ಶಹಾಪುರ: ಮಾನವ ಕಳ್ಳ ಸಾಗಾಣಿಕೆ ದೊಡ್ಡ ಸಾಮಾಜಿಕ ಪಿಡುಗಾಗಿ ಪರಿಣಮಿಸಿದ್ದು, ಇದಕ್ಕೆ ಸಣ್ಣಮಕ್ಕಳು, ಯುವತಿಯರು, ಹೆಣ್ಣುಮಕ್ಕಳು ಬಲಿಪಶು ಆಗುತ್ತಿರುವುದು ಅತ್ಯಂತ ಕಳವಳಕಾರಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸಿದ್ರಾಮ ಟಿ.ಪಿ., ತಿಳಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ತಾಲ್ಲೂಕು ಕಾನೂನು ಸೇವಾ ಸಮಿತಿ ತಾಲ್ಲೂಕು ವಕೀಲ ಸಂಘ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸಂಯುಕ್ತಾಶ್ರಯದಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ವಿವಿಧ ಆಮಿಷಗಳಿಗೆ ಒಳಗಾಗಿ, ಮೋಸದ ಬಲೆಗೆ ತುತ್ತಾಗಿ ಶೋಷಿತರಾಗುವುದನ್ನು ಸಮುದಾಯದ ಪ್ರತಿಯೊಬ್ಬರು ಅರಿತು ಜಾಗೃತರಾದಾಗ ಮಾನವ ಸಾಗಾಣಿಕೆ ತಡೆಯಬಹುದು ಎಂದರು.
ಅಮಾಯಕ ಹೆಣ್ಣುಮಕ್ಕಳು, ಮಾನವ ಕಳ್ಳ ಸಾಗಾಣಿಕೆದಾರರಿಗೆ ಬಲಿಯಾಗುತ್ತಿರುವ ಘಟನೆಗಳು ಅಲ್ಲಲ್ಲಿ ನಡೆದಿದ್ದು ಒಂದೆಡೆಯಾದರೆ, ಸಣ್ಣ ಮಕ್ಕಳನ್ನು ಅಪಹರಿಸಿ ಭಿಕ್ಷಾಟನೆಗೆ ಹಚ್ಚುವುದು, ಮಾನವ ದೇಹದ ಅಂಗಾಂಗಗಳ ಮಾರಾಟದ ಪ್ರಸಂಗಗಳನ್ನು ಕೇಳಿ ಬರುತ್ತಿವೆ. ಪ್ರತಿಯೊಬ್ಬ ಪ್ರಜ್ಞಾವಂತ ಸಮುದಾಯ, ವಿವಿಧ ಇಲಾಖೆಯ ಅಧಿಕಾರಿಗಳು, ವಿಶೇಷವಾಗಿ ಪಾಲಕರು ಬಹು ಎಚ್ಚರಿಕೆಯಿಂದ ಇದ್ದು, ಮಾನವ ಕಳ್ಳ ಸಾಗಾಣಿಕೆ ತಡೆಗೆ ಸಂಕಲ್ಪ ತೊಡಬೇಕು. ತಾಲ್ಲೂಕು ಕಾನೂನು ಸೇವೆಗಳ ಸಮಿತಿ ವಿವಿಧ ಇಲಾಖೆಗಳು ನಿಮ್ಮ ಜೊತೆ ಇವೆ ಎಂದು ಧೈರ್ಯ ತುಂಬಿದರು.
ಸಂಪನ್ಮೂಲ ವ್ಯಕ್ತಿ ಆರ್.ಎಂ.ಹೊನ್ನಾರೆಡ್ಡಿ ಪ್ರಸ್ತಾವಿಕವಾಗಿ ಮಾತನಾಡಿ, ಮಾದಕ ದ್ರವ್ಯ, ಕಳ್ಳ ಸಾಗಾಣಿಕೆ, ಶಸ್ತ್ರಾಸ್ತ್ರ ಕಳ್ಳ ಸಾಗಾಣಿಕೆ, ಮಾನವ ಮಾನವರನ್ನು ಕಳ್ಳತನ ಮಾಡುವುದು ಇಂಥ ಪ್ರಸಂಗಗಳು ಭಾರತೀಯ ಸಮಾಜ ಸ್ಥಿತಿಗೆ ಅಪಾಯಕಾರಿಯಾಗಿದೆ. ಪ್ರಜ್ಞಾವಂತ ನಾಗರೀಕ ಸಮುದಾಯ ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಬಾಲಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ ಮತ್ತು ಕಾನೂನು ಸೇವೆಗಳ ಪ್ರಾಧಿಕಾರ ಕಳ್ಳಸಾಗಣೆ ತಡೆಗಟ್ಟಲು ಸಹಕಾರ ನೀಡುತ್ತದೆ. ಕರ್ನಾಟಕದಲ್ಲಿ ಇಂಥ ಮಾನವ ಕಳ್ಳ ಸಾಗಾಣಿಕೆ ಪ್ರಕರಣಕ್ಕೆ ಅಂತ್ಯ ಹಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯ ರಿಯಾಜ್ ಪಟೇಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮೀನಾಕ್ಷಿ ಪಾಟೀಲ, ವಕೀಲೆ ಬಸ್ಸಮ್ಮ ರಾಂಪುರೆ ಮಾತನಾಡಿದರು. ಅಕ್ಷರ ದಾಸೋಹ ಅಧಿಕಾರಿ ಬಿ.ಎಚ್.ಸೂರ್ಯವಂಶಿ, ಕ್ಷೇತ್ರ ಸಮನ್ವಯಾಧಿಕಾರಿ ರೇಣುಕಾ ಪಾಟೀಲ, ಪೊಲೀಸ್ ಇಲಾಖೆಯ ಶ್ಯಾಮಸುಂದರ ನಾಯಕ, ಕಾರ್ಮಿಕ ಇಲಾಖೆಯ ಸಾಬೇರಾ ಬೇಗಂ, ಸಮಾಜ ಕಲ್ಯಾಣ ಇಲಾಖೆಯ ರಾಹುತಪ್ಪ, ಸಂಗಮೇಶ ನಾಯಕ, ಭೀಮನಗೌಡ ಬಿರಾದಾರ ಇದ್ದರು. ಕವಿತಾ ಪ್ರಾರ್ಥಿಸಿದರು. ರಮೇಶ ನಿರೂಪಿಸಿದರು. ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿಗಳು, ಶಾಲಾ ಮುಖ್ಯಗುರುಗಳು, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.