ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುಕ್ತಿಧಾಮ’ಗಳಲ್ಲಿ ಇಲ್ಲ ಮೂಲಸೌಲಭ್ಯ

ನೀರು, ನೆರಳು, ಬೆಳಕಿನ ಸೌಲಭ್ಯ ಇಲ್ಲದೆ ಅಂತ್ಯಕ್ರಿಯೆ ವೇಳೆ ಸಂಬಂಧಿಕರ ಪರದಾಟ
Last Updated 2 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಯಾದಗಿರಿ: ನಗರದಲ್ಲಿ ವಿವಿಧ ಸಮುದಾಯಗಳ 22 ಸ್ಮಶಾನಗಳಿವೆ. ಆದರೆ, ಅಗತ್ಯ ಮೂಲಸೌಲಭ್ಯಗಳಿಲ್ಲ. ಬಹುತೇಕ ಸ್ಮಶಾನಗಳಿಗೆ ಆವರಣ ಗೋಡೆ ಇಲ್ಲ. ಮುಳ್ಳುಕಂಟಿಗಳು ಬೆಳೆದಿದ್ದು, ಅಂತ್ಯಕ್ರಿಯೆ ಪ್ರಕ್ರಿಯೆ ನೆರವೇರಿಸಲು ಜನರಿಗೆ ತೊಂದರೆ ಆಗುತ್ತಿದೆ.

ಗಂಜ್‌ ಪ್ರದೇಶದಲ್ಲಿ ನಾಲ್ಕೈದು ಸಮುದಾಯಗಳ ಸ್ಮಶಾನಗಳಿವೆ. ಕೆಲ ಸ್ಮಶಾನಗಳಿಗೆ ಆವರಣ ಗೋಡೆ ಇದೆ. ಆದರೆ, ವಿದ್ಯುತ್ ದೀಪ, ನೀರು, ನೆರಳು ಇಲ್ಲ. ಅಂತ್ಯಕ್ರಿಯೆ ವೇಳೆ ಸಂಬಂಧಿಕರು ನೀರು, ನೆರಳಿಗಾಗಿ ಪರಿತಪಿಸುತ್ತಾರೆ. ಕೆಲವೊಮ್ಮೆ ಅನಿವಾರ್ಯವಾಗಿ ರಾತ್ರಿ ವೇಳೆ ಅಂತ್ಯಕ್ರಿಯೆ ಮಾಡುವ ಸಂದರ್ಭ ಬರುತ್ತದೆ. ಅಂಥ ವೇಳೆ ಬೆಳಕಿನ ಸಮಸ್ಯೆ ಹೇಳತೀರದಾಗಿದೆ.

ಭೀಮಾ ಸೇತುವೆ:ಎಲ್ಲ ಸಮುದಾಯದವರಿಗೆ ಸಂಬಂಧಿಸಿದ ಸ್ಮಶಾನ ಇದಾಗಿದೆ. ಇದಕ್ಕೆ ಆವರಣ ಗೋಡೆ ಇಲ್ಲ. ಮುಳ್ಳುಕಂಟಿಗಳು ಬೆಳೆದಿವೆ. ಸ್ವಚ್ಛತೆಯಂತೂ ಇಲ್ಲ. ಗುಂಡಿ ಬಿದ್ದ ಸಿಸಿ ರಸ್ತೆ ಇದೆ. ನದಿಗೆ ಪಕ್ಕದಲ್ಲಿ ಇರುವುದರಿಂದ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇಲ್ಲಿ ಜಾಗದ ಕೊರತೆಯಿಂದ ಹೆಣ ಹೂಳುವುದಕ್ಕೆ ಸ್ಥಳ ಸಿಗದ ಪರಿಸ್ಥಿತಿ ಇದೆ. ಒಂದೊಂದು ಕಡೆ ಗುಂಡಿ ತೋಡಿದರೆ ಎಲುಬುಗಳು ಪತ್ತೆಯಾಗುತ್ತವೆ.

ಮುಕ್ತಿಧಾಮ:ದೊಡ್ಡ ಕೆರೆಗೆ ತೆರಳುವ ಮಾರ್ಗದಲ್ಲಿ ‘ಮುಕ್ತಿಧಾಮ’ ಇದೆ. ಇಲ್ಲಿ ಕಾಂಪೌಂಡ್‌ ಇದ್ದು, ಲೈಟ್‌ ವ್ಯವಸ್ಥೆ ಇಲ್ಲ. ಅಕ್ಕಪ‍ಕ್ಕದಲ್ಲಿಯೇ ಎರಡುಸ್ಮಶಾನಗಳಿವೆ. ನೀರು, ನೆರಳು ಇಲ್ಲ.

ಕೋಲಿ, ಕುರುಬ ಸಮಾಜ:ಕೋಲಿ, ಕುರುಬ ಸಮಾಜದಸ್ಮಶಾನ ಭೂಮಿ ಇದೆ. ಇಲ್ಲಿ ಮುಳ್ಳುಗಂಟಿಗಳು ಬೆಳೆದಿದ್ದು, ಯಾವುದೇ ಸೌಕರ್ಯ ಇಲ್ಲ.

ಗಂಗಾ ನಗರ:ಹತ್ತಿಕುಣಿ ರಸ್ತೆಯಲ್ಲಿರುವ ಗಂಗಾನಗರದಲ್ಲಿರುವ ಸ್ಮಶಾನಕ್ಕೆ ಕಾಂಪೌಂಡ್‌ ಇದ್ದು, ಗೇಟು ಕಿತ್ತು ಬಿದ್ದಿದೆ. ನೆರಳಿನ ವ್ಯವಸ್ಥೆ ಇದ್ದು, ಮುಳ್ಳುಗಿಡಗಳು ಯಥೇಚ್ಛವಾಗಿ ಬೆಳೆದಿವೆ.

18ನೇವಾರ್ಡ್‌ನ ಸ್ಮಶಾನದಲ್ಲಿ ಎಲ್ಲಿ ನೋಡಿದರೂ ಜಾಲಿ ಗಿಡಗಳು ಬೆಳೆದಿವೆ. ಅಂತ್ಯಕ್ರಿಯೆಗೆ ಖಾಲಿ ಜಾಗ ಹುಡುಕುವುದೇ ದೊಡ್ಡ ಕಷ್ಟ. ಇಲ್ಲಿ ಕೂಡ ಯಾವುದೇ ಸೌಲಭ್ಯಗಳು ಇಲ್ಲ.

ಛಲವಾದಿ ಸಮುದಾಯ ಪರದಾಟ: ನಗರದ ಛಲವಾದಿ ಸಮುದಾಯಕ್ಕೆ ಇಂದಿಗೂ ಸ್ಮಶಾನ ಭೂಮಿಇಲ್ಲ. ಇಲ್ಲಿಯವರೆಗೆ ಖಾಸಗಿ ಸ್ಥಳಗಳಲ್ಲಿ ಶವ ಸಂಸ್ಕಾರ ಮಾಡಿದ್ದಾರೆ. ಅಂಥ ಸ್ಥಳಗಳಲ್ಲಿ ಈಗ ವಿರೋಧ ವ್ಯಕ್ತವಾಗಿದ್ದರಿಂದ ಅಕ್ಷರಶಃ ಪರದಾಡುತ್ತಿದ್ದಾರೆ.

ಇದ್ದಾಗ ಸುಖಪಡಲಿಲ್ಲ. ಸತ್ತಾಗಲಾದರೂ ಗೊಂದಲ- ಗೋಜಲುಗಳಿಲ್ಲದೆ ಮುಕ್ತಿ ಕೊಡಿ ಎಂದು ಹಿರಿಯರು ಹೇಳುತ್ತಾರೆ. ಈ ಸಮುದಾಯದವರು ಶವ ಸಂಸ್ಕಾರಕ್ಕೆ ತೀವ್ರ ರೀತಿಯಲ್ಲಿ ಪರದಾಡುತ್ತಿದ್ದಾರೆ.ರಸ್ತೆ, ನದಿ, ನಾಲೆ ಬದಿಯಲ್ಲಿ ಸಂಸ್ಕಾರ ಮಾಡಬೇಕಾದ ಸ್ಥಿತಿ ಇದೆ.ಮನೆ ಸದಸ್ಯರು ಮೃತಪಟ್ಟಾಗ ಅವರ ಅಗಲಿಕೆ ನೋವು ಕುಟುಂಬದವರನ್ನು ದುಃಖದಲ್ಲಿ ಮುಳುಗಿಸುವುದಲ್ಲದೆ ಅವರ ಅಂತ್ಯ ಸಂಸ್ಕಾರ ಎಲ್ಲಿ ನಡೆಸಬೇಕೆಂಬ ಚಿಂತೆ ಕಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT