ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ ವಿಧಾನಸಭಾ ಕ್ಷೇತ್ರ | ‘ಕಾಂಗ್ರೆಸ್‌‘ ಕೋಟೆಯಲ್ಲಿ ಅರಳುವುದೇ ‘ಬಿಜೆಪಿ’

ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆಯ ಜಿದ್ದಾಜಿದ್ದಿನ ಕಣ
Last Updated 10 ಫೆಬ್ರುವರಿ 2023, 19:31 IST
ಅಕ್ಷರ ಗಾತ್ರ

ಯಾದಗಿರಿ: ನೀರಾವರಿ ಕ್ಷೇತ್ರವಾಗಿರುವ ಶಹಾಪುರ ಮತಕ್ಷೇತ್ರದಲ್ಲಿ ರಾಜಕೀಯ ಜಿದ್ದಾಜಿದ್ದಿನಿಂದ ಕೂಡಿದೆ. ಹಾಲಿ ಕಾಂಗ್ರೆಸ್‌ ಶಾಸಕ ಶರಣಬಸಪ್ಪ ದರ್ಶನಾಪುರ ಮತ್ತೊಮ್ಮೆ ಆಯ್ಕೆಯಾಗಲು ಬಯಸಿದ್ದಾರೆ. ಮತಕ್ಷೇತ್ರವೂ ಶಹಾಪುರ ಅಲ್ಲದೇ ಸುರಪುರ ತಾಲ್ಲೂಕಿನ ಹಲವು ಗ್ರಾಮಗಳನ್ನು ಒಳಗೊಂಡಿದೆ.

2021ರಲ್ಲಿ ನಡೆದ ಪುರಸಭೆ ಚುನಾವಣೆಯಲ್ಲಿ ಕೆಂಭಾವಿ ಪುರಸಭೆ ಕಾಂಗ್ರೆಸ್‌ನಿಂದ ಕೈ ಜಾರಿ ಬಿಜೆಪಿ ತೆಕ್ಕೆಗೆ ಜಾರಿದೆ. ಇದು ಹಾಲಿ ಶಾಸಕರಿಗೆ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಹಾಲಿ ಶಾಸಕರಿಗೆ ಟಿಕೆಟ್‌: ಶಹಾಪುರ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಹಾಲಿ ಶಾಸಕ ಶರಣಬಸಪ್ಪ ದರ್ಶನಾಪುರ ಸ್ಪರ್ಧಿಸುವುದು ಖಚಿತವಾಗಿದೆ. ಈಗಾಗಲೇ ಕೆಪಿಸಿಸಿ ವತಿಯಿಂದಲೂ ಹಾಲಿ ಶಾಸಕರಿಗೆ ಟಿಕೆಟ್‌ ನೀಡಲಾಗುವುದು ಎಂದು ತಿಳಿಸಿದ್ದರಿಂದ ಕೈ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಶಾಸಕರು ಮತಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ.

ಬಿಜೆಪಿಯಲ್ಲಿ ಟಿಕೆಟ್‌ ಗೊಂದಲ: ಮಾಜಿ ಶಾಸಕ ಗುರುಪಾಟೀಲ 2018ರ ಚುನಾವಣೆಯಲ್ಲಿ 47,668 ಮತ ಪಡೆದು ಸೋತಿದ್ದು, ಈ ಬಾರಿಯೂ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಆದರೆ, ಜೆಡಿಎಸ್‌ ತೊರೆದು ಬಿಜೆಪಿ ಸೇರಿದ ಯುವ ಮುಖಂಡ ಅಮಿನರೆಡ್ಡಿ ಯಾಳಗಿಯೂ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಇವರ ಜೊತೆಗೆ ಡಾ.ಚಂದ್ರಶೇಖರ ಸುಬೇದಾರ, ಡಾ.ವೀರಭದ್ರಪ್ಪಗೌಡ ಹೊಸಮನಿ ಟಿಕೆಟ್‌ ಪ್ರಬಲ ಆಕಾಂಕ್ಷಿಯಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ. ಯಾರಿಗೆ ಟಿಕೆಟ್‌ ಸಿಗಲಿದೆ ಎನ್ನುವುದು ಬಿಜೆಪಿಯಲ್ಲಿ ಕುತೂಹಲ ಉಳಿದುಕೊಂಡಿದೆ.

ಜೆಡಿಎಸ್‌ ಪಕ್ಷ ಅನಾಥ ಭಾವ: ಅಮಿನರೆಡ್ಡಿ ಜೆಡಿಎಸ್‌ ತೊರೆದ ನಂತರ ಜೆಡಿಎಸ್‌ ಪರಿಸ್ಥಿತಿ ಅನಾಥ ಸ್ಥಿತಿಯಂತೆ ಇದೆ. ತಾಲ್ಲೂಕು ಘಟಕದ ಅಧ್ಯಕ್ಷರಿದ್ದರೂ ಪ್ರಬಲ ವಿರೋಧ ಪಕ್ಷವಾಗಿಯೂ ಕೆಲಸ ಮಾಡುತ್ತಿಲ್ಲ. ಇದರಿಂದ ಅಭ್ಯರ್ಥಿ ಯಾರು ಎನ್ನುವ ಖಾತ್ರಿ ಇಲ್ಲದಂತಾಗಿದೆ.

ಎಸ್‌ಡಿಪಿಐ ಸಹ ಅಭ್ಯರ್ಥಿ ಕಣಕ್ಕೆ ಇಳಿಸುವ ಯೋಜನೆಯಲ್ಲಿದೆ. ಈಗಾಗಲೇ ಇಬ್ಬರು ನಗರಸಭೆ ಸದಸ್ಯರಿದ್ದಾರೆ.

ಚಕಾರವೆತ್ತದ ಮುಖಂಡರು: ಕ್ಷೇತ್ರದಲ್ಲಿ ಕಾಂಗ್ರೆಸ್‌ ಏಕ ಚಕ್ರಧಿಪತ್ಯ ಇದ್ದು, ಸ್ಥಳೀಯ ಸಮಸ್ಯೆಗಳ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ. ಶಹಾಪುರ ನಗರಕ್ಕೆ ಶಾಶ್ವತ ನೀರು ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಲಾಟರಿ ಮೂಲಕ ಬಡವರ ಮನೆ ಹಂಚಿಕೆ ರಾಜಕೀಯ ತಿಕ್ಕಾಟದಿಂದ ನೆನಗುದಿಗೆ ಬಿದ್ದಿದೆ. ಕ್ಷೇತ್ರದಲ್ಲಿ ಹತ್ತಿ, ತೊಗರಿ ದರ ಕುಸಿದಿದೆ. ಆದರೂ ಸಾರ್ವಜನಿಕರ ಸಮಸ್ಯೆಗಳಿಗೆ ಮುಖಾಮುಖಿ ಆಗುತ್ತಿಲ್ಲ.

ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಸಮಸ್ಯೆ ಇದೆ. ಜೆಜೆಎಂ ಕಾಮಗಾರಿ ಸಮಪರ್ಕವಾಗಿ ಪೂರ್ತಿಗೊಳ್ಳದ್ದರಿಂದ ಆಗಾಗ ನೀರು ಸೇವಿಸಿ ಅಸ್ವಸ್ಥರಾಗುವುದು, ಸಾವು ನೋವುಗಳು ಸಂಭವಿಸಿವೆ.

ಆರೋಗ್ಯ ಶಿಬಿರ ಕಾಳಜಿ: ಚುನಾವಣೆ ವರ್ಷದಲ್ಲಿ ಆರೋಗ್ಯ ಶಿಬಿರಗಳು ದಿಢೀರನೆ ಹುಟ್ಟಿಕೊಂಡಿವೆ. ಬಿಜೆಪಿ ಈಚೆಗೆ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸಿತ್ತು. ಇಷ್ಟು ವರ್ಷಗಳು ಇಲ್ಲದ್ದು ಚುನಾವಣೆ ವರ್ಷದಲ್ಲಿ ಹುಟ್ಟಿಕೊಂಡಿದೆ ಎಂದು ಕ್ಷೇತ್ರದ ಜನತೆ ಮಾತಾಡಿಕೊಳ್ಳುತ್ತಿದ್ದಾರೆ.

ಎರಡು ಗ್ರಾಮಗಳಲ್ಲಿ ಬಿರುಸಿನ ರಾಜಕೀಯ
ಕ್ಷೇತ್ರದಲ್ಲಿ ಎರಡು ಮನೆತನಗಳು ರಾಜಕೀಯ ಹಿಡಿತವನ್ನು ಹೊಂದಿವೆ. ದರ್ಶನಾಪುರ, ಶಿರವಾಳ ಎರಡು ಗ್ರಾಮಗಳಲ್ಲಿ ರಾಜಕೀಯ ಬಿರುಸಿನ ಚಟುವಟಿಕೆಗಳಿವೆ. ಪಕ್ಷಕ್ಕಿಂತ ಇಲ್ಲಿ ವ್ಯಕ್ತಿ ನಿಷ್ಠೆ ಇದೆ. ಕೆಲವರು ಇದನ್ನೇ ಟ್ರಂಪ್‌ ಕಾರ್ಡ್‌ ಮಾಡಿಕೊಂಡಿದ್ದಾರೆ. ಇದರಿಂದ ಪಕ್ಷ ನೆಪ ಮಾತ್ರ ಎನ್ನುವಂತಾಗಿದೆ.

ಜೆಡಿಎಸ್‌ ಅಭ್ಯರ್ಥಿ ಬದಲು!
2018ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಅಮಿನರೆಡ್ಡಿ ಯಾಳಗಿ 23,329 ಮತ ಪಡೆದಿದ್ದರು. ಬದಲಾದ ರಾಜಕೀಯದಿಂದ ಜೆಡಿಎಸ್‌ ಬಿಟ್ಟು ಈಗ ಬಿಜೆಪಿ ಸೇರಿದ್ದಾರೆ. ಇದರಿಂದ ಬಿಜೆಪಿ ಪಾಳೆದಲ್ಲಿ ಜಿದ್ದಾಜಿದ್ದಿನ ಅಭ್ಯರ್ಥಿ ಆಯ್ಕೆ ಸಂಭವವಿದೆ. ಬಿಜೆಪಿಗೆ ಸೇರಿದ ನಂತರ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಟ್ರಸ್ಟ್‌ ಮೂಲಕ ಆರೋಗ್ಯ ತಪಾಸಣೆ ಶಿಬಿರಗಳು ಅಯೋಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT