ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈದ್‌ ಮಿಲಾದ್: ‘ಕೂಡಿ ಬಾಳುವ ಪರಂಪರೆ ಮೈಗೂಡಲಿ’

ಸನ್ಮಾನ ಸಮಾರಂಭದಲ್ಲಿ ಮಾಜಿ ಸಚಿವ ಡಾ.ಎ.ಬಿ.ಮಾಲಕರಡ್ಡಿ ಅಭಿಮತ
Last Updated 21 ನವೆಂಬರ್ 2018, 13:15 IST
ಅಕ್ಷರ ಗಾತ್ರ

ಯಾದಗಿರಿ: ‘ಯಾವ ಧರ್ಮವೂ ಸಮಾಜದಲ್ಲಿ ಶಾಂತಿ ಕದಡುವಂತೆ ಬೋಧಿಸುವುದಿಲ್ಲ. ಆದರೂ, ಅಶಾಂತಿ ಹೆಚ್ಚುತ್ತಿದೆ. ಸಮಾಜದಲ್ಲಿ ಕೂಡಿ ಬಾಳುವ ಪರಂಪರೆ, ಸೌಹಾರ್ದ ಸಂಸ್ಕೃತಿಯ ಕಣ್ಮರೆ ಸಮಾಜದಲ್ಲಿನ ಅಶಾಂತಿಗೆ ಕಾರಣವಾಗುತ್ತಿದೆ’ ಎಂದು ಮಾಜಿ ಸಚಿವ ಡಾ.ಎ.ಬಿ.ಮಾಲಕರಡ್ಡಿ ಅಭಿಪ್ರಾಯಪಟ್ಟರು.

ಇಲ್ಲಿನ ಮೈಲಾಪುರ ಅಗಸಿಯಲ್ಲಿ ಬುಧವಾರ ತಂಜೀಮುಲ್ ಮುಸ್ಲಿಮಿನ್ ಹಾಗೂ ಬೈತುಲ್ ಮಾಲ್ ವತಿಯಿಂದ ಈದ್ ಮಿಲಾಸ್ ಹಬ್ಬದ ಅಂಗವಾಗಿ ಎಲ್ಲ ಸಮಾಜದ ಮುಖಂಡರನ್ನು ಹಮ್ಮಿಕೊಂಡಿದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಅನೇಕ ಮಹಿನೀಯರು ನೆಲೆಸಿದ್ದ ಭರತ ಭೂಮಿಯಲ್ಲೇಕೆ ಅಶಾಂತಿ ಕದಡುತ್ತಿದೆ? ನಮ್ಮ ಹಿರಿಯರು ಶಾಂತಿ ನೆಲೆಸಲು ಅನುಸರಿಸಿದ್ದ ಮಾರ್ಗ ಯಾವುದು? ಎಂಬ ಕುರಿತು ಚಿಂತನ ಮಂಥನ ನಡೆಸಬೇಕಿದೆ’ ಎಂದರು.

‘ಧರ್ಮಗಳನ್ನು ಅಗೌರವಿಸುವುದರಿಂದ, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವುದರಿಂದ ಯಾರಿಗೆ ಲಾಭವಾಗಿದೆಯೋ ಯಾರಿಗೂ ಗೊತ್ತಿಲ್ಲ. ಆದರೆ, ಇಂಥಾ ಕೃತ್ಯಗಳಿಂದ ಪರಸ್ಪರ ಪ್ರೀತಿ, ಸೌಹಾರ್ದತೆ, ಆತ್ಮೀಯತೆ ಕುಸಿದು ದ್ವೇಷಾಸೂಯೆ ಮಾತ್ರ ಹೆಚ್ಚಿದೆ. ಇದರಿಂದ ಸಮಾಜದ ಸ್ವಾಸ್ಥ್ಯ ಹದಗೆಟ್ಟಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಪ್ರವಾದಿ ಮಹಮ್ಮದ್ ಪೈಗಂಬರ್‌ ಎಲ್ಲರಿಗೂ ಸಮಾನತೆ ಸಿಗಬೇಕು ಎಂದು ಹೋರಾಟ ನಡೆಸಿದ್ದರು. ಅವರ ತತ್ವಾದರ್ಶ ಅಳವಡಿಸಿಕೊಂಡು ಎಲ್ಲ ಧರ್ಮದವರು ಶಾಂತಿ, ಸಹಬಾಳ್ವೆ ಮತ್ತು ಸೌಹಾರ್ದತೆಯಿಂದ ಕೂಡಿ ಬಾಳುವ ಪರಂಪರೆ ಮೈಗೂಡಿಸಿಕೊಳ್ಳಬೇಕು’ ಎಂದು ಹೇಳಿದರು.

ಶಾಸಕ ನಾಗನಗೌಡ ಕಂದಕೂರು ಮಾತನಾಡಿ,‘ ಜಾತಿ, ಧರ್ಮ ಇಂದು ನಿನ್ನೆ ಹುಟ್ಟಿಲ್ಲ, ಮಾನವನ ನಾಗರಿಕತೆ ಹುಟ್ಟಿನಿಂದಲೂ ಇವೆ. ಆದರೆ, ಸಮಾಜದಲ್ಲಿ ಜಾತಿ, ಧರ್ಮಗಳು ಪ್ರಾಧಾನ್ಯತೆ ಪಡೆಯುತ್ತಿವೆ. ಸರ್ವ ಧರ್ಮಗಳಡಿ ವೈವಿಧ್ಯ ಆಚರಣೆಗಳನ್ನು ಹಮ್ಮಿಕೊಳ್ಳುತ್ತಾ ಸಾಮರಸ್ಯದಿಂದ ಬದುಕಿದ್ದ ಸಮಾಜಕ್ಕೆ ಇಂದು ಏನಾಗಿದೆ? ಸರ್ವರನ್ನು, ಸಮಸ್ತ ಧರ್ಮ, ಆಚರಣೆಗಳನ್ನು ನಾವು ಗೌರವಿಸುವುದನ್ನು ಕಲಿಯಬೇಕು’ ಎಂದು ಹೇಳಿದರು.

ಮುಸ್ಲಿಂ ಧರ್ಮಗುರು ಮೋಲಾನಾ ನಿಜಾಮುದ್ದೀನ್ ಮಾತನಾಡಿ,‘ಮಾನವರಲ್ಲಿ ಸಮಾನತೆ ಮತ್ತು ಜೀವನದಲ್ಲಿ ಪ್ರಮಾಣಿಕತೆ ಕುರಿತು ಪ್ರವಾದಿ ಮಹಮ್ಮದ್ ಪೈಗಂಬರ್‌ ಜಗತ್ತಿಗೆ ಸಾರಿದ ಸಂದೇಶ ಸರ್ವ ಕಾಲಕ್ಕೂ ಪ್ರಸ್ತುತ. ಆ ಸನ್ಮಾರ್ಗದಲ್ಲಿ ನಾವುಗಳು ಹೆಜ್ಜೆ ಹಾಕಬೇಕಿದೆ’ ಎಂದರು.

ಶಾಸಕ ನಾಗನಗೌಡ ಕಂದಕೂರ, ಚನ್ನಾರೆಡ್ಡಿ ಪಾಟೀಲ್ ತುನ್ನೂರು, ಸಿದ್ದಪ್ಪ ಹೊಟ್ಟಿ, ಮರೆಪ್ಪ ಈಟೆ, ಮಲ್ಲಣ್ಣ ದಾಸನಕೇರಿ, ಎಂ.ಕೆ.ಬಿರನೂರ, ಶ್ರೀನಿವಾಸರೆಡ್ಡಿ ಕಂದಕೂರ ಅವರನ್ನು ಸನ್ಮಾನಿಸಲಾಯಿತು.

ಭವ್ಯ ಮೆರವಣಿಗೆ:ಈದ್‌ಮಿಲಾದ್ ಆಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಭವ್ಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೈಲಾಪುರ ಅಗಸಿಯಿಂದ ಚಕ್ರಕಟ್ಟಾ, ಗಾಂಧಿವೃತ್ತ. ಹತ್ತಿಕುಣಿ ಕ್ರಾಸ್‌, ಯಾಕೂಬ್ ಬುಖಾರಿ ದರ್ಗಾ ಕ್ರಾಸ್‌, ವೀರಶೈವ ಕಲ್ಯಾಣ ಮಂಟಪದ ಮಾರ್ಗವಾಗಿ ಬೈತುಲ್ ಮಾಲ್‌ಗೆ ಮೆರವಣಿಗೆ ತಲುಪಿತು.

ಇಸ್ಲಾಂ ಧರ್ಮದ ಪುಣ್ಯ ಕ್ಷೇತ್ರಗಳಾದ ‘ಮೆಕ್ಕಾ ಮತ್ತು ಮದೀನಾ’ ದಲ್ಲಿನ ಮಂದಿರಗಳ ಮಾದರಿಗಳನ್ನು ತಯಾರಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯುದ್ದಕ್ಕೂ ಧರ್ಮ ಗುರುಗಳಿಂದ ಧಾರ್ಮಿಕ ಪಠಣ ಗಮನ ಸೆಳೆಯಿತು.

ಮುಸ್ಲಿಂ ಸಮಾಜದ ಮುಖಂಡರಾದ ಲಾಯಕ್ ಬಾದಲ್ ಹುಸೇನ್, ಜಿನಾಲಿ ಆಫಘಾನಿ, ಮನಸೂರ್ ಆಫಖಾನ್, ಮಹಮ್ಮದ್ ಇಸಾಖ್, ಶೇಖ್‌ ಜಕಿಯುದ್ದೀನ್, ನಗರಸಭೆ ಸದಸ್ಯ ಮನ್ಸೂರ್, ಸಾಜೀದ್ ಹಯಾತೆ ಮೆರವಣಿಗೆಯಲ್ಲಿ ಭಾಗಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT