ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ಕಸಾಪ ಚಟುವಟಿಕೆಗಳಿಗೆ ಹಿನ್ನಡೆ

ಪ್ರತ್ಯೇಕತೆ ಕಾಯ್ದುಕೊಂಡ ಕೆಂಭಾವಿ ವಲಯ
Last Updated 3 ಜನವರಿ 2023, 7:04 IST
ಅಕ್ಷರ ಗಾತ್ರ

ಸುರಪುರ: ತಾಲ್ಲೂಕಿನ ಕೆಂಭಾವಿ ವಲಯದ ಸಾಹಿತಿಗಳು, ಸಂಘಟಕರು ಅಸಮಾಧಾನ ಆಗಿರುವ ಪರಿಣಾಮ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಿಗೆ ಹಿನ್ನಡೆ ಉಂಟಾಗಿದೆ ಎಂದು ಸಾಹಿತ್ಯಾಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಾರೆ.

2022ರ ಫೆಬ್ರುವರಿಯಲ್ಲಿ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಸ್ಥಾನಕ್ಕೆ ಸುರಪುರದ ಶರಣಬಸವ ಯಾಳವಾರ, ದೊಡ್ಡಮಲ್ಲಿಕಾರ್ಜುನ ಹುದ್ದಾರ ಮತ್ತು ಕೆಂಭಾವಿಯ ಮಡಿವಾಳಪ್ಪ ಪಾಟೀಲ ಹೆಗ್ಗನದೊಡ್ಡಿ ಮಧ್ಯೆ ಪೈಪೋಟಿ ಏರ್ಪಟ್ಟಿತ್ತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಅವರು ಸ್ಥಳೀಯ ಸಮಿತಿಯನ್ನು ರಚಿಸಿ ಶರಣಬಸವ ಯಾಳವಾರ ಅವರನ್ನು ಅಧ್ಯಕ್ಷರನ್ನಾಗಿ ಘೋಷಿಸಿದರು.
ಮಡಿವಾಳಪ್ಪ ಪಾಟೀಲ ಬೆಂಬಲಿಸಿದ್ದ ಕೆಂಭಾವಿ ವಲಯದ ಪರಿಷತ್ತಿನ ಸದಸ್ಯರು, ಸಾಹಿತಿಗಳು ಪ್ರತಿಭಟಿಸಿ, ಸಭೆ ಬಹಿಷ್ಕರಿಸಿದ್ದರು.

ನಂತರ 15 ದಿನಗಳಲ್ಲಿ ಮಡಿವಾಳಪ್ಪ ಪಾಟೀಲ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಂಘ ರಚನೆಗೊಂಡು 6ಕ್ಕೂ ಹೆಚ್ಚು ಕಾರ್ಯಕ್ರಮಗಳು ಕೆಂಭಾವಿಯಲ್ಲಿ ನಡೆದವು. ಅಂದಿನಿಂದ ಅವರು ಮತ್ತು ಬೆಂಬಲಿಗರು ಸುರಪುರ ತಾಲ್ಲೂಕು ಪರಿಷತ್ತಿನ ಚಟುವಟಿಕೆಗಳಿಂದ ದೂರವೇ ಉಳಿದರು.

‘ಜುಲೈ ತಿಂಗಳಲ್ಲಿ ಪದಗ್ರಹಣ ಮಾಡಿದ ಶರಣಬಸಪ್ಪ ಯಾಳವಾರ ಅವರು ಐದಾರು ಕಾರ್ಯಕ್ರಮ ಮಾಡಿದ್ದರೂ ಕೆಂಭಾವಿ ವಲಯದವರಿಂದ ಅಸಹಕಾರ ಕಾಣುತ್ತಿದೆ. ಕೆಂಭಾವಿ ವಲಯದವರೊಂದಿಗೆ ನಮ್ಮದೇನೂ ಭಿನ್ನಾಭಿಪ್ರಾಯವಿಲ್ಲ. ಪ್ರತಿ ಕಾರ್ಯಕ್ರಮಕ್ಕೆ ಸಂದೇಶದ ಮೂಲಕ, ಫೋನ್ ಮೂಲಕ ಅವರನ್ನು ಆಹ್ವಾನಿಸುತ್ತೇವೆ. ಆದರೂ ಅವರು ಒಂದು ಕಾರ್ಯಕ್ರಮಕ್ಕೆ ಬರುತ್ತಿಲ್ಲ’ ಎನ್ನುತ್ತಾರೆ ಶರಣಬಸಪ್ಪ ಯಾಳವಾರ.

‘ತಾಲ್ಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಗ್ರಾಮೀಣ ಪ್ರದೇಶದವರಿಗೆ ಅವಕಾಶ ನೀಡುವಂತೆ ಕೆಂಭಾವಿ ವಲಯದಿಂದ ಕೋರಿದ್ದೆವು. ಆದರೆ, ಆಯ್ಕೆ ಸಭೆಯಲ್ಲಿ ನಮ್ಮ ಜತೆ ಬಂದ ಹಿರಿಯರಿಗೆ ಗೌರವ ಸಿಗಲಿಲ್ಲ. ಹೀಗಾಗಿ ಪ್ರತ್ಯೇಕತೆ ಕಾಯ್ದುಕೊಂಡಿದ್ದೇವೆ. ನಮ್ಮ ಸಂಘದಿಂದ ಕನ್ನಡಮ್ಮನ ಸೇವೆ ಮಾಡುತ್ತಿದ್ದೇವೆ’ ಎಂದು ಮಡಿವಾಳಪ್ಪ ಪಾಟೀಲ ತಿಳಿಸಿದರು.

ಕೆಂಭಾವಿ ವಲಯದಲ್ಲಿ ಪರಿಷತ್ತಿನ 383 ಸದಸ್ಯರಿದ್ದಾರೆ. ಕಕ್ಕೇರಾ ವಲಯದಲ್ಲಿ 68, ಸುರಪುರ ವಲಯದಲ್ಲಿ 481 ಸದಸ್ಯರು ಇದ್ದಾರೆ. ಕಕ್ಕೇರಾ ವಲಯ ಅಧ್ಯಕ್ಷರ ನೇಮಕ ನಡೆದಿದೆ. ಆದರೆ, ಕೆಂಭಾವಿ ವಲಯದ ಅಧ್ಯಕ್ಷರ ನೇಮಕ ಕಗ್ಗಂಟಾಗಿ ಉಳಿದಿದೆ.

‘1996ರಲ್ಲಿ ಕೆಂಭಾವಿಯ ಜನರ ಸಹಕಾರದಿಂದ ತಾಲ್ಲೂಕು ಪ್ರಥಮ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ನಡೆದಿತ್ತು. ಅಂದಿನಿಂದ ಇಂದಿನವರೆಗೆ ಇಬ್ಬರನ್ನೂ ಒಂದುಗೂಡಿಸುವ ಪ್ರಯತ್ನ ನಡೆದಿಲ್ಲ. ಮಡಿವಾಳಪ್ಪ ಸಹಿತ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡರೆ ಈಗಲೂ ಸಂಧಾನ ಸಾಧ್ಯ’ ಎಂದು ನಿಕಟಪೂರ್ವ ವಲಯ ಅಧ್ಯಕ್ಷ ಯಂಕನಗೌಡ ಪಾಟೀಲ ತಿಳಿಸಿದರು.

‘ಎಲ್ಲ ವಲಯದವರೂ ಸೇರಿ ಕಾರ್ಯಕ್ರಮ ಮಾಡಿದರೆ ಅದಕ್ಕೊಂದು ಅರ್ಥ ಬರುತ್ತದೆ. ಸಾಹಿತ್ಯ ಕ್ಷೇತ್ರದಲ್ಲಿ ಅಸಮಾಧಾನ ಸಲ್ಲದು. ಇದೊಂದು ಕನ್ನಡಮ್ಮನ ಸೇವೆ. ಒಂದುಗೂಡಿಸಲು ನಾನು ಪ್ರಯತ್ನಿಸುವೆ’ ಎಂದು ನಿಕಟಪೂರ್ವ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT