ಮಂಗಳವಾರ, ಮೇ 24, 2022
31 °C
ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒತ್ತಾಯ

ಶಾಲಾ–ಕಾಲೇಜಿಗೆ ಮೂಲಸೌಕರ್ಯ ಕಲ್ಪಿಸಿ: ಬಸನಗೌಡ ಯಡಿಯಾಪುರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಜಿಲ್ಲೆಯಲ್ಲಿ ವಿಷಯ ಆಧಾರಿತ ಶಿಕ್ಷಕರ ಕೊರತೆಯಿದ್ದು, ಹುದ್ದೆಗಳ ಭರ್ತಿಗೆ ಶಿಕ್ಷಣ ಇಲಾಖೆ ಕೂಡಲೇ ಮುಂದಾಗಬೇಕು. ಜಿಲ್ಲೆಯ ಪರೀಕ್ಷಾ ಫಲಿತಾಂಶವನ್ನು ಸುಧಾರಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸನಗೌಡ ಯಡಿಯಾಪುರ ಸೂಚಿಸಿದರು.

ಸೋಮವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಜಿಲ್ಲೆಯಲ್ಲಿನ ಶಿಕ್ಷಣದ ಸ್ಥಿತಿಗತಿಯನ್ನು ಪ್ರಸ್ತಾಪಿಸಿದ ಅವರು, ‘ಶಾಲಾ–ಕಾಲೇಜುಗಳಿಗೆ ಕುಡಿಯುವ ನೀರು ಸೇರಿದಂತೆ ಇತರೆ ಮೂಲಸೌಕರ್ಯ ಪೂರೈಸಬೇಕು’ ಎಂದರು.

‘ಜಿಲ್ಲೆಯ ಎಲ್ಲಾ ಶಿಕ್ಷಕರಿಗೆ ಸಂಜೀವಿನಿ ಕಾರ್ಡು ನೀಡಬೇಕು. ಈ ಯೋಜನೆ ಕೂಡಲೇ ಕಾರ್ಯರೂಪಕ್ಕೆ ಬರಬೇಕು’ ಎಂದರು. ಇದಕ್ಕೆ ಪೂರಕವಾಗಿ ಸದಸ್ಯರಾದ ಶಿವಲಿಂಗಪ್ಪ ಪುಟಗಿ ಮತ್ತು ಬಸರೆಡ್ಡಿಗೌಡ ಅನಪುರ ಅವರು ಶಾಲಾ–ಕಾಲೇಜಿಗೆ ಸೌಲಭ್ಯ ಒದಗಿಸಬೇಕು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸರೆಡ್ಡಿ ಅವರು ಇಲಾಖೆಯ ಪ್ರಗತಿ ವರದಿ ವಾಚಿಸಲು ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

‘ಶಿಕ್ಷಣ ಇಲಾಖೆಯವರು ಸದಸ್ಯರಿಗೆ ಅನುಪಾಲನ ವರದಿ ಕೊಟ್ಟಿಲ್ಲ. ಒಬ್ಬೊಬ್ಬರಿಗೆ ಒಂದೊಂದು ವರದಿ ನೀಡಲಾಗಿದೆ. ಎಲ್ಲರಿಗೂ ಒಂದೇ ರೀತಿಯ ವರದಿ ಕೊಟ್ಟಿಲ್ಲ. ಸಮಗ್ರ ವರದಿಯೂ ನೀಡುತ್ತಿಲ್ಲ. ನಾವು ಕೇಳಿದ ಮಾಹಿತಿತಯನ್ನೂ ಸಹ ಕೊಟ್ಟಿಲ್ಲ’ ಎಂದು ದೂರಿದರು.

‘ಜಿಲ್ಲೆಯಲ್ಲಿ ಈ ಬಾರಿ ಎಷ್ಟು ಖಾಸಗಿ ಶಾಲೆಗೆ ಅನುಮತಿ ನೀಡಲಾಗಿದೆ’ ಎಂದು ಸದಸ್ಯೆ ಶಶಿಕಲಾ ಬಿ ಪಾಟೀಲ ಕೇಳಿದ ಪ್ರಶ್ನೆಗೆ ‘14 ಖಾಸಗಿ ಶಾಲೆಗಳಿಗೆ ಅನುಮತಿ ನೀಡಲಾಗಿದೆ’ ಎಂದು ಶ್ರೀನಿವಾಸರೆಡ್ಡಿ ಉತ್ತರಿಸಿದರು. ಅದಕ್ಕೆ ಪ್ರರುಪ್ರಶ್ನಿಸಿದ ಸದಸ್ಯೆ, ‘ಎಷ್ಟು ಕಡೆ ಭೇಟಿ ನೀಡಿದ್ದೀರಿ? ಹಲವು ಕಡೆ ಶಾಲಾ ಮೈದಾನ, ಶೌಚಾಲಯ ಇನ್ನಿತರ ಸೌಲಭ್ಯಗಳಿಲ್ಲ’ ಎಂದರು.

ಇದಕ್ಕೆ ದನಿಗೂಡಿಸಿದ ಸದಸ್ಯ ಶಿವಲಿಂಗಪ್ಪ ಪುಟಗಿ, ‘ನನಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, 21 ಶಾಲೆಗಳ ಆರಂಭಕ್ಕೆ ಅನುಮತಿ ಸಿಕ್ಕಿದೆ. ಆದರೆ, ಅವುಗಳಲ್ಲಿ ಶೇ 40ರಷ್ಟು ಶಾಲೆಗಳು ಮಾತ್ರ ಸೌಲಭ್ಯ ಹೊಂದಿವೆ. ಎಲ್ಲಾ ಶಾಲೆಗಳಿಗೆ ಅನುಮತಿ ಹೇಗೆ ಸಿಕ್ಕಿತು’ ಎಂದು ಪ್ರಶ್ನಿಸಿದರು.

‘ಮುದನೂರ ದೇವರ ದಾಸಿಮಯ್ಯ ಕಲ್ಯಾಣ ಮಂಟಪದ ಕಾಮಗಾರಿಯನ್ನು ಭೂಸೇನಾ ನಿಗಮದವರು ಶೀಘ್ರವೇ ಪೂರ್ಣಗೊಳಿಸಬೇಕು. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯವರು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕು. ಹೆಚ್ಚುವರಿ ವಿದ್ಯಾರ್ಥಿ ನಿಲಯಗಳು ಬೇಕಿದ್ದಲ್ಲಿ ಪ್ರಸ್ತಾವ ಸಲ್ಲಿಸಬೇಕು. ನಿಲಯಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವೃದ್ಧಿಸಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗಿರಿಜಮ್ಮ ರೋಟ್ನಡಗಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ, ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

***

11ರ ಸಭೆ ಆರಂಭವಾಗಿದ್ದು 1.30ಕ್ಕೆ!

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಾಮಾನ್ಯ ಸಭೆಯು ಬೆಳಿಗ್ಗೆ 11ಕ್ಕೆ ನಿಗದಿಯಾಗಿದ್ದರೂ ಶುರುವಾಗಿದ್ದು ಮಧ್ಯಾಹ್ನ 1.30ಕ್ಕೆ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗಿರಿಜಮ್ಮ ರೋಟ್ನಡಗಿ ಅವರ ಕಚೇರಿಯಲ್ಲಿ ಸದಸ್ಯರು ಸಭೆ ಸೇರಿದ್ದರು.

ಈ ಮಧ್ಯೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ ಅವರು ಎರಡು ಬಾರಿ ಸಭಾಂಗಣಕ್ಕೆ ಬಂದರೂ ಸದಸ್ಯರು ಸಭೆಗೆ ಬರಲಿಲ್ಲ. ಮಧ್ಯಾಹ್ನ 1.30ರ ಸುಮಾರಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸನಗೌಡ ಯಡಿಯಾಪುರ, ಉಪಾಧ್ಯಕ್ಷೆ ಗಿರಿಜಮ್ಮ ರೋಟ್ನಡಗಿ ಅವರು ಬಂದ ಬಳಿಕ ಸದಸ್ಯರು ಒಬ್ಬೊಬ್ಬರಾಗಿ ಬರತೊಡಗಿದರು.

***

ಜಿಲ್ಲಾ ಪಂಚಾಯಿತಿ ಸದಸ್ಯರು ಕೇಳಿದ ಮಾಹಿತಿಯನ್ನು ಆಯಾ ಇಲಾಖೆಯ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಸಭೆಗೆ ನೀಡಬೇಕು. ವಿನಾಕಾರಣ ವಿಳಂಬ ಮಾಡಬಾರದು. ನಿರ್ಲಕ್ಷ್ಯ ತೋರಬಾರದು.
-ಬಸನಗೌಡ ಯಡಿಯಾಪುರ, ಅಧ್ಯಕ್ಷ, ಜಿಲ್ಲಾ ಪಂಚಾಯಿತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು