‘ನಾಡಪ್ರಭು ಕೆಂಪೇಗೌಡರ ಸಾಧನೆ ಸ್ಮರಣೀಯ’

7
ಜಯಂತ್ಯುತ್ಸವದಲ್ಲಿ ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ಅಭಿಮತ

‘ನಾಡಪ್ರಭು ಕೆಂಪೇಗೌಡರ ಸಾಧನೆ ಸ್ಮರಣೀಯ’

Published:
Updated:
ಯಾದಗಿರಿಯ ಜಿಲ್ಲಾಡಳಿತ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ಮಾತನಾಡಿದರು

ಯಾದಗಿರಿ: ‘ಬೆಂಗಳೂರು ನಗರ ನಿರ್ಮಾಣದ ಜತೆಗೆ ಅದರ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಯಲಹಂಕದ ನಾಡಪ್ರಭು ಕೆಂಪೇಗೌಡರ ಸಾಧನೆ ಇಂದಿಗೂ ಸ್ಮರಣೀಯವಾಗಿದೆ’ ಎಂದು ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ ಬುಧವಾರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ಕ್ರಿ.ಶ 1510ರಲ್ಲಿ ಜನಿಸಿದ ಕೆಂಪೇಗೌಡರು ತಂದೆಯ ಜೊತೆ ವಿಜಯ ನಗರ ಸಾಮ್ರಾಜ್ಯಕ್ಕೆ ಭೇಟಿ ನೀಡಿದಾಗ ಅಲ್ಲಿನ ವೈಭವವನ್ನು ನೋಡಿ ಆಶ್ಚರ್ಯಗೊಂಡು, ಅಂತಹದೇ ವೈಭವಯುತ ನಗರದ ನಿರ್ಮಾಣ ಮಾಡಬೇಕು ಎಂದು ಪಣತೊಟ್ಟರು. ಮುಂದೆ 1531ರಲ್ಲಿ ಯಲಹಂಕ ಸಂಸ್ಥಾನದ ರಾಜ್ಯಭಾರವನ್ನು ವಹಿಸಿಕೊಂಡಾಗ ಉತ್ತಮ ಆಡಳಿತದ ನಿರ್ವಹಣೆಗಾಗಿ ಬೆಂಗಳೂರು ನಗರದ ನಿರ್ಮಾಣ ಕೈಗೊಂಡು ಅಲ್ಲಿನ ರೈತರ ಕೃಷಿ ಕಾರ್ಯಗಳಿಗಾಗಿ ಹಲವಾರು ಕೆರೆಗಳ ನಿರ್ಮಾಣ ಮಾಡಿದರು’ ಎಂದರು.

‘ಬೆಂಗಳೂರು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಖ್ಯಾತಿಗೆ ಕಾರಣ ನಾಡಪ್ರಭು ಕೆಂಪೇಗೌಡ ಅವರ ಪಾತ್ರ ಪ್ರಮುಖ ಕಾರಣ. ಅಂತಹ ಮಹಾನ್ ಆಡಳಿತಗಾರರ ಸ್ಮರಣಾರ್ಥವಾಗಿ ಇಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಂಬುದಾಗಿ ಹೆಸರಿಡಲಾಗಿದೆ’ ಎಂದು ಹೇಳಿದರು.

ಇತಿಹಾಸ ಉಪನ್ಯಾಸಕ ಗುರುಪ್ರಸಾದ ವೈದ್ಯ ಮಾತನಾಡಿ, ‘ವಿಜಯನಗರ ಸಂಸ್ಥಾನದಲ್ಲಿ ಶ್ರೀಕೃಷ್ಣದೇವರಾಯರು ಅಧಿಕಾರಕ್ಕೆ ಬಂದಾಗ ಮೈಸೂರು, ಇಕ್ಕೇರಿ, ಕೆಳದಿ, ಚಿತ್ರದುರ್ಗ, ಯಲಹಂಕದ ಮಾಗಡಿ ನಾಡಪ್ರಭುಗಳು ವಿಜಯನಗರ ಸಾಮ್ರಾಜ್ಯಕ್ಕೆ ಸ್ವಾಮಿನಿಷ್ಠೆ ತೋರುತ್ತಿದ್ದವು. ಅಂತಹ ಉಪ ಪಾಳೆಯಗಳಲ್ಲಿ ಬೆಂಗಳೂರ ನಗರ ಮಾದರಿಯಾಗಿತ್ತು’ ಎಂದರು.

‘ಒಂದನೇ ಕೆಂಪೇಗೌಡರು ವಿಜಯದಶಮಿ ಉತ್ಸವದಲ್ಲಿ ಪಾಲ್ಗೊಂಡು ಮಲ್ಲಯುದ್ಧ ಸ್ಪರ್ಧೆಯಲ್ಲಿ ಎದುರಾಳಿ ತಿರುಮಲರಾಯನನ್ನು ಸೋಲಿಸಿ ಶ್ರೀಕೃಷ್ಣ ದೇವರಾಯರಿಂದ ಮೆಚ್ಚುಗೆ ಪಡೆದಿದ್ದರು. ನಗರಾಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದ್ದ ಕೆಂಪೇಗೌಡ ಪ್ರಬುದ್ಧ ಆಡಳಿತಾರರಾಗಿದ್ದರು’ ಎಂದು ಹೇಳಿದರು.

‘ಕೆಂಪೇಗೌಡರ ದಕ್ಷ, ಶಾಂತಿ ಹಾಗೂ ಜನಪರವಾದ ಆಡಳಿತವನ್ನು ನೋಡಿ ಶ್ರೀಕೃಷ್ಣ ದೇವರಾಯರು 12 ಹೋಬಳಿಗಳನ್ನು ಉಡುಗೊರೆಯಾಗಿ ನೀಡಿದ್ದರು. ಬಳಿಕ 1537ರಲ್ಲಿ ಬೆಂಗಳೂರು ನಗರ ನಿರ್ಮಾಣ ಕಾರ್ಯಕೈಗೊಂಡರು. ದೇವಾಲಯ, ಕಟ್ಟಡ, ಗೋಪುರ, ನಾಲ್ಕು ಮಹಾದ್ವಾರ ಹಾಗೂ ಹಲವಾರು ಕೆರೆಗಳನ್ನು ನಿರ್ಮಾಣ ಮಾಡಿ ಇತಿಹಾಸದಲ್ಲಿ ತಮ್ಮ ಹೆಸರನ್ನು ಚಿರಸ್ಥಾಯಿಯಾಗಿಸಿಕೊಂಡಿದ್ದಾರೆ’ ಎಂದು ವಿವರಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹೊರತಂದ ನಾಡಪ್ರಭು ಕೆಂಪೇಗೌಡರ ಕುರಿತ ನಾಡಪ್ರಭುವಿಗೆ ನಾಡಿನ ನಮನ ಎನ್ನುವ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು.

ನಗರಸಭೆಯ ಅಧ್ಯಕ್ಷೆ ಲಲಿತಾ ಮೌಲಾಲಿ ಅನಪುರ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ ಇತರರು ಇದ್ದರು.
ಅರುಣ ಕುಮಾರ ಕುಲಕರ್ಣಿ ವಂದಿಸಿದರು. ಕರಬಸಯ್ಯ ದಂಡಗಿಮಠ ಕಾರ್ಯಕ್ರಮ ನಿರೂಪಿಸಿದರು.

ದಕ್ಷ ಆಡಳಿತಗಾರರಾಗಿದ್ದ ಕೆಂಪೇಗೌಡ ಈಗಲೂ ಆಡಳಿತ ನಡೆಸುವವರಿಗೆ ಮಾದರಿ ವ್ಯಕ್ತಿಯಾಗಿ ನಿಲ್ಲುತ್ತಾರೆ. ಅಧಿಕಾರ ನಡೆಸುವವರು ಅವರನ್ನು ಅನುಸರಿಸಬೇಕು.
- ವೆಂಕಟರಡ್ಡಿಗೌಡ ಮುದ್ನಾಳ, ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !