ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಗಳಲ್ಲಿ ಕೋವಿಡ್‌: ಕೃಷಿ ಕಾರ್ಯಕ್ಕೆ ಅಡ್ಡಿ

ಈ ಬಾರಿ 3.84 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ, ಜಮೀನು ಹದಗೊಳಿಸಲು ಕೂಲಿಕಾರ್ಮಿಕರ ಕೊರತೆ
Last Updated 24 ಮೇ 2021, 6:27 IST
ಅಕ್ಷರ ಗಾತ್ರ

ಯಾದಗಿರಿ: ಕೋವಿಡ್‌ ಎರಡನೇ ಅಲೆಯ ಪರಿಣಾಮ ಜಿಲ್ಲೆಯ ಕೃಷಿ ಚಟುವಟಿಕೆ ಮೇಲೆ ಕರಿ ನೆರಳು ಬಿದ್ದಿದೆ. ಹಳ್ಳಿಗಳಲ್ಲಿ ಕೋವಿಡ್‌ ವ್ಯಾಪಿಸಿದ್ದು, ಜಮೀನು ಹದಗೊಳಿಸಲು ಕೂಲಿಕಾರ್ಮಿಕರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯಲ್ಲಿ ಒಂದು ವಾರದಿಂದ ಆಗಾಗ್ಗೆ ಮಳೆ ಮಳೆ ಸುರಿಯುತ್ತಿದ್ದು, ಮುಂಗಾರು ಹಂಗಾಮಿಗೆ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ಆದರೆ, ಈ ಬಾರಿ ಕೋವಿಡ್‌ ಹೆಚ್ಚಿರುವ ಕಾರಣ ಕೃಷಿ ಕೆಲಸಗಳು ನಿಂತಿವೆ.

3.84 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಮುಂಗಾರು ಹಂಗಾಮಿಗಾಗಿ ಕೃಷಿ ಅಧಿಕಾರಿಗಳು ಸಿದ್ಥತೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಮಳೆ ಸಿಂಚನವಾಗುತ್ತಲೇ ರೈತರು ಮುಂಗಾರು ಹಂಗಾಮಿನ ಬೆಳೆಗಳ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಕಳೆದ ಬಾರಿ ಮುಂಗಾರು ಆರಂಭದಿಂದಲೇ ಮಳೆ ಸುರಿದ ಕಾರಣ ರೈತರು ಹೆಸರು, ತೊಗರಿ, ಸೂರ್ಯಕಾಂತಿ ಬಿತ್ತನೆ ಮಾಡಿದ್ದರು. ಆದರೆ, ಈ ಬಾರಿ ಕೋವಿಡ್‌ ಕಾರಣದಿಂದ ಕೃಷಿ ಚಟುವಟಿಕೆ ಬಹುತೇಕ ಸ್ಥಗಿತಗೊಂಡಿದೆ.

ಲಾಕ್‌ಡೌನ್‌ ಪ್ರಭಾವ: ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌ ಪ್ರಭಾವದಿಂದಲೂ ಬ್ಯಾಂಕ್‌ಗಳು ಬಂದ್‌ ಆಗಿದ್ದರಿಂದ ಸಾಲ ಸೌಲಭ್ಯವೂ ಸಿಗುತ್ತಿಲ್ಲ. ಕಳೆದ ಬಾರಿ ಲಾಕ್‌ಡೌನ್ ಸಡಿಲಗೊಳಿಸಿದ್ದರಿಂದ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದವು. ಮತ್ತೆ ಈಗ ಮೇ 24ರಿಂದ 28ರ ವರಗೆ ಸಂಪೂರ್ಣ ಲಾಕ್‌ಡೌನ್‌ ಆದೇಶಿಸಿದ್ದರಿಂದ ನಗರ, ಪಟ್ಟಣ ಪ್ರದೇಶಕ್ಕೆ ರೈತರು ಬರಲು ಹಿಂದೇಟು ಹಾಕುತ್ತಿದ್ದಾರೆ.

ಸಿಗದ ಸಾಲ: ಲಾಕ್‌ಡೌನ್‌ ಪರಿಣಾಮ ಬ್ಯಾಂಕ್‌ ಬಂದ್‌ ಆಗಿರುವುದಲ್ಲದೆ ಜಿಲ್ಲೆಯ ಕೆಲ ಬ್ಯಾಂಕ್‌ಗಳಲ್ಲಿ ರೈತರಿಗೆ ಸಾಲ ಸಿಗದಿರುವುದು ಕೃಷಿ ಕಾರ್ಯಗಳಿಗೆ ಅಡ್ಡಿಯಾಗಿದೆ. ಸೂಕ್ತ ದಾಖಲೆಗಳಿಗೆ ರೈತರು ಕಚೇರಿಗಳಿಗೆ ಅಲೆದಾಡಲು ಸಾಧ್ಯವಾಗುತ್ತಿಲ್ಲ.

ರೈತರಿಗೂ ಕೋವಿಡ್‌:ಗ್ರಾಮೀಣ ಭಾಗದಲ್ಲಿ ಕೋವಿಡ್‌ ಹರಡಿದ್ದರಿಂದ ಕೆಲ ರೈತರು ಕೋವಿಡ್‌ನಿಂದ ಬಳಲುತ್ತಿದ್ದಾರೆ. ಅಲ್ಲದೇ ಅವರ ಕುಟುಂಬದಲ್ಲಿ ಒಬ್ಬರಿಗೆ ಕೋವಿಡ್‌ ದೃಢಪಟ್ಟರೂ ಹೋಂ ಐಸೋಲೇಷನ್‌ ಇರಬೇಕಾಗುತ್ತದೆ. ಇದರ ಜೊತೆಗೆ ಕೂಲಿ ಕೆಲಸದವರೂ ಸಿಗದಂತ ಪರಿಸ್ಥಿತಿ ಏರ್ಪಟ್ಟಿದೆ.

ಹೆಸರು, ತೊಗರಿ, ಸೂರ್ಯಕಾಂತಿ, ಯಾದಗಿರಿ ತಾಲ್ಲೂಕಿನಲ್ಲಿ ಭತ್ತ ನಾಟಿಗೆ ಬೀಜ ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಲಾಗುತ್ತಿದೆ. ಬೆಳಿಗ್ಗೆ 6 ರಿಂದ 10ರವರೆಗೆ ಕಚೇರಿಗಳು ಕಾರ್ಯನಿರ್ವಹಿಸುತ್ತವೆ. ಹೀಗಾಗಿ ರೈತರು ಇದನ್ನು ಸದುಪಯೋಗ ಮಾಡಿಕೊಳ್ಳಬೇಕು. ಅಲ್ಲದೇ ಕಡ್ಡಾಯವಾಗಿ ಮಾಸ್ಕ್‌ ಧರಿಸಿ, ಅಂತರ ಕಾಪಾಡಿಕೊಳ್ಳಬೇಕು’ ಎನ್ನುತ್ತಾರೆ ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್‌.

‘ಜಿಲ್ಲೆಯಲ್ಲಿ ಗೊಬ್ಬರದ ಕೊರತೆ ಇಲ್ಲ. ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಬಿತ್ತನೆ ಬೀಜ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ’ ಎನ್ನುತ್ತಾರೆ ಅವರು.

‘ಕೆಲ ಕಡೆ ಮಳೆ ಸುರಿದಿದ್ದರಿಂದ ಕಾಯಿಪಲ್ಲೆ ಬೀಜ ರೈತರು ಒಯ್ದಿದ್ದಾರೆ. ಶನಿವಾರ ಲಾಕ್‌ಡೌನ್‌ ತೆಗೆದಿದ್ದರಿಂದ ರೈತರು ಬಂದಿದ್ದರು. ಆದರೆ, ಮತ್ತೆ ಲಾಕ್‌ಡೌನ್‌ ಆಗುತ್ತಿದೆ. ಇದು ರಸಗೊಬ್ಬರ ಖರೀದಿ ಮೇಲೆ ಪರಿಣಾಮ ಬೀರುತ್ತಿದೆ’ ಎಂದು ರಸಗೊಬ್ಬರ ವ್ಯಾಪಾರಿ ಬಸನಗೌಡ ಕಂದಳ್ಳಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT