ಮಂಗಳವಾರ, ಆಗಸ್ಟ್ 20, 2019
27 °C

ಉದ್ಯೋಗ ಖಾತ್ರಿ ಚೀಟಿ ವಿತರಣೆ

Published:
Updated:
Prajavani

ಯಾದಗಿರಿ: ‘ಗ್ರಾಮೀಣ ಪ್ರದೇಶದಲ್ಲಿ ವಾಸವಿರುವ ಪ್ರತಿ ಕುಟುಂಬವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಚೀಟಿ ಪಡೆಯುವ ಹಕ್ಕು ಹೊಂದಿರುತ್ತಾರೆ’ ಎಂದು ಜಿಲ್ಲಾ ಪಂಚಾಯಿತಿ ಐಇಸಿ ಸಂಯೋಜಕ ಪರಶುರಾಮ ಹೇಳಿದರು.

ಶಹಾಪುರ ತಾಲ್ಲೂಕಿನ ಕನ್ಯಾಕೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಪ್ಪನಟಗಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಹಮ್ಮಿಕೊಂಡಿದ್ದ ರೋಜಗಾರ್‌ ದಿವಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೂಲಿಕಾರ್ಮಿಕರಿಗೆ ಉದ್ಯೋಗ ಚೀಟಿ ವಿತರಣೆ ಮಾಡಿ ಗ್ರಾಮೀಣ ಬಡ ಜನರ ಜೀವನೋಪಾಯ ಮಟ್ಟ ಸುಧಾರಿಸಬೇಕು. ಪಂಚಾಯತ್ ರಾಜ್ ವ್ಯವಸ್ಥೆ ಬಲಪಡಿಸುವುದು ಉದ್ಯೋಗ ಖಾತ್ರಿ ಯೋಜನೆ ಉದ್ದೇಶವಾಗಿದೆ’ ಎಂದರು.

‘ಉದ್ಯೋಗ ಚೀಟಿಯಲ್ಲಿ ಹೆಸರಿರುವ ಕುಟುಂಬದ ಎಲ್ಲಾ ವಯಸ್ಕ‌ರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಒಂದು ವರ್ಷದಲ್ಲಿ ಒಂದು ಕುಟುಂಬ 100 ದಿನಗಳ ಕೆಲಸಕ್ಕಾಗಿ ಅರ್ಜಿ ಸಲ್ಲಿಸಲು ಹಕ್ಕು ಹೊಂದಿರುತ್ತಾರೆ’ ಎಂದು ತಿಳಿಸಿದರು.

‘ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತಿದಿನ ₹249 ಕೂಲಿ ನೀಡಲಾಗುತ್ತದೆ. ಕೆಲಸಕ್ಕಾಗಿ ಬೇಡಿಕೆ ಸಲ್ಲಿಸಿದ 15 ದಿನದೊಳಗೆ ಉದ್ಯೋಗ ನೀಡದಿದ್ದಲ್ಲಿ ನಿರುದ್ಯೋಗ ಭತ್ಯೆಗೆ ಅವಕಾಶವಿರುತ್ತದೆ. ವಾರಾಂತ್ಯದಲ್ಲಿ ಕೂಲಿ ಪಾವತಿಸಬೇಕು. ಇಲ್ಲದಿದ್ದರೆ ಕೂಲಿ ವಿಳಂಬ ಪರಿಹಾರ ಭತ್ಯೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಲ್ಲೂಕು ಐಇಸಿ ಸಂಯೋಜಕ ಭೀಮರೆಡ್ಡಿ, ಟಿಎಇ ಬಾಪುಗೌಡ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಇದ್ದರು.

Post Comments (+)