ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ತಮಾನ ಸ್ಪರ್ಶಿಸಿ ಅರಳಿದ ಕವಿತೆಗಳು

ಕವಿಗೋಷ್ಠಿ; ಸಮಾಜ, ಸರ್ಕಾರದ ಓರೆಕೋರೆಗಳನ್ನು ಟೀಕಿಸಿದ ಕವಿಗಳು
Last Updated 25 ಡಿಸೆಂಬರ್ 2018, 19:56 IST
ಅಕ್ಷರ ಗಾತ್ರ

ಯಾದಗಿರಿ (ಜಿ.ಎಂ. ಗುರುಸಿದ್ಧ ಶಾಸ್ತ್ರಿ ಪ್ರಧಾನ ವೇದಿಕೆ):

ಕೆಟ್ಟ ರಾಜಕಾರಣಿಗಳು
ದುಷ್ಟರನ್ನು ರಕ್ಷಿಸಿ ರಕ್ಷಿಸಿ ಸತ್ತರು;
ಅವರ ಬಾಲಬಡಕ ಭಕ್ತರು
ಕಣ್ಣೀರಿಲ್ಲದೇ ಅತ್ತರು..

ಹೀಗೆ ಮಂಗಳವಾರ ನಡೆದ ನಾಲ್ಕನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಕವಿಗೋಷ್ಠಿಯಲ್ಲಿ ಹಿರಿಯ ಕವಿ ವಿಶ್ವನಾಥರೆಡ್ಡಿ ಗೊಂದೆಡಗಿ ಅವರ ಚುಟುಕಿನೊಂದಿಗೆ ಕಾವ್ಯದ ನಗೆನಡಲು ಆರಂಭಗೊಂಡಿತು.

20ಕ್ಕೂ ಹೆಚ್ಚು ಕವಿಗಳು ತಮ್ಮ ಕವಿತೆಗಳನ್ನು ವಾಚಿಸಿದರು. ಶೋಷಣೆ, ಹಸಿವು, ಹೆಣ್ಣು, ಅಧಿಕಾರ, ರಾಜಕಾರಣ, ಶಿಕ್ಷಣ, ಮಠಾಧೀಶ, ರೈತ, ಬರ, ದೇವರು, ಇತಿಹಾಸ, ಸ್ತ್ರೀ ದೌರ್ಜನ್ಯದ ವಿರುದ್ಧ ಕವಿತೆಗಳು ಜಾಗೃತಿ ಮೂಡಿಸುವಂತಿದ್ದವು. ಕೆಲವೊಂದು ಕವಿತೆಗಳು ಸಮಾಜ, ಸರ್ಕಾರದ ಓರೆಕೋರೆಗಳನ್ನು ಟೀಕಿಸಿದವು.

ಹಗಲುಗಳ್ಳರ ಮೊಹಲ್ಲುಗಳಿಗೆ
ರೈತರೆಲುಬಿನ ರಾಡು–ಸರಳುಗಳು
ಬಿಡಿಸಿದ ಬಣ್ಣಬಣ್ಣದ ಚಿತ್ತಾರ; ರೈತರೆಲ್ಲರ ನೆತ್ತರ
ನಮ್ಮ ರೈತರ ನರನಾಡಿಗಳು
ಒಲಿಯುವ ಎಳೆಗಳು ಅವರ ಮೂಟೆಗಳು
ರೈತ ಸುರಿಸಿದ ಬೆವರ ಹನಿಗಳು ಅವರ ಅನ್ನಕ್ಕೆ ತುಪ್ಪವೂ..

ಮುಂದುವರಿದು ಕವಿ ಗೊಂದೆಡಗಿ ವಾಚಿಸಿದ ‘ಹಗಲುಗಳ್ಳರು’ ಕವಿತೆ ನೆರೆದ ಸಭೀಕರ ಮೆಚ್ಚುಗೆಗೆ ಪಾತ್ರವಾಯಿತು. ದೈನೇಸಿ ಸ್ಥಿತಿಯತ್ತ ಹೊರಳುತ್ತಿರುವ ರೈತರ ಬದುಕನ್ನು ಮಾರ್ಮಿಕವಾಗಿ ಕವಿತೆಯ ಮೂಲಕ ಅವರು ಆಶಯ ನುಡಿ ಕಟ್ಟಿಕೊಟ್ಟರು.

ಕವಿ ಪಂಚಾಕ್ಷರಿ ಹಿರೇಮಠ ಅವರ,‘ಕಿಚ್ಚುಗತ್ತಿ ಮಾರಮ್ಮನ ಸನ್ನಿಧಾನದಲ್ಲಿ’ ಶೀರ್ಷಿಕೆಯ ಕವಿತೆ ವರ್ತಮಾನಕ್ಕೆ ಕನ್ನಡಿ ಹಿಡಿಯಿತು. ಪ್ರಸಾದವೇ ವಿಷವಾದರೆ ಯಾರನ್ನು ನಂಬುವುದು; ಕಾಪಾಡುವ ದೇವತೆಯೇ ಬಲಿ ಪಡೆದರೆ ಯಾರನ್ನು ಪೂಜಿಸುವುದು? ‘ಕಿಚ್ಚು–ರೊಚ್ಚು– ಕೊನೆಗೆ ಹುಚ್ಚು’ ಎನ್ನುವ ಕಾವ್ಯದ ಕೊನೆಯ ಸಾಲು ಜನರು ಕಳೆದುಕೊಳ್ಳುತ್ತಿರುವ ಮಾನಸಿಕ ಸ್ಥಿತಿಗತಿಯ ಅಧಃಪಥನದ ಪ್ರತಿಬಿಂಬದಂತಿತ್ತು.

ಮತ್ತೊಬ್ಬ ಕವಿ ಬಸವರಾಜ ಕಲೆಗಾರ,‘ಹನುಮಂತ ದೇವರಿಗೊಂದೆರಡು ಪ್ರಶ್ನೆಗಳು’ ಶೀರ್ಷಿಕೆಯ ಅವರ ಕವಿತೆ ಸಮಾಜದಲ್ಲಿನ ಅಸಮಾನತೆ ವಿರುದ್ಧ ಸಾತ್ವಿಕ ಸಿಟ್ಟಿನ ಮೂಟೆಯಂತಿತ್ತು. ಮೈಲಿಗೆ–ಮಡಿವಂತಿಕೆಯನ್ನು ಸೃಷ್ಟಿಸಿದ ದೇವರನ್ನು ತರಾಟೆಗೆ ತೆಗೆದುಕೊಂಡಿತು. ಬಾಲ್ಯದಲ್ಲಿ ಕವಿ ಅನುಭವಿಸಿದ ಮಡಿವಂತಿಕೆಯ ಚಾಟಿ ಏಟಿನ ನೋವು ಕಾವ್ಯದ ಸಾಲುಗಳಾಗಿ ಮೂಡಿದ್ದವು.

ಇದೇ ಮಾದರಿಯಲ್ಲಿ ಇನ್ನೊಬ್ಬ ಕವಿ ಡಾ.ಮರಿಯಪ್ಪ ನಾಟೀಕಾರ,‘ಸರಸ್ವತಿ ನನ್ನ ಹೆಂಡತಿಯಾಗು’ ಎಂದುಕವಿತೆ ವಾಚಿಸುವ ಮೂಲಕ ಶೋತ್ರುಗಳೂ ಸಹ ಹುಬ್ಬೇರುವಂತೆ ಮಾಡಿದರು. ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಕ್ಕೆ ಉನ್ನತ ಶಿಕ್ಷಣ ಗಗನಕುಸುಮ ಆಗುತ್ತಿರುವ ಹಿನ್ನೆಯಲ್ಲಿ ಕವಿತೆಯಲ್ಲಿ ಕವಿ ಬೇಸರತೋಡಿಕೊಂಡಂತಿತ್ತು. ಹಾಗಾಗಿ, ಸರಸ್ವತಿಯೇ ನೀನು ನನ್ನ ಮನದನ್ನೆ ಆಗಿ ಶೈಕ್ಷಣಿಕವಾಗಿ ನನ್ನ ಹಿಂದುಳಿದ ಸಮುದಾಯ ಉದ್ಧರಿಸು’ ಎನ್ನುವಂತೆ ಕವಿ ಮನವಿ ಮಾಡಿಕೊಂಡಂತಿತ್ತು.

ಕವಿಗಳಾದ ರಾಮಲಿಂಗಪ್ಪ –‘ರೈತ’, ಭೀಮರಾಯ ರಾಮಸಮುದ್ರ –‘ಅವನು ಬರಲೇ ಇಲ್ಲ’ ಶೀರ್ಷಿಕೆಯಡಿ ವಾಚಿಸಿದ ಕವಿತೆ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದವು. ಏನೆಲ್ಲಾ ಅನಾಚಾರಗಳು ಘಟಿಸುತ್ತಿದ್ದರೂ ಅವನು (ದೇವರು) ಬರಲೇ ಇಲ್ಲ ಎಂಬ ವಿಷಾದ ಮತ್ತು ಕಳವಳ ಕವಿತೆಯಲ್ಲಿ ತುಂಬಿತ್ತು.

ವಡಗೇರಾದ ನಿಂಗಪ್ಪ ಕೊಂಬೆನ ಅವರ ‘ನಮಗೂ ತಿಳಿದಿದೆ’ ಶೀರ್ಷಿಕೆಯ ಕವಿತೆ ಮಠಾಧೀಶ ಅನೈತಿಕತೆಯನ್ನು ಬಹಿರಂಗವಾಗಿಸಿತು. ತಿಳಿಗೇಡಿ ಗುರು ನೀನು ಎಚ್ಚರಿಕೆಯಿಂದ ಇರು. ನಿನ್ನ ಬಗ್ಗೆ ನಮನಗೂ ತಿಳಿದಿದೆ. ಮಟ್ಕಾ ನಂಬರ್‌ ಹೇಳುವ ತಿಳಿಗೇಡಿ ಗುರುವನ್ನು ನಂಬಿದಿರಿ. ದುಡಿಮೆಯೇ ದೇವರು ಎನ್ನಿರಿ ಎಂಬುದಾಗಿ ಕವಿತೆ ಅರ್ಥೈಸಿತು.

ಕವಯತ್ರಿ ಮಹಾಲಕ್ಷ್ಮಿ ಹಿರೇಮಠ ವಾಚಿಸಿದ ‘ಮೌನದ ಹಿಂದಿನ ಅರ್ಥ’ ಪುರುಷ ಸಮಾಜಕ್ಕೆ ಎಚ್ಚರಿಕೆಯ ಗಂಟೆಯಂತಿತ್ತು. ಮೌನದ ಹಿಂದಿನ ಅರ್ಥ ನಾನು ಅಬಲೆಯಲ್ಲ, ಸಹನೆ. ಹೆಣ್ಣು ನಿನ್ನ ಸೂತ್ರಧಾರಿಯಲ್ಲ. ಮತ್ತೆಮತ್ತೆ ಕೆಣಕಿದರೆ ನಾನು ಪಂಜರದ ಗಿಣಿಯಲ್ಲ; ರಣರಾಗಿಣಿ ಎಂಬುದಾಗಿ ಎಚ್ಚರಿಸಿತು.

ಅದೇ ರೀತಿಯಲ್ಲಿ ಶರಣ ಸಜ್ಜನ–ಜನಪ್ರತಿನಿಧಿ, ಮಡಿವಾಳಪ್ಪಗೌಡ –ಕೋರಿಕೆ, ವೀರಣ್ಣ ಕಲಕೇರಿ– ವಚನ, ಸಾಹೇಬಗೌಡ ಬಿರಾದಾರ–ತತ್ವಪದ, ದೇವಪ್ಪ ಭಂಡಾರಿ– ಸ್ವಾತಂತ್ರ್ಯ, ಅರುಣ–ಅವ್ವ ಶೀರ್ಷಿಕೆಯ ಕವಿತೆಗಳನ್ನು ವಾಚಿಸಿದರು.

ಕವಿಗೋಷ್ಠಿಯಲ್ಲಿ ಎಲ್ಲ ಕವಿತೆಗಳು ವೈಚಾರಿಕತೆಯ ನೆಲೆಯನ್ನು ಒಳಗೊಂಡಿದ್ದರಿಂದ ಅರ್ಥಪೂರ್ಣ ಅನ್ನಿಸಿದವು. ಕವಿಗಳು ಕವನ ವಾಚಿಸುತ್ತಿದ್ದರೆ ಶೋತ್ರಗಳು ವ್ಹಾ..ವ್ಹಾ.. ಎಂದು ಚಪ್ಪಾಳೆ ತಟ್ಟಿ ಕಾವ್ಯದ ಸವಿ ಸವೆಯುತ್ತಿದ್ದ ದೃಶ್ಯ ಕಂಡಬಂತು.

ಕವಿ ಡಾ.ಅಬ್ದುಲ್‌ ಕರೀಂ ಕನ್ಯೆಕೋಳೂರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಕವಿತೆ ವಾಚಿಸಿದ ಕವಿವರೇಣ್ಯರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೆನಪಿನ ಕಾಣಿಕೆ ನೀಡಿ ಸಮ್ಮಾನಿಸಿತು. ಯುವ ಲೇಖಕ ಬಸವರಾಜ ಸಿನ್ನೂರ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT