‘ಜನತಾ ದರ್ಶನ ಅರ್ಜಿ ವಿಲೇವಾರಿ ತ್ವರಿತಗೊಳಿಸಿ’

7
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ. ಅನಿಲ್‌ಕುಮಾರ್ ಸೂಚನೆ

‘ಜನತಾ ದರ್ಶನ ಅರ್ಜಿ ವಿಲೇವಾರಿ ತ್ವರಿತಗೊಳಿಸಿ’

Published:
Updated:
Deccan Herald

ಯಾದಗಿರಿ:‘ಮುಖ್ಯಮಂತ್ರಿಯವರ ಜನತಾ ದರ್ಶನ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ. ಅನಿಲ್‌ಕುಮಾರ್ ಸೂಚಿಸಿದರು.

ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾಲಿಕ ಬರ ಪರಿಸ್ಥಿತಿ ಹಾಗೂ ಮುಖ್ಯಮಂತ್ರಿಯವರು ಕೈಗೊಳ್ಳಲಿರುವ ಸಾರ್ವಜನಿಕ ಕುಂದುಕೊರತೆ ದೂರುಗಳಕುರಿತ ಪೂರ್ವಭಾವಿ ಚರ್ಚಾ ಸಭೆಯಲ್ಲಿ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಆಗಸ್ಟ್ 17ರಂದು ಸಾರ್ವಜನಿಕ ಕುಂದುಕೊರತೆ ದೂರುಗಳ ಬಗ್ಗೆ ವೀಡಿಯೊ ಸಂವಾದ ನಡೆಸುವರು. ಅರ್ಜಿಗಳ ವಿಲೇವಾರಿಗೆ ಅನಗತ್ಯವಾಗಿ ವಿಳಂಬ ಮಾಡುವ ಅಧಿಕಾರಿಗಳು ನೇರ ಹೊಣೆಗಾರರಾಗಿ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಮಾತನಾಡಿ,‘ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ಏಪ್ರಿಲ್ 1ರಿಂದ ಇಲ್ಲಿಯವರೆಗೆ 6 ಅರ್ಜಿಗಳು ಬಂದಿದ್ದು, ಎರಡು ಅರ್ಜಿಗಳನ್ನು ವಿಲೇವಾರಿಗೊಳಿಸಲಾಗಿದೆ. 4 ಅರ್ಜಿಗಳು ತಿರಸ್ಕೃತವಾಗಿವೆ. ಹುಣಸಗಿ ಗ್ರಾಮದ ಅಮರಪ್ಪ ಅವರು ಸಲ್ಲಿಸಿದ್ದ ತಮ್ಮ 12 ಗುಂಟೆ ಜಮೀನು ಸರ್ವೇ ಮಾಡುವ ಅರ್ಜಿ ಮತ್ತು ಇದೇ ಗ್ರಾಮದ ಶಿವಕುಮಾರ ಅವರು ಸಲ್ಲಿಸಿದ್ದ 1.20ಎಕರೆ ಹೊಲವನ್ನು ಕೆಬಿಜೆಎನ್‌ಎಲ್‌ನಲ್ಲಿ ಉಳಿಸಿಕೊಳ್ಳುವಂತೆ ಕೋರಿದ ಅರ್ಜಿಗೆ ಸಂಬಂಧಿಸಿದಂತೆ ಸಿವಿಲ್ ನ್ಯಾಯಾಲಯವು ಕೋರ್ಟ್ ಕಮಿಷನ್ ನೇಮಕ ಮಾಡಿರುವುದರಿಂದ ಭೂದಾಖಲೆಗಳ ಇಲಾಖೆಯ ಉಪ ನಿರ್ದೇಶಕರು ಕೂಡಲೇ ಸರ್ವೇ ಮಾಡಿ ಮಾನ್ಯ ನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ’ ಎಂದು ವಿವರಿಸಿದರು.

‘ಸುರಪುರ ತಾಲ್ಲೂಕಿನ ಸಿದ್ದಪ್ಪ ಎಂಬುವವರು ಟ್ರ್ಯಾಕ್ಟರ್ ಖರೀದಿಗಾಗಿ ತಂದೆ ಮಾಡಿದ ಸಾಲವನ್ನು ಮನ್ನಾ ಮಾಡಬೇಕು ಎಂದು ಎರಡು ಬಾರಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಲೀಡ್ ಬ್ಯಾಂಕ್ ಮತ್ತು ಸುರಪುರ ಕೆನರಾ ಬ್ಯಾಂಕ್ ವ್ಯವಸ್ಥಾಪಕರು ಬ್ಯಾಂಕಿನ ನಿಯಮಾವಳಿಗಳಡಿ ಇಂತಹ ಸಾಲ ಮನ್ನಾ ಮಾಡಲು ಅವಕಾಶ ಇಲ್ಲ ಎಂದು ವರದಿ ನೀಡಿರುವ ಪ್ರಯುಕ್ತ ಅರ್ಜಿಗಳನ್ನು ತಿರಸ್ಕರಿಸಲಾಗಿದೆ’ ಎಂದು ತಿಳಿಸಿದರು.

‘ಕೋಟಗೇರಾ ಗ್ರಾಮದ ಮೀನಾಕ್ಷಿ ಎಂಬುವವರು ಅಂಗನವಾಡಿ ಕಾರ್ಯಕರ್ತೆ ಹುದ್ದೆ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಮೆರಿಟ್ ಇಲ್ಲದ ಕಾರಣ ಅರ್ಜಿ ತಿರಸ್ಕರಿಸಲಾಗಿದೆ. ಇನ್ನೊಂದು ನಾರಾಯಣಪುರ ಗ್ರಾಮ ಪಂಚಾಯಿತಿಯಲ್ಲಿ ಒಂದನ್ನು ಬ್ಯಾಕ್‌ಲಾಗ್ ಅಂಗವಿಕಲ ಹುದ್ದೆ ಎಂದು ಪರಿಗಣಿಸಿ ಹುದ್ದೆ ನೀಡುವಂತೆ ಕೋರಿ ಅರ್ಜಿ ಬಂದಿತ್ತು. ಆದರೆ, ಸರ್ಕಾರದ ಮಟ್ಟದಲ್ಲಿ ಈ ಹುದ್ದೆಗಳನ್ನು ತಡೆ ಹಿಡಿದಿರುವ ಪ್ರಯುಕ್ತ ಅರ್ಜಿ ತಿರಸ್ಕೃತವಾಗಿದೆ’ ಎಂದು ವಿವರಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಸಂತರಾವ್ ವಿ.ಕುಲಕರ್ಣಿ ಮಾತನಾಡಿ,‘ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳ ಕಾರ್ಯಾಲಯಕ್ಕೆ ಮೂರು ಅರ್ಜಿಗಳು ಬಂದಿವೆ. ಅವುಗಳಲ್ಲಿ ಶಹಾಪುರ ತಾಲ್ಲೂಕಿನ ಚಟ್ನಳ್ಳಿ ಗ್ರಾಮದಿಂದ ಆಶ್ರಯ ಮನೆಗಾಗಿ ಎರಡು ಅರ್ಜಿ, ಅರಕೇರಾ (ಕೆ) ಗ್ರಾಮದ ಅಂಗನವಾಡಿ ಕಟ್ಟಡದ ಪಕ್ಕದಲ್ಲಿ ಗುಂಡಿ ಇದ್ದು, ಅದನ್ನು ಮುಚ್ಚಿ ಆವರಣ ಗೋಡೆ ನಿರ್ಮಿಸುವಂತೆ ಕೋರಿ ಒಂದು ಅರ್ಜಿ ಬಂದಿದೆ’ ಎಂದು ಸಭೆಯ ಗಮನಕ್ಕೆ ತಂದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !