ಶುಕ್ರವಾರ, ಜನವರಿ 28, 2022
25 °C

ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ: ಉದ್ಘಾಟನೆ ಮೂರನೇ ಬಾರಿ ಮುಂದಕ್ಕೆ!

ಮಲ್ಲಿಕಾರ್ಜುನ ಅರಿಕೇರಕರ್ Updated:

ಅಕ್ಷರ ಗಾತ್ರ : | |

Prajavani

ಸೈದಾಪುರ: ಪಟ್ಟಣದ ಹೊರ ವಲಯದಲ್ಲಿ ನಿರ್ಮಿಸಿರುವ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ ಸಂಕೀರ್ಣದ ಉದ್ಘಾಟನೆ ಮೂರನೇ ಬಾರಿ ಮುಂದಕ್ಕೆ ಹೋಗಿದೆ. ಸಂಕೀರ್ಣದ ಉದ್ಘಾಟನಾ ಸಮಾರಂಭವು ಇಂದು ಡಿಸೆಂಬರ್-13 ಗುರುವಾರ ಮಧ್ಯಾಹ್ನ 3 ಗಂಟೆಗೆ ಜರಗಬೇಕಾಗಿತ್ತು.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸೌಲಭ್ಯ ನೀಡಲು ಸಿದ್ಧವಾಗಿ ನಿಂತ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ದೊರೆಯದೆ ಮಕ್ಕಳು ಬಾಡಿಗೆ ಕಟ್ಟಡದಲ್ಲಿ ಕಲಿಯುವ ಪರಿಸ್ಥಿತಿ ಎದುರಾಗಿದೆ.

2017ರಲ್ಲಿ ಮಂಜೂರಾದ ಪರಿಶಿಷ್ಟ ಪಂಗಡದ ಬಾಲಕಿಯರ ನೂತನ ವಸತಿ ಶಾಲೆಗೆ ಪಕ್ಕದ ರಾಚನಹಳ್ಳಿ ಗ್ರಾಮದ ಸೀಮೆಯಲ್ಲಿ ಸ್ವಂತ ಕಟ್ಟಡ ನಿರ್ಮಿಸಲಾಗಿದೆ. ಸುಮಾರು ₹17 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಹೈದರಾಬಾದ್ ಮೂಲದ ಕೆಎಂವಿ ಪ್ರಾಜೆಕ್ಟ್‌ ಲಿಮಿಟೆಡ್‍ಗೆ 18 ತಿಂಗಳ ಗಡುವಿನೊಂದಿಗೆ ಗುತ್ತಿಗೆ ನೀಡಲಾಗಿತ್ತು. ನಿಗದಿಯಂತೆ ಕಟ್ಟಡ ನಿರ್ಮಾಣ ಕಾರ್ಯ ಮುಗಿದು ನಾಲ್ಕು ತಿಂಗಳು ಕಳೆದಿವೆ. ಆದರೂ ಉದ್ಘಾಟನೆ ಭಾಗ್ಯ ಕೂಡಿ ಬಂದಿಲ್ಲ. ಜನಪ್ರತಿನಿಧಿಗಳು ಉದ್ಘಾಟನೆ ಕಾರ್ಯಕ್ರಮವನ್ನು ಮುಂದೂಡುತ್ತಿದ್ದಾರೆ.

ಸೈದಾಪುರದ ಬಾಡಿಗೆ ಕಟ್ಟಡದಲ್ಲಿ ಎರಡು ವರ್ಷಗಳಿಂದ ನಡೆಯುತ್ತಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಆರನೇ ತರಗತಿಯಲ್ಲಿ 46, ಏಳನೇ ತರಗತಿಯಲ್ಲಿ 50, ಎಂಟನೇ ತರಗತಿಯಲ್ಲಿ 44 ಸೇರಿದಂತೆ ಒಟ್ಟು 140 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸರ್ಕಾರದಿಂದ ಮಕ್ಕಳ ಅನುಕೂಲಕ್ಕಾಗಿ ವಿವಿಧ ಸಲಕರಣೆಗಳು ಬಂದರೂ ಸ್ಥಳದ ಸಮಸ್ಯೆಯಿಂದ ಅವುಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇಕ್ಕಟ್ಟಾದ ಬಾಡಿಗೆ ಕಟ್ಟಡದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ನಿರಾಸೆ: ‘ಸಂಕೀರ್ಣದ ಉದ್ಘಾಟನೆಯನ್ನು ಮುಂದೂಡಿರುವುದನ್ನು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಗುರುವಾರ ಬೆಳಿಗ್ಗೆ ದೂರವಾಣಿ ಕರೆ ಮಾಡಿ ತಿಳಿಸಿದರು. ಇದರಿಂದ ನನಗೆ ಹಾಗೂ ಮಕ್ಕಳಿಗೆ ತುಂಬ ನಿರಾಸೆ ಆಗಿದೆ’ ಎಂದು ಮುಖ್ಯ ಶಿಕ್ಷಕ ಸಿದ್ದಪ್ಪ ತಂಬಾಕೆ ತಿಳಿಸಿದರು.

ಸಂಬಂಧಿಸಿದ ಅಧಿಕಾರಿ ಮತ್ತು ಜನಪ್ರತಿನಿಧಿಗಳು ಮಕ್ಕಳ ಭವಿಷ್ಯದ ಅನುಕೂಲಕ್ಕಾಗಿ ನೂತನ ಶಾಲಾ ಕಟ್ಟಡವನ್ನು ಶೀಘ್ರ ಉದ್ಘಾಟಿಸಬೇಕು’ ಎಂಬುದು ಪೋಷಕರ ಒತ್ತಾಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು