ಸೋಮವಾರ, ಸೆಪ್ಟೆಂಬರ್ 20, 2021
20 °C
ಶಹಾಪುರ

ಕೃಷ್ಣಾ ನದಿಗೆ 2.60 ಲಕ್ಷ ಕ್ಯುಸೆಕ್ ನೀರು; ಕೊಳ್ಳೂರ (ಎಂ) ಸೇತುವೆ ಮುಳುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ ತಾಲ್ಲೂಕಿನ ಕೊಳ್ಳೂರ (ಎಂ) ಸೇತುವೆ ಮುಳುಗಡೆಯಾಗಿದೆ

ಯಾದಗಿರಿ: ಜಿಲ್ಲೆಯ ನಾರಾಯಣಪುರ ಬಸವಸಾಗರ ಜಲಾಶಯದಿಂದ ಭಾನುವಾರ ರಾತ್ರಿಯಿಂದ 11 ಗಂಟೆಯಿಂದ 2.60 ಲಕ್ಷ ಕ್ಯುಸೆಕ್ ನೀರು ಕೃಷ್ಣಾ ನದಿಗೆ ಹರಿಸಲಾಗುತ್ತಿದ್ದು, ಶಹಾಪುರ ತಾಲ್ಲೂಕಿನ ಕೊಳ್ಳೂರ (ಎಂ) ಸೇತುವೆ ಮುಳುಗಡೆಯಾಗಿದೆ.

ಇದರಿಂದ ಯಾದಗಿರಿ, ರಾಯಚೂರು, ಕಲಬುರ್ಗಿ ಮೂರು ಜಿಲ್ಲೆಗಳ ಸಂಪರ್ಕ ಕಡಿತಗೊಂಡಿದೆ.

ಹೆಚ್ಚಿನ ಹೊರಹರಿವಿನಿಂದ ಕೃಷ್ಣಾ ನದಿ ಪಾತ್ರದ 23 ಹಳ್ಳಿಗಳಿಗೆ ಪ್ರವಾಹದ ಭೀತಿ ಮತ್ತೆ ಎದುರಾಗಿದೆ. ನದಿ ದಂಡೆಯ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ.

ಸೇತುವೆ ಮುಳುಗಡೆಯಾಗಿದ್ದರಿಂದ ಪೊಲೀಸರನ್ನು ನಿಯೋಜಿಸಿ ಮಾರ್ಗ ಬದಲಾವಣೆ ಮಾಡಲಾಗಿದೆ. ರಾಯಚೂರಿನ ದೇವದುರ್ಗಕ್ಕೆ ತೆರಳಲು 45 ಕಿ.ಮೀ ಸುತ್ತು ಹಾಕಿಕೊಂಡು ತೆರಳಬೇಕಿದೆ.

'ಪ್ರತಿಬಾರಿ ಮಳೆಗಾಲದಲ್ಲಿ ನದಿಗೆ 2.50 ಲಕ್ಷ ಕ್ಯುಸೆಕ್ ನೀರು ಹರಿಸಿದರೆ ಈ ಸೇತುವೆ ಮುಳುಗಡೆಯಾಗುತ್ತದೆ. ಹೀಗಾಗಿ ಇದನ್ನು ಎತ್ತರಿಸಬೇಕು' ಎಂದು ಜನಪ್ರತಿನಿಧಿಗಳು, ಗ್ರಾಮಸ್ಥರು ಇತ್ತೀಚೆಗೆ ಸೇತುವೆಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರಿಗೆ ಮನವಿ ಮಾಡಿದ್ದರು.

ಈ ಕುರಿತು ಶೀಘ್ರ ಪ್ರಸ್ತಾವನೆ ಸಲ್ಲಿಸಲು ಸಚಿವರು ಅಧಿಕಾರಿಗಳಿಗೆ ತಿಳಿಸಿದ್ದರು. ಶಾಸಕರು, ಸಂಸದರನ್ನು ಒಳಗೊಂಡ ನಿಯೋಗ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಭರವಸೆ ನೀಡಿದ್ದರು.

'ಸೇತುವೆ ಮುಳುಗಡೆಯಾಗಿದ್ದರಿಂದ ವ್ಯಾಪಾರ ವಹಿವಾಟಿಗೆ ಸಮಸ್ಯೆ ಆಗಿದೆ. ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ. ಮತ್ತೆ ಬೆಳೆ ಕೊಳೆತು ಹೋಗುವ ಸಾಧ್ಯತೆ ಇದೆ. ಇಲ್ಲಿ ಬ್ರಿಜ್ ಕಂ ಬ್ಯಾರೆಜ್ ನಿರ್ಮಿಸಲು ಹಲವಾರು ಬಾರಿ ಒತ್ತಾಯಿಸಿದರೂ ಜನಪ್ರತಿನಿಧಿಗಳು ಗಮನಹರಿಸಿಲ್ಲ' ಎಂದು ಕೊಳ್ಳೂರ (ಎಂ) ಗ್ರಾಮಸ್ಥ ಶಿವಾರೆಡ್ಡಿ ಪಾಟೀಲ ಆರೋಪಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು