ಬುಧವಾರ, ಜನವರಿ 22, 2020
21 °C

ಲಂಚ ಕೇಳಿದರೆ ದೂರು ನೀಡಿ: ಎಸಿಬಿ ಡಿವೈಎಸ್‍ಪಿ ಡಾ.ಸಂತೋಷ ಕೆ.ಎಂ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ‘ಕೆಲಸಕ್ಕಾಗಿ ಅಧಿಕಾರಿಗಳು ಲಂಚ ಕೇಳಿದಲ್ಲಿ ಅಂತವರ ವಿರುದ್ಧ ಧೈರ್ಯದಿಂದ ದೂರು ನೀಡಬೇಕು. ದೂರುದಾರರ ಹೆಸರು, ಮಾಹಿತಿಯನ್ನು ಗೌಪ್ಯವಾಗಿಟ್ಟು ತಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಯಾದಗಿರಿ ಎಸಿಬಿ ಡಿವೈಎಸ್‍ಪಿ ಡಾ. ಸಂತೋಷ ಕೆ.ಎಂ. ತಿಳಿಸಿದರು.

ತಹಶೀಲ್ದಾರ್ ಕಚೇರಿ ಆವರಣದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಬುಧವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆ ಮತ್ತು ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭ್ರಷ್ಟಾಚಾರ ತಡೆಗಟ್ಟಿ ಸಾರ್ವಜನಿಕರಿಗೆ ಪಾರದರ್ಶಕ ಆಡಳಿತ ಒದಗಿಸಬೇಕು ಎಂಬ ಉದ್ದೇಶದಿಂದ ಭ್ರಷ್ಟಾಚಾರ ನಿಗ್ರಹ ದಳವನ್ನು ಸರ್ಕಾರ ಸ್ಥಾಪಿಸಿದೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳು ಇದ್ದಲ್ಲಿ ಮತ್ತು ನೌಕರರು ಅಕ್ರಮ ಆಸ್ತಿ ಗಳಿಕೆ ಮಾಡಿದ್ದ ಬಗ್ಗೆ ಸೂಕ್ತ ದಾಖಲೆಗಳೊಂದಿಗೆ ದೂರು ನೀಡಲು ಸಂಪರ್ಕಿಸಬಹುದು’ ಎಂದರು.

‘ನೌಕರರು ನ್ಯಾಯಯುತವಾಗಿ ಮಾಡಬೇಕಾದ ಸಾರ್ವಜನಿಕರ ಕೆಲಸಕ್ಕೆ ಲಂಚದ ಹಣಕ್ಕಾಗಿ ಒತ್ತಾಯಿಸುವುದು, ಪಡೆಯುವುದು, ಲಂಚದ ರೂಪದಲ್ಲಿ ಬೇರೆ ಪ್ರತಿಫಲ ತೆಗೆದು ಕೊಳ್ಳುವುದು ಭ್ರಷ್ಟಾಚಾರ ನಿಯತ್ರಣ ಕಾಯ್ದೆ -1988ರ ಪ್ರಕಾರ ಅಪರಾಧವಾಗುತ್ತದೆ’ ಎಂದು ಹೇಳಿದರು.

ಕೆಲವು ದೂರುದಾರರು ಮಾತನಾಡಿ, ‘ತಹಶೀಲ್ದಾರ್ ಕಚೇರಿಯಲ್ಲಿ ದುಡ್ಡು ಕೊಟ್ರೆ ಕೆಲಸವಾಗುತ್ತವೆ. ಇಲ್ಲವಾದರೆ ಅನಗತ್ಯವಾಗಿ ವಿಳಂಬ ಮಾಡುತ್ತಾರೆ. ರೈತರ ಮಾತಿಗೆ ಅಧಿಕಾರಿಗಳು ಕ್ಯಾರೆ ಎನ್ನುವುದಿಲ್ಲ. ಸಾರ್ವಜನಿಕರೊಂದಿಗೆ ಸರಿಯಾಗಿ ವರ್ತಿಸುವುದಿಲ್ಲ’ ಎಂದು ದೂರಿದರು.

‘ಕೆಲ ಇಲಾಖೆ ಅಧಿಕಾರಿಗಳು ಕಚೇರಿಯಲ್ಲಿ ಇರುವುದಿಲ್ಲ. ಪಶ್ನಿಸಿದರೆ ಮೀಟಿಂಗ್ ನೆಪ ಹೇಳುತ್ತಾರೆ. ಸಿಂಧುತ್ವಕ್ಕೆ ಮತ್ತು ಇತರೆ ಕೆಲಸಕ್ಕೆ ಕಡ್ಡಾಯವಾಗಿ ಹಣ ಪಡೆಯುತ್ತಾರೆ. ಸರ್ವೆ ಇಲಾಖೆಯಲ್ಲಿ ಸರ್ವೆ ಕಾರ್ಯ ತಡವಾಗುತ್ತಿದೆ’ ಎಂದು ಆರೋಪಿಸಿದರು.

‘ಉಪ ನೋಂದಣಿ ಕಚೇರಿಯಲ್ಲಿ ಭ್ರಷ್ಟಾಚಾರ ಮನೆ ಮಾಡಿದೆ. ಇಸಿ ಪಡೆಯಲು ಕೂಡಾ ಹಣ ನೀಡಬೇಕು. ಇದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ’ ಎಂದು ನಿಂಗಣ್ಣ ಗೋನಾಲ, ಸಿದ್ದನಗೌಡ, ವೇಣುಗೋಪಾಲ ಜೇವರ್ಗಿ ಆರೋಪಿಸಿದರು.

ಪೊಲೀಸ್ ನಿರೀಕ್ಷಕರಾದ ಬಾಬಾ ಸಾಹೇಬ ಪಾಟೀಲ್, ಗುರುಪಾದ ಬಿರಾದಾರ್ ಮಾತನಾಡಿದರು. ಗ್ರೇಡ್-2 ತಹಶೀಲ್ದಾರ್ ಸುಫಿಯಾ ಸುಲ್ತಾನ್, ಎಸಿಬಿ ಸಿಬ್ಬಂದಿಗಳಾದ ಅಮರನಾಥ, ಗುತ್ತಪ್ಪಗೌಡ, ಸಾಯಬಣ್ಣ, ರವೀಂದ್ರ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು