ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡು ನುಡಿಗೆ ಕಸಾಪ ಕೊಡುಗೆ ಅಪಾರ: ಶಾಂತಪ್ಪ ಬೂದಿಹಾಳ ಅಭಿಮತ

ಕಸಾಪ ಸಂಸ್ಥಾಪನಾ ದಿನಾಚರಣೆ: ಶಾಂತಪ್ಪ ಬೂದಿಹಾಳ ಅಭಿಮತ
Last Updated 6 ಮೇ 2022, 4:02 IST
ಅಕ್ಷರ ಗಾತ್ರ

ಸುರಪುರ: ‘ಕನ್ನಡ ಭಾಷೆ, ಸಂಸ್ಕೃತಿ ಉಳಿವಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡುಗೆ ಅಪಾರ. ಈ ಸಂಸ್ಥೆಯಿಂದಲೇ ಕನ್ನಡ ಜೀವಂತಾಗಿದೆ. ಪರಿಷತ್ತು ಎಲ್ಲ ಕನ್ನಡಗಿರ ಧೀಶಕ್ತಿ’ ಎಂದು ಸಾಹಿತಿ ಶಾಂತಪ್ಪ ಬೂದಿಹಾಳ ಹೇಳಿದರು.

ವೀರಪ್ಪ ನಿಷ್ಠಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗುರುವಾರ ಕಸಾಪ ತಾಲ್ಲೂಕು ಘಟಕ ಏರ್ಪಡಿಸಿದ್ದ 107ನೇ ಕಸಾಪ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಸಾಹಿತಿಗಳು, ವಿದ್ವಾಂಸರು, ಅಧ್ಯಾಪಕರು ಹಿತಾಸಕ್ತಿಯುಳ್ಳ ನಾಡ ಪ್ರೇಮಿಗಳ ಸಹಕಾರದೊಂದಿಗೆ 1915 ರಲ್ಲಿ ಮೈಸೂರು ಸಂಸ್ಥಾನದ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥೆಯನ್ನು ಹುಟ್ಟು ಹಾಕಲಾಯಿತು’ ಎಂದು ಮಾಹಿತಿ ನೀಡಿದರು.

‘ಸರ್.ಎಂ.ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್, ಎಚ್.ವಿ. ನಂಜುಂಡಯ್ಯ, ವೆಂಕಟರಮಣಪ್ಪ, ಕೆ.ಶ್ರೀನಿವಾಸರಾವ್, ಬಹಾದ್ದೂರ ಶ್ಯಾಮರಾವ್, ಆಲೂರು ವೆಂಕಟರಾಯ ಇವರೆಲ್ಲರ ಪ್ರಯತ್ನದ ಫಲವಾಗಿ ಸಂಸ್ಥೆ ಅಸ್ತಿತ್ವಕ್ಕೆ ಬಂದಿದೆ. ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಸಂಸ್ಥೆ ನಾಡು ನುಡಿಯ ಸೇವೆ ಮಾಡಿರುವುದು ಸ್ಮರಣೀಯವಾಗಿದೆ’ ಎಂದರು.

ಸಾಹಿತಿ ಪ್ರಕಾಶ ಅಂಗಡಿ ಮಾತನಾಡಿ, ‘ಬೇರೆ ಬೇರೆ ಪ್ರಾಂತಗಳಲ್ಲಿ ವಾಸಿಸುವ ಕನ್ನಡಿಗರನ್ನು ಒಂದೆಡೆ ಸೇರಿಸಿ ಅವರಲ್ಲಿ ಭಾಷಾ ಪ್ರೇಮ ಮೂಡಿಸುವುದು, ಬೇರೆ ಪ್ರಾಂತಗಳಲ್ಲಿ ಪ್ರಚಾರದಲ್ಲಿರುವ ಗ್ರಾಂಥಿಕ ಬಾಷೆಯನ್ನು ಒಂದೇ ರೂಪಕ್ಕೆ ತರುವುದು, ವಿದ್ಯಾರ್ಥಿಗಳಿಗೆ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಕನ್ನಡ ಪುಸ್ತಕಗಳನ್ನು ದೊರಕಿಸಿ ಕೊಡುವುದು, ವ್ಯವಹಾರಿಕ ಭಾಷೆಯನ್ನಾಗಿ ಮಾಡಿರುವುದು, ವಿವಿಧ ಭಾಷೆಯಲ್ಲಿದ್ದ ಶಾಸ್ತ್ರಗಳನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಕನ್ನಡವನ್ನು ಉತ್ತುಂಗಕ್ಕೆ ಕೊಂಡೊಯುವ ಕೆಲಸವನ್ನು ನಿರ್ವಹಿಸುತ್ತಾ ಬಂದಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ’ ಎಂದರು.

ವೀರಪ್ಪ ನಿಷ್ಠಿ ಕಾಲೇಜಿನ ಪ್ರಾಚಾರ್ಯ ಶರಣಬಸಪ್ಪ ಸಾಲಿ ಮಾತನಾಡಿ, ‘ಕಸಾಪ ಕನ್ನಡಿಗರ ಹೆಮ್ಮೆಯ ಸಂಸ್ಥೆ. ಕನ್ನಡಿಗರು ಒಗ್ಗಟ್ಟಿನಿಂದ ಭಾಷಾ ಬೆಳವಣಿಗೆಗೆ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಶರಣಬಸವ ಯಾಳವಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಮುಂಬರುವ ದಿನಗಳಲ್ಲಿ ತಾಲ್ಲೂಕಿನಲ್ಲಿ 1 ಸಾವಿರ ಸದಸ್ಯತ್ವ ನೊಂದಣಿ ಮಾಡಿಸುವ ಉದೇಶ ಹೊಂದಲಾಗಿದೆ’ ಎಂದರು.

ಸಾಹಿತಿಗಳಾದ ನಬಿಲಾಲ ಮಕಾನದಾರ, ಮೋಹನರೆಡ್ಡಿ ದೇಸಾಯಿ, ಚಂದ್ರಶೇಖರ ಸಾತನೂರ, ವಿದ್ಯಾನಂದ ಮಠ ಇತರರು ಇದ್ದರು.

ವೆಂಕಟೇಶ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದಯ್ಯಸ್ವಾಮಿ ಕಡ್ಲೆಪ್ಪಮಠ ಸ್ವಾಗತಿಸಿದರು. ರೇವಪ್ಪ ಪಾಟೀಲ ನಿರೂಪಿಸಿದರು. ಎಚ್. ರಾಠೋಡ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT