ ರಾಜಾ ದೇವಿಂದ್ರ ವೆಂಕಟ ನಾಯಕ ಅವರು ಹೊಸಕೇರಾ ಗ್ರಾಮದ ಬಳಿಯ ಕೆರೆಯ ದಂಡೆಯಲ್ಲಿ ರೋಮನ್ ಶೈಲಿಯಲ್ಲಿ ಬೇಟೆ ಅರಮನೆ ನಿರ್ಮಿಸಿದ್ದರು. ರಾತ್ರಿ ಸಮಯದಲ್ಲಿ ಪ್ರಾಣಿಗಳು ಕೆರೆಯ ನೀರು ಕುಡಿಯಲು ಬರುತ್ತಿದ್ದಾಗ ಅರಮನೆಯಲ್ಲಿ ಕುಳಿತುಕೊಂಡು ಬೇಟೆಯಾಡುತ್ತಿದ್ದರು. ಇಂದಿಗೂ ಬೇಟೆ ಅರಮನೆ ಇದೆ. ಸರಿಯಾದ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ. ಸೂಕ್ತ ರಕ್ಷಣೆ ನೀಡಿದರೆ ಐತಿಹಾಸಿಕ ಸ್ಮಾರಕವನ್ನು ಉಳಿಸಿದಂತೆ ಆಗುತ್ತದೆ ಎನ್ನುತ್ತಾರೆ ಇತಿಹಾಸ ಆಸಕ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT