ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಮೋದಿ ಬಂದರೂ ಮತ ಬರಲಿಲ್ಲ!

ಕೋಡೆಕಲ್‌ಗೆ ಪ್ರಧಾನಿ, ಯಾದಗಿರಿಗೆ ಅಮಿತ್ ಶಾ ಬಂದರೂ ನಡೆಯಲಿಲ್ಲ ಮ್ಯಾಜಿಕ್
Published 18 ಮೇ 2023, 0:49 IST
Last Updated 18 ಮೇ 2023, 0:49 IST
ಅಕ್ಷರ ಗಾತ್ರ

ಯಾದಗಿರಿ: ವಿಧಾನಸಭೆ ಚುನಾವಣೆ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಕೋಡೆಕಲ್ಲಗೆ ಬಂದರೂ ಜಿಲ್ಲೆಯಲ್ಲಿ ಬಿಜೆಪಿಗೆ ಯಾವುದೇ ಲಾಭವಾಗಿಲ್ಲ.

ಜಿಲ್ಲೆಯಲ್ಲಿ 2018ರಲ್ಲಿ ಯಾದಗಿರಿ, ಸುರಪುರದಲ್ಲಿ ಬಿಜೆಪಿ ಶಾಸಕರಿದ್ದರು. ಆದರೆ, 2023ರ ವಿಧಾನಸಭೆ ಚುನಾವಣೆಯಲ್ಲಿ ಅದಕ್ಕೂ ಮುಂಚೆ ಬಿಜೆಪಿ, ಜೆಡಿಎಸ್‌ನಲ್ಲಿ ಘಟನಾನುಘಟಿ ನಾಯಕರಿಂದ ಪ್ರಚಾರ, ರೋಡ್‌ ಶೋ ಮಾಡಿದರೂ ಶೂನ್ಯ ಸಾಧನೆ ಮಾಡಿದೆ. 

ರಾಜ್ಯ ಮತ್ತು ರಾಷ್ಟ್ರ ನಾಯಕರು ಜಿಲ್ಲೆಯ ನಾಲ್ಕು ಮತಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದರು. ಅಲ್ಲದೇ ಚಿತ್ರ ನಟ, ನಟಿಯರು ಭಾಗವಹಿಸಿ ರೋಡ್‌ ಶೋ ನಡೆಸಿದ್ದರು. ಆದರೆ, ಅವು ಮತಗಳಾಗಿ ಪರಿವರ್ತನೆಯಾಗಿಲ್ಲ.

ಯಾದಗಿರಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭರ್ಜರಿ ರೋಡ್ ಶೋ ನಡೆಸಿದರೂ ಬಿಜೆಪಿಗೆ ಜಯ ಒದಗಿ ಬಂದಿಲ್ಲ.

ಯಾದಗಿರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಮಹಿಳಾ ಮತದಾರರನ್ನು ಸೆಳೆದರೂ ಮತಗಳಾಗಿ ಪರಿವರ್ತನೆಯಾಗಿಲ್ಲ. ಸಾವಿರಾರು ಮಹಿಳೆಯರನ್ನು ಉದ್ದೇಶಿಸಿ ಪ್ರಾಸ ಬದ್ಧವಾಗಿ ಕಮಲ ಪಕ್ಷಕ್ಕೆ ಮತ ಹಾಕುವಂತೆ ಮೋಡಿ ಮಾಡಿದ್ದರು. ತಮ್ಮ ಭಾಷಣದುದ್ದಕ್ಕೂ ಮಾತುಗಳಿಂದ ಕಮಾಲ್‌ ಮಾಡಿದ್ದರು. ಆದರೆ, ಮಹಿಳಾ ಮತದಾರರು ಬಿಜೆಪಿಗೆ ಕೈಕೊಟ್ಟಿದ್ದಾರೆ. 

ಮತ್ತೊಬ್ಬ ಕೇಂದ್ರ ಸಚಿವೆ ಸಾಧ್ವಿ ನಿರಂಜನ್‌ ಅವರು ಗುರುಮಠಕಲ್‌ ಮತಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದರು. ಅಲ್ಲದೇ ಬಹಿರಂಗ ಸಭೆಯಲ್ಲಿ ಸಾಹಸ್ರಾರು ಜನರು ಭಾಗವಹಿಸಿದ್ದರು.

ಚುನಾವಣೆ ಮುನ್ನ ಪ್ರಧಾನಿ ಆಗಮನ: ಪ್ರಧಾನಿ ನರೇಂದ್ರ ಮೋದಿ ಜನವರಿ 19ರಂದು ಕೋಡೆಕಲ್‌ಗೆ ಆಗಮಿಸಿ ₹10,813 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಅಲ್ಲದೇ ಆಗಲೇ ಚುನಾವಣೆ ಕಾವು ಹೆಚ್ಚಿದ್ದರು. ಆದರೆ, ಸುರಪುರ ಮತಕ್ಷೇತ್ರದಲ್ಲಿ ಬಿಜೆಪಿಯ ನರಸಿಂಹ ನಾಯಕ (ರಾಜೂಗೌಡ) ಅವರು ಕಾಂಗ್ರೆಸ್‌ನ ರಾಜಾ ವೆಂಕಟಪ್ಪ ನಾಯಕ ಎದುರು ಸೋತು ಹೋಗಿದ್ದಾರೆ.

ಯಾದಗಿರಿ ಜಿಲ್ಲೆಯಾದ ಬಳಿಕ ಪ್ರಥಮ ಬಾರಿಗೆ ಪ್ರಧಾನಿ ಮೋದಿ ಆಗಮಿಸಿದ್ದರು. ಹೆಸರಿಗೆ ಮಾತ್ರ ಅದು ಸರ್ಕಾರಿ ಕಾರ್ಯಕ್ರಮವಾಗಿತ್ತು. ಅಂದು ನಡೆದ ಕಾರ್ಯಕ್ರಮಕ್ಕೆ ಅಂದಾಜು 3 ಲಕ್ಷ ಜನರು ಆಗಮಿಸಿದ್ದರು. ಅಲ್ಲದೇ ಚುನಾವಣೆ ಮುನ್ನವೇ ಮಹಿಳಾ ಮತದಾರರನ್ನು ಗುರಿಯಾಗಿಸಿಕೊಂಡು ಪ್ರಧಾನಿಯವರು ಮಾತನಾಡಿದ್ದರು. ಆದರೂ ಅದು ಮತಗಳಾಗಿ ಪರಿವರ್ತನೆಯಾಗಿಲ್ಲ.

ಪ್ರಧಾನಿ ಬಂದು ಹೋದ ನಂತರ ಸ್ಕಾಡ್‌ ಗೇಟ್‌ ವಿಷಯವಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿತ್ತು.

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಏಪ್ರಿಲ್‌ 29ರಂದು ಹುಣಸಗಿಯಲ್ಲಿ ರೋಡ್‌ ಶೋ ನಡೆಸಿ ಅಭ್ಯರ್ಥಿ ಪರವಾಗಿ ಮತಯಾಚಿಸಿದ್ದರು. ಚಿತ್ರ ನಟಿ ಶೃತಿ ಕೂಡ ಭಾಗವಹಿಸಿದ್ದರು. ಮೇ 3ರಂದು ಚಿತ್ರನಟ ಕಿಚ್ಚ ಸುದೀಪ್‌ ಶಹಾಪುರ, ಸುರಪುರ ಮತಕ್ಷೇತ್ರದಲ್ಲಿ ಭರ್ಜರಿ ರೋಡ್‌ ಶೋ ನಡೆಸಿದ್ದರು. ಆದರೆ, ಮತಗಳು ಬಿಜೆಪಿಗೆ ಬಿದ್ದಿಲ್ಲ.

ಗುರುಮಠಕಲ್ ಪಟ್ಟಣದಲ್ಲಿ ಬಿಜೆಪಿ ಪರ ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಮತಯಾಚಿಸಿರುವ
ಗುರುಮಠಕಲ್ ಪಟ್ಟಣದಲ್ಲಿ ಬಿಜೆಪಿ ಪರ ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಮತಯಾಚಿಸಿರುವ

ಯಾದಗಿರಿಯಲ್ಲಿ ಅಮಿತ್ ಶಾ ರೋಡ್‌ ಶೋ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಏಪ್ರಿಲ್‌ 25ರಂದು ಬಿಜೆಪಿ ಪರ ರೋಡ್‌ ಶೋ ನಡೆಸಿದರು. ನಗರದ ಪದವಿ ಕಾಲೇಜಿನಿಂದ ಶಾಸ್ತ್ರಿ ವೃತ್ತದ ವರೆಗೆ ಭರ್ಜರಿ ರೋಡ್‌ ಶೋ ನಡೆಸಿದ್ದರು. ಕಾಂಗ್ರೆಸ್‌ ಮತ್ತು ಮುಸ್ಲಿಂ ಮೀಸಲಾತಿ ವಿರುದ್ಧ ಮಾತನಾಡಿದ್ದರು. ಡಬಲ್‌ ಎಂಜಿನ್‌ ಸರ್ಕಾರ ಮತ್ತೊಮ್ಮೆ ಆಯ್ಕೆ ಮಾಡಿ ಎಂದು ಸುಮಾರು 1 ಗಂಟೆ ರೋಡ್‌ ಶೋ ನಡೆಸಿದ್ದರು. ಅದು ಕೂಡ ಮತ ಫಸಲು ನೀಡಿಲ್ಲ.

ಪ್ರಧಾನಿ ನರೇಂದ್ರ ಮೋದಿ ಕೋಡೆಕಲ್‌ನಲ್ಲಿ ಚುನಾವಣಾ ಪೂರ್ವದಲ್ಲಿ ಆಗಮಿಸಿ ಭಾಷಣ ಮಾಡಿರುವ (ಸಂಗ್ರಹ ಚಿತ್ರಗಳು)
ಪ್ರಧಾನಿ ನರೇಂದ್ರ ಮೋದಿ ಕೋಡೆಕಲ್‌ನಲ್ಲಿ ಚುನಾವಣಾ ಪೂರ್ವದಲ್ಲಿ ಆಗಮಿಸಿ ಭಾಷಣ ಮಾಡಿರುವ (ಸಂಗ್ರಹ ಚಿತ್ರಗಳು)

ಮೇ 3ರಂದು ಕೇಂದ್ರದ ಗ್ರಾಹಕ ವ್ಯವಹಾರ , ಆಹಾರ ಮತ್ತು ಸಾರ್ವಜನಿಕ ವಿತರಣೆ ರಾಜ್ಯ ಸಚಿವೆ ಸಾಧ್ವಿ ನಿರಂಜನ ಜ್ಯೋತಿ  ಗುರುಮಠಕಲ್‌ ಮತಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದರು. ಅಲ್ಲದೇ ಕೇಂದ್ರ ಗ್ರಾಮೀಣ ಅಭಿವೃದ್ಧಿ ಸಚಿವ ಫಗ್ಗನ್‌ ಸಿಂಗ್‌ ಕುಲಸ್ತೆ ಅವರು ಅಭ್ಯರ್ಥಿಗಳ ಪರವಾಗಿ ಬ್ಯಾಟಿಂಗ್‌ ಬೀಸಿದ್ದರು.

ಶಹಾಪುರದಲ್ಲಿ ಬೊಮ್ಮಾಯಿ ಪ್ರಚಾರ: ಆಗಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಶಹಾಪುರದಲ್ಲಿ ಭರ್ಜರಿ ರೋಡ್‌ ಶೋ ಏಪ್ರಿಲ್‌ 28ರಂದು ಹಮ್ಮಿಕೊಂಡಿದ್ದರು. ರೋಷಾವೇಶದ ಭಾಷಣ ಮಾಡಿದ್ದರು. ಲಿಂಗಾಯತ ವಿಷಯ ಇಟ್ಟುಕೊಂಡು ಸ್ಥಳೀಯ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೇ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿ,ಎಂ.ಇಬ್ರಾಹಿಂ ಅವರು ಜೆಡಿಎಸ್‌ ಅಭ್ಯರ್ಥಿ ಪರವಾಗಿ ಬಹಿರಂಗ ಸಭೆ ನಡೆಸಿ ಕಾಂಗ್ರೆಸ್‌, ಬಿಜೆಪಿ ವಿರುದ್ಧ ವ್ಯಂಗ್ಯ ಮಾತುಗಳನ್ನಾಡಿ ಮತದಾರರನ್ನು ಮೋಡಿ ಮಾಡಿದ್ದರು. ಆದರೆ, ಜೆಡಿಎಸ್‌ ಅಭ್ಯರ್ಥಿ ಪಾರಾಜಿತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT