ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾಡು ನುಡಿಗೆ ಕಸಾಪ ಕೊಡುಗೆ ಅಪಾರ’

ಜಿಲ್ಲಾ ಕಸಾಪದಿಂದ 108 ನೇ ಕಸಾಪ ಸಂಸ್ಥಾಪನಾ ದಿನಾಚರಣೆ: ಕುಲಕರ್ಣಿ
Last Updated 6 ಮೇ 2022, 4:12 IST
ಅಕ್ಷರ ಗಾತ್ರ

ಯಾದಗಿರಿ: ಶತಮಾನದ ಇತಿಹಾಸ ಇರುವ ಕನ್ನಡ ಸಾಹಿತ್ಯ ಪರಿಷತ್ತು ನಾಡು-ನುಡಿಯ ಬೆಳವಣಿಗೆಗೆ ಸಲ್ಲಿಸಿರುವ ಕೊಡುಗೆ ಅಪಾರವಾದದ್ದು ಎಂದು ನ್ಯೂ ಕನ್ನಡ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಸಾಹಿತಿ ವೆಂಕಟರಾವ ಕುಲಕರ್ಣಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಾಹಿತ್ಯ ಭವನದ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ 108ನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಗತಿಪರ ವಿಚಾರಧಾರೆಯ ಮೈಸೂರಿನ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್ ಅವರ ಮುಂದಾಲೋಚನೆಯ ಫಲವಾಗಿ ಶತಮಾನದ ಹಿಂದೆ ಚಿಕ್ಕದಾಗಿ ಪ್ರಾರಂಭವಾದ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಪ್ರಾತಿನಿಧಿಕ ಸಂಸ್ಥೆಯಾಗಿ ರೂಪುಗೊಂಡಿದ್ದು, ಕನ್ನಡ-ಕನ್ನಡಿಗರ ಅಸ್ಮಿತೆಯನ್ನು ಎತ್ತಿಹಿಡಿಯುವ ಕಾರ್ಯ ಮಾಡುತ್ತಿದೆ ಎಂದರು.

ಪ್ರಾಂಶುಪಾಲ ಗುರಪ್ಪಾಚಾರ್ಯ ವಿಶ್ವಕರ್ಮ ಮಾತನಾಡಿ, ಬೆರಳೆಣಿಕೆಯ ಸದಸ್ಯರೊಂದಿಗೆ ಸ್ಥಾಪನೆಗೊಂಡ ಪರಿಷತ್ತು ಕೇವಲ ಕರ್ನಾಟಕ ಮಾತ್ರವಲ್ಲದೇ ಕನ್ನಡಿಗರು ವಾಸಿಸುವ ಎಲ್ಲಾ ಕಡೆಗಳಲ್ಲೂ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡು ಮೂರೂವರೆ ಲಕ್ಷದಷ್ಟು ಆಜೀವ ಸದಸ್ಯರನ್ನು ಹೊಂದಿರುವುದು ಅದರ ಅಗಾಧತೆ ಬಿಂಬಿಸುತ್ತದೆ. ಕೇಂದ್ರ, ಜಿಲ್ಲೆ, ತಾಲ್ಲೂಕು ವಲಯ ಮಟ್ಟದಲ್ಲಿ ಘಟಕಗಳನ್ನು ರಚನೆ ಮಾಡಿ ಕನ್ನಡ ಕಟ್ಟುವ, ಸಾಹಿತಿ-ಕವಿ ಕಲಾವಿದರಿಗೆ ವೇದಿಕೆ ಕಲ್ಪಿಸುವ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ಧಪ್ಪ ಹೊಟ್ಟಿ ಮಾತನಾಡಿ, ಮುಂದಿನ ದಿನಗಳಲ್ಲಿ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಜಿಲ್ಲೆಯಲ್ಲಿ ಕಟ್ಟಲು ಶ್ರಮಿಸುವೆ. ಮುಂದಿನ ದಿನಗಳಲ್ಲಿ ಸಮ್ಮೇಳನಗಳನ್ನು ಅದ್ಧೂರಿಯಾಗಿ ಅಷ್ಟೇ ಅರ್ಥಪೂರ್ಣವಾಗಿ ನಡೆಸುವುದರ ಜೊತೆಗೆ ಪರಿಷತ್ತಿನಿಂದ ಯುವ ಸಾಹಿತಿಗಳ ಪುಸ್ತಕಗಳನ್ನು ಪ್ರಕಟಿಸಲಾಗುವುದು ಎಂದರು.

ವಿಶ್ವಾರಾಧ್ಯ ಸೇವಾ ಸಮಿತಿ ಅಧ್ಯಕ್ಷ ಚನ್ನಪ್ಪಗೌಡ ಮೋಸಂಬಿ, ತಾಲ್ಲೂಕು ಕಸಾಪ ಅಧ್ಯಕ್ಷ ವೆಂಕಟೇಶ ಕಲಕಂಭ, ವಡಗೇರಾ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಕರಿಕಳ್ಳಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಗೌರವ ಕಾರ್ಯದರ್ಶಿಸಿದ್ಧರಾಜರೆಡ್ಡಿ ನಿರೂಪಿಸಿದರು. ಡಾ.ಭೀಮರಾಯ ಲಿಂಗೇರಿ ಸ್ವಾಗತಿಸಿ ದೇವರಾಜ ಪಾಟೀಲ ವಂದಿಸಿದರು. ಲಿಂಗೇರಿ ಕೋನಪ್ಪ ಮಹಿಳಾ ಕಾಲೇಜು ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು.

ಪ್ರಾಂಶುಪಾಲ ಡಾ.ಸುಭಾಶ್ಚಂದ್ರ ಕೌಲಗಿ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಸೋಮಶೇಖರ ಮಣ್ಣೂರ, ಆರ್.ಮಹಾದೇವಪ್ಪಗೌಡ ಅಬ್ಬೆತುಮಕೂರ, ನಾಗರತ್ನ ಮೂರ್ತಿ ಅನಪುರ, ಸಪ್ನಾ ಲೇವಡಿ, ಚನ್ನಪ್ಪ ಸಾಹು ಠಾಣಗುಂದಿ, ನೂರಂದಪ್ಪ ಲೇವಡಿ, ಅಯ್ಯಣ್ಣ ಹುಂಡೇಕಾರ, ಶರಣಪ್ಪ ಜಾಕಾ, ವಿಶ್ವನಾಥ ಸಿರವಾರ, ಹಣಮಂತ ಹೊಸಮನಿ, ಸುರೇಶ ಈಟೆ, ಸುರೇಶ ತಡಿಬಿಡಿ, ವಿಶ್ವನಾಥರೆಡ್ಡಿ ಗೊಂದೆಡಿಗಿ, ಬಸವಂತರಾಯಗೌಡ ಮಾಲಿಪಾಟೀಲ, ಚಂದ್ರಶೇಖರ ಅರಳಿ, ವೀರಭದ್ರಯ್ಯ ಸ್ವಾಮಿ ಜಾಕಾ ಮಠ, ಮಲ್ಲಿಕಾರ್ಜುನ ಗೋಸಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT