ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಸಾಪ ಮತದಾರರ ಪಟ್ಟಿ ಪರಿಷ್ಕರಿಸಿ’

ಪಟ್ಟಿಯಿಂದ ಮೃತರ ಹೆಸರನ್ನು ತೆಗೆಯಲಿ: ಡಾ.ಸರಸ್ವತಿ ಚಿಮ್ಮಲಗಿ
Last Updated 22 ಜುಲೈ 2021, 3:11 IST
ಅಕ್ಷರ ಗಾತ್ರ

ಸುರಪುರ: ‘ಕನ್ನಡ ಸಾಹಿತ್ಯ ಪರಿಷತ್‍ನ ಒಟ್ಟು 3 ಲಕ್ಷ 8 ಸಾವಿರ ಮತದಾರರಲ್ಲಿ 50 ಸಾವಿರ ಮತದಾರರು ಮೃತಪಟ್ಟಿದ್ದಾರೆ. ಇವರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿಲ್ಲ’ ಎಂದು ಡಾ.ಸರಸ್ವತಿ ಚಿಮ್ಮಲಗಿ ಆರೋಪಿಸಿದರು.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅವರು ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ ಭವನದಲ್ಲಿ ಬುಧವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದರು.

‘ಪ್ರಭಾವಿಗಳು ಈ ಮೃತ ಮತದಾರರ ಮತ ಚಲಾಯಿಸಿ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಹಿಂದೆ ನಾನು ಕಲಬುರ್ಗಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಮೃತ ಮತದಾರರ ಮತಗಳ ಚಲಾವಣೆಯಾದವು. ಹೀಗಾಗಿ ನಾನು ಕೇವಲ 4 ಮತಗಳಿಂದ ಪರಾಭವಗೊಂಡಿದ್ದೆ’ ಎಂದು ತಿಳಿಸಿದರು.

‘ಮೃತರ ಹೆಸರು ತೆಗೆದುಹಾಕುವಂತೆ ಆವಾಗಿನಿಂದಲೂ ಒತ್ತಾಯಿಸುತ್ತಿದ್ದೇನೆ. ಆದರೆ ಪರಿಷತ್ ಈ ಕೆಲಸ ಮಾಡಿಲ್ಲ. ಈ ಬಾರಿಯೂ ಅದೇ ಪ್ರವೃತ್ತಿ ನಡೆದರೆ ಅಚ್ಚರಿ ಪಡಬೇಕಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಅಧಿಕಾರಕ್ಕೆ ಬಂದವರು ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಕೊಡಿಸುವಲ್ಲಿ ನಿರ್ಲಕ್ಷ ತೋರಿದ್ದಾರೆ. ಹೀಗಾಗಿ ಕನ್ನಡಿಗರು ನಿರುದ್ಯೋಗಿಗಳಾಗುತ್ತಿದ್ದಾರೆ. ನಾನು ಅಧಿಕಾರಕ್ಕೆ ಬಂದಲ್ಲಿ ಸರ್ಕಾರದ ಮೇಲೆ ಒತ್ತಡ ತಂದು ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

‘ಪರಿಷತ್‍ನಲ್ಲಿ ಪ್ರಾಮಾಣಿಕತೆ, ಸೇವಾ ಬದ್ಧತೆ ಮರೆಯಾಗಿದೆ. ರಾಜಕೀಯ ಹಸ್ತಕ್ಷೇಪ ಮತ್ತು ಜಾತಿ ರಾಜಕಾರಣದ ಒತ್ತಡದಿಂದ ಸಾಮಾಜಿಕ ಕಳಕಳಿಯುಳ್ಳ ಸಾಹಿತಿಗಳು, ನಾಡು ನುಡಿಯ ಸೇವಕರು, ಕಲಾವಿದರು ಸೇರಿದಂತೆ ನಿಜವಾದ ಹೋರಾಟಗಾರರು ಪ್ರಶಸ್ತಿ ಪುರಸ್ಕಾರಗಳಿಂದ ವಂಚಿತರಾಗುತ್ತಿದ್ದಾರೆ. ಅದರಲ್ಲಿ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದವರನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ’ ಎಂದು ದೂರಿದರು.

‘ಸ್ಪರ್ಧೆಯಲ್ಲಿ 20 ಜನ ಪುರುಷರಿದ್ದಾರೆ. ರಾಜ್ಯದಾದ್ಯಂತ ಸಂಚರಿಸಿದ್ದೇನೆ. ಉತ್ತಮ ಪ್ರತಿಕ್ರಿಯೆ ದೊರಕಿದೆ. ಪರಿಷತ್‍ನಲ್ಲಿ ಮಹಿಳೆಯರಿಗೆ ಆದ್ಯತೆ ಸಿಕ್ಕಿಲ್ಲ. ನನಗೆ ಮತ ನೀಡಿ ಚುನಾಯಿಸಬೇಕೆಂದು’ ಮನವಿ ಮಾಡಿದರು.

ಕನ್ನಡ ಸಾಹಿತ್ಯ ಸಂಘದ ಪ್ರಧಾನ ಕಾರ್ಯದರ್ಶಿ ಶಾಂತಪ್ಪ ಬೂದಿಹಾಳ, ಮಲ್ಲಿಕಾರ್ಜುನ ಸತ್ಯಂಪೇಟ, ಸೂಗೂರೇಶ ವಾರದ, ಪ್ರಕಾಶ ಅಂಗಡಿ, ಸೋಮಶೇಖರ ಶಾಬಾದಿ, ಮುದ್ದಪ್ಪ ಅಪ್ಪಾಗೋಳ, ಪ್ರಕಾಶ ಅಲಬನೂರ, ಗೋವಿಂದರಾಜ ಶಹಾಪುರಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT