ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರದ ಸಂಸ್ಥಾನದ ವೀರರಾಣಿ ಈಶ್ವರಮ್ಮ

ಆಂಗ್ಲರನ್ನು ಸೆದೆಬಡಿದ, ನಿಜಾಮರ ವಿರುದ್ಧ ಸಿಡಿದೆದ್ದ ವೀರ ವನಿತೆ
Last Updated 13 ಆಗಸ್ಟ್ 2022, 3:44 IST
ಅಕ್ಷರ ಗಾತ್ರ

ಸುರಪುರ: ಸಂಸ್ಥಾನದ ಅರಸರಂತೆ ಅರಸಿಯರು ವೀರ ವನಿತೆಯರಾಗಿದ್ದರು ಎನ್ನುವುದಕ್ಕೆ ಹಲವು ನಿದರ್ಶನಗಳಿವೆ. ರಾಣಿಯರ ಧೈರ್ಯ, ಗಾಂಭೀರ್ಯಕ್ಕೆ ಮನಸೋತ ರಾಜರು ಕೆಲ ಗ್ರಾಮಗಳಿಗೆ ಅವರ ಹೆಸರು ಇಟ್ಟಿದ್ದಾರೆ.

ರಾಜಾ ಕೃಷ್ಣಪ್ಪನಾಯಕ (1827-1843) ಪಟ್ಟದರಸಿ ರಾಣಿ ಈಶ್ವರಮ್ಮ ಅವರ ಬಲು ಇತಿಹಾಸ ರೋಚಕ. ರಾಜಾ ಕೃಷ್ಣಪ್ಪನಾಯಕ ಅವರಿಗೆ ಬಹುಕಾಲ ಸಂತಾನ ಇರುವುದಿಲ್ಲ. ಪಟ್ಟಕ್ಕೆ ಕಿರಿಯ ಸಹೋದರ ಪಿಡ್ಡನಾಯಕ ಅವರ ಮಗನನ್ನು ತರುವ ಚಿಂತನೆ ನಡೆಯುತ್ತದೆ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನೇತೃತ್ವ ವಹಿಸಿದ್ದ ನಾಲ್ವಡಿ ರಾಜಾ ವೆಂಕಟಪ್ಪನಾಯಕ ಅವರು ಈಶ್ವರಮ್ಮ ಅವರ ಉದರದಲ್ಲಿ ತಡವಾಗಿ ಜನಿಸುತ್ತಾರೆ.

ಮಗನಿಗೆ ಕೇವಲ 10 ವರ್ಷವಿದ್ದಾಗ ರಾಜಾ ಕೃಷ್ಣಪ್ಪನಾಯಕ ತೀರಿಕೊಳ್ಳುತ್ತಾರೆ. ಆಗ ಪಿಡ್ಡನಾಯಕ ತನ್ನ ಮಗನನ್ನು ಪಟ್ಟದಲ್ಲಿ ಕೂಡಿಸುವ ಯತ್ನ ನಡೆಸುತ್ತಾನೆ. ಆದರೆ ಈಶ್ವರಮ್ಮ ಧೈರ್ಯದಿಂದ ತನ್ನ ಮಗನಿಗೆ ಪಟ್ಟಾಭಿಷೇಕ ಮಾಡುತ್ತಾಳೆ. ರಾಜ ಚಿಕ್ಕವನಾದ್ದರಿಂದ ಆಡಳಿತವನ್ನು ತಾನೇ ನೋಡಿಕೊಳ್ಳುವುದಾಗಿ ಬ್ರಿಟಿಷ್ ಪ್ರತಿನಿಧಿ ಗ್ರೀಸ್ಲೆ ತಿಳಿಸುತ್ತಾನೆ. ಇದನ್ನು ವಿರೋಧಿಸಿದ ಈಶ್ವರಮ್ಮ ಮಗನ ಪರವಾಗಿ ತಾನೇ ರಾಜ್ಯಭಾರ ಮಾಡುತ್ತಾಳೆ.

ಮೈದುನ ಪಿಡ್ಡನಾಯಕ, ಆಂಗ್ಲರ ಜತೆ ಸೇರಿ ರಾಜ್ಯ ಕಸಿದುಕೊಳ್ಳಲು ಸತತ ಪ್ರಯತ್ನ ಮಾಡುತ್ತಾನೆ. ಇದಕ್ಕೆ ಹೈದರಾಬಾದ್ ನಿಜಾಮರು ಕುಮ್ಮಕ್ಕಿರುತ್ತದೆ. ಕುಟುಂಬದ ಒಳಜಗಳ, ಆಂಗ್ಲರ ವಿರೋಧ, ನಿಜಾಮರ ಮಸಲತ್ತನ್ನು ಧೈರ್ಯ ಮತ್ತು ಜಾಣ್ಮೆಯಿಂದ ಎದುರಿಸಿ ರಾಜ್ಯ ಕಾಪಾಡಿದ ಪರಿ ಮೈನವಿರೇಳಿಸುವಂತದ್ದು.

ಸ್ವತಃ ಯುದ್ಧ ಕೌಶಲ ಹೊಂದಿದ್ದ ರಾಣಿ ಮಗ ನಾಲ್ವಡಿ ರಾಜಾ ವೆಂಕಟಪ್ಪನಾಯಕನಿಗೆ ಸಮರದ ಎಲ್ಲ ಕಲೆಗಳನ್ನು ಕರಗತ ಮಾಡಿಸಿದಳು. ದೇಶಾಭಿಮಾನದ ಕಿಚ್ಚನ್ನೂ ಮೂಡಿಸಿದಳು.

ತನ್ನ ಸಂಸ್ಥಾನದ ರಕ್ಷಣೆಗಾಗಿ ರೋಹಿಲರನ್ನು ಮತ್ತು ಅರಬರನ್ನೂ ಸೇನೆಗೆ ಸೇರಿಸಿಕೊಂಡಳು. ನಂಬಿಕಸ್ತ ಬೇಡರ ಪಡೆಯೂ ಜತೆಗಿತ್ತು. ಆಂಗ್ಲ ಸರ್ಕಾರ ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸುತ್ತಲೇ ಇತ್ತು.

ಗ್ರೀಸ್ಲೆಯಿಂದ 1842ರಲ್ಲಿ ಅಧಿಕಾರ ಸ್ವೀಕರಿಸಿದ ಮೆಡೋಜ ಟೇಲರ್ ರಾಣಿ ಮತ್ತು ಯುವರಾಜನನ್ನು ಎಷ್ಟು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾನೆ ಎಂದರೆ, ನಾಲ್ವಡಿ ರಾಜಾ ವೆಂಕಟಪ್ಪನಾಯಕ ಟೇಲರ್‌ನ್ನು ಅಪ್ಪಾಜಿ ಎಂದು ಸಂಬೋಧಿಸುವಷ್ಟು.

ಟೇಲರ್ ಕ್ರಮೇಣ ರಾಜ್ಯವನ್ನು ಹಿಡಿತಕ್ಕೆ ತೆಗೆದುಕೊಳ್ಳುತ್ತಾನೆ. ದಕ್ಷ ಅಧಿಕಾರಿಯಾಗಿದ್ದ ಚನ್ನಬಸಪ್ಪ ಅವರನ್ನು ಬಂಧಿಸುತ್ತಾನೆ. ರಾಣಿಯ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಾನೆ. ಟೇಲರ್‌ನ್ನು ಮಣಿಸಲು ರಾಣಿ ನಿಶ್ಚಯಿಸುತ್ತಾಳೆ. ಇದನ್ನರಿತ ರೆಜಿಮೆಂಟ್ ಸೇನೆ ಮುತ್ತಿಗೆ ಹಾಕಿದಾಗ ರಾಣಿ ಸ್ವತಃ ಖಡ್ಗ ಹಿಡಿದು ವೀರಾವೇಶದಿಂದ ಹೋರಾಡುತ್ತಾಳೆ.

ಪರಾಭವಗೊಂಡ ರಾಣಿಯಿಂದ ಹಣ, ಜಹಗೀರುಗಳನ್ನು, ದಾಖಲೆಗಳನ್ನು ವಶಪಡಿಸಿಕೊಂಡು ರಾಜ್ಯ ತೊರೆಯಲು ಒತ್ತಡ ಹಾಕಲಾಗುತ್ತದೆ. ವಿಧಿಯಿಲ್ಲದೆ ರಾಣಿ ತನ್ನ ತವರು ರತ್ನಗಿರಿಗೆ ಹೊರಡುತ್ತಾಳೆ. ಹೊರಡುವಾಗ ತನ್ನ ಪುತ್ರ ನಾಲ್ವಡಿ ರಾಜಾ ವೆಂಕಟಪ್ಪನಾಯಕನಿಗೆ ದೇಶಕ್ಕೆ ಆಂಗ್ಲರ ದಾಸ್ಯದಿಂದ ಮುಕ್ತಿ ನೀಡು ಎಂದು ತಿಳಿಸುತ್ತಾಳೆ. ಮೇ 27, 1853 ರಂದು ನಿಧನಳಾಗುತ್ತಾಳೆ.

ಅಮ್ಮನಿಗೆ ಮಾತು ನೀಡಿದಂತೆ ನಾಲ್ವಡಿ ರಾಜಾ ವೆಂಕಟಪ್ಪನಾಯಕ ಮೇಲ್ನೋಟಕ್ಕೆ ಟೇಲರ್‌ನ ಸಖ್ಯ ಬೆಳೆಸಿ ರಾಜ್ಯಭಾರ ನಡೆಸುತ್ತಾನೆ. ಒಳಗೊಳಗೆ ಆಂಗ್ಲರ ವಿರುದ್ಧ ಸಿಡಿದೇಳುತ್ತಾನೆ. ಅನಂತನ ಬಗಡಿ ಯದ್ಧದಲ್ಲಿ ಆಂಗ್ಲರ ಬಹುದೊಡ್ಡ ಸೈನ್ಯವನ್ನು ಸೋಲಿಸುತ್ತಾನೆ. ಮೋಸಕ್ಕೆ ಬಲಿಯಾಗಿ ಹುತಾತ್ಮನಾಗುವುದು
ಇತಿಹಾಸ.

ರಾಣಿ ಈಶ್ವರಮ್ಮನ ಧೈರ್ಯ, ಸಾಹಸ ಅಪ್ರತಿಮ. ಸವಾಲುಗಳನ್ನು ಮೆಟ್ಟಿ ಸಂಸ್ಥಾನದ ಘನತೆ ಕಾಪಾಡಿದ್ದು ಗಮನಾರ್ಹ. ಇಂತಹ ಅದಮ್ಯ ಮಹಿಳೆಯ ಬಗ್ಗೆ ಇತಿಹಾಸಕಾರರು ಬೆಳಕು ಚೆಲ್ಲದಿರುವುದು ವಿಪರ್ಯಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT