ಭಾನುವಾರ, ಏಪ್ರಿಲ್ 5, 2020
19 °C
ಹೆಸರಿಗೆ ಮಾತ್ರ ತಾಲ್ಲೂಕು ಘೋಷಣೆ, ಅಭಿವೃದ್ಧಿಯಲ್ಲಿ ಶೂನ್ಯ

ನೂತನ ತಾಲ್ಲೂಕುಗಳಿಗೆ ಬೇಕಿದೆ ನೀರಾವರಿ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ವಡಗೇರಾ ತಾಲ್ಲೂಕಿನಲ್ಲಿ ಎರಡು ನದಿಗಳು ಹರಿಯುತ್ತಿದ್ದರೂ ಕೊನೆ ಭಾಗದ ರೈತರು ನೀರಿಲ್ಲದೆ ಇಂದಿಗೂ ಸಂಕಷ್ಟ ಅನುಭವಿಸುತ್ತಿದ್ದಾರೆ.

ಕೃಷ್ಣಾ, ಭೀಮಾ ನದಿ ಹರಿಯುತ್ತಿದ್ದರೂ ನೀರಾವರಿ ಭಾಗ್ಯದಿಂದ ವಂಚಿತವಾಗಿದೆ, ಮಳೆಯಾಶ್ರಿತ ಬೆಳೆ ಇಲ್ಲಿ ಸಮಾನ್ಯವಾಗಿದೆ. 2017–18ನೇ ಸಾಲಿನಲ್ಲಿ ವಡಗೇರಾ, ಗುರುಮಠಕಲ್, ಹುಣಸಗಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಲಾಗಿದೆ. ಆದರೆ, ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಇದರಿಂದ ಎಲ್ಲ ಕ್ಷೇತ್ರಗಳಲ್ಲಿ ತಾಲ್ಲೂಕುಗಳು ಹಿಂದುಳಿದಿದೆ.

ಕೊನೆ ಭಾಗದ ರೈತರು ನೀರು ಬರುತ್ತಿಲ್ಲ ಎನ್ನುವ ಆರೋಪ ಸಾಮಾನ್ಯವಾಗಿದೆ. ಜನಪ್ರತಿನಿಧಿಗಳಿಗೆ ಹೇಳಿ ಸಾಕಾಗಿದೆ. ನಮ್ಮ ಸಮಸ್ಯೆಯನ್ನು ಯಾರೂ ಪರಿಹರಿಸುತ್ತಿಲ್ಲ ಎನ್ನುತ್ತಾರೆ ರೈತ ಮುಖಂಡ ನಾಗಪ್ಪ.

ಈ ಭಾಗದ ಜನಪ್ರತಿನಿಧಿಗಳು ಮಾತಿನಲ್ಲಿ ಮಾತ್ರ ಅಭಿವೃದ್ಧಿ ಮಂತ್ರ ಪಠಿಸುತ್ತಿದ್ದು, ಕ್ರಿಯೆಯಲ್ಲಿ ಯಾವುದೇ ಲಾಭವಿಲ್ಲದಂತಾಗಿದೆ.

ಆಡಳಿತ ವಿಕೇಂದ್ರಕರಣದಿಂದ ತಾಲ್ಲೂಕು ಕೇಂದ್ರವಾಗಿದ್ದ, ಸೌಲಭ್ಯಗಳು ಮಾತ್ರ ಇಲ್ಲ. ಕೊನೆ ಭಾಗದ ವಡಗೇರಾ, ಗೊಂದೆನೂರು, ಕೊಂಕಲ್, ಕುರಕುಂದ, ಉಳ್ಳೆಸೂಗೂರು, ಮಳ್ಳಳ್ಳಿ, ತೇಕರಾಳ, ಕಾಡಂಗೇರಾ ಸೇರಿದಂತೆ ಈ ಭಾಗದಲ್ಲಿ ಬೇಸಿಗೆಯಲ್ಲಿ ನೀರಿಗಾಗಿ ರೈತರು ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಇಲ್ಲದಿಲ್ಲ.

ತಾಲ್ಲೂಕು ಕೇಂದ್ರವಾಗಿ ಸುಮಾರು ಎರಡು ವರ್ಷಗಳ ಕಾಲ ಕಳೆದರೂ ಇನ್ನೂ ಸಹ ಯಾವುದೆ ಇಲಾಖೆಗಳು ಇಲ್ಲದೆ ಸಾರ್ವಜನಿಕರು ಹಳೆಯ ತಾಲ್ಲೂಕು ಕೇಂದ್ರ ಶಹಾಪುರುಕ್ಕೆ ಅಲೆದಾಡುವಂತಾಗಿದೆ.

ಕಂದಾಯ, ಆರೋಗ್ಯ ಮತ್ತು ಕೃಷಿ ಇಲಾಖೆ ಬಿಟ್ಟರೆ ಮತ್ತೊಂದು ಇಲಾಖೆ ಇಲ್ಲದೆ ವಡಗೇರಾ ತಾಲ್ಲೂಕು ಕೇಂದ್ರವು ಅಭಿವೃದ್ಧಿ ಕಾಣದ ಕೇಂದ್ರವಾಗಿದೆ. ಈ ತಿಂಗಳಲ್ಲಿ ಮಂಡಿಸುವ ಬಜೆಟ್‌ನಲ್ಲಿಯಾದರೂ ಹೊಸ ತಾಲ್ಲೂಕು ಕೇಂದ್ರಕ್ಕೆ ವಿಶೇಷ ಪ್ಯಾಕೇಜ್ ನೀಡಿ ಅಭಿವೃದ್ಧಿ ಮಾಡುತ್ತಾರೆ ಎನ್ನುವುದು ಇಲ್ಲಿನ ಜನರು ಕಾತುರದಿಂದ ಕಾಯುತ್ತಿದ್ದಾರೆ.

ಗುರುಮಠಕಲ್: ಸದ್ಯ ಪುರಸಭೆ ಹೊಂದಿರುವ ಗುರುಮಠಕಲ್ ಪಟ್ಟಣವೂ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ. ಇನ್ನೂ ಎಲ್ಲ ಕಚೇರಿಗಳು ಅಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಆ ಭಾಗದವರು ಯಾದಗಿರಿಗೆ ಕೋರ್ಟ್‌ ಕಚೇರಿಗೆ ಬರುತ್ತಿದ್ದಾರೆ. ಸರ್ಕಾರ ನೂತನ ತಾಲ್ಲೂಕುಗಳಿಗೆ ಸೌಲಭ್ಯ ಒದಗಿಸಿ ಕೊಡಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ಕುಂಟುತ್ತಾ ಸಾಗುತ್ತಿರುವ ಕೆರೆ ತುಂಬಿಸುವ ಯೋಜನೆ: ಭೀಮಾ ನದಿಯಿಂದ ಗುರುಮಠಕಲ್ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕುಂಟುತ್ತಾ ಸಾಗುತ್ತಿದೆ. ಪೈಪ್‌ಲೈನ್‌ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಈ ಭಾಗಕ್ಕೆ ನೀರು ತುಂಬಿಸುವ ಯೋಜನೆ ನನೆಗುದಿಗೆ ಬಿದ್ದಿದೆ.

ಎಲ್‌ ಆ್ಯಂಡ್‌ ಟಿ ಕಂಪನಿ ಕಾಮಗಾರಿ ನಿರ್ವಹಿಸುತ್ತಿದ್ದು, ಉಪ ಗುತ್ತಿಗೆ ನೀಡಿದ್ದರಿಂದ ಎಲ್ಲಿಂದ ಎಲ್ಲಿಗೆ ಕಾಮಗಾರಿ ಪೂರ್ಣಗೊಂಡಿದೆ ಎನ್ನುವುದೇ ತಿಳಿಯದಾಗಿದೆ ಎನ್ನುತ್ತಾರೆ ಆ ಭಾಗದ ಮುಖಂಡರು. ಆಗಾಗ ಕಾಮಗಾರಿ ನಡೆಯುತ್ತಿದ್ದು, ಇನ್ನೂ ಪೂರ್ಣಗೊಳ್ಳಲು ಎಷ್ಟು ವರ್ಷ ಬೇಕಾಗಿದೆ ಎನ್ನುವ ಪ್ರಶ್ನೆ
ಕಾಡುತ್ತಿದೆ.

ನಬಾರ್ಡ್, ಕೆರೆ ಪುನಶ್ಚೇತನ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಡಿ ₹452 ಕೋಟಿಗೂ ಹೆಚ್ಚಿನ ಅನುದಾನ ಇದಕ್ಕೆ ಮಿಸಲೀಡಲಾಗಿದೆ. ರಸ್ತೆ ಬದಿಯಲ್ಲಿ ಮಾತ್ರ ಕಾಮಗಾರಿ ನಡೆಯುತ್ತದೆ. ಜಮೀನುಗಳಲ್ಲಿ ಬೆಳೆ ಇರುವುದುರಿಂದ ಅಲ್ಲಿ ಇನ್ನೂ ಶುರುವಾಗಿಲ್ಲ. ಹೀಗಾಗಿ ಈ ಬಜೆಟ್‌ನಲ್ಲಿ ಶೀಘ್ರ ಕಾಮಗಾರಿ ಮುಗಿಸಲು ಆದ್ಯತೆ ನೀಡಬೇಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು