ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತೀಯತೆ ವಿರುದ್ಧ ಸಿಡಿದೆದ್ದಿದ್ದ ಕೆಂಭಾವಿಯ ಭೋಗಣ್ಣ

ಬಸವಪೂರ್ವ ಯುಗದಲ್ಲಿಯೇ ಸಮ ಸಮಾಜದ ಕನಸು ಕಂಡಿದ್ದ ವಚನಕಾರ
Last Updated 27 ಸೆಪ್ಟೆಂಬರ್ 2020, 2:03 IST
ಅಕ್ಷರ ಗಾತ್ರ

ಕೆಂಭಾವಿ: ಶಿವಶರಣರು ದಲಿತನಿಗೆ ತನ್ನ ಮನೆಯಲ್ಲಿ ಕರೆದು ನೀರು ಕೊಟ್ಟು ಸತ್ಕರಿಸಿದ್ದಕ್ಕಾಗಿ ರಾಜಾಜ್ಞೆಯಂತೆ ಗಡಿಪಾರು ಶಿಕ್ಷೆಗೆ ಒಳಗಾಗಿ ಪಟ್ಟಣವನ್ನು ತೊರೆದಾಗ ಸಾಕ್ಷಾತ್ ಶಿವನೇ ಪಟ್ಟಣದ ಗುಡಿಯೊಳಗಿನ ಲಿಂಗರೂಪದಲ್ಲಿ ಆ ಶಿವಶರಣನ ಬೆನ್ನು ಹತ್ತಿ ಹೋದ ಇತಿಹಾಸ ಬಸವಪೂರ್ವ ಯುಗ 11ನೇ ಶತನಮಾದಲ್ಲಿ ಕಾಣಬಹುದು.

ಆ ಮಹಾನ್ ಶಿವಶರಣನೇ ಆದ್ಯ ವಚನಕಾರ ಕೆಂಭಾವಿಯ ಭೋಗಣ್ಣ. ಕಲ್ಯಾಣಿ ಚಾಲುಕ್ಯರ ಆಡಳಿತಾವಧಿಯಲ್ಲಿ ಸಾಮಂತ ಅರಸ ಚಂದಿಮರಸನ ರಾಜಧಾನಿಯಾಗಿದ್ದ ಕೆಂಭಾವಿ ಪಟ್ಟಣವು ಅಗ್ರಹಾರ (ವಿದ್ಯಾಕೇಂದ್ರ)ವೂ ಆಗಿತ್ತು

ಶೈವ ಬ್ರಾಹ್ಮಣನಾದ ಭೋಗಣ್ಣನು ಚಾಂದಿಮರಸನ ಆಸ್ಥಾನ ಪಂಡಿತನಾಗಿದ್ದ ಎಂದು ಹೇಳಲಾ ಗುತ್ತದೆ. ಅದೊಂದು ದಿನ ದಲಿತನೊಬ್ಬ ಭೋಗಣ್ಣನ ಮನೆಯ ಮುಂದೆ ಹಾದು ಹೋಗುತ್ತಿದ್ದಾಗ ನೀರು ಕೇಳು ತ್ತಾನೆ. ಶರಣ ಭೋಗಣ್ಣ ಆತನನ್ನು ಮನೆಯೊಳಗೆ ಕರೆದು, ನೀರು ಕೊಟ್ಟು ಸತ್ಕರಿಸುತ್ತಾನೆ.

ಇದನ್ನು ತಿಳಿದ ಆಸ್ಥಾನದ ಪಂಡಿತರು ರಾಜಾ ಚಂದಿಮರಸನಿಗೆ ದೂರು ಕೊಟ್ಟು ಭೋಗಣ್ಣನನ್ನು ಗಡಿಪಾರು ಮಾಡುವಂತೆ ಒತ್ತಾಯಿಸುತ್ತಾರೆ. ಧರ್ಮವಿರೋಧಿ ಆರೋಪದ ಮೇಲೆಭೋಗಣ್ಣನನ್ನು ರಾಜ್ಯದಿಂದ ಗಡಿಪಾರು ಮಾಡಲಾಗುತ್ತದೆ.

ರಾಜನ ಆಜ್ಞೆಯಂತೆ ಹೊರನಡೆದ ಶಿವಶರಣ ಭೋಗಣ್ಣನ ಹಿಂದೆ ಶಿವಭಕ್ತನೇ ಇಲ್ಲದ ಮೇಲೆ ನಾನೇಕೆ ಇಲ್ಲಿ ಇರುವುದು ಎಂದು ಸಾಕ್ಷಾತ್ ಶಿವನ ಸ್ವರೂಪಿ ದೇವಾಲಯದ ಲಿಂಗಗಳೂ ಹೊರಟು ಹೋಗುತ್ತವೆ. ತಕ್ಷಣ ಕ್ಷಾಮ ತಲೆದೋರಿ ಪ್ರಜೆಗಳು ಅನಾರೋಗ್ಯಕ್ಕೆ ಒಳಗಾಗುತ್ತಾರೆ.

ಶಿವಭಕ್ತನನ್ನು ಗಡಿಪಾರು ಮಾಡಿರುವುದಕ್ಕಾಗಿಯೇ ಈ ಸಮಸ್ಯೆ ಎಂದು ತಪ್ಪಿನ ಅರಿವಾಗಿ ರಾಜಾ ಚಂದಿಮರಸ ಶರಣ ಭೋಗಣ್ಣನಿಗೆ ಪಟ್ಟಣಕ್ಕೆ ಮರಳುವಂತೆ ಮನವಿ ಮಾಡಿ ಕೊಳ್ಳಲಾಗಿ, ಭೋಗಣ್ಣ ಮರಳುತ್ತಿದ್ದಂತೆ ಆತನ ಹಿಂದೆ ಹೋದ ಎಲ್ಲಾ ಲಿಂಗಳು ಕೂಡ ಮರಳಿ ತಮ್ಮ ತಮ್ಮ ಸ್ಥಾನಕ್ಕೆ ಸೇರುವ ಧಾವಂತದಲ್ಲಿ ಅವಸರಿಸಿ ಸ್ಥಾನ ಪಲ್ಲಟಗೊಳ್ಳುತ್ತವೆ ಎಂಬ ಐತಿಹ್ಯ ಇದೆ.

ಇಂದಿಗೂ ಪಟ್ಟಣದಲ್ಲಿ ದೊಡ್ಡ ಪಾಣಿ ಪೀಠದ ಮೇಲೆ ಸಣ್ಣ ಲಿಂಗ, ಸಣ್ಣ ಪಾಣಿ ಪೀಠದ ಮೇಲೆ ದೊಡ್ಡ ಲಿಂಗ ಇರುವುದನ್ನು ಪಟ್ಟಣ ಚತುರ್ಕೂಟದ ಪಂಚಲಿಂಗದ ರೇವಣ ಸಿದ್ದೇಶ್ವರ ದೇವಾಲಯದಲ್ಲಿ ಸ್ಥಾನಪಲ್ಲಟಗೊಂಡ ಲಿಂಗಗಳು ಉದಾಹರಣೆಯಾಗಿ ನೋಡಬಹುದು. ಹೀಗೆ ಬಸವ ಪೂರ್ವ ಯುಗದಲ್ಲಿಯೇ ಸಮ ಸಮಾಜದ ಕನಸು ಕಂಡು ಜಾತೀಯತೆ ವಿರುದ್ಧ ಸಿಡಿದೆದ್ದು, ಸಾಮರಸ್ಯದ ಬದುಕಿಗಾಗಿ ಹೋರಾಟದ ಕೂಗು ಈ ಸಗರನಾಡಿನ ಕೆಂಭಾವಿಯ ಆದ್ಯ ವಚನಕಾರ ಭೋಗಣ್ಣನಿಂದ ಆರಂಭವಾಗಿತ್ತು.

ಭೋಗಣ್ಣ ಬಸವ ಪೂರ್ವ ಯುಗದ ಮಹಾನ್ ಶರಣನಾಗಿದ್ದನು. ಸದ್ಯ ಅವರ ವಚನಗಳ ಕುರಿತು ಇನ್ನಷ್ಟು ಸಂಶೋಧನೆ ಆಗಬೇಕಾಗಿದೆ. ಭೋಗಣ್ಣನ ಜನ್ಮಸ್ಥಳ ಕೆಂಭಾವಿಯಲ್ಲಿ ಸುಮಾರು ಎಂಟುನೂರು ವರ್ಷಗಳ ಹಿಂದೆಯೇ ನಿರ್ಮಾಣವಾದ ಆತನ ಸುಂದರ ಮಂದಿರ ಪೂರ್ವಾಭಿಮುಖ ಹಾಗೂ ಪಶ್ಚಿಮಾಭಿಮುಖವಾಗಿ ದ್ವಿಕೂಟದಲ್ಲಿ ಇದ್ದು. ಈ ಮಂದಿರವು ಬೃಹತ್ತಾದ ಕಲ್ಯಾಣಿಯ ಮಧ್ಯಭಾಗದಲ್ಲಿದೆ.

ಈ ದೇವಾಲಯ ಕಲ್ಯಾಣಿ ಚಾಲುಕ್ಯರ ಕಾಲದ ಬಹು ಅಮೂಲ್ಯ ಸ್ಮಾರಕ ಸ್ಥಳವಾಗಿದೆ. ಜೀರ್ಣೋದ್ಧಾರದ ಅವಶ್ಯಕತೆ ಇದೆ. ಇಲ್ಲಿಯ ಬಹು ವಿಸ್ತಾರವಾದ ಕಲ್ಯಾಣಿಯಲ್ಲಿ ಚಿಕ್ಕ ಚಿಕ್ಕ ಬೋಟುಗಳ ವ್ಯವಸ್ಥೆ ಮಾಡಿದರೆ ಉತ್ತಮ. ಪ್ರವಾಸೋದ್ಯಮ ಇಲಾಖೆ ಇತ್ತ ಗಮನ ಹರಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT