ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಕ್ಕೇರಾ’ದಲ್ಲಿ ಕಗ್ಗಾಂಟಾದ ವಿದ್ಯುತ್‌ ಸಮಸ್ಯೆ

ಸಮರ್ಪಕ ವಿದ್ಯುತ್‌ ಪೂರೈಕೆ ಇಲ್ಲದೇ ಸಾರ್ವಜನಿಕರ ಪರದಾಟ
Published 14 ಆಗಸ್ಟ್ 2024, 15:35 IST
Last Updated 14 ಆಗಸ್ಟ್ 2024, 15:35 IST
ಅಕ್ಷರ ಗಾತ್ರ

ಕಕ್ಕೇರಾ: ಪಟ್ಟಣದಲ್ಲಿ ಹಲವು ದಿನಗಳಿಂದ ವಿದ್ಯುತ್ ಸಮಸ್ಯೆಯಿಂದ ಜನರು ಬೇಸತ್ತಿದ್ದು, ಜೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುರಸಭೆಯಾಗಿ ಮೇಲ್ದರ್ಜೇಗೇರಿದರೂ ವಿದ್ಯುತ್ ಸಮಸ್ಯೆ ಬಗೆಹರಿದಿಲ್ಲ. ಪಟ್ಟಣದ ಪಕ್ಕದ ಹುಣಸಿಹೊಳೆ ಗ್ರಾಮದಲ್ಲಿ ವಿದ್ಯುತ್ ಪೂರೈಕೆ ಇರುತ್ತದೆ. ಆದರೆ ಪುರಸಭೆ ಪಟ್ಟಣದಲ್ಲಿ ವಿದ್ಯುತ್ ಸಮಸ್ಯೆ ಸದಾ ಕಾಡುತ್ತಿದೆ. ತಿಂಗಳಲ್ಲಿ ಕನಿಷ್ಠ ಸುಮಾರು 10 ರಿಂದ 15 ದಿನ ವಿದ್ಯುತ್ ಪೂರೈಕೆ ಇರುವುದಿಲ್ಲ. ಇದರಿಂದ ಕೃಷಿಕರಿಗೆ, ವ್ಯಾಪಾರಸ್ಥರಿಗೆ ತುಂಬಾ ತೊಂದರೆಯಾಗಿದೆ ಎಂದು ಗ್ರಾಹಕರು ದೂರಿದ್ದಾರೆ.

ಪಟ್ಟಣದಲ್ಲಿ 1971ರಲ್ಲಿ ಪಟ್ಟಣಕ್ಕೆ ವಿದ್ಯುತ್ ಕಂಬ, ತಂತಿಗಳನ್ನು ಜೋಡಣೆ ಕಾರ್ಯ ನಡೆದಿದ್ದು,  50 ವರ್ಷವಾದರೂ ಕಂಬಗಳು ಹಾಗೂ ವಿದ್ಯುತ್‌ ತಂತಿಗಳನ್ನು ಬದಲಾಯಿಸಿಲ್ಲ. ತಂತಿಗಳು ಜೋತು ಬಿದ್ದಿವೆ. ಕೆಲವಡೆ ತುಂಡಾಗಿ ಬಿದ್ದು ಪ್ರಾಣಹಾನಿಯೂ ಸಂಭವಿಸಿದೆ. ಹಾಗಿದ್ದರೂ ಇಲ್ಲಿನ ಜೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎಂಬ ಅಸಮಾಧಾನ ಪಟ್ಟಣ ನಿವಾಸಿಗಳದ್ದು.

‘ಅಧಿಕ ಲೋಡ್‌ನಿಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ 33 ಕೆವಿ ಮಾರ್ಗದಲ್ಲಿ ಆಗಾಗ್ಗೆ ವಿದ್ಯುತ್‌ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಹೀಗಿದ್ದರೂ ಈ ಮಾರ್ಗದಲ್ಲಿ ಜಂಗಲ್ ಕಟಿಂಗ್ ಮಾಡಿಲ್ಲ. ಇನ್ಸೂಲೇಟರ್, ಬ್ರೇಕ್ಸ್ , ವಿದ್ಯುತ್ ಕಂಬ, ತಂತಿಗಳನ್ನು ಬದಲಾಯಿಸಿಲ್ಲ. ಪ್ರತಿ ವರ್ಷ ಬರುವ ಕೋಟ್ಯಂತರ ಹಣ ಎಲ್ಲಿಗೆ ಹೋಗುತ್ತದೆ.  ಸರ್ಕಾರದ ಹಣ ದುರುಪಯೋಗವಾಗಿದೆ. ಈ ಬಗ್ಗೆ ಪೂರ್ಣ ತನಿಖೆ ಆಗಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು’ ಎಂದು ನಿವೃತ್ತ ಶಿಕ್ಷಕ ದೇವಿಂದ್ರಪ್ಪ ಬಳಿಚಕ್ರ ತಿಳಿಸಿದ್ದಾರೆ.

‘ಸುರಪುರದ (ಹಸನಾಪುರ) 110 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಅಮ್ಮಾಪುರ, ಸುಗೂರು, ಕೋನಾಳ ಮಾರ್ಗವಾಗಿ ಕಕ್ಕೇರಾ ಪಟ್ಟಣಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.  ಹೀಗಾಗಿ ಸುಮಾರು 40 ಕಿಲೋ ಮೀಟರ್ ದೂರದ ಯಾವುದಾದರೂ ಭಾಗದಲ್ಲಿ  ವಿದ್ಯುತ್‌ ತೊಂದರೆ ಕಾಣಿಸಿಕೊಂಡರೆ ಎಲ್ಲಾ ಕಡೆ ವಿದ್ಯುತ್ ಹೋಗುತ್ತದೆ. ಗುಡ್ಡಗಾಡು ಪ್ರದೇಶ, ವಾಹನ ಹೋಗಲಾದ ಕಡೆಗಳಲ್ಲೂ ವಿದ್ಯುತ್‌ ಕಂಬ ಅಳವಳಡಿಸಲಾಗಿದೆ. ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಾಗ ಸಿಬ್ಬಂದಿ ಸಮಸ್ಯೆ ಹೇಳತೀರದು. ಹಾಗಾಗಿ ವಿದ್ಯುತ್ ಸರಿಪಡಿಸಲು ಹಲವು ದಿನಗಳನ್ನು ತೆಗೆದುಕೊಳ್ಳುತ್ತದೆ.  ಜೆಸ್ಕಾಂ ಅಧಿಕಾರಿಗಳ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ಈ ಬಗ್ಗೆ ಹೋರಾಟ ಅನಿವಾರ್ಯ’ ಎಂದು ಮುಖಂಡರಾದ ಗುಡದಪ್ಪ ಬಿಳೇಭಾವಿ, ಮರೆಪ್ಪ ಕಾಂಗ್ರೆಸ್, ಗೈಯಪ್ಪ, ಸೋಮು ಬನದೊಡ್ಡಿ, ಅಯುಬ್, ಸಂಗಣ್ಣ ಹಡಗಲ್ ಅಸಮಾಧಾನ ವ್ಯಕ್ತಪಡಿಸಿದರು.

ಪರಿಹಾರ: ಹತ್ತಿರದ ದೇವಾಪುರ 110 ಕೆವಿ ಸ್ಟೇಷನ್ ಇದ್ದು, ಅಲ್ಲಿಂದ ದೇವತ್ಕಲ ಮಾರ್ಗವಾಗಿ ಕಕ್ಕೇರಾ ಪಟ್ಟಣಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸಬಹುದು. ಇದರಿಂದ ಸುಮಾರು 20 ಕಿಲೋ ಮೀಟರ್‌ ಅಂತರ ಕಡಿಮೆಯಾಗುವುದು. ದೇವಾಪುರ 110 ಸ್ಟೇಷನ್‌ನಲ್ಲಿ 20 ಎಂವಿಎ ಸಾಮರ್ಥ್ಯದ ಹೊಸ ವಿದ್ಯುತ್ ಪರಿವರ್ತಕ ಜೋಡಿಸಬೇಕು. ಇದಕ್ಕೆ ಕೋಟ್ಯಂತರ ಹಣ ವೆಚ್ಚವಾಗುತ್ತದೆ. ಹೀಗಾಗಿ ಶಾಸಕ ವೇಣುಗೋಪಾಲನಾಯಕ ಅವರು ಗಮನಹರಿಸಿ ಪಟ್ಟಣದ ವಿದ್ಯುತ್‌ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸಾರ್ವಜನಕರು ಒತ್ತಾಯಿಸಿದ್ದಾರೆ.

‘ಶಾಸಕನಾದ ಬಳಿಕ  8 ಬಾರಿ ಜೆಸ್ಕಾಂ ಅಧಿಕಾರಿಗಳ ಸಭೆ ನಡೆಸಲಾಗಿದೆ. ಹಲವು ವರ್ಷಗಳಿಂದ ಇರುವ ಈ ಸಮಸ್ಯೆಗಳ ಬಗ್ಗೆ ವರದಿ ತೆಗೆದುಕೊಂಡಿದ್ದು, ಅಧಿಕಾರಿಗಳು ಸಮರ್ಪಕ ವಿದ್ಯುತ್ ಒದಗಿಸಲು ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಶಾಸಕ ರಾಜಾ ವೇಣುಗೋಪಾಲನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.

ಯಾರು ಏನಂದರು?

ಬಹು ದಿನಗಳಿಂದ ತಾಲ್ಲೂಕಿನಲ್ಲಿ ವಿದ್ಯುತ್ ಸಮಸ್ಯೆಯಿದ್ದು ಶೀಘ್ರವೇ ಜೆಸ್ಕಾಂ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ದೇವಾಪುರದಿಂದ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು – ರಾಜಾ ವೇಣುಗೋಪಾಲನಾಯಕ ಶಾಸಕ

ಪಟ್ಟಣದಲ್ಲಿ ವಿದ್ಯುತ್ ಸಮಸ್ಯೆ ಹೇಳತೀರದು. ಅಧಿಕಾರಿಗಳು ಸರಿಯಾಗಿ ಸ್ಪಂದಿಸುವುದಿಲ್ಲ. ಕಾರ್ಯವೈಖರಿ ಸರಿಯಿಲ್ಲ. ಕೃಷಿಕರಿಗೆ ವ್ಯಾಪಾರಸ್ಥರಿಗೆ ತೊಂದರೆಯಾಗಿದ್ದು ಶೀಘ್ರವೇ ವಿದ್ಯುತ್ ಸಮಸ್ಯೆ ಬಗೆಹರಿಸಬೇಕು – ರಾಜು ಹವಾಲ್ದಾರ್ ಪುರಸಭೆ ಮಾಜಿ ಅಧ್ಯಕ್ಷ

ಜೆಸ್ಕಾಂ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸಲ್ಲ. ಶೀಘ್ರವೇ ಶಾಸಕರ ಗಮನಕ್ಕೆ ತಂದು ವಿದ್ಯುತ್ ಸಮಸ್ಯೆ ಬಗೆಹರಿಸಿ ಅಧಿಕಾರಿಗಳ ಮೇಲೆ ಕ್ರಮಕ್ಕೆ ಮನವಿ ಮಾಡಲಾಗುವುದು – ಗುಂಡಪ್ಪ ಸೋಲಾಪುರಕೆಪಿಸಿಸಿ ಸದಸ್ಯ

ಕಕ್ಕೇರಾ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಹು ದಿನಗಳಿಂದ ಇರುವ ವಿದ್ಯುತ್ ಸಮಸ್ಯೆಯನ್ನು ಶೀಘ್ರದಲ್ಲಿಯೇ ಬಗೆಹರಿಸಲಾಗುವುದು – ರಾಜಶೇಖರ ಜೆಸ್ಕಾಂ ಇಇಸುರಪುರ

ಹಿಂದಿನ ಜೆಸ್ಕಾಂ ಎಇಇ ಹಾಗೂ ಜೆಇ ಮೇಲೆ ಕ್ರಮವಾಗಬೇಕು. ಕೋಟ್ಯಾಂತರ ಹಣ ಖರ್ಚು ಮಾಡಿದರೂ ಸಮರ್ಪಕ ವಿದ್ಯುತ್ ಪೂರೈಕೆ ಏಕೆ ಸಾಧ್ಯವಾಗಿಲ್ಲ. ಈ ಕುರಿತು ಸೂಕ್ತ ತನಿಖೆ ಆಗಬೇಕು – ದೇವಿಂದ್ರಪ್ಪ ಬಳಿಚಕ್ರ ನಿವೃತ್ತ ಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT