ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳವೆ ಬಾವಿ ಜಲಮರುಪೂರಣಗೊಳಿಸಿ: ಗಿರೀಶ್ ಭದ್ರಗೊಂಡ ಸಲಹೆ

ರೈತ ಸಂವಾದದಲ್ಲಿ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತರ ಕಿವಿಮಾತು
Last Updated 26 ಮಾರ್ಚ್ 2019, 10:53 IST
ಅಕ್ಷರ ಗಾತ್ರ

ಯಾದಗಿರಿ: ‘ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಕೃಷಿ ಮಾಡಿದರೆ ಮಾತ್ರ ಕೃಷಿ ಲಾಭದಾಯಕವಾಗುತ್ತದೆ’ ಎಂದು ಕೃಷಿ ಅನ್ವೇಷಕ ರೈತ ಹಾಗೂ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಗಿರೀಶ್ ಭದ್ರಗೊಂಡ ಹೇಳಿದರು.

ಸುರಪುರ ತಾಲ್ಲೂಕಿನ ರುಕ್ಮಾಪುರ ಗ್ರಾಮದಲ್ಲಿ ಈಚೆಗೆ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ 2018-19ನೇ ಸಾಲಿನ ಹಿಂಗಾರು ಬೇಸಿಗೆ ಅಭಿಯಾನದ ಅಂಗವಾಗಿ ಸುಭದ್ರ ಕೃಷಿಗೆ ನೆಲ-ಜಲ ಸಂರಕ್ಷಣೆ ವಿಷಯದ ಕುರಿತು ರೈತರೊಂದಿಗೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರೈತರು ಹೆಚ್ಚು ಕೊಳವೆ ಬಾವಿಗಳನ್ನು ಕೊರೆಯಿಸುವ ಬದಲಾಗಿ ಇರುವ ಕೊಳವೆ ಬಾವಿಗಳ ಜಲಮರುಪೂರಣ ಕೈಗೊಳ್ಳಬೇಕು. ಅವುಗಳಲ್ಲಿ ನೀರಿನ ಮಟ್ಟ ಹಾಗೂ ಲಭ್ಯತೆಯನ್ನು ಅರಿತು ಕೃಷಿ ಮಾಡಬೇಕು. ಅಂತರ್ಜಲದ ಚಲನವಲನ ಹಾಗೂ ಅದರ ಲಭ್ಯತೆಯನ್ನು ಅರಿಯಲು ತಾವು ಕಂಡುಹಿಡಿದಿರುವ ಹಲವು ಉಪಕರಣಗಳ ಬಗ್ಗೆ ಮಾಹಿತಿ ನೀಡಿದರು.

ಪ್ರಗತಿಪರ ರೈತರು ಹಾಗೂ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಕವಿತಾ ಮಿಶ್ರಾ ಮಾತನಾಡಿ,‘ಹೆಚ್ಚುತ್ತಿರುವ ತಾಪಮಾನಕ್ಕೆ ಕಡಿವಾಣವಾಗಿ ಗಿಡಮರಗಳನ್ನು ಬೆಳೆಯಬೇಕು. ಮರಮುಟ್ಟು ಗಿಡಗಳೊಂದಿಗೆ ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ಬೆಳೆಯುವುದರಿಂದ ವರ್ಷವಿಡೀ ಆದಾಯ ಪಡೆಯಬಹುದು. ಕೇವಲ ದವಸಧಾನ್ಯ ಬೆಳೆಯದೆ, ರೈತರು ಕನಿಷ್ಠ ಬದುಗಳ ಮೇಲೆ ಅರಣ್ಯ ಮತ್ತು ಹಣ್ಣಿನ ಗಿಡಗಳನ್ನು ನಾಟಿ ಮಾಡಬೇಕು’ ಎಂದು ಸಲಹೆ ನೀಡಿದರು.

‘ತಾವು ಬೆಳೆಯುತ್ತಿರುವ ಗಂಧದ ಮರಗಳ ಬೇಸಾಯದ ಖರ್ಚು ಹಾಗೂ ಲಾಭಗಳ ಬಗ್ಗೆ ರೈತರೊಂದಿಗೆ ಚರ್ಚೆ ಮಾಡಿದ ಅವರು, ಕುಟುಂಬದ ಆದಾಯ ಹೆಚ್ಚಿಸುವಲ್ಲಿ ಸ್ತ್ರೀಯರ ಪಾತ್ರ ಬಹುಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿದಲ್ಲಿ ಮಾತ್ರ ಕೃಷಿ ಮುನ್ನಡೆಯಲು ಸಾಧ್ಯವಿದೆ’ ಎಂದು ಹೇಳಿದರು.

ರಾಯಚೂರು ಕೃಷಿ ವಿಶ್ವವಿದ್ಯಾಲಯ ವಿಸ್ತರಣಾ ನಿರ್ದೇಶಕ ಡಾ.ಬಿ.ಎಂ.ಚಿತ್ತಾಪುರ ಮಾತನಾಡಿ,‘ಇಂದಿನ ಕೃಷಿಯನ್ನು ಭದ್ರವಾಗಿಸಲು ನೆಲ-ಜಲ ಸಂರಕ್ಷಣೆಯ ಬಗ್ಗೆ ಹೆಚ್ಚು ಒತ್ತು ನೀಡಬೇಕು. ಸಾಮಾನ್ಯವಾಗಿ ರೂಢಿಯಲ್ಲಿರುವ ಕೃಷಿ ಪದ್ಧತಿಗೆ ಪರ್ಯಾಯವಾಗಿ ನಮ್ಮ ನೆರೆ ಜಿಲ್ಲೆಗಳಲ್ಲಿ ಇಸ್ರೇಲ್ ಮಾದರಿಯಂತಹ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡಿರುವ ರೈತರನ್ನು ಅನುಸರಿಸಬೇಕು. ರೈತರು ಕೃಷಿ ವಿಜ್ಞಾನ ಕೇಂದ್ರ ಹಾಗೂ ವಿಶ್ವವಿದ್ಯಾಲಯಗಳಿಂದ ದೊರೆಯುವ ನೆಲ-ಜಲ ಸಂರಕ್ಷಣೆಯ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕೃಷಿಯಲ್ಲಿ ಹೆಚ್ಚಿನ ಸಾಧನೆ ಮಾಡಬೇಕು’ ಎಂದು ಕರೆ ನೀಡಿದರು.

‘ಕೆರೆಗಳ ಜೀರ್ಣೋದ್ಧಾರಕ್ಕೆ ಹೆಚ್ಚು ಮಹತ್ವ ನೀಡಿದರೆ ಮಾತ್ರ ಕೊಳವೆ ಬಾವಿಗಳ ಪುನರುಜ್ಜೀವನ ಸಾಧ್ಯ. ಅದಕ್ಕಾಗಿ ಮಳೆನೀರನ್ನು ಸರಿಯಾಗಿ ಸಂರಕ್ಷಣೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ರುಕ್ಮಾಪುರದ ಶಿವಶರಣಪ್ಪ ಅಯ್ಯಾಳ, ಸುರೇಶ್ ನಾಯಕ, ಹನುಮಗೌಡ ದಳಪತಿ, ಪ್ರೊ.ಬಸವರಾಜ ಭಾವಿ ಮಾತನಾಡಿ,‘ರೈತರಿಗೆ ಇಂತಹ ಸಂವಾದ ಹಾಗೂ ಚರ್ಚಾಕೂಟಗಳು ಅವಶ್ಯಕವಾಗಿವೆ. ಇವುಗಳಿಂದ ರೈತರಿಗೆ ಆಧುನಿಕ ಕೃಷಿ ಪರಿಚಯವಾಗುತ್ತಾ ಹೋಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಮಲ್ಲಿಕಾರ್ಜುನ ಕೆಂಗನಾಳ, ಡಾ.ಉಮೇಶ ಬಾರಿಕರ, ಸತೀಶ್ ಕಾಳೆ, ಕೃಷಿ ಸಂಶೋಧನಾ ಕೇಂದ್ರದ ಕ್ಷೇತ್ರ ಅಧೀಕ್ಷಕಿ ಸೌಮ್ಯಾ, ಸುರಪುರ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕ ಮಹದೇವಪ್ಪ ಹಾಗೂ ಕೃಷಿ ಅಧಿಕಾರಿ ಭೀಮರಾಯ ಇದ್ದರು.

ಸುರಪುರ ಹಾಗೂ ಶಹಾಪುರ ತಾಲ್ಲೂಕಿನ ಸುಮಾರು 300 ರೈತರು ಅಭಿಯಾನದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT