ಶುಕ್ರವಾರ, ಸೆಪ್ಟೆಂಬರ್ 24, 2021
24 °C
12 ಗಂಟೆಗೆ ಬಹಿರಂಗ ಸಭೆ: ಶಾಸಕ ವೆಂಕಟರಡ್ಡಿ ಮುದ್ನಾಳ ಮಾಹಿತಿ

ಆಗಸ್ಟ್‌ 18 ರಂದು ಯಾದಗಿರಿಯಲ್ಲಿ ಜನಾಶೀರ್ವಾದ ಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಬಿಜೆಪಿ ಪಕ್ಷದ ಕೇಂದ್ರ ಸಚಿವರ ಪರಿಚಯದ ಅಂಗವಾಗಿ ಬುಧವಾರ ಜಿಲ್ಲೆಯಲ್ಲಿ ಜನಾಶೀರ್ವಾದ ಯಾತ್ರೆ ನಡೆಯಲಿದೆ' ಎಂದು ಯಾದಗಿರಿ ಮತಕ್ಷೇತ್ರದ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ತಿಳಿಸಿದರು.

‘ಅಂದು ನಡೆಯುವ ಕಾರ್ಯಕ್ರಮಕ್ಕೆ ಕೇಂದ್ರದ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಸಾಯನಿಕ ರಾಜ್ಯ ಖಾತೆ ಸಚಿವ ಭಗವಂತ ಖೂಬಾ ಅವರು ಆಗಮಿಸಲಿದ್ದಾರೆ. ಜಿಲ್ಲೆಯ ಗಡಿ ಗ್ರಾಮವಾದ ಯರಗೋಳದಲ್ಲಿ ಅವರನ್ನು ಸ್ವಾಗತಿಸಲಾಗುವುದು’ ಎಂದು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮೊದಲಿಗೆ ಮುದ್ನಾಳ ಪ್ರಾಥಮಿಕ ಕೇಂದ್ರದಲ್ಲಿ ಲಸಿಕಾ ಕೇಂದ್ರಕ್ಕೆ ಭೇಟಿ ನೀಡುವರು. ತದನಂತರ ತಾಲ್ಲೂಕಿನ ಅಬ್ಬೆತುಮಕೂರು ಗ್ರಾಮಕ್ಕೆ ಭೇಟಿ ನೀಡಿ ಗಂಗಾಧರ ಸ್ವಾಮೀಜಿಯವರ ಆರ್ಶಿವಾದ ಪಡೆಯಲಿದ್ದಾರೆ’ ಎಂದು ತಿಳಿಸಿದರು.

‘ಅಲ್ಲಿಂದ ಮಧ್ಯಾಹ್ನ ಸುಮಾರು 12 ಗಂಟೆಗೆ ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಬಹಿರಂಗ ಸಭೆ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

‘ಕಾರ್ಯಕ್ರಮಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಶಾಸಕರಾದ ವೆಂಕಟರೆಡ್ಡಿ ಮುದ್ನಾಳ, ರಾಜೂಗೌಡ, ಸಂಸದರಾದ ರಾಜಾ ಅಮರೇಶ್ವರ ನಾಯಕ, ಡಾ.ಉಮೇಶ ಜಾಧವ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ನಾಯ್ಕಲ್ ಸೇರಿದಂತೆ ಬಿಜೆಪಿ ಮುಖಂಡರು ಪಾಲ್ಗೊಳ್ಳಲಿದ್ದಾರೆ’ ಎಂದರು.

‘ಜಿಲ್ಲಾಧಿಕಾರಿಯಿಂದ ವಿಶೇಷ ಅನುಮತಿ ‍ಪಡೆಯಲಾಗಿದೆ. ಕೊರೊನಾ ನಿಯಮಾವಳಿ ಪ್ರಕಾರ ಕಾರ್ಯಕ್ರಮ ನಡೆಯಲಿದೆ’ ಎಂದರು.

‘ಜನಾಶೀರ್ವಾದ ಯಾತ್ರೆಯ ಮೂಲಕ ಕೇಂದ್ರ ಸಚಿವರನ್ನು ಪರಿಚಯ ಮಾಡಿಕೊಡುವ ಹಾಗೂ ಕಾಂಗ್ರೆಸ್ ಪಕ್ಷದ ದ್ವಂದ್ವ ನೀತಿಗಳನ್ನು ಜನರಿಗೆ ತಿಳಿಸಿ, ಜನರ ಆಶೀರ್ವಾದ ಪಡೆಯಲಾಗುತ್ತದೆ. ಲೋಕಸಭೆಯಲ್ಲಿ ಕೇಂದ್ರ ಸಚಿವರ ಪರಿಚಯಕ್ಕೆ ಕಾಂಗ್ರೆಸ್ ಅವಕಾಶ ನೀಡದ ಹಿನ್ನೆಲೆ ಬಿಜೆಪಿಯಿಂದ ದೇಶದ 19 ರಾಜ್ಯಗಳ 150 ಲೋಕಸಭಾ ಕ್ಷೇತ್ರಗಳಲ್ಲಿ 43 ತಂಡಗಳಲ್ಲಿ ಆಗಸ್ಟ್‌ 16 ರಿಂದ 20ರವರೆಗೆ ಜನಾಶೀರ್ವಾದಯಾತ್ರೆ ನಡೆಯಲಿದೆ’ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ನಾಯ್ಕಲ್, ಪ್ರಧಾನ ಕಾರ್ಯದರ್ಶಿ ಗುರು ಕಾಮಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಚಂದ್ರಕಿ, ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ, ಹಿರಿಯ ಮುಖಂಡ ಖಂಡಪ್ಪ ದಾಸನ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಸುರೇಶ ಅಂಬಿಗೇರ್, ಯುವ ಘಟಕದ ಅಧ್ಯಕ್ಷ ಮೌನೇಶ ಬೆಳಗೇರಾ, ರಾಘವೇಂದ್ರ ಯಕ್ಷಂತಿ, ಮಾಧ್ಯಮ ಪ್ರಮುಖ ವಿರೂಪಾಕ್ಷಯ್ಯ ಸ್ವಾಮಿ ಹೆಡಗಿಮುದ್ರಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು