ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ರೈತರ ಸ್ವಯಂ ಬೆಳೆ ಸಮೀಕ್ಷೆಗೆ ಅರಿವಿನ ಕೊರತೆ

ಇಂದು ಸಮೀಕ್ಷೆಗೆ ಕೊನೆ ದಿನಾಂಕ, ವಿಸ್ತರಿಸುವ ಸಾಧ್ಯತೆ
Last Updated 23 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಆಗಸ್ಟ್‌ 10ರಿಂದ ರೈತರಿಂದಲೇ ಬೆಳೆ ಸಮೀಕ್ಷೆ ಆರಂಭಗೊಂಡಿದ್ದು, ಬಹುತೇಕ ರೈತರಿಗೆ ಈ ಬಗ್ಗೆ ಅರಿವಿನ ಕೊರತೆ ಕಾಡುತ್ತಿದೆ. ಇದೇ 24ರಂದು ಸಮೀಕ್ಷೆ ಮುಕ್ತಾಯವಾಗಲಿದೆ.ಇದು ವಿಸ್ತರಣೆ ಆಗುವ ಸಾಧ್ಯತೆ ಇದೆ.ಆದರೆ, ಜಾಗೃತಿ ಕೊರತೆ ದಟ್ಟವಾಗಿದೆ.

ತಮ್ಮ ಜಮೀನಿನ ಬೆಳೆಯನ್ನು ರೈತರೇ ಸ್ವಯಂ ಸಮೀಕ್ಷೆ ಮಾಡಲು ಕೃಷಿ ಇಲಾಖೆ‘ರೈತರ ಬೆಳೆ ಸಮೀಕ್ಷೆ’ 2020-21 ಆ್ಯಪ್ ಮೂಲಕ ಅವಕಾಶ ಮಾಡಿಕೊಡಲಾಗಿದೆ.

ಜಿಲ್ಲೆಯಲ್ಲಿ 4,17,960 ತಾಕುಗಳಿದ್ದು, ಆಗಸ್ಟ್‌ 21ಕ್ಕೆ ಕೇವಲ 7,641ರಷ್ಟು ತಾಕುಗಳಲ್ಲಿ ಸರ್ವೆ ಆಗಿದೆ. ಶೇಕಡವಾರು 1.83 ರಷ್ಟು ಮಾತ್ರ ಆಗಿದೆ. ಇದರಿಂದ ಜಿಲ್ಲೆಯಲ್ಲಿ ಮತ್ತಷ್ಟು ಜಾಗೃತಿ ಮೂಡಿಸುವ ಹೊಣೆಗಾರಿಗೆ ಕೃಷಿ, ಸಂಬಂಧಿಸಿದ ಅಧಿಕಾರಿಗಳ ಮೇಲಿದೆ.

‘ಈ ಬೆಳೆ ಸಮೀಕ್ಷೆಯಲ್ಲಿ ಮೊಬೈಲ್ ಆ್ಯಪ್‍ನಲ್ಲಿ ಮಾಹಿತಿ ಅಪ್‍ಲೋಡ್ ಕಡ್ಡಾಯವಾಗಿದೆ. ಬಹುತೇಕ ರೈತರ ಬಳಿ ಸ್ಮಾರ್ಟ್‌ ಫೋನ್‌ ಇಲ್ಲ. ಇದ್ದರೂ ಆ ಬಗ್ಗೆ ಯಾವುದೇ ಕಾರ್ಯಾಗಾರ, ಕಾರ್ಯಕ್ರಮ ಕೃಷಿ ಅಧಿಕಾರಿಗಳು ನೀಡಿಲ್ಲ. ಇದರಿಂದ ಸಮೀಕ್ಷೆಗೆ ಹಿನ್ನಡೆಯಾಗಲು ಇದು ಒಂದು ಕಾರಣ’ ಎಂದು ಜಿಲ್ಲಾ ಕಾಂಗ್ರೆಸ್‌ ಕಿಸಾನ್ ಕಾರ್ಯಾಧ್ಯಕ್ಷ ಮಾಣಿಕರೆಡ್ಡಿ ಕುರಕುಂದಿ ಆರೋಪಿಸುತ್ತಾರೆ.

ಏನು ಉಪಯೋಗ ಇದು: ಬೆಳೆ ಸಮೀಕ್ಷೆ ಮಾಡುವುದರಿಂದ ರೈತರಿಗೆ ಹಲವಾರು ಉಪಯೋಗಗಳಿವೆ ಎನ್ನುವುದು ಕೃಷಿ ಇಲಾಖೆ ಅಧಿಕಾರಿಗಳು ನೀಡುವಮಾಹಿತಿಯಾಗಿದೆ. ಬೆಳೆ ವಿಮೆ, ಸಬ್ಸಿಡಿ, ಬೆಳೆಹಾನಿ ಪರಿಹಾರ, ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರದಲ್ಲಿ ನಿಖರ ಅಂಕಿ ಅಂಶ ಸಿಗಲಿದೆ. ಈ ಮೂಲಕ ರೈತರೇ ಸಮೀಕ್ಷೆ ಮಾಡುವುದರಿಂದ ಅಕ್ರಮವೂ ತಪ್ಪುತ್ತದೆ ಎಂದುತಾಂತ್ರಿಕ ಜಂಟಿ ಕೃಷಿ ನಿರ್ದೇಶಕ ರಾಜಕುಮಾರ ಹೇಳುತ್ತಾರೆ.

‘ರೈತರು ಈ ಆ್ಯಪ್ ಅನ್ನು ಗೂಗಲ್ ಪ್ಲೇಸ್ಟೋರ್‌ನಿಂದ ಮೊಬೈಲ್‍ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬೇಕು. ಇದರಲ್ಲಿ ರೈತರು ತಮ್ಮ ಹೆಸರು, ಮೊಬೈಲ್ ಸಂಖ್ಯೆ, ಓಟಿಪಿ ಸಂಖ್ಯೆ ನಮೂದಿಸಿ ನೋಂದಣಿ ಆ್ಯಪ್‍ನಲ್ಲಿ ಮಾಸ್ಟರ್ ವಿವರಗಳನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು. ಜಮೀನಿನ ಸರ್ವೆ ಸಂಖ್ಯೆಗಳನ್ನು ಆ್ಯಪ್‍ಗೆ ಸೇರಿಸಿಕೊಳ್ಳಬೇಕು.ಮುಂದಿನ ಹಂತದಲ್ಲಿ ಜಮೀನಿನಲ್ಲಿ ಬೆಳೆದ ಬೆಳೆ ವಿವರಗಳನ್ನು ದಾಖಲಿಸಬೇಕು. ಈ ಹಂತದಲ್ಲಿ ಕೃಷಿಯೇತರ ಬಳಕೆಯ ಪ್ರದೇಶದ ವಿವರವನ್ನೂ ದಾಖಲಿಸಬೇಕು. ರೈತರು ತಾವು ಬೆಳೆ ಬೆಳೆದ ವಿಸ್ತೀರ್ಣದ ಜೊತೆಗೆ ಪ್ರತಿ ಬೆಳೆಯ ಎರಡು ಚಿತ್ರಗಳನ್ನು ತೆಗೆದು ಅಪ್ಲೋಡ್ ಮಾಡಬೇಕು. ಹೀಗೆ ಅಪ್ಲೋಡ್ ಮಾಡಿದ ಮಾಹಿತಿಯನ್ನು ಆಯಾ ಗ್ರಾಮಕ್ಕೆ ನೇಮಿಸಲಾದ ಸರ್ಕಾರಿ ಅಧಿಕಾರಿಗಳು ಪರಿಶೀಲಿಸಿ ಅನುಮೋದಿಸುತ್ತಾರೆ.

ಈ ಸಮಯದಲ್ಲಿ ರೈತರು ದಾಖಲಿಸಿದ ಬೆಳೆ ವಿವರಕ್ಕೆ ತಾಳೆಯಾಗದಿದ್ದಲ್ಲಿ ಮೇಲ್ವಿಚಾರಕರು ಅಂತಹ ಮಾಹಿತಿಯನ್ನು ತಿರಸ್ಕರಿಸಿ ಮರು ಸಮೀಕ್ಷೆ ಖಾಸಗಿ ವ್ಯಕ್ತಿಗಳಿಗೆ ಕಳುಹಿಸುತ್ತಾರೆ’ ಎಂದು ವಿವರಿಸುತ್ತಾರೆ ಅವರು.

***

ರೈತರು ಹೆಚ್ಚು ಸೇರುವರೈತ ಸಂಪರ್ಕ ಕೇಂದ್ರ, ಬ್ಯಾಂಕ್‌ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಬೆಳೆ ಸಮೀಕ್ಷೆಗೆ ಬಗ್ಗೆ ಜಾಗೃತಿ ಮೂಡಿಸುವ ಭಿತ್ತಿ ಪತ್ರ ಅಂಟಿಸಲಾಗಿದೆ.
– ರಾಜಕುಮಾರ, ತಾಂತ್ರಿಕ ಜಂಟಿ ಕೃಷಿ ನಿರ್ದೇಶಕ

***
ಕೆಲ ದಿನಗಳು ಮಾತ್ರ ಸಮೀಕ್ಷೆಗೆ ಅವಕಾಶ ಕೊಡುವುದು ಬಿಟ್ಟು ಇದು ನಿರಂತರವಾಗಿ ನಡೆಯುವಂತೆ ಸರ್ಕಾರ ನೋಡಿಕೊಳ್ಳಬೇಕು
– ಮಾಣಿಕರೆಡ್ಡಿ ಕುರಕುಂದಿ,ಜಿಲ್ಲಾ ಕಾಂಗ್ರೆಸ್‌ ಕಿಸಾನ್ ಕಾರ್ಯಾಧ್ಯಕ್ಷ

***

ರೈತರಿಗೆ ಈ ಬಗ್ಗೆ ಯಾವುದೇ ತರಬೇತಿ ನೀಡಿಲ್ಲ. ನಮಗೆ ಮೊಬೈಲ್‌ ಬಳಕೆ ಬಗ್ಗೆ ಹೆಚ್ಚು ಗೊತ್ತಿಲ್ಲ. ಇದರಿಂದ ತರಬೇತಿ ನೀಡಿದರೆ ಅನುಕೂಲವಾಗಲಿದೆ
– ಚನ್ನಾರೆಡ್ಡಿ ಗುರುಸುಣಗಿ, ರೈತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT