ಕಕ್ಕೇರಾ: ಅಕ್ರಮ ಅಂಗಡಿಗಳ ತೆರವು

7
ಸೂಚನೆ ನೀಡದೆ ತೆರವು: ವ್ಯಾಪಾರಿಗಳ ಆರೋಪ

ಕಕ್ಕೇರಾ: ಅಕ್ರಮ ಅಂಗಡಿಗಳ ತೆರವು

Published:
Updated:

ಕಕ್ಕೇರಾ: ಪಟ್ಟಣದ ವಾಲ್ಮೀಕಿ ವೃತ್ತ ಅಭಿವೃದ್ಧಿ ಹಾಗೂ ರಸ್ತೆ ವಿಸ್ತರಣೆಗಾಗಿ ರಸ್ತೆ ಬದಿ ಇದ್ದ ಅಂಗಡಿಗಳನ್ನು ಶುಕ್ರವಾರ  ಪೊಲೀಸ್ ಬಂದೋಬಸ್ತ್‌ನೊಂದಿಗೆ ಜೆಸಿಬಿ ಯಂತ್ರಗಳನ್ನು ಬಳಸಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಪುರಸಭೆ ಅಧಿಕಾರಿಗಳು ಶುಕ್ರವಾರ ತೆರವುಗೊಳಿಸಿದರು.

ಸೋಮನಾಥ ರಸ್ತೆ, ಬಲಶೆಟ್ಟಿಹಾಳ ರಸ್ತೆ ಹಾಗೂ ಶಾಂತಪುರ ರಸ್ತೆಗಳಲ್ಲಿ ಅಂಗಡಿಗಳನ್ನು ತೆರವುಗೊಳಿಸಲಾಯಿತು.

ರಸ್ತೆ  ವಿಸ್ತರಣೆಗೆ ಪಿಡಬ್ಲ್ಯುಡಿ ಇಲಾಖೆ ವತಿಯಿಂದ ವರ್ತಕರಿಗೆ ಮೂರು ಬಾರಿ ನೋಟಿಸ್ ನೀಡಿದ್ದರು.

ವ್ಯಾಪಾರಿಗಳು ತಮ್ಮ ಅಂಗಡಿಗಳ ಮುಂದೆ ಹಾಕಿಕೊಂಡಿದ್ದ ಶೆಡ್‌ಗಳನ್ನು ಮಾತ್ರ ತೆಗೆದಿದ್ದರು.  ಬೆಳಿಗ್ಗೆ ತೆರವು ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ವ್ಯಾಪಾರಿಗಳು  ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರು.

ಅದಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯಲಿಲ್ಲ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ತೆರವು ಕಾರ್ಯಾಚರಣೆ ನಡೆಯಿತು.

ಮೂರು ಮುಖ್ಯರಸ್ತೆಗಳ ಅಭಿವೃದ್ಧಿಗಾಗಿ 2018-19ನೇ ಸಾಲಿನಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ರಸ್ತೆ ಅಭಿವೃದ್ಧಿಗಾಗಿ  ಟೆಂಡರ್ ಕರೆಯಲಾಗಿದೆ. ರಸ್ತೆಯ ಎರಡೂ ಬದು 7.5 ಮೀಟರ್‌  ವಿಸ್ತರಣೆ ಮಾಡಲಾಗುತ್ತದೆ.

ಅಧಿಕಾರಿಗಳು ಏಕಾಏಕಿ ಕಾರ್ಯಾಚರಣೆ ನಡೆಸಿದ್ದರಿಂದ ಬೀದಿಗೆ ಬರುವಂತಾಗಿದೆ. ಅಧಿಕಾರಿಗಳು ನ್ಯಾಯಯುತ ರೀತಿಯಲ್ಲಿ ತೆರವು ಕಾರ್ಯಾಚರಣೆ ನಡೆಸಿಲ್ಲ ಎಂದು ವ್ಯಾಪಾರಿಗಳು ದೂರಿದರು.

ಆಕ್ರೋಶ: ಸೋಮನಾಥ ರಸ್ತೆ ಮಾರ್ಗದ ಹಳೇ ಗ್ರಾಮ ಪಂಚಾಯಿತಿ ಪ್ರದೇಶದ ವ್ಯಾಪಾರಿಗಳಿಗೆ ಯಾವುದೇ ನೋಟಿಸ್ ನೀಡದೆ ಅಧಿಕಾರಿಗಳು ತೆರವು ಕಾರ್ಯಕ್ಕೆ ಮುಂದಾಗಿದ್ದರಿಂದ ಕಟ್ಟಡಗಳ ಮಾಲೀಕರು ಹಾಗೂ ವ್ಯಾಪಾರಸ್ಥರು ತರಾಟೆಗೆ ತೆಗೆದುಕೊಂಡರು.

ನಮಗೆ ಮೊದಲೇ ಹೇಳಿದ್ದರೆ ನಾವೇ ತೆರವುಗೊಳಿಸುತ್ತಿದ್ದೆವು ಎಂದು ವ್ಯಾಪಾರಸ್ಥರು ಹೇಳಿದರು. ಕೂಡಲೇ ಪಿಡಬ್ಲ್ಯುಡಿ ಇಲಾಖೆ ಅಧಿಕಾರಿಗಳು ನೋಟಿಸ್‌ ನೀಡಿದರು.

ಬಿಗಿ ಬಂದೋಬಸ್ತ್‌: ಹುಣಸಗಿ ಸರ್ಕಲ್ ಇನ್‌ಸ್ಪೆಕ್ಟರ್‌ ಪಂಡಿತ ಸಾಗರ ಮಾರ್ಗದರ್ಶನದಲ್ಲಿ ಕೊಡೇಕಲ್ ಎಸ್ಐ ಕಾಳಪ್ಪ ಬಡಿಗೇರ ನೇತೃತ್ವದಲ್ಲಿ  ಇಬ್ಬರು ಪಿಎಸ್ಐ, ನಾಲ್ವರು ಎಎಸ್ಐ, 12 ಕಾನ್‌ಸ್ಟೆಬಲ್‌ಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ವಿದ್ಯುತ್ ಸಂಪರ್ಕ ಕಡಿತ: ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದ ರಾತ್ರಿ 8ಗಂಟೆವರೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಇದರಿಂದ ಸಾರ್ವಜನಿಕರು ಪರದಾಡುವಂತಾಯಿತು.

ಏಕಾಏಕಿ ದಾಳಿ ನಡೆಸಿದರು. ಅಂಗಡಿಗಳ ಸಾಮಾನು ತೆಗೆಯಲು ಬಿಡಲಿಲ್ಲ. ಅಧಿಕಾರಿಗಳು ನಮಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು
ರಾಮಣ್ಣ ಟೇಲರ್, ವರ್ತಕ, ಕಕ್ಕೇರಾ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !