ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆ ಬದಲು ತಿಪ್ಪೆಗುಂಡಿಗೆ ಹೆಸರುಕಾಳು

ಹತ್ತಿಕುಣಿ ಹೋಬಳಿಯಲ್ಲಿ ಮಳೆ
Last Updated 24 ಆಗಸ್ಟ್ 2020, 14:27 IST
ಅಕ್ಷರ ಗಾತ್ರ

ಯರಗೋಳ: ಹತ್ತಿಕುಣಿ ಹೋಬಳಿ ವ್ಯಾಪ್ತಿಯಲ್ಲಿ ಸುರಿದ ಜೋರಾದ ಮಳೆಗೆ ರಾಶಿ ಮಾಡಿದ ಹೆಸರುಕಾಳುಗಳು ಹಸಿರು ಬಣ್ಣದಿಂದ ಕಪ್ಪು ಬಣ್ಣಕ್ಕೆ ತಿರುಗಿವೆ. ಅವು ಮಾರುಕಟ್ಟೆಯ ಬದಲು ತಿಪ್ಪೆಗುಂಡಿ ಸೇರುತ್ತಿದ್ದು, ರೈತರು ಸಂಕಷ್ಟದಲ್ಲಿದ್ದಾರೆ.

ಖಾನಳ್ಳಿ ಗ್ರಾಮದ ರೈತ ಶಂಕ್ರಪ್ಪ ಬಂಗಾರಿ 2 ಎಕರೆ ಹೊಲದಲ್ಲಿ ₹10 ಸಾವಿರ ಖರ್ಚು ಮಾಡಿ ಹೆಸರು ಬಿತ್ತನೆ ಮಾಡಿದ್ದರು. ಬೆಂಬಿಡದೆ ಸುರಿದ ಮಳೆಯಿಂದ ಅರ್ಧದಷ್ಟು ಬೆಳೆ ಕೊಳೆತು ಹೋಗಿತ್ತು. ಇನ್ನುಳಿದ ಬೆಳೆಯನ್ನು ಒಣಗಿಸಿ ರಾಶಿ ಮಾಡಿದಾಗ ಸಂಪೂರ್ಣ ಬೂದು ಬಣ್ಣಕ್ಕೆ ತಿರುಗಿದೆ. ‘ತಿನ್ನಲು ಯೋಗ್ಯವಲ್ಲದ ಹೆಸರುಕಾಳನ್ನು ಮಾರುಕಟ್ಟೆಯಲ್ಲಿ ಕೊಳ್ಳುವರಾರು? ತಿಪ್ಪೆಗೆ ಸುರಿದರೆ ಒಳ್ಳೆಯ ಗೊಬ್ಬರವಾಗುತ್ತೆ’ ಎಂದು ನೋವಿನಿಂದ ನುಡಿದರು.

ಯರಗೋಳ ಗ್ರಾಮದ ರೈತ ಮಹಿಳೆ ರೋಷನ್‌ಬಿ ಸೌದಗರ್ 3 ಎಕರೆ ಹೊಲದಲ್ಲಿ ₹20 ಸಾವಿರ ಖರ್ಚು ಮಾಡಿ ಹೆಸರು ಬಿತ್ತನೆ ಮಾಡಿದ್ದರು. ‘ಮಳೆ ಅವಾಂತರದಿಂದ ಇಳುವರಿ ಕಡಿಮೆಯಾಗಿದೆ. ರಾಶಿ ಮಾಡಿದ ಹೆಸರು ಸಂಪೂರ್ಣ ಕಪ್ಪು ಬಣಕ್ಕೆ ತಿರುಗಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೊಳ್ಳುವವರಿಲ್ಲ, ಜೀವನ ಸಾಗಿಸುವುದು ಕಷ್ಟವಾಗುತ್ತದೆ’ ಎಂದು ತಿಳಿಸಿದರು.

ಹತ್ತಿಕುಣಿ ಗ್ರಾಮದ ನಾಗರಾಜ ಕೋಳಿ 4 ಎಕರೆ ಹೊಲದಲ್ಲಿ ಹೆಸರು ಬಿತ್ತನೆ ಮಾಡಿದ್ದು, ಗೊಬ್ಬರ, ಕ್ರಿಮಿನಾಶಕ, ಕೂಲಿ ಕಾರ್ಮಿಕರಿಗೆ ₹20 ಸಾವಿರ ಖರ್ಚು ಮಾಡಿ 2 ಕ್ವಿಂಟಲ್ ಹೆಸರು ಬೆಳೆದಿದ್ದಾರೆ. ‘ರಾಶಿ ಮಾಡಿದ ಹೆಸರು ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿದ್ದು, ಮಾರುಕಟ್ಟೆಯ ಬದಲು ತಿಪ್ಪೆಗುಂಡಿಗೆ ಸಾಗಿಸುವುದೇ ಒಳ್ಳೆಯದು’ ಎಂದು ಹತಾಶೆ ವ್ಯಕ್ತಪಡಿಸಿದರು.

ಮಲಕಪ್ಪನಳ್ಳಿ ಗ್ರಾಮದ ರೈತ ವೀರಭದ್ರಪ್ಪ ಹೊನಗೇರಾ 2 ಎಕರೆ ಹೊಲದಲ್ಲಿ ₹11 ಸಾವಿರ ಖರ್ಚು ಮಾಡಿ ಹೆಸರು ಬಿತ್ತನೆ ಮಾಡಿದ್ದರು. ಮಳೆಯಿಂದ ಬೆಳೆ ಕೊಳೆತು ಹೋದ ಪರಿಣಾಮ, ರಾಶಿ ಮಾಡಿದ 2 ಕ್ವಿಂಟಲ್ ಹೆಸರು ಬೂದು ಬಂದಿದ್ದು, ಮಾರುಕಟ್ಟೆಗೆ ಸಾಗಿಸಲು ಹಿಂದೇಟು ಹಾಕುತ್ತಿದ್ದಾರೆ.

ಹೊನಗೇರಾ ಗ್ರಾಮದ ರೈತ ನರಸಪ್ಪ ಎಮ್ಮೇನೋರ 5 ಎಕರೆ ಹೊಲದಲ್ಲಿ ₹50 ಸಾವಿರ ವೆಚ್ಚ ಮಾಡಿ 10 ಕ್ವಿಂಟಲ್ ಹೆಸರು ಬೆಳೆದಿದ್ದಾರೆ. ‘ಮಳೆಯಿಂದಾಗಿ ಹೆಸರು ಕಾಳು ಕಪ್ಪು ಬಣ್ಣಕ್ಕೆ ತಿರುಗಿದ್ದು, ಮಾರುಕಟ್ಟೆಯಲ್ಲಿ ಬೆಲೆಯು ಇಲ್ಲ, ಕೊಳ್ಳುವವರು ಇಲ್ಲ’ ಎಂದರು.

ಯಾದಗಿರಿ ತಾಲ್ಲೂಕಿನಲ್ಲಿ 3,425 ಎಕರೆ ಹೆಸರು ಬೆಳೆ ನಾಶವಾಗಿದೆ. ವರದಿ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ. ರಾಶಿಯಾದ ಹೆಸರು ಬೂದು ಬಂದಿರುವುದು ತಿಳಿದು ಬಂದಿದೆ. ಈ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವೆ ಎಂದುತಾಲ್ಲೂಕು ಕೃಷಿ ಅಧಿಕಾರಿ ಶ್ವೇತಾ ತಾಳೆಮರದ ಪ್ರತಿಕ್ರಿಯಿಸಿದರು.

ಸಾಲ ಮಾಡಿ ಹೆಸರು ಬೀಜ ಬಿತ್ತನೆ ಮಾಡಿದ್ದೇವೆ. ಮಳೆಯಿಂದಾಗಿ ಬೆಳೆಯಲ್ಲ ಕೊಳೆತು ಹೋಗಿದ್ದು, ರಾಶಿ ಮಾಡಿದ ಹೆಸರು ಸಂಪೂರ್ಣ ಕೆಟ್ಟು ಹೋಗಿವೆ ಎಂದು ರೈತಶರಣು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT