ತಾಂಡಾಗಳಲ್ಲಿ ಹೆಚ್ಚಿದ ಕಳ್ಳಬಟ್ಟಿ ದಂಧೆ

7
ಜಿಲ್ಲಾ ಪಂಚಾಯಿತಿ ವಿವಿಧ ಇಲಾಖೆ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗಂಭೀರ ಚರ್ಚೆ

ತಾಂಡಾಗಳಲ್ಲಿ ಹೆಚ್ಚಿದ ಕಳ್ಳಬಟ್ಟಿ ದಂಧೆ

Published:
Updated:
Prajavani

ಯಾದಗಿರಿ: ‘ಕಳ್ಳಬಟ್ಟಿ ದಂಧೆ ಜಿಲ್ಲೆಯಲ್ಲಿನ ತಾಂಡಾಗಳಲ್ಲಿ ಅವ್ಯಾಹತವಾಗಿದ್ದರೂ, ಅಬಕಾರಿ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಕೂಲಿಕಾರರು, ಬಡವರು ಕಳ್ಳಬಟ್ಟಿಗೆ ಬಲಿಯಾಗಿ ಭವಿಷ್ಯ ಕಳೆದುಕೊಳ್ಳುತ್ತಿದ್ದಾರೆ. ಇದು ಜಿಲ್ಲೆಯ ದುರಂತವಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕಿಶನ್ ರಾಠೋಡ ಶುಕ್ರವಾರ ನಡೆದ ಕೆಡಿಪಿ ಸಭೆಯ ಗಮನ ಸೆಳೆದರು.

‘ಲಂಬಾಣಿ ಸಮುದಾಯದಲ್ಲಿ ಹೆಚ್ಚು ಅನಕ್ಷರಸ್ಥರಿದ್ದಾರೆ. ವಲಸೆ ಹೋಗುವವರ ಸಂಖ್ಯೆ ಹೆಚ್ಚಿದೆ. ಹಾಗಾಗಿ, ತಾಂಡಾಗಳು ಕಳ್ಳಬಟ್ಟಿ ಮಾರಾಟ ಮಾಡುವ ತಾಣಗಳಾಗಿ ಮಾರ್ಪಡುತ್ತಿದೆ. ಬಹಿರಂಗವಾಗಿಯೇ ಈ ದಂಧೆ ನಡೆದಿದ್ದರೂ, ಇದರ ನಿಯಂತ್ರಣಕ್ಕೆ ಸಂಬಂಧಿಸಿದ ಅಧಿಕಾರಿಗಳು ಮುಂದಾಗಿಲ್ಲ’ ಎಂದು ಆರೋಪಿಸಿದರು.

‘ಅಕ್ರಮ ಮದ್ಯ ಮಾರಾಟ, ಕಳ್ಳಬಟ್ಟಿ ಅಡ್ಡೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ನಿಯಂತ್ರಿಸಿದ ಬಗ್ಗೆ ಇದುವರೆಗೂ ಯಾವ ಮಾಧ್ಯಮಗಳಲ್ಲೂ ವರದಿಯಾಗಿಲ್ಲ. ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ನಗರ ಪ್ರದೇಶಗಳಲ್ಲಿ ಒಂದಿಬ್ಬರು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ ಕಡತ ರೂಪಿಸುವ ಕೆಲಸ ಅಧಿಕಾರಿಗಳಿದ ಆಗಬಾರದು. ಅಂತಹ ಅಧಿಕಾರಿಗಳಿಂ ಸಮಾಜ ಏನು ನಿರೀಕ್ಷಿಸಲು ಸಾಧ್ಯವಿಲ್ಲ’ ಎಂದು ಅಬಕಾರಿ ಇಲಾಖೆ ಅಧಿಕಾರಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.

ಅಬಕಾರಿ ಉಪ ಆಯುಕ್ತ ಜಿ.ಪಿ.ನರೇಂದ್ರಕುಮಾರ್ ಮಾತನಾಡಿ, ಅಕ್ರಮ ಮದ್ಯ ಮಾರಾಟ ತಡೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಕಳೆದ ವರ್ಷದ ಏಪ್ರಿಲ್‌ನಿಂದ ಡಿಸೆಂಬರ್ ವರೆಗೆ ಒಟ್ಟು 481 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, ₹16.46 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಇದರಲ್ಲಿ ಕಳೆದ ಡಿಸೆಂಬರ್‌ನಲ್ಲಿ ಒಟ್ಟು54 ಪ್ರಕರಣ ದಾಖಲಾಗಿದ್ದು, ₹2.34 ಲಕ್ಷ ದಂಡ ವಸೂಲಿ ಮಾಡಲಾಗಿದೆ’ ಎಂದು ಸಭೆಗೆ ವಿವರಿಸಿದರು.

‘ಸರ್ಕಾರದ ಯೋಜನೆಗಳ ಲಾಭ ಅರ್ಹರಿಗೆ ಮುಟ್ಟುತ್ತಿಲ್ಲ. ಇದರಿಂದ ಸರ್ಕಾರದ ಉದ್ದೇಶ ಈಡೇರುತ್ತಿಲ್ಲ. ಅಧಿಕಾರಿಗಳು ಸರ್ಕಾರ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವಲ್ಲಿ ಕರ್ತವ್ಯ ಬದ್ಧತೆ ತೋರಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

‘ಪ್ರಭಾವ ಕಾರಣಗಳಿಂದ ಸರ್ಕಾರದ ಯೋಜನೆಗಳನ್ನು ಒಂದೇ ಕುಟುಂಬದ ಫಲಾನುಭವಿಗಳಿಗೆ ಸಿಗಬಾರದು. ಇದರಿಂದ ಯೋಜನೆಯ ಉದ್ದೇಶ ವಿಫಲವಾಗುತ್ತದೆ. ಸರ್ಕಾರದಿಂದ ಸೌಲಭ್ಯ ಸಿಗುತ್ತದೆ ಎಂದು ತಿಳಿದರೆ ಪ್ರತಿಯೊಬ್ಬರೂ ಮುಂದೆ ಬರುತ್ತಾರೆ. ಅರ್ಹರು ಸಿಕ್ಕಿಲ್ಲ ಎಂದು ಅನರ್ಹರನ್ನು ಆಯ್ಕೆ ಮಾಡಬಾರದು. ಯೋಜನೆಗಳ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಒದಗಿಸಬೇಕು’ ಎಂದು ಸೂಚಿಸಿದರು.

‘ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಲೋಕೋಪಯೋಗಿ ಇಲಾಖೆ ನಿರ್ಮಿಸಿದ್ದ ರಸ್ತೆಗಳು ಹದಗೆಟ್ಟಿವೆ. ಕೆಲ ರಸ್ತೆ ಕಾಮಗಾರಿಗಳು ಪೂರ್ಣಗೊಂಡಿಲ್ಲ. ರಸ್ತೆಗಳ ದುರಸ್ತಿ ಮತ್ತು ವಿಸ್ತರಣೆಯಿಂದ ಗ್ರಾಮೀಣ ಜನರ ಪ್ರಗತಿ ಸಾಧ್ಯವಾಗುತ್ತದೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಕಾಮಗಾರಿಗಳನ್ನು ಫೆಬ್ರುವರಿಯೊಳಗೆ ಪೂರ್ಣಗೊಳಿಸಬೇಕು’ ಎಂದು ಗಡುವು ನೀಡಿದರು.

‘ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇದೆ. ಜನರು ಕುಡಿಯುವ ನೀರಿನ ತೊಂದರೆ ಅನುಭವಿಸಬಾರದು. ಅಗತ ಇದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಎಂಜಿನಿಯರ್ ರಾಜ್‌ಕುಮಾರ್‌ ಅವರಿಗೆ ಸೂಚಿಸಲಾಯಿತು.

‘ವಿವಿಧ ಇಲಾಖೆಗಳು ಕೈಗೊಂಡ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಒಂದು ವೇಳೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದೆ ಇದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕವಿತಾ ಎಸ್.ಮನ್ನಿಕೇರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ದೊರೆಯದ ಅನ್ನಭಾಗ್ಯ:
ಬಿಪಿಎಲ್ ಕುಟುಂಬಗಳಿಗೆ ಕೆಲವು ಹಳ್ಳಿಗಳಲ್ಲಿ ನಿಗದಿಗಿಂತ ಕಡಿಮೆ ಪಡಿತರ ಅಕ್ಕಿ ಪೂರೈಕೆ ಮಾಡಲಾಗುತ್ತಿದೆ. ಈ ಬಗ್ಗೆ ಹಲವು ದೂರುಗಳು ಬರುತ್ತಿದ್ದು, ಬಡವರು ಅನ್ನಭಾಗ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕಿಶನ್ ರಾಠೋಡ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಭಾರಿ ಉಪನಿರ್ದೇಶಕ ವಿಶ್ವನಾಥ ಮಲಕೂಡ ಅವರನ್ನು ತರಾಟೆಗೆ ತೆಗೆದುಕೊಂಡರು.

ಲಾಭಕ್ಕಾಗಿ ಸರ್ಕಾರದಿಂದ ಸರಬರಾಜಾಗುವ ಅಕ್ಕಿ ಮತ್ತು ತೊಗರಿ ಬೇಳೆ ಜತೆಗೆ ಖಾಸಗಿ ಸಾಬೂನು, ಚಹಾಪುಡಿ ಮುಂತಾದ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಅಲ್ಲದೆ, ಅನರ್ಹರು ಕೂಡ ಬಿಪಿಎಲ್ ಪಡಿತರ ಚೀಟಿ ಪಡೆದಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.

ಶೇ.81ರಷ್ಟು ಮಳೆ ಕೊರತೆ:
ಜಿಲ್ಲೆಯ ಹಿಂಗಾರು ಹಂಗಾಮಿನ ವಾಡಿಕೆ ಮಳೆ 150 ಮಿಲಿ ಮೀಟರ್ಇದ್ದು, ಅದರಲ್ಲಿ 29 ಮಿಲಿ ಮೀಟರ್ ಮಾತ್ರ ಮಳೆಯಾಗಿದೆ. ಶೇ.81ರಷ್ಟು ಮಳೆ ಕೊರತೆ ಇದೆ ಎಂದು ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಸಭೆಗೆ ಮಾಹಿತಿ ನೀಡಿದರು.

‘ಜೋಳ ಬೆಳೆಯು ಹಾಲುಗಾಳು ಹಂತ, ಕಡಲೆ ಬೆಳೆ ಕಾಯಿ ಮಾಗುವ ಹಂತ, ಶೇಂಗಾ ಬೆಳೆ ಬೆಳವಣಿಗೆ ಹಂತದಲ್ಲಿವೆ. ಅವು ಕೂಡ ಮಳೆ ಕೊರತೆಯಿಂದ ಬಾಡುತ್ತಿವೆ. ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಂದ ಜಂಟಿ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ’ ಎಂದು ವಿವರಿಸಿದರು.

ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಘವೇಂದ್ರ ಮಾತನಾಡಿ,‘ ವಿವಿಧ ಅಭಿವೃದ್ಧಿ ನಿಗಮಗಳ ಗಂಗಾಕಲ್ಯಾಣ ಯೋಜನೆಯ ಬೋರ್‌ವೆಲ್‌ಗಳಿಗೆ ವಿದ್ಯುತ್ ಸಂಪರ್ಕ ನೀಡುವ ವಾರ್ಷಿಕ ಗುರಿ 951 ಇದ್ದು, ಅದರಲ್ಲಿ ಈಗಾಗಲೇ 635 ಬೋರ್‌ವೆಲ್‌ಗಳಿಗೆ ವಿದ್ಯುತ್ ಸಂಪರ್ಕ ಕೊಡಲಾಗಿದೆ’ ಎಂದು ತಿಳಿಸಿದರು.

‘ನಿರ್ಮಿತಿ ಕೇಂದ್ರದಿಂದ ಕೈಗೊಂಡಿರುವ ಒಟ್ಟು 74 ಕಾಮಗಾರಿಗಳಲ್ಲಿ 41 ಪೂರ್ಣಗೊಂಡಿವೆ. 30 ಕಾಮಗಾರಿಗಳು ಪ್ರಗತಿಯಲ್ಲಿದ್ದು, ವಿವಿಧ ಕಾರಣಗಳಿಂದಾಗಿ ಉಳಿದ ಮೂರು ಕಾಮಗಾರಿಗಳು ಆರಂಭವಾಗಿಲ್ಲ ’ಎಂದು ನಿರ್ಮಿತಿ ಕೇಂದ್ರದ ಎಂಜಿನಿಯರ್ ಕಿರಣ್ ವರದಿ ಒಪ್ಪಿಸಿದರು.

ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿಯ ಅಧ್ಯಕ್ಷೆ ಸರಸ್ವತಿ ಶುಭಾಷ್‌ಶ್ಚಂದ್ರ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಸಂತ ವಿ.ಕುಲಕರ್ಣಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

**
ಜ.15ರಿಂದ ತೊಗರಿ ಖರೀದಿ ಆರಂಭ

‘ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಒಟ್ಟು 32 ತೊಗರಿ ಖರೀದಿ ಕೇಂದ್ರಗಳಲ್ಲಿ ಜ.14ರವರೆಗೆ ರೈತರ ನೋಂದಣಿಗೆ ಅವಕಾಶ ನೀಡಲಾಗಿದೆ. ಜ.15ರಿಂದ ನೋಂದಾಯಿತ ರೈತರಿಂದ ತೊಗರಿ ಖರೀದಿ ಆರಂಭವಾಗಲಿದೆ’ ಎಂದು ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ಭೀಮರಾಯ ತಿಳಿಸಿದರು.

‘2018–19ನೇ ಸಾಲಿನಲ್ಲಿ ಎಫ್ಎಕ್ಯೂ ಗುಣಮಟ್ಟದ ತೊಗರಿಯನ್ನು ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಎಫ್‌ಪಿಒಗಳ ಮೂಲಕ ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದೆ. ಪ್ರತಿ ಕ್ವಿಂಟಲ್ ತೊಗರಿಗೆ ಕೇಂದ್ರ ಸರ್ಕಾರದ ಬೆಂಬಲ ಬೆಲೆ ₹5,675 ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹ ಧನ ₹425 ಗಳಂತೆ ಒಟ್ಟು ₹6,100 ನಿಗದಿಪಡಿಸಲಾಗಿದೆ’ ಎಂದು ತಿಳಿಸಿದರು.

‘ತೊಗರಿ ಖರೀದಿಗೆ 6 ಲಕ್ಷ ಚೀಲಗಳ ಸಂಗ್ರಹ ಇಟ್ಟುಕೊಳ್ಳುವಂತೆ ಮಾರ್ಕ್ ಫೆಡರೇಷನ್ ಅವರಿಗೆ ತಿಳಿಸಲಾಗಿದೆ. ಸದ್ಯ 3 ಲಕ್ಷ ಚೀಲಗಳು ಲಭ್ಯ ಇರುವುದಾಗಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಅನಧಿಕೃತ ಹತ್ತಿ ಖರೀದಿ ಕೇಂದ್ರಗಳನ್ನು ನಿಯಂತ್ರಿಸಲು ತಂಡ ರಚಿಸಲಾಗಿದೆ. ಇದುವರೆಗೂ 15ಅನಧಿಕೃತ ಕೇಂದ್ರಗಳನ್ನು ತೆರವುಗೊಳಿಸಲಾಗಿದೆ. ಅಲ್ಲದೇ ₹10 ಲಕ್ಷ ದಂಡ ವಸೂಲಿ ಮಾಡಲಾಗಿದೆ’ ಎಂದು ಭೀಮರಾಯ ಸಭೆಗೆ ವಿವರಿಸಿದರು.

**
ಗೈರಾದವರಿಗೆ ನೋಟಿಸ್

ಪ್ರಗತಿ ಪರಿಶೀಲನಾ ಸಭೆಗೆ ಪ್ರತಿನಿಧಿಗಳನ್ನು ಕಳುಹಿಸಿದರೆ ಯೋಜನೆಗಳ ಅನುಷ್ಠಾನಕ್ಕೆ ತೊಂದರೆಯಾಗುತ್ತದೆ. ಆದ್ದರಿಂದ ಅಧಿಕಾರಿಗಳು ಖುದ್ದಾಗಿ ಸಭೆಗೆ ಹಾಜರಾಗಬೇಕು. ಸಭೆಗೆ ಗೈರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಅಧ್ಯಕ್ಷ ರಾಜಶೇಖರ್‌ಗೌಡ ಪಾಟೀಲ ಸಿಇಗೆ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !