ಶನಿವಾರ, ಜನವರಿ 28, 2023
15 °C

ಹೊತಪೇಟ: ಜೀವಕ್ಕೆ ಎರವಾದ ಜೀವ‘ಜಲ’

ಟಿ.ನಾಗೇಂದ್ರ Updated:

ಅಕ್ಷರ ಗಾತ್ರ : | |

Prajavani

ಶಹಾಪುರ: ತಾಲ್ಲೂಕಿನ ಹೊತಪೇಟ ಗ್ರಾಮದ ವಾರ್ಡ್ ಸಂಖ್ಯೆ 1ರ ನಿವಾಸಿಗಳಿಗೆ ದಾಹ ತಣಿಸಿ ಬದುಕಿಗೆ ಜೀವಾಧಾರವಾಗಬೇಕಾದ ಕುಡಿಯುವ ನೀರೇ ಅವರಿಗೆ ಶಾಪವಾಗಿ ಪರಿಣಮಿಸಿದೆ.

ಕಳೆದ ನಾಲ್ಕು ದಿನದಿಂದ ಕಾಣಿಸಿಕೊಂಡ ವಾಂತಿ ಬೇಧಿ ಮೂವರನ್ನು ಬಲಿ ತೆಗೆದುಕೊಂಡು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಆದರೆ, ಸಾವಿನ ಬಗ್ಗೆ ವೈದ್ಯರು ನೀಡುತ್ತಿರುವ ಸ್ಪಷ್ಟನೆ ಗೊಂದಲಕ್ಕೆ ಕಾರಣವಾಗಿದೆ.

ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾದ ಹೊತಪೇಟ ಗ್ರಾಮ ಇಂಗಳಗಿ, ಮಡ್ನಾಳ, ದಿಗ್ಗಿ, ಹೊತಪೇಟ ತಾಂಡಾ ಸೇರಿ 9 ಗ್ರಾಮಗಳ ಸದಸ್ಯರಿದ್ದಾರೆ. ಸುಮಾರು 4 ಸಾವಿರ ಜನಸಂಖ್ಯೆ ಇದೆ. ತಗ್ಗು ಪ್ರದೇಶದಲ್ಲಿ ವಸತಿ ಇರುವ ಗ್ರಾಮಕ್ಕೆ ಸುತ್ತಲು ಭತ್ತದ ಗದ್ದೆಗಳು  ಆವರಿಸಿವೆ. ಇದರಿಂದ ಸಹಜವಾಗಿ ಅಂತರ್ಜಲಮಟ್ಟ ಹೇರಳವಾಗಿದೆ.

ವಾರ್ಡ್ ಸಂಖ್ಯೆ 1ರ ನೀರು ಪೂರೈಸುವ ಸೇದು ಬಾವಿ ಗ್ರಾಮದ ಹೊರವಲಯದಲ್ಲಿದೆ . ಸುತ್ತಲು ಭತ್ತದ ಗದ್ದೆಗಳು ಆವರಿಸಿವೆ. ಬಾವಿ ನೀರನ್ನು ಟ್ಯಾಂಕ್‌ ನೇರವಾಗಿ ಸಂಗ್ರಹಿಸಿ, ಕೊಳವೆ ಮಾರ್ಗದ ಮೂಲಕ ವಿವಿಧ ಬಡಾವಣೆಗಳಿಗೆ ಸರಬರಾಜು ಮಾಡಲಾಗುತ್ತಿದೆ.

ಬಾವಿ ನೀರನ್ನು ಶುದ್ಧಿಕರಿಸುವುದಿಲ್ಲ. ಬ್ಲಿಚಿಂಗ್ ಪೌಡರ್ ಸಹ ಹಾಕುವುದಿಲ್ಲ. ಕೊಳವೆಗಳು ಅಲ್ಲಲ್ಲಿ ಒಡೆದು ಸೋರಿಕೆ ಆಗುತ್ತಿವೆ. ಕಲುಷಿತ ನೀರು ಪೈಪ್‌ನಲ್ಲಿ ಸೇರಿಕೊಳ್ಳುತ್ತಿದೆ. ಇದೇ ನೀರು ಕುಡಿದ ವರು ಸಂಕಷ್ಟ ಎದುರಿಸುವಂತೆ ಆಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

₹4ಕೋಟಿ ವೆಚ್ಚದಲ್ಲಿ ಜಲ ಜೀವನ ಮಿಷನ್ (ಜೆಜೆಎಂ) ಯೋಜನೆ ಅನುಷ್ಠಾನ ಗೊಳಿಸಲಾಗುತ್ತಿದೆ. ಸ್ಥಳೀಯ ಗುತ್ತಿಗೆದಾರರು ಕಾಮಗಾರಿ ಪಡೆದಿದ್ದು, ಬೇಕಾಬಿಟ್ಟಿಯಾಗಿ ರಸ್ತೆ ಅಗೆದು ಹಾಗೆಯೇ ಬಿಟ್ಟಿದ್ದಾರೆ. ತ್ವರಿತವಾಗಿ ಪೂರ್ಣಗೊಳಿಸುವಂತೆ ಮನವಿ ಮಾಡಿದವರ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುಡಿಯಲು ಯೋಗ್ಯವಲ್ಲದ ನೀರನ್ನು ನಿತ್ಯ ನಿವಾಸಿಗಳಿಗೆ ಸರಬರಾಜು ಮಾಡಲಾಗುತ್ತಿದೆ. ವಾಂತಿ ಬೇಧಿಯಿಂದ ಮೂವರು ಮೃತಪಟ್ಟರು ವೈದ್ಯರು ಹಾಗೂ ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ.  ಕೆಟ್ಟು ನಿಂತಿದೆ. ದುರಸ್ತಿಗೊಳಿಸಲು ಪಿಡಿಒ ಮುಂದಾಗುತ್ತಿಲ್ಲ. ನೀರು ಶುದ್ಧೀಕ ರಣ ಘಟಕ ಕೆಟ್ಟು ನಿಂತಿದ್ದರೂ ದುರಸ್ತಿ ಆಗುತ್ತಿಲ್ಲ ಎಂದು
ದೂರಿದರು.

ನೀರು ಶುದ್ಧೀಕರಣ ಘಟಕ ಸ್ಥಗಿತ

ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಿದ್ದರೂ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಸದಾ ಕೆಟ್ಟು ನಿಂತಿರುತ್ತದೆ ಎಂದು ಗ್ರಾಮಸ್ಥರು ದೂರಿದರು.

ಪಿಡಿಒ ಅವರನ್ನು ವಿಚಾರಿಸಿದರೆ, ‘ಅದು ನಮ್ಮ ವ್ಯಾಪ್ತಿಗೆ ಒಳಪಡುವುದಿಲ್ಲ’ ಎಂದು ಹಾರಿಕೆ ಉತ್ತರ ಕೊಡುತ್ತಾರೆ. ಗ್ರಾಮದಲ್ಲಿ ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲ. ಚರಂಡಿ ನೀರು ರಸ್ತೆಯನ್ನು ಆಕ್ರಮಿಸಿಕೊಂಡಿವೆ. ಸಾಕಷ್ಟು ಸೊಳ್ಳೆಗಳ ಉತ್ಪತ್ತಿಯಾಗಿ ಆರೋಗ್ಯ ಮೇಲೆ ದುಷ್ಪರಿಣಾಮ ಬೀರಿದೆ. ತ್ವರಿತವಾಗಿ ಗ್ರಾಮಕ್ಕೆ ಮೂಲಸೌಕರ್ಯ ಒದಗಿಸಬೇಕು ಎಂಬುದು ಗ್ರಾಮಸ್ಥರ ಮನವಿ.

***

*ಶುಕ್ರವಾರದಿಂದ ವಾಂತಿಬೇಧಿ ಆರಂಭವಾಗಿದೆ. ಇದು ಕಾಲರಾ ಅಲ್ಲ. ಗ್ರಾಮದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು
–ಸುನಂದ, ಹೊತಪೇಟ ಗ್ರಾ.ಪಂ, ಪಿಡಿಒ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು