ಬುಧವಾರ, ಅಕ್ಟೋಬರ್ 21, 2020
21 °C

ಕಕ್ಕೇರಾ: ರೈತರ ನೆಮ್ಮದಿ ಕಸಿದ ಮಳೆ

ಮಹಾಂತೇಶ ಸಿ, ಹೊಗರಿ Updated:

ಅಕ್ಷರ ಗಾತ್ರ : | |

Prajavani

ಕಕ್ಕೇರಾ: ‘ಇನ್ನು ಒಂದೂವರೆ ತಿಂಗಳೊಳಗೆ ಫಸಲು ಇನ್ನೇನು ಕೈಗೆಟಕಬಹುದು ಎಂದು ನೆಮ್ಮದಿಯಿಂದ ಇದ್ದೇವು. ಈ ಮಳೆಯಿಂದ ನೆಮ್ಮದಿಯ ಬದುಕು ಇಲ್ಲದಂತಾಗಿದೆ’ ಎಂದು ತಿಪ್ಪಣ್ಣ ಜಂಪಾ ತಮ್ಮ ನೋವು ತೋಡಿಕೊಂಡರು.

ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಪಟ್ಟಣದ ವ್ಯಾಪ್ತಿ ಹಾಗೂ ವಲಯದ ಅನೇಕ ಗ್ರಾಮಗಳಲ್ಲಿ ಅಪಾರ ಬೆಳೆ ಹಾಗೂ ಮನೆಗಳು ನೆಲಕ್ಕುರುಳಿವೆ. ಜನತೆ ಮಳೆ-ಗಾಳಿಗೆ ಹೆದರಿ ಮನೆಯಿಂದ ಹೊರಗೆ ಬಾರದೇ ಮನೆಯಲ್ಲಿ ಉಳಿಯುವಂತಾಯಿತು.

ಕಳೆದ ಹಲವು ದಿನಗಳಿಂದ ಜಿಲ್ಲೆಯಾದ್ಯಂತ ಭಾರೀ ಪ್ರಮಾಣದ ಗಾಳಿ ಬೀಸುವ ಮೂಲಕ ಮಳೆಯಾಗುತ್ತಿರುವುದರಿಂದ ವಲಯದ ದೇವಾಪುರ, ತಿಂಥಣಿ, ದೇವತ್ಕಲ್ ಹಾಗೂ ಆಲ್ದಾಳ್ ಗ್ರಾ.ಪಂ. ವ್ಯಾಪ್ತಿಗಳ ಹಲವು ಗ್ರಾಮಗಳಲ್ಲಿ ಅಪಾರ ಪ್ರಮಾಣದ ಭತ್ತ, ತೊಗರಿ ಹಾಗೂ ಹತ್ತಿ ಬೆಳೆಗಳು ಸಂಪೂರ್ಣ ನೆಲಕ್ಕಚ್ಚಿವೆ. ಮನೆಗಳ ಮೇಲ್ಚಾವಣಿ ಹಾಗೂ ಗೋಡೆಗಳು ಕುಸಿದಿವೆ. ಮಳೆಯಿಂದಾಗಿ ಹಳ್ಳ-ಕೊಳ್ಳಗಳು ಭರ್ತಿಯಾಗಿವೆ.

ಮರಗಳು ವಿದ್ಯುತ್ ಕಂಬದ ಮೇಲೆ ಬಿದ್ದು ಮಂಗಳವಾರ ರಾತ್ರಿಯಿಂದ ಬುಧವಾರ ಮಧ್ಯಾಹ್ನದವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಪಟ್ಟಣದ ನಿಂಗಣ್ಣ ಬೋಯಿ ಗ್ಯಾರೇಜ್ ಮೇಲೆ ಬೃಹತ್ ಜಾಲಿಮರವೊಂದು ಬಿದ್ದು ಹಾನಿಯಾಗಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಜಿಟಿಜಿಟಿ ಮಳೆಯಲ್ಲಿ ಸಂತೆ: ಬುಧವಾರ ಸಂತೆಗೆ ಬಂದ ವ್ಯಾಪಾರಸ್ಥರು ಹಾಗೂ ಗ್ರಾಹಕರು ತಣ್ಣನೆಯ ಗಾಳಿ ಮಿಶ್ರಿತ ಜಿಟಿಜಿಟಿ ಮಳೆಯಿಂದ ರಕ್ಷಿಸಿಕೊಳ್ಳಲು ಕೊಡೆ ಮೊರೆಹೋದರು. ಆದರೂ ವ್ಯಾಪಾರ ಸ್ವಲ್ಪ ಕಡಿಮೆ ಎಂದು ಹೇಳುತ್ತಿದ್ದದ್ದು ಕಂಡು ಬಂತು.

ಲಕ್ಮಾಂತರ ರೂಪಾಯಿ ಸಾಲ ಮಾಡಿ ಭತ್ತ ಹಾಗೂ ಇನ್ನಿತರ ಬೆಳೆಗಳನ್ನು ಬೆಳೆದಿದ್ದೇವೆ. ಆದರೆ ಈ ಮಳೆ ಹಾಗೂ ಗಾಳಿಯಿಂದ ನಮ್ಮ ಕನಸೆಲ್ಲಾ ಮಣ್ಣಾಗಿದೆ. ಹೀಗಾಗಿ ಕೂಡಲೇ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಮನೆ ಹಾಗೂ ಜಮೀನು ಬೆಳೆ ಹಾನಿಯಾದ ರೈತರಿಗೆ ಕೂಡಲೇ ಪರಿಹಾರ ನೀಡಬೇಕೆಂದು ರೈತ ಸಂಘದ ಮುದ್ದಣ್ಣ ಅಮ್ಮಾಪೂರ, ಚಂದ್ರು ವಜ್ಜಲ್ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು