ಬುಧವಾರ, ಅಕ್ಟೋಬರ್ 16, 2019
28 °C

ವೃತ್ತಿಪರ ವಸತಿ ನಿಲಯ ಕಟ್ಟಡ ಉದ್ಘಾಟನೆ

Published:
Updated:
Prajavani

ಯಾದಗಿರಿ: ವಿದ್ಯಾರ್ಥಿಗಳ ಅನುಕೂಲಕ್ಕೆ ಸರ್ಕಾರ ವಸತಿ ನಿಲಯ ನಿರ್ಮಿಸಿದ್ದು, ಸೌಕರ್ಯ ಪಡೆದು ಉತ್ತಮ ವ್ಯಾಸಂಗ ಮಾಡಬೇಕು ಎಂದು ಶಾಸಕ ವೆಂಕಟರಡ್ಡಿ ಮುದ್ನಾಳ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವೃತ್ತಿಪರ ವಸತಿ ನಿಲಯ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಭವ್ಯವಾದ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಸೂಕ್ತ ಸೌಕರ್ಯ ಒಳಗೊಂಡಿದೆ. ಬಾಲಕಿಯರ ವಸತಿ ನಿಲಯ ಇರುವುದರಿಂದ ಮೇಲ್ವಿಚಾರಕರು ಮತ್ತು ಅಧಿಕಾರಿಗಳು ಸಾಕಷ್ಟು ಎಚ್ಚರಿಕೆ ವಹಿಸಬೇಕು. ಸರ್ಕಾರದ ಸೌಕರ್ಯ ಬಡ ಮಕ್ಕಳಿಗೆ ಸರಿಯಾಗಿ ದೊರೆಯುವಂತಾಗಬೇಕು ಎಂದು ತಾಕೀತು ಮಾಡಿದರು.

ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಕಾಳಜಿ ಹೊಂದಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಯಾದಗಿರಿಗೆ ಕಡ್ಡಾಯವಾಗಿ ಆದ್ಯತೆಯಾಗಿ ಮೆಡಿಕಲ್ ಕಾಲೇಜು ನೀಡುವ ಭರವಸೆ ನೀಡಿದ್ದಾರೆ. ಎಂಜಿನಿಯರಿಂಗ್ ಕಾಲೇಜು ಸಿಗುವ ವಿಶ್ವಾಸವಿದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಶಿವಲಿಂಗಪ್ಪ ಪುಟಗಿ, ಖಂಡಪ್ಪ ದಾಸನ ಮಾತನಾಡಿದರು. ನಗರಸಭೆ ಸದಸ್ಯರಾದ ವಿಲಾಸ ಪಾಟೀಲ, ಹಣಮಂತ ಇಟಗಿ, ಸ್ವಾಮಿದೇವ ದಾಸನಕೇರಿ, ಸುರೇಶ ಅಂಬಿಗೇರ್, ಚಂದ್ರಕಾಂತ ಮಡ್ಡಿ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಮಲ್ಲಣ್ಣಗೌಡ ಹತ್ತಿಕುಣಿ, ಪ್ರವಾಸೋದ್ಯಮ ಸಹಾಯಕ ನಿರ್ದೇಶಕ ರಜನಿಕಾಂತ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಅಲ್ಲಾಭಕ್ಷ, ಭೀಮನಗೌಡ ಕ್ಯಾತನಾಳ, ಮಾರುತಿ ಕಲಾಲ, ಹಣಮಂತ ಮಡ್ಡಿ ಇದ್ದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪ್ರಭು ಗಡೆ ಸ್ವಾಗತಿಸಿದರು, ದೇವೇಂದ್ರಪ್ಪ ನಿರೂಪಿಸಿದರು. ಶ್ರೀಹರಿ ಘಂಟಿ ವಂದಿಸಿದರು.

Post Comments (+)