ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಮಹಿಳೆ, ಮಕ್ಕಳ ಹಕ್ಕುಗಳ ರಕ್ಷಣೆಗೆ ಕ್ರಮ

ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಹೇಳಿಕೆ
Last Updated 14 ಡಿಸೆಂಬರ್ 2021, 4:03 IST
ಅಕ್ಷರ ಗಾತ್ರ

ಯಾದಗಿರಿ: ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ರಕ್ಷಿಸಲು ಜಿಲ್ಲಾಡಳಿತ ಸದಾ ಸಿದ್ಧ ಎಂದು ಜಿಲ್ಲಾಧಿಕಾರಿ ರಾಗಪ್ರಿಯಾ ಆರ್. ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ಪ್ರಜೆಯ ಮಾನವ ಹಕ್ಕುಗಳನ್ನು ರಕ್ಷಿಸುವುದು ರಾಜ್ಯದ ಮತ್ತು ಇದರ ಎಲ್ಲಾ ಸಂಸ್ಥೆಗಳ ಆದ್ಯ ಕರ್ತವ್ಯ. ಮಾನವ ಹಕ್ಕುಗಳು ಯಾವುದೇ ಸೀಮಿತ ಪ್ರದೇಶದ ವ್ಯಾಪ್ತಿಗೆ ಒಳಪಡದೆ ವಿಶ್ವದ ಪ್ರತಿಯೊಬ್ಬ ಪ್ರಜೆಗಳಿಗೂ ಅನ್ವಯಿಸುವಂತವುಗಳಾಗಿವೆ ಎಂದರು.

ಎಲ್ಲಾ ಮಾನವರಿಗೆ ಘನತೆ, ಗೌರವ ಮತ್ತು ಆತ್ಮಾಭಿಮಾನದಿಂದ ಬಾಳಲು ಹಕ್ಕುಗಳು ಅವಶ್ಯ. ಮಾನವ ಹಕ್ಕುಗಳು ಪರಿದಿ ವ್ಯಾಪಕ ಸ್ವರೂಪದ್ದು, ಅದು ನಾಗರಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಆರ್ಥಿಕ ಹಕ್ಕುಗಳನ್ನು ಒಳಗೊಂಡಿರುವುದು. ಇವುಗಳಲ್ಲಿ ಅತಿ ಮುಖ್ಯವಾದವು- ಸಮಾನತೆ ಹಕ್ಕು, ಸಮಾನ ಕಾನೂನು ರಕ್ಷಣೆ, ಶೋಷಣೆ ರಹಿತ ಆರೋಗ್ಯ ಪೂರ್ಣ ಪರಿಸರದಲ್ಲಿ ಗೌರವಯುತ ಜೀವನ ನಡೆಸುವ ಹಕ್ಕು, ತಮ್ಮ ಆಯ್ಕೆಯ ವೃತ್ತಿ, ಕಲಿಕೆಯ ಹಕ್ಕು, ಧಾರ್ಮಿಕ ಸ್ವಾತಂತ್ರ್ಯ ಅಥವಾ ಜಾತಿ ಮತ, ಲಿಂಗ ಆಧಾರಿತ ತಾರತಮ್ಯದಿಂದ ಮುಕ್ತಿ ಇನ್ನಿತರ ಹಕ್ಕುಗಳ ರಕ್ಷಣೆಗೆ ಮಾನವ ಹಕ್ಕುಗಳ ಆಯೋಗಗಳು ರಚನೆಯಾಗಿವೆ ಎಂದು ತಿಳಿಸಿದರು.

ಜಿ.ಪಂ ಸಿಇಒ ಶಿಲ್ಪಾಶರ್ಮಾ ಮಾತನಾಡಿ, ನಮ್ಮ ಹಕ್ಕುಗಳನ್ನು ಪಡೆಯುವುದು ಎಷ್ಟು ಮುಖ್ಯವೋ ಅವುಗಳನ್ನು ಉಲ್ಲಂಘನೆ ಆಗದಂತೆ ನೋಡಿಕೊಳ್ಳುವುದು ಅಷ್ಟೇ ಮುಖ್ಯ ಎಂಬುದು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಶ್ರಮಿಸಬೇಕು ಎಂದರು.

ಸರ್ಕಾರಿ ಪದವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ದೇವಿಂದ್ರಪ್ಪ ಹಳಿಮನಿ ಉಪನ್ಯಾಸ ನೀಡಿ, ಭಾರತದ ಸಂವಿಧಾನವು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಸಮ್ಮಿಲನವಾಗಿದ್ದು, ಮೂಲಭೂತ ಹಕ್ಕುಗಳು ಮನುಷ್ಯನ ವ್ಯಕ್ತಿತ್ವ ವಿಕಾಸಕ್ಕೆ ಪೂರಕ ಎಂದರು.

ಮಾನವ ಹಕ್ಕುಗಳು ನೈಸರ್ಗಿಕ ಹಕ್ಕುಗಳಿಂದ ಬಂದಿದ್ದು, ಜೀವಿತದ ಹಕ್ಕು, ಸ್ವಾತಂತ್ರ್ಯದ ಹಕ್ಕು ಮತ್ತು ಆರೋಗ್ಯದ ಹಕ್ಕು ಪ್ರಮುಖವಾದವು. ಅವುಗಳನ್ನು ರಾಜ್ಯದ ಮುಖ್ಯ ಅಂಗಗಳಿಂದ ಅಧಿಕಾರ ದುರುಪಯೋಗ ಆಗುವುದನ್ನು ತಪ್ಪಿಸುವುದಕ್ಕಾಗಿ ಹಾಗೂ ಮಾನವನ ಜೀವನ ಮಟ್ಟವನ್ನು ಸುಧಾರಿಸುವುದಕ್ಕಾಗಿ ಮತ್ತು ಅವರ ವ್ಯಕ್ತಿತ್ವ ವಿಕಾಸಗೊಳಿಸುವಲ್ಲಿ ಮುಖ್ಯವಾಗಿವೆ ಎಂದರು.

ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಉಪನಿ ರ್ದೇಶಕ ಪ್ರಭಾಕರ್ ಕವಿತಾಳ ಇದ್ದರು. ಗುರುಪ್ರಸಾದ ವೈದ್ಯ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT