ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಪಂಚಾಯಿತಿ ಅಧ್ಯಕ್ಷಗಾದಿ: ರಾಜಶೇಖರ್ ವಜ್ಜಲ್‌ ಗೆ ಒಲಿಯಲಿದೆಯೇ ಅದೃಷ್ಟ?!

ಮೊದಲ ಅವಧಿ ನ.3ಕ್ಕೆ ಪೂರ್ಣ
Last Updated 23 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಯಾದಗಿರಿ: ಇಲ್ಲಿನ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸರೆಡ್ಡಿಗೌಡ ಮಾಲಿಪಾಟೀಲ ಅವರ ಅವಧಿ ನ. 3ಕ್ಕೆ ಪೂರ್ಣಗೊಳ್ಳಲಿದ್ದು, ಎರಡನೇ ಅವಧಿಗೆ ಅಧ್ಯಕ್ಷ ಪಟ್ಟಕ್ಕಾಗಿ ತೆರೆಮರೆಯಲ್ಲಿಯೇ ರಾಜಕೀಯ ಕಸರತ್ತು ನಡೆದಿದೆ.

ಒಟ್ಟು 24 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ಒಳಗೊಂಡಿರುವ ಜಿಲ್ಲಾ ಪಂಚಾಯಿತಿಗೆ 2016ರಲ್ಲಿ ಚುನಾವಣೆ ನಡೆದಾಗ ಬಿಜೆಪಿ –11, ಕಾಂಗ್ರೆಸ್‌ –12, ಜೆಡಿಎಸ್ 1 ಸ್ಥಾನಗಳಿಸಿದ್ದವು. ಒಟ್ಟಾರೆ ಫಲಿತಾಂಶ ಅತಂತ್ರವಾಗಿತ್ತು. ಐದು ವರ್ಷಗಳ ಪೂರ್ಣ ಅವಧಿಗೆ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡಬೇಕು ಎಂಬುದಾಗಿ ಕಂದಕೂರ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಜೆಡಿಎಸ್‌ನ ಸರಸ್ವತಿ ಅವರ ಬೆಂಬಲ ಪಡೆದು ಕಾಂಗ್ರೆಸ್‌ ಬಹುಮತ ತೋರಿಸಿತ್ತು.

ನಂತರ ಸರ್ಕಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾತಿ ಪ್ರಕಟಿಸಿ ಅಧಿಸೂಚನೆ ಹೊರಡಿಸಿತ್ತು. ಅಧಿಕಾರ ಹಿಡಿಯುವ ಸಂದರ್ಭದ ಮೊದಲ ಅವಧಿಯಲ್ಲಿ ಅಧ್ಯಕ್ಷ ಪಟ್ಟಕ್ಕೆ ಸದಸ್ಯರಲ್ಲೇ ಪೈಪೋಟಿ ಹೆಚ್ಚಿತ್ತು. ಸುರಪುರ ತಾಲ್ಲೂಕಿನ ದೇವತ್ಕಲ್‌ ಜಿಲ್ಲಾ ಪಂಚಾಯಿತಿ ಕ್ಷೇತ್ರದ ರಾಜಶೇಖರ್ ಪಾಟೀಲ ವಜ್ಜಲ್‌, ಕೊಂಕಲ್‌ ಕ್ಷೇತ್ರದ ಬಸರೆಡ್ಡಿಗೌಡ ಮಾಲಿಪಾಟೀಲ ಅವರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ನಂತರ ಪಕ್ಷದ ವರಿಷ್ಠರ ನಿರ್ಣಯದಂತೆ ಎರಡು ಅವಧಿಗೆ ಯಾದಗಿರಿ ಮತ್ತು ಸುರಪುರ ತಾಲ್ಲೂಕಿನ ಸದಸ್ಯರಿಗೆ ಅವಕಾಶ ನೀಡಬೇಕು ಎಂಬುದಾಗಿ ಅಧಿಕಾರ ಹಂಚಿಕೆ ಮಾಡಲಾಗಿತ್ತು.

ಮೊದಲ ಅವಧಿಗೆ ಕೊಂಕಲ್ ಕ್ಷೇತ್ರದ ಬಸರೆಡ್ಡಿಗೌಡ ಮಾಲಿಪಾಟೀಲ ಅಧ್ಯಕ್ಷರಾಗಿ ಆಯ್ಕೆ ಆಗುವ ಮೂಲಕ ಕಾಂಗ್ರೆಸ್‌ ಅಧಿಕಾರ ಚಲಾಯಿಸಿತು. ಈಗ ನ. 3ಕ್ಕೆ ಬಸರೆಡ್ಡಿಗೌಡ ಮಾಲಿಪಾಟಿಲ ಅವರ ಅವಧಿ ಪೂರ್ಣಗೊಳ್ಳಲಿದ್ದು, ಎರಡನೇ ಅವಧಿಗೆ ಅಧ್ಯಕ್ಷ ಪಟ್ಟಕ್ಕಾಗಿ ಲಾಬಿ ಶುರುವಾಗಿದೆ.

ಮುಖಂಡರ ನಿರ್ಣಯ ಅಂತಿಮ
ಸಂಸದ ಮಲ್ಲಿಕಾರ್ಜುನ ಖರ್ಗೆ, ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಮಾಜಿ ಸಚಿವ ಡಾ.ಎ.ಬಿ.ಮಾಲಕರೆಡ್ಡಿ ಅವರುಗಳಿಗೆ ಇಲ್ಲಿನ ಒಬ್ಬೊಬ್ಬ ಸದಸ್ಯರು ನಿಷ್ಠರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಅಧಿಕಾರಕ್ಕಾಗಿ ತಮ್ಮ ನಾಯಕರುಗಳ ಬೆನ್ನಿಗೆ ಬಿದ್ದಿದ್ದು ರಾಜಕೀಯ ಲಾಬಿ ಬಿರುಸುಗೊಂಡಿದೆ. ಆದರೆ, ನಿಷ್ಠರಿಗೆ ಅಧಿಕಾರ ಕೊಡಿಸುವ ನಿಟ್ಟಿನಲ್ಲಿ ನಾಯಕರು ಕೂಡ ರಾಜಕೀಯ ಲೆಕ್ಕಾಚಾರ ಹೆಣೆಯಲು ಆರಂಭಿಸಿದ್ದಾರೆ ಎನ್ನಲಾಗಿದೆ.

ಈಗಿನ ಪಕ್ಷದ ವರಿಷ್ಠರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಮಾತೇ ಅಂತಿಮ ಎನ್ನಲಾಗುತ್ತಿದೆ. ಖರ್ಗೆ ಅವರಿಗೆ ದೇವತ್ಕಲ್‌ ಕ್ಷೇತ್ರದ ಸದಸ್ಯ ರಾಜಶೇಖರ್ ಪಾಟೀಲ್ ಹೆಚ್ಚು ನಿಷ್ಠರಾಗಿದ್ದಾರೆ ಎನ್ನಲಾಗಿದ್ದು, ಬಹುತೇಕ ಅವರ ಆಯ್ಕೆ ಖಚಿತ ಎಂಬ ಮಾತುಗಳು ಜಿಲ್ಲೆಯಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.

ಆದರೆ, ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ನಿಷ್ಠರಾಗಿರುವ ಅರಕೇರಾ (ಜೆ) ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ಬಸನಗೌಡ ಪಾಟೀಲ ಯಡಿಯಾಪುರ ಅವರು ಅಧ್ಯಕ್ಷ ಗಾದಿ ಹಿಡಿಯಲು ನಾಯಕರ ಮೇಲೆ ಹೆಚ್ಚು ಒತ್ತಡ ಹೇರುತ್ತಿದ್ದಾರೆ. ಜತೆಗೆ ಡಾ.ಎ.ಬಿ.ಮಾಲಕರೆಡ್ಡಿ ಅವರಿಗೆ ಆತ್ಮೀಯರಾಗಿರುವ ವಡಗೇರಾ ಕ್ಷೇತ್ರದ ಅಶೋಕರೆಡ್ಡಿ ಅವರು ಸಹ ಪೈಪೋಟಿ ನೀಡುತ್ತಿದ್ದಾರೆ. ಹಾಗಾಗಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಟ್ಟ ಯಾರಿಗೆ? ಎಂಬ ಕುತೂಹಲ ಹೆಚ್ಚಿದೆ.

ಸುರಪುರ ತಾಲ್ಲೂಕಿಗೆ ಆದ್ಯತೆ
ಅಧಿಕಾರ ಹಂಚಿಕೆಗೆ ವರಿಷ್ಠ ಮಾತು ತಾಲ್ಲೂಕುವಾರು ಆದ್ಯತೆ ಕುರಿತು ಒಪ್ಪಂದ ಆಗಿತ್ತು ಎಂಬುದಾಗಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮರಿಗೌಡ ಹುಲ್‌ಕಲ್‌ ಹೇಳುತ್ತಾರೆ.

ಮೊದಲ ಅವಧಿಗೆ ಯಾದಗಿರಿ ತಾಲ್ಲೂಕಿಗೆ ಆದ್ಯತೆ ನೀಡಿದ್ದು, ಈಗ ಸುರಪುರ ತಾಲ್ಲೂಕಿನ ಸದಸ್ಯರಿಗೆ ನೀಡಬೇಕು ಎಂಬುದಾಗಿ ಮಾತುಕತೆ ಆಗಿತ್ತು. ಅದರಂತೆ ಅಲ್ಲಿನ ಸದಸ್ಯರು ಜಿಲ್ಲಾ ಪಂಚಾಯಿತಿ ಅಧ್ಯಕ್ಷಗಾದಿ ಏರಲಿದ್ದಾರೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT