ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕೆಂಬ ಶಿಲೆಗೆ ನಾವೇ ಶಿಲ್ಪಿಗಳು

Last Updated 4 ಮಾರ್ಚ್ 2018, 20:42 IST
ಅಕ್ಷರ ಗಾತ್ರ

ನಾನು ಡಾ.ಉಷಾ ವಸ್ತಾರೆ. ಹುಟ್ಟಿದ್ದು ಗವಿಪುರ ಗುಟ್ಟಹಳ್ಳಿ. 1965ರಲ್ಲಿ. ಪ್ರಾಥಮಿಕ ಶಿಕ್ಷಣ ಮಹಿಳಾ ಸೇವಾ ಸಮಾಜದಲ್ಲಿ, ಬಸವನಗುಡಿ ನ್ಯಾಷನಲ್‌ ಕಾಲೇಜಿನಲ್ಲಿ ಪದವಿ ಮುಗಿಸಿದೆ. ಬಿ.ಎಸ್ಸಿಯಲ್ಲಿ ಚಿನ್ನದ ಪದಕ, ಸೆಂಟ್ರಲ್‌ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯಲ್ಲಿ (ಎಂ.ಎಸ್ಸಿ) ರ‍್ಯಾಂಕ್‌ ಕೂಡಾ ಬಂತು. 1981ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಪಿ.ಎಚ್‌ಡಿ ಮಾಡಿದೆ.

ಮದುವೆಯಾದ ಬಳಿಕ ನಾನು ಅಮೆರಿಕದಲ್ಲಿ ನೆಲೆಸಿದೆ. ಪೋಸ್ಟ್‌ ಡಾಕ್ಟರಲ್‌ ರಿಸರ್ಚ್‌ ಮಾಡಿದ ಬಳಿಕ ಫಿಲಡೆಲ್ಫಿಯಾದಲ್ಲಿರುವ ಟೆಂಪಲ್‌ ಯುನಿವರ್ಸಿಟಿಯ ಮೆಡಿಕಲ್‌ ಸ್ಕೂಲ್‌ ನಲ್ಲಿ ಫೇಕಲ್ಟಿಯಾಗಿ ಕೆಲಸ ಮಾಡಿದೆ. 17 ವರ್ಷ ಸಂಶೋಧನೆ ಮಾಡಿದ ಬಳಿಕ ಅಲ್ಲಿಯೇ ನ್ಯೂರೊ ಸರ್ಜರಿ ಮತ್ತು ಫಿಸಿಯಾಲಜಿ ವಿಭಾಗಗಳಲ್ಲಿ ಫೇಕಲ್ಟಿಯಾಗಿದ್ದೆ. ನನ್ನ ಸಂಶೋಧನೆಗಳೆಲ್ಲವೂ ಪಾರ್ಶ್ವವಾಯು, ಬೆನ್ನುಮೂಳೆಯ ಗಾಯ ಮತ್ತು ಪಾರ್ಕಿನ್‌ಸನ್‌ ಕಾಯಿಲೆಗೆ ಸಂಬಂಧಿಸಿದ್ದು. ನಾನು ಕೆಲಸ ಮಾಡಿದ್ದು ನರವಿಜ್ಞಾನಿ (ನ್ಯೂರೊ ಸೈಂಟಿಸ್ಟ್‌) ಆಗಿ.

ನನ್ನ ಮಗಳು ಅಖಿಲಾ ಮಾಲಿನಿ ಏಳನೇ ಗ್ರೇಡ್‌ನಲ್ಲಿರುವಾಗ ಅವಳಿಗೆ ಭಾರತದ ಸಂಸ್ಕೃತಿ, ಸಂಪ್ರದಾಯದ ಪರಿಚಯ ಮಾಡಿಕೊಡಬೇಕು ಎಂಬ ಮನಸ್ಸಾಯಿತು. ಹಾಗಾಗಿ ಅವಳೊಂದಿಗೆ ಭಾರತದಲ್ಲಿ ಅಂದರೆ ಬೆಂಗಳೂರಿನಲ್ಲಿ ಎರಡು ವರ್ಷ ಕಳೆದೆ. ಭಾರತಕ್ಕೆ ಆಗೊಮ್ಮೆ ಈಗೊಮ್ಮೆ ಅತಿಥಿಗಳಾಗಿ ಅಥವಾ ಪ್ರವಾಸಿಗರಾಗಿ ಬಂದು ಇರುವ ಅನುಭವವೇ ಬೇರೆ, ಇಲ್ಲಿಯೇ ನೆಲೆಸುವುದು, ಇಲ್ಲಿಯವರಾಗಿ ಬೆಳೆಯುವುದು ಬೇರೆ. ಈ ಅನುಭವವನ್ನು ನನ್ನ ಮಗಳಿಗೆ ಕಟ್ಟಿಕೊಡುವುದು ನನ್ನ ಉದ್ದೇಶವಾಗಿತ್ತು.

ನನಗೆ ಸಣ್ಣ ವಯಸ್ಸಿನಿಂದಲೂ ವಯೋಸಹಜವಾದ ಇತರ ಆಕರ್ಷಣೆಗಳಿಗಿಂತ ಸೇವಾ ಬದುಕಿನ ಬಗ್ಗೆ ಒಲವು ಹೆಚ್ಚು ಇತ್ತು. ತಂದೆ ನನ್ನನ್ನು ರಾಮಕೃಷ್ಣ ಆಶ್ರಮಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಅಮೆರಿಕದಲ್ಲಿದ್ದಾಗಲೂ ನನಗೆ ಅಲ್ಲಿನ ವೃತ್ತಿಗಿಂತ ಭಾರತಕ್ಕೆ ಬಂದು ಸಮಾಜಸೇವೆ ಮಾಡಬೇಕು, ನನ್ನ ಸಂಶೋಧನೆಯ ಫಲವನ್ನು ಭಾರತದ ಸಮಾಜಕ್ಕೆ ನೀಡಬೇಕು ಎಂಬ ಅದಮ್ಯವಾದ ಆಸೆ ಆಗುತ್ತಿತ್ತು. ಒಂದು ದಿನ ರಾಮಕೃಷ್ಣ ಮಠದ ಯತೀಶ್ವರಾನಂದಜಿ ಎಂಬ ಗುರುಗಳ ‘ಮೆಡಿಟೇಷನ್‌ ಸ್ಪಿರಿಚುವಲ್‌ ಲೈಫ್‌’ ಅನ್ನೋ ಪುಸ್ತಕ ಓದಿದ ಮೇಲಂತೂ ಸೇವೆಯಲ್ಲಿಯೇ ತೊಡಗಿಸಿಕೊಳ್ಳಬೇಕು ಎಂಬ ನಿರ್ಧಾರ ಗಟ್ಟಿಯಾಗತೊಡಗಿತು. ಆದರೆ ಮಗಳ ವಿದ್ಯಾಭ್ಯಾಸ ಮುಗಿಯುವವರೆಗೆ ಕಾಯಲೇಬೇಕಿತ್ತು. ಕೊನೆಗೂ ಸುಮಾರು 30 ವರ್ಷಗಳ ಅಮೆರಿಕ ವಾಸ ಬಿಟ್ಟು ಬೆಂಗಳೂರಿಗೆ ಬಂದೆ. ನನ್ನ ಪತಿ ಮತ್ತು ಮಗಳು ಈಗಲೂ ಅಲ್ಲಿಯೇ ಇದ್ದಾರೆ. ಇಲ್ಲಿಗೆ ಆಗಾಗ್ಗೆ ಬಂದುಹೋಗುತ್ತಾರೆ. ನಾನು ಕಾರ್ಯಕ್ರಮಕ್ಕಾಗಿ ಹೋದಾಗ ಫಿಲಡೆಲ್ಫಿಯಾಗೂ ಹೋಗಿಬರುವುದಿದೆ.

2007ರ ಫೆಬ್ರುವರಿಯಲ್ಲಿ ನಾನು ಮತ್ತು ನನ್ನ ಮಗಳು ಅಖಿಲಾ ಮಾಲಿನಿ ವಸ್ತಾರೆ ಒಂದು ಸಂಸ್ಥೆಯನ್ನು ಶುರು ಮಾಡಿದೆವು. ಸಂಸ್ಥೆ ಅನ್ನುವುದಕ್ಕಿಂತ ನಾವು ಸಮಾನ ಮನಸ್ಕರನ್ನು ಒಟ್ಟುಗೂಡಿಸಿಕೊಂಡು ಪಾರ್ಶ್ವವಾಯು ರೋಗಿಗಳನ್ನು ನೋಡಿಕೊಳ್ಳುವ ಕೇರ್‌ ಟೇಕರ್ಸ್‌ ಇರ್ತಾರಲ್ಲ ಅವರಿಗೆ ತರಬೇತಿ ಮತ್ತು ಮಾರ್ಗದರ್ಶನವನ್ನು ನೀಡುತ್ತಾ ಬಂದೆವು. ಯಾಕೆಂದರೆ ನಮಗೆ ಸಮಾಜಕ್ಕೆ ನೆರವಾಗುವುದಷ್ಟೇ ನಮ್ಮ ಗುರಿಯಾಗಿತ್ತು. ಔಷಧಿ ಇಲ್ಲದೆ ಮಾನಸಿಕ ಮತ್ತು ಬುದ್ಧಿಯ ಮೇಲೆ ಚಿಕಿತ್ಸೆ ನೀಡುತ್ತಿದ್ದೆವು. ನಮ್ಮ ಸೇವೆಯ ಬಗ್ಗೆ ಜನರಿಂದ ಜನರಿಗೆ ಮಾಹಿತಿ ರವಾನೆಯಾಗುತ್ತಿದ್ದಂತೆ ನಮಗೆ ಬೇರೆ ಬೇರೆ ರೋಗಗಳಿಂದ ಬಳಲುತ್ತಿರುವವರು ಮತ್ತು ಅವರ ಸಮೀಪವರ್ತಿಗಳು ನೆರವು ಕೇಳಲಾರಂಭಿಸಿದರು. ಹಾಗಾಗಿ ಅದೇ ವರ್ಷ ಏಪ್ರಿಲ್‌ 28ರಂದು ನಮ್ಮ ಸಂಸ್ಥೆಗೆ ‘ಯೋಗಕ್ಷೇಮ ಪುನರ್ವಸತಿ ಮತ್ತು ಸ್ವಾಸ್ಥ್ಯ ಕೇಂದ್ರ’ ಎಂದು ಹೆಸರಿಟ್ಟೆವು. ಹಿರಿಯ ಕವಿ ಜಿ.ಎಸ್.ಶಿವರುದ್ರಪ್ಪ ಅವರು ನಮ್ಮ ಮೊದಲ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕ್ರಮೇಣ ನಮ್ಮ ಸೇವಾ ವ್ಯಾಪ್ತಿಯನ್ನು ವಿಸ್ತರಿಸಿಕೊಂಡೆವು. ವಾಸಿಯಾಗದ ಅನೇಕ ಕಾಯಿಲೆಗಳಿಗೆ ಔಷಧಿ ರಹಿತ ಚಿಕಿತ್ಸೆ ನೀಡಲಾರಂಭಿಸಿದೆವು. ನಂತರ ಕಾಯಿಲೆಗಳನ್ನು ನಿಯಂತ್ರಿಸುವ ಬಗ್ಗೆ ಔಷಧಿ ರಹಿತ ಚಿಕಿತ್ಸೆಯನ್ನು ವಿಸ್ತರಿಸಬೇಕು ಎಂಬ ಬೇಡಿಕೆ ಬರತೊಡಗಿತು.

‘ಯೋಗಕ್ಷೇಮ’ಕ್ಕೆ 10 ವರ್ಷದ ಮಕ್ಕಳು, ಗೃಹಿಣಿಯರು, ಚಾಲಕರು, ಮನೆಕೆಲಸಕ್ಕೆ ಹೋಗುವ ಮಹಿಳೆಯರು, ವೈದ್ಯರು, ಕಾರ್ಪೊರೇಟ್‌ ಕಂಪೆನಿಗಳ ಸಿಇಒಗಳ ವರೆಗೂ ಬರುತ್ತಾರೆ. ನರವಿಜ್ಞಾನ ಆಧರಿತ ಆಪ್ತ ಸಮಾಲೋಚನೆ, ಮಾರ್ಗದರ್ಶನ ನೀಡುತ್ತಿದ್ದೇವೆ. ತಮ್ಮಲ್ಲಿ ಯಾವುದೋ ಸಮಸ್ಯೆಯೋ ಕಾಯಿಲೆಯೋ ಇದೆ ಎಂದು ನಮ್ಮಲ್ಲಿಗೆ ಬಂದವರು ನಮ್ಮೊಂದಿಗೆ ಸೇವೆಯಲ್ಲಿ ತೊಡಗಿಸಿಕೊಂಡು ಸ್ವಯಂಸೇವಕರಾಗಿದ್ದಾರೆ. ಅರ್ಹರು ಫೇಕಲ್ಟಿಗಳೂ ಆಗಿದ್ದಾರೆ. ರೋಗ ಬಂದ ಮೇಲೆ ಚಿಕಿತ್ಸೆ ಮಾಡುವುದಕ್ಕಿಂತ ರೋಗ ಬರದಂತೆ ತಡೆಯುವುದು ಜಾಣತನ ಅಲ್ವೇ? ಅದೇ ರೀತಿ ನಮ್ಮ ವ್ಯಕ್ತಿತ್ವ ಹಾಗೂ ವರ್ತನೆಯಲ್ಲಿನ ನ್ಯೂನತೆಗಳನ್ನು ತಿದ್ದಿಕೊಂಡರೆ ನಮ್ಮ ವ್ಯಕ್ತಿತ್ವಕ್ಕೆ ಹೊಸ ಚೌಕಟ್ಟು ಸಿಗುತ್ತದೆ.

ವಾಸ್ತವವಾಗಿ, ನಮ್ಮ ಆಲೋಚನೆಗಳನ್ನು, ನಮ್ಮ ಮನಸ್ಸನ್ನು ಬದಲಾಯಿಸಿಕೊಂಡರೆ ಮಿದುಳಿನ ರಚನೆಯೇ ಬದಲಾಗುತ್ತದೆ. ನಮ್ಮ ಮಿದುಳು ಬದಲಾವಣೆಯಾದರೆ ಜೀವನ ಬದಲಾಗುತ್ತದೆ. ಸಾಮಾನ್ಯವಾಗಿ ನಾವು ಬದಲಾಗುವುದು ಎಂದರೆ ಉಡುಗೆ ತೊಡುಗೆ, ಕೂದಲಿನ ಬಣ್ಣ, ಕಣ್ಣಿನ ಬಣ್ಣ ಬದಲಾಯಿಸುವುದು ಎಂದುಕೊಳ್ಳುತ್ತೇವೆ. ಆದರೆ ನಮ್ಮ ಜೀವನವನ್ನು ಆಳವಾಗಿ ಬದಲಾಯಿಸಬೇಕಾದರೆ ಮಿದುಳಿನಲ್ಲೇ ಸ್ಥಿತ್ಯಂತರ ಆಗಬೇಕು. ನಾವು ‘ಯೋಗಕ್ಷೇಮ’ದ ತರಗತಿಗಳಲ್ಲಿ ಹೇಳುವ ಮಾತುಗಳನ್ನು ನಾವೇ ಸೃಷ್ಟಿಸಿರುವುದಲ್ಲ. ವೇದ, ಗೀತೆ, ಬೃಹದಾರಣ್ಯಕ ಉಪನಿಷತ್‌ಗಳಲ್ಲಿ ಹೇಳಿರುವುದನ್ನೇ ನಾವು ವೈಜ್ಞಾನಿಕ ಆಯಾಮದೊಂದಿಗೆ ಹೇಳುತ್ತೇವೆ. ಕಾಫಿ ಬೇಕೋ ಟೀ ಬೇಕೋ ಎಂದು ಕೇಳಿದರೆ ಆಯ್ಕೆಯ ಗೊಂದಲ ಎದುರಾಗುತ್ತದೆ. ಮನಸ್ಸಿನಲ್ಲಿ ಬದಲಾವಣೆ ಮಾಡುವುದು ಎಂದರೆ ಹೊಸ ಚಿಂತನಾಕ್ರಮ, ಜೀವನಕ್ರಮವನ್ನು ಕಾರ್ಯರೂಪಕ್ಕೆ ತರುವುದು. ‘ಯೋಗಕ್ಷೇಮ’ ಎಂಬುದು ಈಗ ಸಂಸ್ಥೆಯಾಗಿ ಉಳಿದಿಲ್ಲ ಅದೊಂದು ಪರಿಕಲ್ಪನೆಯಾಗಿ ಬೆಳೆಯುತ್ತಿದೆ.

ಸೇವೆಗೆ ಕಟ್ಟಡ ಯಾಕೆ ಬೇಕು?

ಸಂಸ್ಥೆ ಎಂದಾಕ್ಷಣ ನಿಮ್ಮ ಕಟ್ಟಡ ಎಲ್ಲಿ, ವಿಳಾಸ ಏನು ಎಂದು ಕೇಳುವುದು ಸಹಜ. ಹೌದು, ನಮಗೆ ಸ್ವಂತ ಕಟ್ಟಡ, ಕಚೇರಿ ಇಲ್ಲ. ಯಾರು ಎಲ್ಲಿ ಕರೆದರೂ ‘ಯೋಗಕ್ಷೇಮ’ದ ಎಲ್ಲಾ ಸ್ವಯಂಸೇವಕರು ಕರೆದಲ್ಲಿಗೆ ಹೋಗಿ ಸೇವೆ ಮಾಡುತ್ತೇವೆ. ಬೆಂಗಳೂರು, ಹಳ್ಳಿ, ಗುಜರಾತ್‌, ರಾಜಸ್ತಾನ, ಅಮೆರಿಕ, ದಕ್ಷಿಣ ಆಫ್ರಿಕಾದಲ್ಲೇ ಆಗಿರಲಿ ಅಲ್ಲಿಗೆ ಹೋಗುತ್ತೇವೆ. ನಮ್ಮನ್ನು ಕಂಡುಕೊಳ್ಳುವ (ಸೆಲ್ಫ್‌ ಡಿಸ್ಕವರಿ) ಪ್ರಕ್ರಿಯೆಗೆ ಬೇಕಿರುವುದು ಮನಸ್ಸು ಮತ್ತು ನಿರ್ಧಾರ. ಕಲ್ಕತ್ತಾದಲ್ಲಿರುವ ರಾಮಕೃಷ್ಣಾಶ್ರಮದ ಯುನಿವರ್ಸಿಟಿಯ ಕುಲಪತಿಗಳು ‘ಯೋಗಕ್ಷೇಮ’ವನ್ನು ಪರಿವ್ರಾಜಕ ಸಂಸ್ಥೆ ಎಂದು ಕರೆದರು. ದುಡ್ಡು ಮಾಡುವುದು ನಮ್ಮ ಉದ್ದೇಶವಲ್ಲ. ಸೇವಾ ಮನೋಭಾವದಿಂದ ಔಷಧಿ ರಹಿತ ಚಿಕಿತ್ಸೆ ನೀಡುತ್ತೇವೆ ಅಷ್ಟೇ. 10 ವರ್ಷಗಳಿಂದಲೂ ಇದೇ ರೀತಿ ನಡೆಯುತ್ತಿದೆ.

ಬನಶಂಕರಿ ಎರಡನೇ ಹಂತದಲ್ಲಿ ದಾನಿಯೊಬ್ಬರು ತಮ್ಮ ಮನೆಯ ತಳಮಹಡಿಯಲ್ಲಿ ‘ಯೋಗಕ್ಷೇಮ’ದ ಕಾರ್ಯಕ್ರಮಕ್ಕೆ ಮೀಸಲಿಟ್ಟಿದ್ದಾರೆ. ಕಳೆದ ತಿಂಗಳಿನಿಂದ ಗಾಂಧಿ ಬಜಾರ್‌ನಲ್ಲಿ ‘ಆನಂದಗೀತಾ’ ಎಂಬ ಸಭಾಂಗಣವನ್ನು ನಮ್ಮ ಕಾರ್ಯಕ್ರಮಕ್ಕಾಗಿ ಉಚಿತವಾಗಿ ಬಿಟ್ಟುಕೊಟ್ಟಿದ್ದಾರೆ. ‘ಸೇವೆಯೇ ನಮ್ಮ ಮಂತ್ರ’ ಎಂಬುದನ್ನು ಅರ್ಥ ಮಾಡಿಕೊಂಡ ಹಲವಾರು ದಾನಿಗಳು ನಮ್ಮ ಜೊತೆ ಕೈಜೋಡಿಸಿದ್ದಾರೆ. ಆರಂಭದ ಕೆಲವು ವರ್ಷ ನಾವು ಸಂಪೂರ್ಣ ಉಚಿತವಾಗಿ ನಡೆಸುತ್ತಿದ್ದೆವು. ‘ಅವರಲ್ಲಿ ಬೇಕಾದಷ್ಟು ದುಡ್ಡು ಇದೆ ಅದಕ್ಕೆ ಕೊಡುತ್ತಿದ್ದಾರೆ ಎಂದು

ನಾನು ‘ಯೋಗಕ್ಷೇಮ’ದ ಮೂಲಕ ಆಪ್ತ ಸಮಾಲೋಚನೆ, ಉಪನ್ಯಾಸ, ವಿಚಾರ ಸಂಕಿರಣಗಳನ್ನು ನಡೆಸುವಾಗ ನನ್ನ ಸಂಶೋಧನೆಯಿಂದ ಎತ್ತಿಕೊಂಡ ಅಂಶಗಳನ್ನು ಸಣ್ಣ ಸಣ್ಣ ಕತೆಗಳ ಮೂಲಕ ಹೇಳುತ್ತಾ ಹೋಗುತ್ತೇನೆ. ಕೆಲವೊಮ್ಮೆ ಕಥಾ ರೂಪಕದ ಮೂಲಕ ಪ್ರಸ್ತುತಪಡಿಸುತ್ತೇವೆ.

ಹುಡುಗ ಬದಲಾದ
ಒಮ್ಮೆ ಒಬ್ಬ ವಿದ್ಯಾರ್ಥಿಯನ್ನು ಅವನ ತಾಯಿ ಕರೆತಂದರು. ಎಲ್ಲಾ ವಿಷಯಗಳಲ್ಲೂ ಉತ್ತಮ ಅಂಕ ಗಳಿಸುತ್ತಿದ್ದವನು ಒಂದು ವಿಷಯದಲ್ಲಿ ಮಾತ್ರ ತೀರಾ ಹಿಂದೆ ಇದ್ದ. ಅದರಲ್ಲಿ ಆಸಕ್ತಿಯೇ ಇರಲಿಲ್ಲ. ಆರಂಭದಲ್ಲಿ ಅವನು ಏನೂ ಹೇಳಿಕೊಳ್ಳಲಿಲ್ಲ. ಆಮೇಲೆ ‘ಲೆಕ್ಚರರ್‌ ಇಷ್ಟ ಇಲ್ಲ ಅದಕ್ಕೆ ಆ ವಿಷಯ ಓದೋದೇ ಇಲ್ಲ’ ಅಂತಂದ. ‘ನಿನಗಾಗಿ ಖರೀದಿಸಿ ತಂದ ಶೂ ಇಷ್ಟವಾಗದೇ ಇದ್ದರೆ ಅದನ್ನು ಎಸೆಯುತ್ತೀಯೋ ಬದಲಾಯಿಸುತ್ತೀಯೋ ಅಂತ ಕೇಳಿದೆ. ಬದಲಾಯಿಸುತ್ತೀನಿ ಅಂದ. ‘ಹಾಗೇ ಲೆಕ್ಚರರ್‌ ಬಗ್ಗೆ ಯೋಚಿಸೋ ರೀತಿಯನ್ನು ಬದಲಾಯಿಸಿಕೋ’ ಅಂತ ತಿಳಿಹೇಳಿದೆ. ಅವನು ಬದಲಾದ.

ಮಕ್ಕಳು ನಮ್ಮ ಮಾತು ಕೇಳುವುದಿಲ್ಲ ಎಂದು ಹೇಳುವ ತಂದೆ ತಾಯಿಗಾಗಿಯೇ ನಾವು ಕಾರ್ಯಾಗಾರ ಮಾಡುತ್ತೇವೆ. ‘ಇಲ್ಲಿ ಮಕ್ಕಳನ್ನು ಬದಲಾಯಿಸುವ ಬಗ್ಗೆ ಹೇಳಿಕೊಡುವುದಿಲ್ಲ, ನೀವು ಹೇಗೆ ಬದಲಾಗಬೇಕು ಎಂದು ಹೇಳಿಕೊಡುತ್ತೇವೆ’ ಎಂಬ ಮಾತಿನಿಂದಲೇ ಶುರು ಮಾಡುತ್ತೇವೆ. ವಾಸ್ತವವಾಗಿ, ತಂದೆ ತಾಯಿ ಆಗೋದು ಮಕ್ಕಳನ್ನು ಬೆಳೆಸೋದಕ್ಕಲ್ಲ, ನಾವು ಬೆಳೆಯೋದಕ್ಕೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ಹದಿನೈದು ವರ್ಷಗಳಿಂದ ನಾನು ಟಿ.ವಿ ನೋಡಿಲ್ಲ. ನೋಡಬಾರದು ಎಂದಲ್ಲ. ಸೇವೆ ಎಂಬ ಧ್ಯಾನದಿಂದ ನನ್ನ ಮನಸ್ಸು ವಿಚಲಿತವಾಗಬಾರದು, ಬೇರೆ ಯಾವುದೇ ವಿಚಾರಗಳ ಕಡೆ ಆಕರ್ಷಿತವಾಗಬಾರದು ಎಂಬುದಷ್ಟೇ ಕಾರಣ. ಈಗ ನನಗೆ ಎಲ್ಲರೂ ಮಕ್ಕಳೇ, ಸೇವೆಯೇ ನನ್ನ ಬದುಕು.

ಹುಟ್ಟುಗುಣವನ್ನು ಬದಲಿಸಿಕೊಳ್ಳಬಹುದು
‘ಹುಟ್ಟುಗುಣ ಸುಟ್ಟರೂ ಹೋಗದು’ ಅನ್ನೋ ಗಾದೆ ಸುಳ್ಳು ಎಂಬುದು ಈಗ ವೈಜ್ಞಾನಿಕವಾಗಿ ಸಾಬೀತಾಗಿದೆ. ನಮ್ಮ ಮನಸ್ಸನ್ನು ನಾವು ಅರ್ಥ ಮಾಡಿಕೊಂಡರೆ ಹುಟ್ಟುಗುಣವನ್ನೂ ಬದಲಾಯಿಸಿಕೊಳ್ಳಬಹುದು. ಇಂತಹ ಯೋಚನೆ ಮಾಡಬಾರದು ಅದು ತಪ್ಪು ಎಂಬ ಪ್ರಜ್ಞೆ ಸದಾ ಜಾಗೃತವಾಗಿದ್ದರೆ ಪ್ರಮಾದಗಳಾಗುವುದೇ ಇಲ್ಲ. ನಾವು ನೋಡುವ ದೃಷ್ಟಿಕೋನ ಬದಲಾದರೆ ಎಲ್ಲವೂ ಸಕಾರಾತ್ಮಕವಾಗಿ ಕಾಣುತ್ತದೆ. ಗುರಿಯೇ ಇಲ್ಲದಿದ್ದರೆ ಎಲ್ಲಿ ಹೋಗಬೇಕು ಎಂಬುದೇ ಗೊತ್ತಿರುವುದಿಲ್ಲ. ಹಾಗಾಗಿ ನಮ್ಮ ಆಸೆಗಳನ್ನು, ಆಶಯಗಳನ್ನು ಬದುಕಿನ ಗುರಿಯನ್ನಾಗಿಸಿಕೊಳ್ಳಬೇಕು.

ಮೂರು ಜನ ಕಲ್ಲು ಕುಟಿಗರು ಕೆಲಸ ಮಾಡ್ತಾ ಇರ್ತಾರೆ. ಯಾರೋ ದಾರಿಹೋಕ, ‘ಏನ್‌ ಮಾಡ್ತಿದ್ದೀಯಪ್ಪಾ’ ಎಂದು ಕೇಳುತ್ತಾನೆ. ‘ಕಾಣ್ತಿಲ್ವಾ ಕಲ್ಲು ಕುಟ್ಟುತ್ತಿದ್ದೇನೆ’ ಎಂದು ಉತ್ತರಿಸಿದ. ಎರಡನೆಯ ಕಲ್ಲು ಕುಟಿಗ, ‘ಹೊಟ್ಟೆಪಾಡು ಸ್ವಾಮಿ, ಕೆಲಸ ಮಾಡ್ತಿದ್ದೇನೆ’ ಎಂದ. ಮೂರನೆಯವನು, ‘ಸ್ವಾಮೀ ಯಾರೋ ಪುಣ್ಯಾತ್ಮರು ಈ ಊರಲ್ಲಿ ದೇವಸ್ಥಾನ ಕಟ್ಟುತ್ತಿದ್ದಾರಂತೆ. ನನ್ನಂತಹ ನೂರಾರು ಜನರಿಗೆ ಕೆಲಸ ಸಿಗುತ್ತೆ, ಅಂಗಡಿಗಳು ಬರುತ್ತವೆ, ವ್ಯಾಪಾರ ಬೆಳೆಯುತ್ತದೆ, ಊರು ಬೆಳೆಯುತ್ತದೆ’ ಎಂದು ಉತ್ತರಿಸಿದ. ಅಂದರೆ ಮೂರೂ ಮಂದಿ ತಮ್ಮ ಕೆಲಸವನ್ನು ನೋಡುವ ದೃಷ್ಟಿಕೋನ ಹೇಗಿತ್ತು ಎಂಬುದಕ್ಕೆ ಇದೊಂದು ನಿದರ್ಶನ.
***

‘ಯೋಗಕ್ಷೇಮ’ದ ಸಂಪರ್ಕಕ್ಕೆ: http://yoga-kshema.org
ಇಮೇಲ್‌: yogakshema.india@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT