ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಪ್ಪರಲಾಗ ಹಾಕಿದರೂ ಖರ್ಗೆ ಸೋಲಲ್ಲ: ಪ್ರಿಯಾಂಕ್‌ ಖರ್ಗೆ

Last Updated 12 ಏಪ್ರಿಲ್ 2019, 14:56 IST
ಅಕ್ಷರ ಗಾತ್ರ

ಯಾದಗಿರಿ: ‘ಬಾಬುರಾವ್‌ ಚಿಂಚನಸೂರ್‌, ಉಮೇಶ್‌ ಜಾಧವ್‌ ಅವರು ತಿಪ್ಪರಲಾಗ ಹಾಕಿದರೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಸಾಧ್ಯವಿಲ್ಲ’ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ಅಲಿಪುರದಲ್ಲಿ ಶುಕ್ರವಾರ ನಡೆದ ಮಲ್ಲಿಕಾರ್ಜುನ ಖರ್ಗೆ ಅವರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಅಭಿವೃದ್ಧಿ ಪರ ಮತ್ತು ಸಕಲರ ಒಳಿತನ್ನು ಬಯಸಿಕೊಂಡು ಬರುತ್ತಿರುವ ಕಾರಣದಿಂದಲೇ ಜನರು ಮಲ್ಲಿಕಾರ್ಜುನ ಖರ್ಗೆ ಅವರನ್ನು 11 ಬಾರಿ ಚುನಾಯಿಸಿದ್ದಾರೆ’ ಎಂದರು.

‘ಮುದಿ ಎತ್ತು, ಕುಸಿಯುವ ಪರ್ವತ ಎಂದು ಟೀಕಿಸುವ ಚಿಂಚನಸೂರು ತಮಗಿಂತ ಹಿರಿಯರಾದ ನಾಗನಗೌಡ ಕಂದಕೂರು ಅವರ ಎದುರು ಏಕೆ ಸೋತರು? ಜನರು ಗೌಡರನ್ನು ಏಕೆ ಚುನಾಯಿಸಿದರು? ಅಭಿವೃದ್ಧಿ ಮಾಡಲು ವಯಸ್ಸಲ್ಲ; ಮನಸ್ಸು ಬೇಕು. ಅಂತಹ ಮನಸ್ಸಿರುವವರನ್ನು ಜನ ಚುನಾಯಿಸುತ್ತಾರೆ ಎಂಬುದಕ್ಕೆ ಚಿಂಚನಸೂರು ಅವರ ಸೋಲೇ ಸಾಕ್ಷಿ’ ಎಂದರು.

‘25 ವರ್ಷದ ಹಿಂದಷ್ಟೇ ಅಸ್ತಿತ್ವ ಬಂದ ಬಿಜೆಪಿಯಿಂದ ಕಾಂಗ್ರೆಸ್‌ ಸಾಥ್ ನಿಯತ್ತು; ಸಹಿ ವಿಕಾಸ್‌ ತತ್ವ ಕಲಿಯಬೇಕಿಲ್ಲ. ಕಾಂಗ್ರೆಸ್‌ ದೇಶದ ಸ್ವತಂತ್ರಕ್ಕಾಗಿ ಬೆವರು ಹರಿಸಿ ಬಲಿದಾನ ಕೂಡ ಮಾಡಿದೆ. ಸಂವಿಧಾನ ರಚನೆಯಾದಾಗ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನವರು ಎಲ್ಲಿದ್ದರು? ಬಡ ಜನರ ಏಳಿಗೆ ಪಡಿಸುವ ತತ್ವಗಳು ಬಿಜೆಪಿಯಲ್ಲಿ ಇಲ್ಲ. ಅಲ್ಪಸಂಖ್ಯಾತರ, ದಲಿತರ ಮೇಲೆ ಹಲ್ಲೆ, ದರೋಡೆ ನಡೆಯುತ್ತಿವೆ. ಸೈನಿಕರು ಭಯೋತ್ಪಾದಕರಿಗೆ ಬಲಿಯಾಗುತ್ತಿದ್ದಾರೆ. ಇದೇನಾ ಸಬ್‌ ಕೆ ಸಾಥ್‌ ಸಬ್‌ ಕಾ ವಿಕಾಸ್‌’ ಎಂದು ಅವರು ವಾಗ್ದಾಳಿ ನಡೆಸಿದರು.

‘ನರೇಂದ್ರ ಮೋದಿ ಈ ದೇಶದಲ್ಲಿ ಬಂಡವಾಳಶಾಹಿಗಳ ಒಟ್ಟು ₹ 3ಲಕ್ಷ ಕೋಟಿ ಸಾಲಮನ್ನಾ ಮಾಡಿದ್ದಾರೆ. ಕರ್ನಾಟಕದಲ್ಲಿ ಬರಕ್ಕೆ ರೈತರು ಬಲಿಯಾಗಿದ್ದಾರೆ. ನೆರವಿಗೆ ಹಣ ಇಲ್ಲ ಎನ್ನುತ್ತಾರೆ. ಕಾಡಿ ಬೇಡಿದಾಗ ₹800 ಕೋಟಿ ಮಾತ್ರ ನೀಡಿದ್ದಾರೆ. ಆದರೆ, ಮಹಾರಾಷ್ಟ್ರಕ್ಕೆ ₹ 4,000 ಕೋಟಿ ಬರ ಪರಿಹಾರ ಬಿಡುಗಡೆ ಮಾಡಿದ್ದಾರೆ. ತಾರತಮ್ಯ ನೀತಿಯಿಂದ ರೈತರು ಬರಕ್ಕೆ ಸಿಲುಕಿದ್ದಾರೆ‘ ಎಂದರು.

‘ರಾಜ್ಯದಲ್ಲಿನ ಬಿಜೆಪಿ ನಾಯಕರು ಅಸಂವಿಧಾನಾತ್ಮಕ ಕೆಲಸದಲ್ಲೇ ಹೆಚ್ಚು ತೊಡಗಿದ್ದಾರೆ. ಸಂವಿಧಾನಾತ್ಮಕ ನೆಲೆಗಟ್ಟಿನಲ್ಲಿ ರಚನೆಯಾಗಿರುವ ಸಮ್ಮಿಶ್ರ ಸರ್ಕಾರ ಉರುಳಿಸೋದೇ ಅವರ ನಿತ್ಯದ ಕೆಲಸ ಆಗಿದೆ. ಹಾಗಾಗಿ, ಅಸವಿಂಧಾನಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಜನರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು.

‘ರೈತರ ಸಾಲ ಮನ್ನಾ ಮಾಡೋಣ ಕೇಂದ್ರದ ಮೇಲೆ ವಿರೋಧ ಪಕ್ಷದ ನಾಯಕರಾಗಿ ನೀವು ಒಂದಷ್ಟು ಒತ್ತಡ ಹಾಕಿ ಎಂದು ಬಿ.ಎಸ್‌.ಯಡಿಯೂರಪ್ಪ ಅವರನ್ನು ಮನವಿ ಮಾಡಿದರೂ ಸ್ಪಂದಿಸಿಲ್ಲ. ಜನರ ಮತ್ತು ರೈತರ ಹಿತಾಸಕ್ತಿ ಬಿಟ್ಟು ಅನ್ಯ ಪಕ್ಷದ ನಾಯಕರಿಗೆ ಆಮಿಷವೊಡ್ಡಿ ಪಕ್ಷದತ್ತ ಸೆಳೆಯುವುದರಲ್ಲೇ ಕಾಲತಳ್ಳುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಉರುಳಿಸುವುದರಲ್ಲೇ ಕಾಲ ವ್ಯಯ ಮಾಡುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT