ವಡಗೇರಾ: ಕೂಲಿಕಾರ್ಮಿಕ ಮಹಿಳೆಯರು ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಕೂಸಿನ ಮನೆ ಶಿಶುಪಾಲನಾ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬೆಂಡೆಬೆಂಬಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲಾ ಶಿವಾನಂದ ಸ್ವಾಮಿ ಕೊಡಾಲ ಹೇಳಿದರು.
ತಾಲ್ಲೂಕಿನ ಬೆಂಡಬೆಂಬಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೋಣೆಯಲ್ಲಿ ಸ್ಥಾಪಿಸಿರುವ ಕೂಸಿನ ಮನೆ ಶಿಶುಪಾಲನ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕ ಮಹಿಳೆಯರು ತಮ್ಮ ಆರು ತಿಂಗಳಿನಿಂದ ಮೂರು ವರ್ಷದ ಒಳಗಿರುವ ಮಕ್ಕಳನ್ನು ಈ ಕೇಂದ್ರದಲ್ಲಿ ಬಿಟ್ಟು ನೆಮ್ಮದಿಯಾಗಿ ಕೂಲಿ ಕೆಲಸ ಮಾಡಬಹುದು’ ಎಂದು ತಿಳಿಸಿದರು.
‘ಮಕ್ಕಳಿಗೆ ಗುಣಮಟ್ಟದ ಆಹಾರದ ಜೊತೆಗೆ ಆಟಿಕೆ ಸಾಮಗ್ರಿಗಳನ್ನು ನೀಡಲಾಗುತ್ತದೆ. ಶಿಶುಪಾಲನ ಕೇಂದ್ರದ ಆರೈಕೆದಾರರು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ’ ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಸ್ವಾಮಿ ಮಾತನಾಡಿ, ‘ಶಿಶುಪಾಲನಾ ಕೇಂದ್ರದಲ್ಲಿ ಮಕ್ಕಳಿಗಾಗಿ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ’ ಎಂದು ಹೇಳಿದರು.
ಗ್ರಾ.ಪಂ ಕಾರ್ಯದರ್ಶಿ ಮಹಾದೇವಪ್ಪಗೌಡ ಗೋನಾಲ, ಮುಖ್ಯಗುರು ಮಹಮ್ಮದ್ ರಫಿ, ಮಹಮ್ಮದ್ ಯಾಸಿನ್, ಗ್ರಾಮದ ಮುಖಂಡರಾದ ಅಯ್ಯಪ್ಪ ದೊರೆ, ತಿಪ್ಪಣ್ಣ ಕದ್ರಾಪುರ, ಸಿದ್ದಪ್ಪ ನಾಟೇಕಾರ, ರಾಜು ರಾಜಾಪುರ, ಕೂಸಿನ ಮನೆಯ ಆರೈಕೆದಾರರಾದ ಶಿವಲೀಲಾ, ಮರೆಮ್ಮ, ದೀಪಾ ಉಪಸ್ಥಿತರಿದ್ದರು.