ಜನೌಷಧಿ ಕೇಂದ್ರಕ್ಕೆ ವೈದ್ಯರ ಅಸಹಕಾರ

7
ಪ್ರಧಾನಮಂತ್ರಿ ಜನೌಷಧಿ ಕೇಂದ್ರದ ನಿರ್ದೇಶಕ ಭೀಮಣ್ಣ ಗೌಡ ಬಿರಾದಾರ್ ದೂರು

ಜನೌಷಧಿ ಕೇಂದ್ರಕ್ಕೆ ವೈದ್ಯರ ಅಸಹಕಾರ

Published:
Updated:
ಭೀಮಣ್ಣಗೌಡ ಬಿರಾದಾರ್

ಯಾದಗಿರಿ: ‘ನಗರದಲ್ಲಿರುವ ಪ್ರಧಾನಮಂತ್ರಿ ಜನೌಷಧಿ ಕೇಂದ್ರಕ್ಕೆ ಖಾಸಗಿ, ಸರ್ಕಾರಿ ಆಸ್ಪತ್ರೆಗಳ ವೈದ್ಯರುಗಳು ಅಸಹಕಾರ ತೋರುತ್ತಿರುವುದರಿಂದ ಜನೌಷಧಿ ಕೇಂದ್ರ ಜನರಿಂದ ದೂರ ಉಳಿಯುವಂತಾಗಿದೆ’ ಎಂದು ಪ್ರಧಾನಮಂತ್ರಿ ಜನೌಷಧಿ ಕೇಂದ್ರದ ನಿರ್ದೇಶಕ ಭೀಮಣ್ಣಗೌಡ ಬಿರಾದಾರ್ ಆರೋಪಿಸಿದರು.

ನಗರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರ, ‘ದುಬಾರಿ ಔಷಧಿಗಳನ್ನು ಖರೀದಿಸಲು ಬಡ ಜನರಿಗೆ ಸಾಧ್ಯವಾಗುವುದಿಲ್ಲ. ಇದನ್ನು ಮನಗಂಡಿರುವ ಕೇಂದ್ರ ಸರ್ಕಾರ ಜನೌಷಧಿ ಕೇಂದ್ರಗಳನ್ನು ತೆರೆದಿದೆ. ಆದರೆ, ಈ ಕೇಂದ್ರಗಳಲ್ಲಿ ಔಷಧಿ ಸಿಗುವ ಬಗ್ಗೆ ವೈದ್ಯಾಧಿಕಾರಿಗಳು ಅರಿವು ಮೂಡಿಸುತ್ತಿಲ್ಲ. ಹಾಗಾಗಿ, ಈ ಕೇಂದ್ರ ಜನರಿಂದ ದೂರ ಉಳಿದಿದೆ’ ಎಂದರು.

‘ಗ್ಲೂಕೊ ಮೀಟರ್ (ರಕ್ತದಲ್ಲಿರುವ ಸಕ್ಕರೆ ಪ್ರಮಾಣ ಅಳೆಯುವ ಸಾಧನ) ಖಾಸಗಿ ಔಷಧಿ ಅಂಗಡಿಗಳಲ್ಲಿ ₹1,500 ದರ ಇದೆ. ಆದರೆ, ಜನೌಷಧಿ ಕೇಂದ್ರದಲ್ಲಿ ಕೇವಲ ₹480 ದರಕ್ಕೆ ದೊರೆಯಲಿದೆ. ಎಚ್ಐವಿ ಸೋಂಕಿತರಿಗೆ ಚಿಕಿತ್ಸೆಗಾಗಿ ‘ಎಫ್‌ವಿ ರೇಂಜ್‌’ ಔಷಧಿ ಖಾಸಗಿ ಔಷಧಿ ಮಾರುಕಟ್ಟೆಯಲ್ಲಿ ₹3,900 ದರ ಇದೆ. ಆದರೆ, ಅದೇ ಔಷಧಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರದಲ್ಲಿ ₹2,400 ದರಕ್ಕೆ ಎಟುಕಲಿದೆ. ಇದೇ ರೀತಿ ಅನೇಕ ಔಷಧಿಗಳು ಕಡಿಮೆ ದರದಲ್ಲಿ ಸಿಗುತ್ತಿದ್ದರೂ, ಸರ್ಕಾರಿ, ಖಾಸಗಿ ಆಸ್ಪತ್ರೆಗಳ ವೈದ್ಯರು ಮತ್ತು ಸಿಬ್ಬಂದಿ ಜನರಿಗೆ ಮಾಹಿತಿ ನೀಡುತ್ತಿಲ್ಲ. ಇದರಿಂದ ಜನರು ವಂಚನೆಗೊಳಗಾಗುತ್ತಿದ್ದಾರೆ’ ಎಂದರು ಆರೋಪಿಸಿದರು.

‘ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಈ ಜನೌಷಧಿ ಕೇಂದ್ರಗಳ ಕುರಿತು ಆರೋಗ್ಯ ಇಲಾಖೆ ವಿಶೇಷ ಕಾಳಜಿ ವಹಿಸಬೇಕಿತ್ತು. ಆದರೆ, ಇದುವರೆಗೂ ಆರೋಗ್ಯ ಇಲಾಖೆ ಇಂತಹ ಕಾರ್ಯಕ್ಕೆ ಕೈಜೋಡಿಸಿಲ್ಲ’ ಎಂದು ಟೀಕಿಸಿದರು.

‘ಉಚಿತ ಇಲ್ಲವೇ ಕನಿಷ್ಠ ಬೆಲೆಯಲ್ಲಿ ಆರೋಗ್ಯ ಸೇವೆ ಒದಗಿಸುವುದು ಆರೋಗ್ಯ ಇಲಾಖೆ ಕರ್ತವ್ಯವಾಗಿದೆ. ಆದರೆ, ರಾಜ್ಯದಲ್ಲಿನ ಆರೋಗ್ಯ ಇಲಾಖೆ ಕೇಂದ್ರ ಸರ್ಕಾರ ಆರಂಭಿಸಿರುವ ಜನೌಷಧಿ ಕೇಂದ್ರಗಳ ಕುರಿತು ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿಲ್ಲ. ಹೀಗಾದರೆ ಜನರ ಹಿತ ಕಾಪಾಡುವವರು ಯಾರು?’ ಎಂದು ಪ್ರಶ್ನಿಸಿದರು.

‘ಜನೌಷಧಿ ಕೇಂದ್ರಗಳಲ್ಲಿ ದೊರೆಯುವ ಔಷಧಿ ಬಳಸುವಂತೆ ಜನರಿಗೆ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ನಿರ್ದೇಶಿಸಬೇಕು ಎಂಬುದಾಗಿ ಸುಪ್ರಿಂಕೋರ್ಟ್‌ ಆದೇಶಿಸಿದೆ. ಆದರೂ, ನಗರದಲ್ಲಿನ ಖಾಸಗಿ, ಸರ್ಕಾರಿ ವೈದ್ಯಾಧಿಕಾರಿಗಳು ಈ ಆದೇಶವನ್ನು ಪಾಲಿಸುತ್ತಿಲ್ಲ. ಖಾಸಗಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಪ್ರತ್ಯೇಕ ಔಷಧಿ ಅಂಗಡಿಗಳನ್ನು ತೆರೆದಿದ್ದು, ಜನರನ್ನು ದಾರಿತಪ್ಪಿಸುತ್ತಿದ್ದಾರೆ. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಗಮನ ಹರಿಸಬೇಕು’ ಎಂದು ಒತ್ತಾಯಿಸಿದರು.

ರಾಚಣ್ಣಗೌಡ ಮೋಸಂಬಿ, ಬಸಣ್ಣಗೌಡ ಪಾಟೀಲ ಇಬ್ರಾಹಿಂಪುರ, ರಾಜಶೇಖರ, ಬಸವರಾಜ ಜಗನ್ನಾಥ, ಸೋಮಶೇಖರ ಭಾನಾ ಸುದ್ದಿಗೋಷ್ಠಿಯಲ್ಲಿ ಇದ್ದರು.

ಜನೌಷಧಿ ಕೇಂದ್ರದಿಂದ ಜನರಿಗಾಗಲಿ, ಸರ್ಕಾರಕ್ಕಾಗಿ ಲಾಭವಿಲ್ಲ. ಇದೊಂದು ರೀತಿಯ ಸಾಮಾಜಿಕ ಕೈಂಕರ್ಯವಾಗಿದೆ. ಆದರೆ, ಇದರ ಸದುಪಯೋಗ ಜನರು ಪಡೆಯಬೇಕು.
- ಭೀಮಣ್ಣಗೌಡ ಬಿರಾದಾರ್, ಪ್ರಧಾನಮಂತ್ರಿ ಜನೌಷಧಿ ಕೇಂದ್ರದ ನಿರ್ದೇಶಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !