ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಪ್ರಕರಣಗಳಿಗೆ ತಕ್ಷಣ ಸ್ಪಂದನೆ

ಜನಸ್ನೇಹಿ ಪೊಲೀಸ್ ವ್ಯವಸ್ಥೆ ಸುಧಾರಿಸಲು ಫೋನ್-ಇನ್ ಕಾರ್ಯಕ್ರಮ
Last Updated 3 ಡಿಸೆಂಬರ್ 2019, 20:15 IST
ಅಕ್ಷರ ಗಾತ್ರ

ಯಾದಗಿರಿ: ಮಹಿಳಾ ಮತ್ತು ಮಕ್ಕಳಿಗೆ ಸಂಬಂಧಿಸಿದಂತಹ ಪ್ರಕರಣಗಳಿಗೆ ತಕ್ಷಣ ಸ್ಪಂದಿಸುವಂತೆ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಕ್ರಮ ಚಟುವಟಿಕೆ, ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಭಗವಾನ್ ಸೋನವಣೆ ಹೇಳಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆಯ ಮಧ್ಯೆ ಉತ್ತಮ ಸಂಪರ್ಕ ಬೆಳೆಯುವ ನಿಟ್ಟಿನಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಸುಧಾರಿಸಲು ಹಮ್ಮಿಕೊಂಡಿದ್ದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ, ಅವರು ಮಾತನಾಡಿದರು.

ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಒಟ್ಟು 13 ಕರೆಗಳು ಸ್ವೀಕರಿಸಿದರು. 3 ಕರೆಗಳು ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿವೆ. ಈ ಕುಂದುಕೊರತೆಗಳನ್ನು ಪರಿಹರಿಸಲು ಸಂಬಂಧಪಟ್ಟ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಲಾಗಿದೆ. 4 ಕರೆಗಳು ಮರಳು ಅಕ್ರಮ ಸಾಗಾಣಿಕೆ, ಗ್ರಾಮಗಳಲ್ಲಿ ಮಟಕಾ, ಇಸ್ಪೀಟ್ ಜೂಜಾಟ ಹಾಗೂ ಗ್ರಾಮಗಳ ಹೊಟೇಲ್‍ಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಕುರಿತ ದೂರುಗಳಾಗಿದ್ದು, ಸೂಕ್ತ ಮಾಹಿತಿಯನ್ನು ಪಡೆದುಕೊಂಡು ದಾಳಿ ನಡೆಸಲಾಗುವುದು ಎಂದು ತಿಳಿಸಿದರು.

ನಗರದ ರೈಲ್ವೆ ಸ್ಟೇಷನ್, ಗಾಂಧಿಚೌಕ್ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಸಂಚಾರ ತೊಂದರೆಯಾತ್ತಿದೆ. ಆಟೊ ಚಾಲಕರು ರಸ್ತೆ ಮಧ್ಯದಲ್ಲಿ ನಿಲ್ಲಿಸುತ್ತಾರೆ. ಅದೇ ರೀತಿ ಶಹಾಪುರ ನಗರದ ಬಸವೇಶ್ವರ ವೃತ್ತ, ಭೀಮರಾಯನಗುಡಿ ರಸ್ತೆ ಹಾಗೂ ಯಾದಗಿರಿ ರಸ್ತೆಯ ಮಾರ್ಗಗಳಲ್ಲಿ ಎಲ್ಲೆಂದರಲ್ಲಿ ಆಟೊಗಳನ್ನು ನಿಲ್ಲಿಸಿ ಸಂಚಾರ ಸುವ್ಯವಸ್ಥೆಗೆ ಅಡಚಣೆಯಾಗುತ್ತಿವೆ ಎಂಬ ಕರೆಗಳು ಹೆಚ್ಚಾಗಿ ಕಂಡು ಬಂದವು.

ಎಟಿಎಂನಲ್ಲಿ ನಕಲಿ ದುಡ್ಡು ಬಂದಿದ್ದು, ಟಿಎಂವಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಕಿರಿಕಿರಿ ಮಾಡುತ್ತಿರುವ ಬಗ್ಗೆ ಹಾಗೂ ನಾರಾಯಣಪುರ ಠಾಣೆಯಲ್ಲಿ ವರದಿಯಾದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ದೂರಿನ ಕರೆಗಳು ದಾಖಲಾದವು. ಈ ಎಲ್ಲಾ ಕರೆಗಳಿಗೂ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ನಿರ್ದಿಷ್ಟ ಪ್ರಕರಣಗಳನ್ನು ತಕ್ಷಣ ಪರಿಹರಿಸಲು ಸಂಬಂಧಪಟ್ಟ ಪೊಲೀಸ್ ಠಾಣೆಯ ಪಿಎಸ್‌ಐ ಅವರಿಗೆ ಸೂಚನೆ ನೀಡಲಾಗುವುದು. ಬಾಕಿ ಪ್ರಕರಣಗಳನ್ನು ಹೆಚ್ಚಿನ ತನಿಖೆ ನಡೆಸಿ, ಪರಿಹಾರ ಕಲ್ಪಿಸಲಾಗುವುದು. ಸಮಸ್ಯೆಗಳನ್ನು ಪರಿಹರಿಸಲು ಖುದ್ದಾಗಿ ಜಿಲ್ಲಾ ಮಟ್ಟದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಯಾದಗಿರಿ ಡಿವೈಎಸ್‍ಪಿ ಯು.ಶರಣಪ್ಪ, ಸಿಪಿಐ ಶರಣಗೌಡ ನ್ಯಾಮಣ್ಣವರ್, ಜಿಲ್ಲಾ ಅಪರಾಧ ದಳದ ಸಿಪಿಐ ದೌಲತ್ ಎನ್.ಕೆ., ಇದ್ದರು.

ಜಿಲ್ಲೆಯಲ್ಲಿ 15 ಮಟಕಾ ಜೂಜಾಟ, 7 ಇಸ್ಪೀಟ್ ಜೂಜಾಟ ಹಾಗೂ 5 ಅಬಕಾರಿ ದಾಳಿಗಳನ್ನು ಕೈಗೊಂಡು ಅಹವಾಲಿನ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಹತ್ತಿ ಬೆಳೆ ಜೊತೆಗೆ ಗಾಂಜಾ ಬೆಳೆಯುತ್ತಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇದ್ದಲ್ಲಿ ಪೊಲೀಸ್ ಠಾಣೆಗೆ ತಿಳಿಸಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಭಗವಾನ್ ಸೋನವಣೆ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT