ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯ ಆರೋಗ್ಯ ಕೇಂದ್ರ; ಕೊರತೆಗಳ ಆಗರ

ಸಮರ್ಪಕ ಚಿಕಿತ್ಸೆ ಪಡೆಯಲು ಜಿಲ್ಲಾ ಆಸ್ಪತ್ರೆಯೇ ಗತಿ
Last Updated 5 ಏಪ್ರಿಲ್ 2020, 9:57 IST
ಅಕ್ಷರ ಗಾತ್ರ

ಗುರುಮಠ‌ಕಲ್: ತಾಲ್ಲೂಕು ಕೇಂದ್ರವಾದರೂ ಗುರುಮಠಕಲ್‌ನಲ್ಲಿ ತಾಲ್ಲೂಕು ಆಸ್ಪತ್ರೆಯಿಲ್ಲ. ಪಟ್ಟಣಕ್ಕೆ ಒಂದೇ ಸಮುದಾಯ ಆರೋಗ್ಯ ಕೇಂದ್ರವಿದ್ದರೂ ಅದಕ್ಕೆ ಪೂರ್ಣಪ್ರಮಾಣದ ಸೌಲಭ್ಯ ಮತ್ತು ವೈದ್ಯಕೀಯ ಸಿಬ್ಬಂದಿಗಳಿಲ್ಲ. ಹಲವು ಕೊರತೆಗಳ ಮಧ್ಯೆಯೂ ಇಲ್ಲಿನ ವೈದ್ಯಕೀಯ ಸಿಬ್ಬಂದಿ ಜನರಿಗೆ ಚಿಕಿತ್ಸೆ ನೀಡಿ, ಆರೋಗ್ಯ ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಒಟ್ಟು 30 ಹಾಸಿಗೆಗಳ ಸಾಮರ್ಥ್ಯದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಪ್ರಾಥಮಿಕ ತಪಾಸಣೆ ಮಾಡುವುದು ಹೊರತುಪಡಿಸಿದರೆ ಮತ್ತೆ ಯಾವುದೇ ಸೌಕರ್ಯಗಳಿಲ್ಲ. ಹೆಚ್ಚುವರಿ ವೈದ್ಯಕೀಯ ಸೇವೆಗಳನ್ನು ಒದಗಿಸಲೂ ಸಹ ಅವಕಾಶವಿಲ್ಲ. ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಗತ್ಯವಿದ್ದಷ್ಟು ಸಿಬ್ಬಂದಿಯೂ ಇಲ್ಲಿ ಇಲ್ಲ.

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೂವರು ಕಾಯಂ ವೈದ್ಯರು ಮತ್ತು ಒಬ್ಬರು ಫಾರ್ಮಸಿಸ್ಟ್ ಇದ್ದಾರೆ. 9 ಮಂದಿ ‘ಡಿ’ ಗ್ರೂಪ್‌ ನೌಕರರು ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಾರೆ. ಅವರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗಿಲ್ಲ. ಆಸ್ಪತ್ರೆಗೆ ಎರಡು ಆಂಬುಲೆನ್ಸ್‌ಗಳಿವೆ. ಒಂದು ಸಾಮಾನ್ಯ ಆಂಬುಲೆನ್ಸ್‌ ಇದ್ದರೆ, ಮತ್ತೊಂದು 108 ಸೇವೆಯ ಆಂಬುಲೆನ್ಸ್ ಇದೆ.

ತಾಲ್ಲೂಕು ಕೇಂದ್ರವಾಗಿ ಅಸ್ತಿತ್ವಕ್ಕೆ ಬಂದರೂ ಗುರುಮಠಕಲ್‌ನಲ್ಲಿ ತಾಲ್ಲೂಕು ಆಸ್ಪತ್ರೆ ಸ್ಥಾಪನೆಗೆ ಸಂಬಂಧಿಸಿದಂತೆ ಯಾರೂ ಹೆಚ್ಚಿನ ಆಸಕ್ತಿ ತೋರಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನ ಹರಿಸಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಕೊರೊನಾ ಸೋಂಕು ತೀವ್ರವಾಗಿ ಎಲ್ಲೆಡೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ನಿಗಾ ವಹಿಸಿ, ಚಿಕಿತ್ಸೆ ಕೊಡಲು ಅರಕೇರಾ (ಕೆ) ಗ್ರಾಮದ ಬಾಲಕಿಯರ ವಸತಿ ನಿಲಯವನ್ನು ಹೋಂ ಕ್ವಾರಂಟೈನ್‌ ಆಗಿ ಪರಿವರ್ತಿಸಲಾಗಿದೆ. ಗುರುಮಠಕಲ್ ಡಿಗ್ರಿ ಕಾಲೇಜಿನಲ್ಲಿ ಫೀವರ್ ಸೆಂಟರ್‌ ಆರಂಭಿಸಲಾಗಿದೆ.

ಕೊರೊನಾ ಸೋಂಕು ಸೇರಿದಂತೆ ಇತರೆ ಅಪಾಯಕಾರಿ ಸೋಂಕುಗಳಿಂದ ಬಳಲುತ್ತಿರುವವರನ್ನು ಪರೀಕ್ಷಿಸಲು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಅಗತ್ಯವಿರುವ ಮಾಸ್ಕ್, ಸ್ಯಾನಿಟೈಸರ್, ಕೈಗವಸು‌ ಸೇರಿದಂತೆ ಪಿಪಿಇ (ಪರ್ಸನಲ್ ಪ್ರೊಟೆಕ್ಟಿವ್ ಇಕ್ವಿಪ್ಮೆಂಟ್ಸ್) ಕಿಟ್‌ಗಳನ್ನು ಒದಗಿಸಲಾಗಿಲ್ಲ. ಸೌಕರ್ಯಗಳ ಕೊರತೆ ನಡುವೆಯೇ ಅವರು ಚಿಕಿತ್ಸೆ ಮುಂದುವರೆಸಿದ್ದಾರೆ.

ಕೊರೊನಾ ಸೋಂಕು ಹರಡುವಿಕೆ ತಡೆಯುವ ಮತ್ತು ಸೋಂಕಿನಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಲೆಂದೇ ಪ್ರತ್ಯೇಕವಾಗಿ ‘ಹೋಂ ಕ್ವಾರಂಟೈನ್’ ಕೇಂದ್ರ ಮತ್ತು ಫೀವರ್ ಸೆಂಟರ್ ಆರಂಭಿಸಲಾಗಿದೆ. ಹೆರಿಗೆ ವೇಳೆ ಹಾಗೂ ಸಾಮಾನ್ಯ ಶಸ್ತ್ರ ಚಿಕಿತ್ಸೆ ವೇಳೆ ಬಳಸಬಹುದಾದ ಕೈಗವಸು, ತಲೆಗವಸು, ಮೈಗವಸು ಹಾಗೂ ಕನ್ನಡಕಗಳನ್ನು ಇಲ್ಲಿನ ಫೀವರ್ ಸೆಂಟರ್ ಸಿಬ್ಬಂದಿಗೆ ಒದಗಿಸಲಾಗಿದೆ.

ದಿನಕ್ಕೆ ಮೂರು ಶಿಫ್ಟುಗಳಲ್ಲಿ ವೈದ್ಯಕೀಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಒಂದು ದಿನಕ್ಕೆ ಒಟ್ಟು 21 ವೈದ್ಯಕೀಯ ಸಿಬ್ಬಂದಿ ‘ಫೀವರ್ ಸೆಂಟರ್‌’ನಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಅದಕ್ಕೆ ಅನುಗುಣವಾಗಿ ದಿನಕ್ಕೆ 21 ಕಿಟ್ ಸರಬರಾಜು ಮಾಡಬೇಕು. ಈಗ ನೀಡಲಾಗಿರುವ ಕಿಟ್ ಒಂದು ಬಾರಿ ಮಾತ್ರ ಬಳಕೆ ಮಾಡಲು ಸಾಧ್ಯವಿದೆ. ಅದನ್ನು ಪುನಃ ಬಳಸುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT