ಭಾನುವಾರ, ಜನವರಿ 24, 2021
28 °C
2020ರಲ್ಲಿ ಜಿಲ್ಲೆಗೆ ಹರಿದು ಬಾರದ ಅನುದಾನ; ಅಳಿಯದೆ ಉಳಿದ ‘ಹಿಂದುಳಿದ ಜಿಲ್ಲೆಯ ಪಟ್ಟ’

ಕೃಷ್ಣಾ, ಭೀಮಾ ಪ್ರವಾಹಕ್ಕೆ ನಲುಗಿದ ಜಿಲ್ಲೆ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: 2020ರಲ್ಲಿ ಜಿಲ್ಲೆಯೂ ಕೃಷ್ಣಾ, ಭೀಮಾ ಪ್ರವಾಹ, ಅತಿವೃಷ್ಟಿಯಿಂದ ನಲುಗಿದೆ. 2021ರ ಹೊಸ್ತಿಲಲ್ಲಿ ಇದ್ದು, 2020ರ ಹಿನ್ನೋಟ ನೋಡಿದರೆ ಜಿಲ್ಲೆ ಮತ್ತಷ್ಟು ಹಿಂದೆ ಉಳಿದಿದೆ ಎನ್ನಲಡ್ಡಿಯಿಲ್ಲ.

ಕೊರೊನಾ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕರು ಒಂದೆಡೆಯಾದರೆ ಕೃಷ್ಣಾ, ಭೀಮಾ ನದಿ ‍ಪ್ರವಾಹ, ಅತಿವೃಷ್ಟಿ ಇನ್ನೊಂದು ಕಡೆ. ಇಂಥದರ ಮಧ್ಯೆ ನಲುಗಿದೆ.

ಲಾಕ್‌ಡೌನ್‌ ಆದ ಎರಡೂವರೆ ತಿಂಗಳಿನ ನಂತರ ಜಿಲ್ಲೆಗೆ ಕಾಲಿಟ್ಟ ಕೋವಿಡ್‌ ಅಲ್ಲಿಂದ ಇಲ್ಲಿಯವರೆಗೆ ಕೋವಿಡ್‌ ದೃಢಪಟ್ಟವರು ಪತ್ತೆಯಾಗುತ್ತಲೆ ಇದ್ದಾರೆ. ಕೋವಿಡ್‌ ಪತ್ತೆಯಾಗಿ ಜಿಲ್ಲೆಯ ಜನತೆ ಸಂಕಷ್ಟ ಅನುಭವಿಸುತ್ತಿದ್ದರೂ ಜಿಲ್ಲೆಗೆ ಸಂಬಂಧಿಸಿದ ಜನಪ್ರತಿನಿಧಿಗಳು ಜಿಲ್ಲೆಗೆ ಬಾರದೆ ಜನರ ಆಕ್ರೋಶವನ್ನು ಎದುರಿಸಬೇಕಾಯಿತು. ಕೋವಿಡ್‌ ಮಧ್ಯೆಯ ಬಂದ ಹಬ್ಬಗಳನ್ನು ಸರಳವಾಗಿ ಆಚರಣೆ ಮಾಡುವ ಪರಿಸ್ಥಿತಿ ಬಂದೊದಗಿತ್ತು.

ಲಾಕ್‌ಡೌನ್‌ ಪರಿಣಾಮ ಸಾರಿಗೆ ಸಂಸ್ಥೆಗೆ ಹೆಚ್ಚಿನ ಒಡೆತ ಕೊಟ್ಟಿತ್ತು. ಒಂದು ವಾರದಲ್ಲೇ ₹45 ಲಕ್ಷ ನಷ್ಟವಾಗಿತ್ತು.

ಬಿರು ಬೇಸಿಗೆಯಲ್ಲಿ ಲಾಕ್‌ಡೌನ್‌ ಮಾಡಿದ ಕಾರಣ ಎಲ್ಲ ಉದ್ಯಮಗಳು ನೆಲಕಚ್ಚಿ ಹಲವರು ಉದ್ಯೋಗ ಕಳೆದುಕೊಳ್ಳಲು ಕಾರಣವಾಯಿತು. ಜೊತೆಗೆ ಬೇಸಿಗೆಯಲ್ಲಿ ಹೆಚ್ಚು ಮಾರಾಟವಾಗುತ್ತಿದ್ದ ಪಪ್ಪಾಯ ಹಣ್ಣು ಕೊಳ್ಳುವವರಿಲ್ಲದೆ ಗಿಡದಲ್ಲೇ ಕೊಳೆತು ಹೋಗಿತ್ತು. ಉಳಿದ ಅಲ್ಪ ಸ್ವಲ್ಪ ಬೆಳೆಯನ್ನು ರಾಜಕೀಯ ಮುಖಂಡರು ಖರೀದಿಸಿದ್ದರು.

ಮೇ 12ರಂದು ಜಿಲ್ಲೆಯಲ್ಲಿ ಮೊದಲ ಬಾರಿಗೆ ಗುಜರಾತ್‌ನಿಂದ ಬಂದ ದಂಪತಿಯಲ್ಲಿ ಕೋವಿಡ್‌ ಪತ್ತೆಯಾಗಿತ್ತು. ಆನಂತರ ಮುಂಬೈನಿಂದ ಬಂದ ಕಾರ್ಮಿಕರಲ್ಲೇ ಅತಿ ಹೆಚ್ಚು ಕೋವಿಡ್‌ ಪತ್ತೆಯಾಗಿತ್ತು.

ರೈಲು, ಬಸ್‌ ಸೇರಿದಂತೆ ಸಿಕ್ಕ ಸಿಕ್ಕ ವಾಹನಗಳಲ್ಲಿ ಗುಳೆ ಹೋಗಿದ್ದ ಕಾರ್ಮಿಕರು ಜಿಲ್ಲೆಗೆ ಆಗಮಿಸಿದ್ದರು. ಅವರನ್ನು 14 ದಿನಗಳ ಕಾಲ ಕ್ವಾರಂಟೈನ್‌ ಮಾಡಲಾಗಿತ್ತು. ಅಲ್ಲಿ ಅವರನ್ನು ಒಂದು ರೀತಿ ಬಂಧನಕ್ಕೆ ಒಳಪಡಿಸಿದಂತೆ ಇತ್ತು. ಊಟ, ನೀರು ದೂರದಿಂದ ಎಸೆದು ಹೋಗುತ್ತಿದ್ದರು. ಕುಟುಂಬದವರೆ ತಮ್ಮವರನ್ನು ಸೇರಿಸಿಕೊಳ್ಳಲು ಹಿಂದೇಟು ಹಾಕಿದ್ದರು. ಇಂಥ ಸ್ಥಿತಿಯನ್ನು ಜಿಲ್ಲೆ ಎದುರಿಸಿತ್ತು.

ಈ ಬಾರಿ ಜಿಲ್ಲೆಯಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿದಿತ್ತು. ಇದರಿಂದ ಜಿಲ್ಲೆಯ ವಿವಿಧ ಕಡೆ ಹತ್ತಿ, ಭತ್ತ, ಹೆಸರು ಬೆಳೆ ರೈತರು ಬಿತ್ತಿದ್ದರು. ಆದರೆ, ಅತಿವೃಷ್ಟಿಯಿಂದ ಹೆಸರು ಬೆಳೆ ಪಶುಗಳು ತಿನ್ನದಷ್ಟು ಕೆಟ್ಟುಹೋಗಿದ್ದವು. ರೈತರು ಕಣ್ಣೀರು ಸುರಿಸಿದರು. ಜೊತೆಗೆ ಅಧಿಕ ಮಳೆಯಿಂದ ದಾಖಲೆಯಾಯಿತು. ಹಲವಾರು ತೋಟಗಾರಿಕೆ, ಹೂವಿನ ಬೆಳೆಗಳು ಹಾಳಾದವು. ಕೃಷ್ಣಾ ನದಿ ಪಾತ್ರದಲ್ಲಿ ಭತ್ತ, ಹತ್ತಿ ನೆಲಕಚ್ಚಿ ಆತಂಕ ಸೃಷ್ಟಿಸಿತ್ತು.

ಅಧಿಕ ಮಳೆ, ಆಲಿಕಲ್ಲು ಮಳೆಯಿಂದ ಜಿಲ್ಲೆಯಲ್ಲಿ 1526 ಹೆಕ್ಟೇರ್ ಪ್ರದೇಶ ಹಾಳಾಗಿತ್ತು. ಇಲ್ಲಿಯವರೆಗೆ ಪರಿಹಾರವೇ ಬಂದಿಲ್ಲ ಎನ್ನುವ ಆರೋಪವೂ ಇದೆ.

ನದಿಯಂಚಿನ ಹಳ್ಳಿಗಳಿಗೆ ಕೃಷ್ಣಾ ನದಿ ಪ್ರವಾಹದ ನೀರು ನುಗ್ಗಿತ್ತು. ವಾರಗಟ್ಟಲೇ ಜಮೀನುಗಳಲ್ಲಿ ನೀರು ನಿಂತು ಹತ್ತಿ ಬೆಳೆಯ ಕಾಯಿಯಲ್ಲಿ ಮೊಳಕೆ ಬಂದಿತ್ತು. ರೈತರ ಕಣ್ಣೀರು ತರಿಸುವ ವರ್ಷಾವಾಯಿತು ಹೊರತು ಒರೆಸುವ ವರ್ಷವಾಗಲಿಲ್ಲ.

ಜಿಲ್ಲೆಗೆ ಒಲಿದು ಬಂದ ರಾಜ್ಯೋತ್ಸವ ಪ್ರಶಸ್ತಿ

ಜಿಲ್ಲೆಗೆ ಈ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹಿರಿಯ ಸಂಶೋಧಕ, ಚಿತ್ರಕಲಾ ಶಿಕ್ಷಕ ಡಿ.ಎನ್.ಅಕ್ಕಿ ಅವರಿಗೆ ಒಲಿದು ಬಂದಿತ್ತು. ಅದೇ ರೀತಿ ಶಾಸಕ ರಾಜೂಗೌಡಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಲಭಿಸಿದೆ.

ಜಿಲ್ಲೆಯಲ್ಲಿ ಸುರಪುರ, ಯಾದಗಿರಿಯಲ್ಲಿ ಇಬ್ಬರು ಬಿಜೆಪಿ ಶಾಸಕರಿದ್ದಾರೆ. ಆದರೆ, ಅವರಿಗೆ ಸಚಿವ ಸ್ಥಾನ ನೀಡಿಲ್ಲ. ಇದರಿಂದ ಸುರಪುರ ಶಾಸಕ ರಾಜೂಗೌಡಗೆ ರಾಜ್ಯ ಒಳಚರಂಡಿ ಹಾಗೂ ನೀರು ಸರಬರಾಜು ಮಂಡಳಿ ಅಧ್ಯಕ್ಷ ಸ್ಥಾನ ನೀಡಿದೆ. ಇದನ್ನು ಮೊದಲು ಒಪ್ಪದಿದ್ದ ರಾಜೂಗೌಡ ಸಿಎಂ ಮನವೊಲಿಕೆಯಿಂದ ಒಪ್ಪಿ ಅಧ್ಯಕ್ಷ ಸ್ಥಾನ ಸ್ವೀಕರಿಸಿದ್ದರು.

ತಮ್ಮ ಪಾಡಿಗೆ ತಾವು ಸಂಶೋಧನೆಯಲ್ಲಿ ಹಲವಾರು ವರ್ಷಗಳಿಂದ ತೊಡಗಿಸಿಕೊಂಡಿದ್ದ ಡಿ.ಎನ್‌.ಅಕ್ಕಿಗೆ ಅರ್ಜಿ ಹಾಕದಿದ್ದರೂ ಪ್ರಶಸ್ತಿ ಹುಡಿಕೊಂಡು ಬಂದಿತ್ತು. ಪುರಾತನ ಶಾಸನಗಳ ಕುರಿತು ಪುಸ್ತಕ ಹೊರತಂದು ಜಗತ್ತಿಗೆ ಜಿಲ್ಲೆಯ ಇತಿಹಾಸವನ್ನು ತಿಳಿಸಲು ಅವರು ಪ್ರಯತ್ನಿಸಿದ್ದರು.

ಶವ ಎಳೆದೊಯ್ದು ಗುಂಡಿಗೆ ಎಸೆದ ಸಿಬ್ಬಂದಿ

ಯಾದಗಿರಿ ತಾಲ್ಲೂಕಿನ ಹೊನಗೇರಾ ಗ್ರಾಮದ 45 ವರ್ಷದ ವ್ಯಕ್ತಿ ಕೋವಿಡ್‌ನಿಂದ ಮೃತಪಟ್ಟಿದ್ದರು. ಅವರ ಶವವನ್ನು ಆಂಬುಲೆನ್ಸ್‌ನಿಂದ ಇಳಿಸಿದ ಆರೋಗ್ಯ ಇಲಾಖೆಯ ಸಿಬ್ಬಂದಿ, ಕಟ್ಟಿಗೆ ಕಟ್ಟಿ ಎಳೆದೊಯ್ದು ಗುಂಡಿಗೆ ಎಸೆದಿದ್ದರು. ಈ ವಿಡಿಯೋ ವೈರಲ್‌ ಆಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು