ವೆಬ್‌ಸೈಟ್‌ನಲ್ಲಿ ಕನ್ನಡ ಪ್ರಧಾನವಾಗಿರಲಿ: ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸೂಚನೆ

7

ವೆಬ್‌ಸೈಟ್‌ನಲ್ಲಿ ಕನ್ನಡ ಪ್ರಧಾನವಾಗಿರಲಿ: ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸೂಚನೆ

Published:
Updated:
Deccan Herald

ಯಾದಗಿರಿ: ಜಿಲ್ಲಾಮಟ್ಟದ ಎಲ್ಲ ಇಲಾಖೆಗಳ ವೆಬ್‌ಸೈಟ್‌ಗಳಲ್ಲಿ ಕನ್ನಡವನ್ನು ಪ್ರಧಾನವಾಗಿ ಬಳಸಬೇಕು. ಇಂಗ್ಲಿಷ್ ಆಯ್ಕೆಯ ಭಾಷೆಯಾಗಿರಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅವರು ಮಾತನಾಡಿದರು.

ಕನ್ನಡ ನಾಡಿನ ಸೌಕರ್ಯಗಳನ್ನು ಬಳಸುವ ಅಧಿಕಾರಿಗಳು ಆಡಳಿತದಲ್ಲಿ ಕನ್ನಡವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.

‘ಜಿಲ್ಲಾಮಟ್ಟದಲ್ಲಿ ಈ ಹಿಂದೆ ಶೇ 90ರಷ್ಟು ಕನ್ನಡ ಅನುಷ್ಠಾನ ಆಗುತ್ತಿತ್ತು. ಕನ್ನಡ ತಂತ್ರಾಂಶ ಬಳಕೆ ಕಷ್ಟಸಾಧ್ಯ ಎಂದು ಕೆಲವು ಅಧಿಕಾರಿಗಳು ನಿಲುವು ತಾಳಿದ್ದರಿಂದ ಬಹುತೇಕ ಜಿಲ್ಲೆಯ ವೆಬ್‌ಸೈಟ್‌ಗಳು ಇಂಗ್ಲಿಷ್ ಭಾಷೆಯಲ್ಲಿವೆ. ಪ್ರಾಧಿಕಾರ ಇದರ ಪರಿಶೀಲನೆಗೆ ಮುಂದಾದ ನಂತರ ಸ್ವಲ್ಪ ಸುಧಾರಣೆಯಾಗಿದೆ’ ಎಂದು ಅವರು ತಿಳಿಸಿದರು.

ಜಿಲ್ಲಾ ಪೊಲೀಸ್ ಇಲಾಖೆಯ ವೆಬ್‌ಸೈಟ್‌ನಲ್ಲಿಯೂ 15 ದಿನಗಳಲ್ಲಿ ಕನ್ನಡವನ್ನು ಅಳವಡಿಸುವಂತೆ ಸೂಚಿಸಿದರು.

ಎಲ್ಲ ಜಿಲ್ಲೆಗಳಲ್ಲಿ ಸರ್ಕಾರೇತರ ಸದಸ್ಯರನ್ನೊಳಗೊಂಡ ಕನ್ನಡ ಜಾಗೃತಿ ಸಮಿತಿ ರಚಿಸಲಾಗಿದೆ. ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಮಿತಿ ಸಭೆ ಕರೆದು, ಕನ್ನಡ ಅನುಷ್ಠಾನಕ್ಕೆ ಸ್ಥಳೀಯ ಸಮಸ್ಯೆಗಳನ್ನು ಚರ್ಚಿಸಿ ಪ್ರಾಧಿಕಾರಕ್ಕೆ ವರದಿ ಸಲ್ಲಿಸಬೇಕು. ಜಿಲ್ಲೆಯಲ್ಲಿ ಈಗಾಗಲೇ ಸಭೆ ನಡೆಸಿರುವುದು ಉತ್ತಮ ಬೆಳವಣಿಗೆ ಎಂದು ಅಭಿನಂದಿಸಿದದರು.

 ಬ್ಯಾಂಕ್‌ಗಳು ಕನ್ನಡದಲ್ಲಿ ವ್ಯವಹರಿಸಲಿ: ಬ್ಯಾಂಕ್‌ಗಳು ಗ್ರಾಹಕರೊಂದಿಗೆ ಕನ್ನಡದಲ್ಲಿ ವ್ಯವಹರಿಸಬೇಕು. ಹಣ ತುಂಬುವ, ತೆಗೆದುಕೊಳ್ಳುವ ಮತ್ತು ವಿವಿಧ ಸೌಲಭ್ಯಗಳ ಎಲ್ಲಾ ನಮೂನೆಗಳು ಕನ್ನಡದಲ್ಲಿರಬೇಕು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಗೋಪಾಲ ಅವರಿಗೆ ಸೂಚಿಸಿದರು.

ಆಂಧ್ರಪ್ರದೇಶ, ತಮಿಳುನಾಡು ಮತ್ತು ಉತ್ತರಭಾರತದ ಅಧಿಕಾರಿಗಳು ಜಿಲ್ಲೆಯ ಬ್ಯಾಂಕ್‌ಗಳಲ್ಲಿ ಕೆಲಸ ಮಾಡುತ್ತಿರುವುದರಿಂದ ಕನ್ನಡದಲ್ಲಿ ವ್ಯವಹರಿಸಲು ತೊಂದರೆಯಾಗುತ್ತಿದೆ. ಕೆಲ ಅಧಿಕಾರಿಗಳು ಕನ್ನಡದಲ್ಲಿ ಬರುವ ಪತ್ರಗಳನ್ನು ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸಿ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಭಾಷಾಂತರಿಸಿ ತಿಳಿಸಲು ಕೋರುತ್ತಾರೆ ಎಂದು ಲೀಡ್‌ಬ್ಯಾಂಕ್ ವ್ಯವಸ್ಥಾಪಕರು ಸಮಸ್ಯೆಯನ್ನು ಹೇಳಿಕೊಂಡರು.

ರಾಜ್ಯದಲ್ಲಿರುವ ವಿವಿಧ ಬ್ಯಾಂಕ್‌ಗಳಲ್ಲಿ ಸ್ಥಳೀಯ ಅಧಿಕಾರಿಗಳನ್ನೇ ನೇಮಕ ಮಾಡಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ ಪ್ರಾಧಿಕಾರದ ಅಧ್ಯಕ್ಷರು, ಕನ್ನಡ ಮಾತನಾಡಲು ಬಾರದ ಬ್ಯಾಂಕ್ ಅಧಿಕಾರಿಗಳಿಗೆ ಕನ್ನಡ ಕಲಿಕಾ ಕೇಂದ್ರಗಳ ಮೂಲಕ ತರಬೇತಿ ಕೊಡಿಸಿ ಎಂದು ಸೂಚಿಸಿದರು.

ಪರವಾನಗಿ ರದ್ದು: 2015ರ ಕನ್ನಡ ಭಾಷಾ ಅಧಿನಿಯಮದ ಅನ್ವಯ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧಿಸಬೇಕು.

ಕನ್ನಡ ಬೋಧಿಸದ ಶಿಕ್ಷಣ ಸಂಸ್ಥೆಗಳಿಗೆ ನೋಟಿಸ್ ನೀಡಿ, ಪರವಾನಗಿ ರದ್ದುಗೊಳಿಸಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀಶೈಲ್ ಬಿರಾದಾರ ಮಾತನಾಡಿ, ಜಿಲ್ಲೆಯಲ್ಲಿ 1049 ಸರ್ಕಾರಿ, 51 ಅನುದಾನಿತ, 400 ಖಾಸಗಿ ಶಾಲೆಗಳಿದ್ದು, ಕನ್ನಡವನ್ನು ಕಡ್ಡಾಯವಾಗಿ ಬೋಧನೆ ಮಾಡುವಂತೆ ಆದೇಶಿಸಲಾಗಿದೆ. ಯಾದಗಿರಿ ನಗರದ ಪಿ.ಎಸ್.ದೋಖಾ ಜೈನ್ ಶಾಲೆಯಲ್ಲಿ ಸಿಬಿಎಸ್‌ಸಿ ಪಠ್ಯಕ್ರಮ ಇದ್ದು, ಶಾಲೆಗೆ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡ ಬೋಧಿಸುವಂತೆ ಆದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.

ಆಗ ಪ್ರಾಧಿಕಾರದ ಅಧ್ಯಕ್ಷರು ಮಾತನಾಡಿ, ಪಿ.ಎಸ್.ದೋಖಾ ಜೈನ್ ಶಾಲೆಯಲ್ಲಿ ಕನ್ನಡ ಭಾಷೆ ಬೋಧಿಸುತ್ತಿಲ್ಲ ಎಂಬುದಾಗಿ ಆರೋಪ ಇದ್ದು, ಶಾಲೆಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದರು.

ಕನ್ನಡ ಜಾಗೃತಿ ಸಮಿತಿಯ ಸದಸ್ಯರಾದ ಶರಣು ಬಿ.ಗದ್ದುಗೆ ಅವರು ಮಾತನಾಡಿ, ಗಡಿಭಾಗದಲ್ಲಿ ತೆಲುಗು ಭಾಷೆ ಹೆಚ್ಚಾಗಿ ಬಳಕೆಯಲ್ಲಿದೆ. ಗಡಿಭಾಗದ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ತೆಲುಗು ಭಾಷೆಯಲ್ಲಿ ಬರೆದು ಕನ್ನಡ ಕಲಿಸಲಾಗುತ್ತಿದೆ. ಬ್ಯಾಂಕ್‌ಗಳ ನಮೂನೆಗಳಲ್ಲಿ ಸೆಲ್ಫ್ ಬದಲಾಗಿ ವೈಯಕ್ತಿಕ ಎಂದು ಕನ್ನಡದಲ್ಲಿ ಬರೆದರೆ ತಿರಸ್ಕೃತ ಮಾಡಲಾಗುತ್ತಿದೆ ಎಂದು ಈ ಸಂದರ್ಭದಲ್ಲಿ ಸಭೆಯ ಗಮನಕ್ಕೆ ತಂದರು.

ಕನ್ನಡದಲ್ಲಿಯೇ ತೀರ್ಪು ನೀಡಿ
ಜಿಲ್ಲಾ ದಂಡಾಧಿಕಾರಿಯೂ ಆದ ಜಿಲ್ಲಾಧಿಕಾರಿ ಸೇರಿ ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರ್‌ ನಡೆಸುವ ಪ್ರಕರಣಗಳ ತೀರ್ಪುಗಳನ್ನು ಕನ್ನಡದಲ್ಲಿಯೇ ಹೊರಡಿಸಬೇಕು.

ಇದರಿಂದ ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ. ಕನ್ನಡದಲ್ಲಿ ಬರೆದು ನೀಡಿರುವ ತೀರ್ಪುಗಳ ಪ್ರತಿಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು ಎಂದು ಅವರು ಸೂಚಿಸಿದರು.

ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ತೀರ್ಪು ನೀಡುವ ನ್ಯಾಯಾಧೀಶರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಕನ್ನಡದಲ್ಲಿ ತೀರ್ಪು ನೀಡುವ ಜಿಲ್ಲಾಧಿಕಾರಿಗೂ ರಾಜ್ಯ ಪ್ರಶಸ್ತಿ ನೀಡಲಾಗುವುದು ಎಂದು ಅವರು ಹೇಳಿದರು.

ಕಾರ್ಖಾನೆಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಿ
ಕಡೇಚೂರ ರೈಲ್ವೆ ಬೋಗಿ ತಯಾರಿಕಾ ಕಾರ್ಖಾನೆ ಮತ್ತು ವಡಗೇರಾದ ಸಕ್ಕರೆ ಕಾರ್ಖಾನೆಯಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಲು ಆದ್ಯತೆ ನೀಡಬೇಕು.

ಕನ್ನಡಿಗರು ಯಾವ ವೃಂದದಲ್ಲಿ ಎಷ್ಟು ಜನ ಕೆಲಸ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಸಹಾಯಕ ಆಯುಕ್ತರು ಹಾಗೂ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೆಶಕರು ಖುದ್ದಾಗಿ ಪರಿಶೀಲಿಸಿ ಪ್ರಾಧಿಕಾರಕ್ಕೆ ವರದಿ ನೀಡಬೇಕು ಎಂದು ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !