ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲಾಖೆಗೆ ನಿಗದಿ ಪಡಿಸಿದ ಗುರಿ ತಲುಪಿ: ಕೋಟ ಶ್ರೀನಿವಾಸ ಪೂಜಾರಿ

ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನೆ ಸಭೆ
Last Updated 28 ಸೆಪ್ಟೆಂಬರ್ 2021, 3:20 IST
ಅಕ್ಷರ ಗಾತ್ರ

ಯಾದಗಿರಿ: ಸಮಾಜ ಕಲ್ಯಾಣ ಇಲಾಖೆಯ ಕಾಮಗಾರಿಗಳು ವಿಳಂಬ ಆಗಬಾರದು. ಅಧಿಕಾರಿಗಳು ತಮ್ಮ ಇಲಾಖೆಗೆ ನಿಗದಿ ಪಡಿಸಿರುವ ಗುರಿಯನ್ನು ತಲುಪಬೇಕು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಜಿ.ಪಂ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಸಮಾಜ ಕಲ್ಯಾಣ ಇಲಾಖೆ ಕಾರ್ಯಕ್ರಮಗಳು ಹಾಗೂ ಎಸ್‍ಸಿಪಿ, ಟಿಎಸ್‍ಪಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳು ಹೇಗೆ ಇದ್ದಾರೆ ಎನ್ನುವ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಇಲಾಖೆ ಇರುವುದೇ ನ್ಯಾಯ ಕೊಡಿಸುವುದಕ್ಕಾಗಿ. ಹೀಗಾಗಿ ಇತ್ತ ಗಮನಹರಿಸಬೇಕು ಎಂದು ಸಚಿವರು ಸೂಚಿಸಿದರು.

ಈ ವೇಳೆ ಶಾಸಕ ವೆಂಕಟರೆಡ್ಡಿ ಮುದ್ನಾಳ ಮಾತನಾಡಿ, ಅಧಿಕಾರಿಗಳು ತಮ್ಮ ಇಲಾಖೆ ಬಗ್ಗೆ ಸರಿಯಾದ ಮಾಹಿತಿ ತಿಳಿಸಬೇಕು. ನಾನು ಈ ಬಗ್ಗೆ ವಿಚಾರಿಸಿದರೂ ಸರಿಯಾದ ಮಾಹಿತಿ ನೀಡುವುದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದರು.

ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಬಾರದು, ಜಿಲ್ಲಾ ಮಟ್ಟದಲ್ಲಿ ನಡೆಯುವ ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಬೇಕು ಎಂದು ಶಾಸಕರು ತಿಳಿಸಿದರು.

ಈ ವೇಳೆ ಮಾತನಾಡಿದ ಸಚಿವರು, ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ವಿಫಲರಾಗಿದ್ದೀರಿ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಪರಿಶಿಷ್ಟ ಜಾತಿ, ಪಂಗಡದವರು ವಕೀಲ ವೃತ್ತಿ ಕೈಗೊಳ್ಳಲು ಪ್ರೋತ್ಸಾಹ ಧನ ಮಂಜೂರು ಮಾಡಬೇಕು. ಅರ್ಜಿ ಆಹ್ವಾನಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಕೆಲ ಕಡೆ ವಸತಿ ನಿಲಯಗಳನ್ನು ಇನ್ನೂ ನಿರ್ಮಾಣ ಮಾಡದ ಕುರಿತು ನಿರ್ಮಿತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು ಶೀಘ್ರ ಕಾಮಗಾರಿ ಮುಗಿಸುವಂತೆ ಸೂಚಿಸಿದರು.

ಅಧಿಕಾರಿಗಳು ಸಭೆಗೆ ಬರುವ ಮುನ್ನ ಗುರಿ, ಎಷ್ಟು ಜನರಿಗೆ ಸೌಲಭ್ಯ ತಲುಪಿದೆ ಎನ್ನುವುದರ ಕುರಿತು ತಿಳಿದುಕೊಂಡು ಬರಬೇಕು. ಕೃಷಿ, ರೇಷ್ಮೆ, ತೋಟಗಾರಿಕೆ ಇನ್ನಿತರ ಇಲಾಖೆಗಳವರು ಸೂಕ್ತ ಮಾಹಿತಿ ನೀಡಬೇಕು ಎಂದರು.

ವಿದ್ಯಾರ್ಥಿ ವೇತನಗಳಿಗೆ ಸಂಬಂಧಿಸಿದಂತೆ ಆಧಾರ್ ಜೋಡಣೆಯಲ್ಲಿ ಕೆಲವು ನ್ಯೂನತೆಗಳಿದ್ದು, ಇವುಗಳನ್ನು ಪರಿಹರಿಸಿ ಪ್ರತಿಯೊಬ್ಬ ವಿದ್ಯಾರ್ಥಿಗೂ ವಿದ್ಯಾರ್ಥಿವೇತನ ನೀಡಬೇಕು ಎಂದು ನಿರ್ದೇಶನ ನೀಡಿದರು.

ದೌರ್ಜನ್ಯಕೊಳ್ಳಗಾದ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ರಕ್ಷಣೆ ನೀಡುವುದು ಮತ್ತು ತ್ವರಿತಗತಿಯಲ್ಲಿ ಪರಿಹಾರ ನೀಡಲು ಹಾಗೂ ನ್ಯಾಯ ದೊರಕಿಸಲು ವಿಳಂಬ ನೀತಿ ಅನುಸರಿಸದಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ದೇವದಾಸಿಯರಿಗೆ ಮಾಸಾಶನ, ವಸತಿರಹಿತ ಅಲೆಮಾರಿ ಕುಟುಂಬಗಳಿಗೆ ವಸತಿ ಒದಗಿಸುವುದು ಹಾಗೂ ನೇರ ಸಾಲ ನೀಡುವುದರ ಪ್ರಗತಿಯ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿ ಮಾಹಿತಿ ಪಡೆದರು.

ಶಾಸಕ ವೆಂಕಟರೆಡ್ಡಿ ಮುದ್ನಾಳ ಮಾತನಾಡಿ, ವಿವಿಧ ನಿಗಮಗಳಡಿಯಲ್ಲಿ ಫಲಾನುಭವಿಗಳಿಗೆ ನೀಡುವ ನೇರಸಾಲದಲ್ಲಿ ಬ್ಯಾಂಕ್‍ಗಳು ಆದ್ಯತೆ ನೀಡುತ್ತಿಲ್ಲ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬ್ಯಾಂಕ್‍ಗಳು ಸಾಲ ನೀಡುವ ವಿಧಾನ ಮತ್ತು ಇನ್ನಿತರ ಕುರಿತು ವಿಚಾರಗೋಷ್ಠಿಗಳನ್ನು ಆಯೋಜಿಸುವಂತೆ ಸಲಹೆ ನೀಡಿದರು.

ಎಸ್ಸಿ, ಎಸ್ಟಿ ಜನರನ್ನು ಮುನ್ನೆಲೆಗೆ ತಂದು ಉತ್ತಮ ಜೀವನ ನಡೆಸಲು ಸಹಾಯ ಮಾಡುವುದು, ರಕ್ಷಣೆ ನೀಡುವುದು, ಮಾರ್ಗದರ್ಶನ ನೀಡುವುದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಕಾರ್ಯವಾಗಿದೆ ಎಂದು ತಿಳಿಸಿದರು.

ಕೃಷಿ ಇಲಾಖೆ, ಅರಣ್ಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಗಳಲ್ಲಿ ಎಸ್‍ಸಿಪಿ, ಟಿಎಸ್‍ಪಿ ಯೋಜನೆಯಡಿಯಲ್ಲಿ ಹನಿ ನೀರಾವರಿ ಪದ್ಧತಿ, ಆದಾಯ ತರುವ ಬೆಳೆಗಳಾದ ಶ್ರೀಗಂಧ, ಡ್ಯ್ರಾಗನ್, ಪಪ್ಪಾಯ ಬೆಳೆದು ಸಣ್ಣ ಅತಿ ಸಣ್ಣ ರೈತರು ಉತ್ತಮ ವರಮಾನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಾಲು ಉತ್ಪಾದನೆಗೆ ಪ್ರೊತ್ಸಾಹಧನ, ಮೀನು ಸಾಗಾಣಿಕೆಗೆ, ಕುರಿ ಸಾಗಾಣಿಕೆಗೆ ಸಹಾಯಧನಗಳು, ಭೂ ಒಡೆತನ ನೇರಸಾಲ ಸೇರಿದಂತೆ ಇನ್ನಿತರ ಇಲಾಖೆಯ ಪ್ರಗತಿಯನ್ನು ಸಚಿವರು ಪರಿಶೀಲಿಸಿದರು.

ಎಸ್‍ಸಿಪಿ, ಟಿಎಸ್‍ಪಿಯ ಯೋಜನೆಯ ಸರ್ಕಾರದ ಸಲಹೆಗಾರ ವೆಂಕಟಯ್ಯ ಮಾತನಾಡಿ, ಸಭೆಗೆ ವರದಿ ತಯಾರಿಸುವಾಗ ಕೇವಲ ಜಿಲ್ಲೆಯ ಪ್ರಗತಿಯೊಂದಿಗೆ ವರದಿ ಸಿದ್ಧಪಡಿಸಬೇಕು ಎಂದು ಸಲಹೆ ನೀಡಿದರು.

ವಿವಿಧ ಇಲಾಖೆಗಳ ಎಸ್‍ಸಿಪಿ, ಟಿಎಸ್‍ಪಿಯ ಯೋಜನೆಗಳಿಗೆ ಪಲಾನುಭವಿಗಳಿಗೆ ವೃಥಾ ಅಲೆದಾಡಿಸಿದೆ, ತ್ವರಿತವಾಗಿ ಯೋಜನೆಯನ್ನು ತಲುಪಿಸಬೇಕು. ಕಲ್ಯಾಣ ಕರ್ನಾಟಕ ಮಂಡಳಿಯ ಎಸ್‍ಸಿಪಿ ಯೋಜನೆಗಳ ಕ್ರಿಯಾ ಯೋಜನೆ ಕೂಡಲೇ ತಯಾರಿಸಲು ಸಚಿವರು ಸೂಚಿಸಿದರು.

ಸ್ವಚ್ಛ ಭಾರತ್ ಅಭಿಯಾನದಲ್ಲಿ ಭಾಗವಹಿಸಿ: ಅಕ್ಟೋಬರ್ 2 ರಂದು ಇಲಾಖೆಯ ಅಧೀನದ ರಾಜ್ಯದ 2,400 ವಿದ್ಯಾರ್ಥಿ ನಿಲಯಗಳಲ್ಲಿ ಮತ್ತು ಶಾಲೆಗಳಲ್ಲಿ ಸ್ವಚ್ಛ ಭಾರತ್ ಅಭಿಯಾನ ಹಮ್ಮಿಕೊಂಡಿದ್ದು, ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮ ಯಶ್ವಸಿಗೊಳಿಸುವಂತೆ ತಿಳಿಸಿದರು.

ಈ ವೇಳೆ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಚಂಡರಕಿ, ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ, ಸಮಾಜ ಕಲ್ಯಾಣ ಇಲಾಖೆಯ ಎಸ್‍ಸಿಪಿ, ಟಿಎಸ್‍ಪಿಯ ಯೋಜನೆ ವಿಭಾಗದ ನಿರ್ದೇಶಕಿ ಊರ್ಮಿಳಾ, ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್, ಜಿ.ಪಂ ಸಿಇಒ ಶಿಲ್ಪಾ ಶರ್ಮಾ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಉಪವಿಭಾಗಾಧಿಕಾರಿ ಪ್ರಶಾಂತ ಹನಗಂಡಿ,ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚನ್ನಬಸವ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT