ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ। ಗ್ರಾಮ ಪಂಚಾಯಿತಿ ಕೇಂದ್ರಸ್ಥಾನದಲ್ಲೇ ಸೌಲಭ್ಯಗಳ ಕೊರತೆ

ಜೈಗ್ರಾಮದಲ್ಲಿ ಸಮಸ್ಯೆಗಳ ‘ಜಾತ್ರೆ’
Last Updated 24 ನವೆಂಬರ್ 2022, 8:24 IST
ಅಕ್ಷರ ಗಾತ್ರ

ಯಾದಗಿರಿ (ಜೈಗ್ರಾಮ): ಗ್ರಾಮ ಪಂಚಾಯಿತಿ ಅಧ್ಯಕ್ಷರ ಕೇಂದ್ರ ಸ್ಥಾನದಲ್ಲಿಯೇ ಮೂಲಭೂತ ಸೌಕರ್ಯಗಳು ಸೇರಿದಂತೆ ಹಲವು ಸಮಸ್ಯೆಗಳು ತಾಂಡವವಾಡುತ್ತಿವೆ.

ಗುರುಮಠಕಲ್ ತಾಲ್ಲೂಕಿನ ಜೈಗ್ರಾಮದಲ್ಲಿ ಸಮಸ್ಯೆಗಳ ಜಾತ್ರೆಯಾಗಿದ್ದು, ಈಚೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬದಲಾಗಿದ್ದಾರೆ.

ಯಲಸತ್ತಿ, ಜೈಗ್ರಾಮ ಗ್ರಾಮಕ್ಕೆ ಒಬ್ಬರೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇದ್ದು, ಜೈಗ್ರಾಮ ಹೆಚ್ಚುವರಿಯಾಗಿ ನೀಡಲಾಗಿದೆ. ಇದರಿಂದ ಅಭಿವೃದ್ಧಿ ಅಧಿಕಾರಿ ಯಾವಾಗಲೋ ಬರುತ್ತಾರೆ. ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗಿದೆ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.

ಜೈಗ್ರಾಮ ಗ್ರಾಮ ಪಂಚಾಯಿತಿ ಸ್ಥಾನಮಾನ ಹೊಂದಿದ್ದು, ಮೂರು ಅಂಗನವಾಡಿ ಕೇಂದ್ರಗಳನ್ನು ಹೊಂದಿದೆ. ಹಿರಿಯ ಪ್ರಾಥಮಿಕ ಶಾಲೆ ಇದೆ.

ಜೈಗ್ರಾಮ 4 ಸದಸ್ಯರು, ಇಡ್ಲೂರು 3, ಸಂಕ್ಲಾಪುರ 3, ಬಸ್ಸಾಪುರ 1, ಗೊರೆನೂರು, ಕುಂಟಿಮರಿ 2 ಸದಸ್ಯರನ್ನು
ಹೊಂದಿದೆ.

ಗ್ರಾಮದಲ್ಲಿ ಸುಮಾರು 2,000ಕ್ಕಿಂತ ಹೆಚ್ಚು ಜನಸಂಖ್ಯೆ ಇದ್ದು, ಜನರಿಗೆ ತಕ್ಕಂತೆ ಸೌಲಭ್ಯಗಳಿಲ್ಲ. ಚರಂಡಿ, ಅವೈಜ್ಞಾನಿಕ ಸಿ.ಸಿ ರಸ್ತೆ ನಿರ್ಮಾಣ, ಸಾರ್ವಜನಿಕ ಶೌಚಾಲಯ, ಶುದ್ಧ ಕುಡಿಯುವ ನೀರು ಸೇರಿದಂತೆ ಹಲವು ಸಮಸ್ಯೆಗಳಿಂದ ಜನ ಹೈರಾಣಾಗಿದ್ದಾರೆ.

ಪಂಚಾಯಿತಿಯಲ್ಲಿ ಸರ್ವರ್ ಸಮಸ್ಯೆ: ಪಂಚಾಯಿತಿ ಮಟ್ಟದಲ್ಲೇ ಈಗ ಸರ್ಕಾರಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಫಲಾನುಭವಿಗಳು ಅರ್ಜಿ ಸಲ್ಲಿಸಿದರೆ ಸರ್ವರ್‌ ಸಮಸ್ಯೆ ಇದೆ ಎನ್ನುವುದು ಅಲಿಖತ ನಿಯಮವಾಗಿದೆ. ಗಡಿ ಭಾಗವಾಗಿದ್ದರಿಂದ ಯಾವುದೇ ಸೌಲಭ್ಯವೂ ಸುಲಭವಾಗಿ ಸಿಗುವುದಿಲ್ಲ ಎಂದು ಗ್ರಾಮಸ್ಥರು ಹೇಳುವ ಮಾತಾಗಿದೆ.

ಅವೈಜ್ಞಾನಿಕ ಸಿಸಿ ರಸ್ತೆ ನಿರ್ಮಾಣ: ಗ್ರಾಮದ ಯದ್ಲಾ ಬಸಪ್ಪ ಮನೆಯಿಂದ ಶಾಂತಪ್ಪ ಮನೆಯವರೆಗೆ ₹10 ಲಕ್ಷ ವೆಚ್ಚದಲ್ಲಿ ಅವೈಜ್ಞಾನಿಕವಾಗಿ ಸಿಸಿ ರಸ್ತೆ ನಿರ್ಮಿಸಲಾಗಿದೆ. ರಸ್ತೆ ನಿರ್ಮಿಸುವ ಮೊದಲು ಚರಂಡಿ ನಿರ್ಮಿಸಬೇಕು ಎಂಬುದು ನಿಯಮವಿದ್ದರೂ ಸಿಸಿ ರಸ್ತೆ ಪಕ್ಕದಲ್ಲಿ ಚರಂಡಿ ನಿರ್ಮಿಸಿಲ್ಲ. ಇದರಿಂದ ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗುತ್ತಿವೆ.

ಅಲ್ಲದೇ ಗೃಹ ಬಳಕೆಯ ನೀರು ಹೋಗಲು ಸ್ಥಳವಿಲ್ಲದೆ ಎಲ್ಲೆಂದರಲ್ಲಿ ಸಂಗ್ರಹವಾಗಿ ದುರ್ವಾಸನೆ ಉಂಟಾಗುತ್ತಿದೆ. ಗ್ರಾಮ ಪಂಚಾತಿಯಿಂದ ಹನುಮಾನ ದೇವಸ್ಥಾನದವರೆಗಿನ ಮುಖ್ಯರಸ್ತೆಯು ಮಣ್ಣಿನಿಂದ ಕೂಡಿದ್ದು, ಮಳೆಗಾಲದಲ್ಲಿ ದೊಡ್ಡದಾದ ತಗ್ಗು ಗುಂಡಿಗಳು ನಿರ್ಮಾಣಗೊಳ್ಳುತ್ತವೆ. ಇದರಿಂದ ವಾಹನ ಸವಾರರು ಹರಸಾಹಸ ಪಡುವಂತಾಗುತ್ತದೆ.

ಕ್ಷೇಮ ಕೇಂದ್ರ ಸುತ್ತುವರೆದ ಕೊಳಚೆ ನೀರು: ಜನಸಾಮಾನ್ಯರ ಆರೋಗ್ಯ ಕವಚದಂತಿರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಪರಿಶಿಷ್ಟ ವಾರ್ಡ್‌ ಹಾಗೂ ಗ್ರಾಮದ ಬಹುತೇಕ ಮನೆಗಳ ಬಳಕೆ ನೀರು, ಮಳೆ ನೀರು ಸುಗಮವಾಗಿ ಸಂಚರಿಸಲು ಚರಂಡಿ ಇಲ್ಲದೆ ಎಲ್ಲವು ಆರೋಗ್ಯ ಕೇಂದ್ರದ ಮುಂಭಾಗದಲ್ಲಿರುವ ಖಾಲಿ ನಿವೇಶನದಲ್ಲಿ ಸಂಗ್ರಹವಾಗುತ್ತಿವೆ. ಆರೋಗ್ಯ ಕೇಂದ್ರಕ್ಕೆ ಬರಲು ರಸ್ತೆ ಇಲ್ಲದಂತಾಗಿದೆ.

ಸಾರ್ವಜನಿಕ ಶೌಚಾಲಯವಿಲ್ಲ: ಗ್ರಾಮದಲ್ಲಿ ಈ ಹಿಂದೆ ಗ್ರಾಮ ಪಂಚಾಯಿತಿ ವತಿಯಿಂದ ಮನೆಗಳಲ್ಲಿ ನಿರ್ಮಿಸಿದ ಶೌಚಾಲಯಗಳು ಕಳಪೆ ಮಟ್ಟದ್ದಾಗಿವೆ. ಅವು ಬಳಕೆಗೆ ಯೋಗ್ಯವಾಗಿರದೆ ಬಿದ್ದು ಹೋಗಿವೆ. ಇದರಿಂದ ಮಹಿಳೆಯರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ ಜನರು ರಸ್ತೆ ಪಕ್ಕದಲ್ಲಿ ಶೌಚ ಮಾಡಿ ಹೋಗುತ್ತಾರೆ. ಇದರಿಂದ ಗ್ರಾಮದಲ್ಲಿ ಕೆಟ್ಟ ವಾಸನೆಯಿಂದ ಜನ ಬೇಸತ್ತಿದ್ದಾರೆ.

ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಿ ಜನರಿಗೆ ಅನೂಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.

ಒಂದೇ ನೀರಿನ ಘಟಕ: ಗ್ರಾಮದಲ್ಲಿ ಒಂದೇ ಶುದ್ಧ ಕುಡಿಯುವ ನೀರಿನ ಘಟಕವಿದೆ. ಇದು ಇತ್ತೀಚೆಗೆ ನೀರು ಸರಿಯಾಗಿ ಶುದ್ಧೀಕರಿಸುತ್ತಿಲ್ಲ ಎಂದು ಗ್ರಾಮಸ್ಥರುಆರೋಪಿಸಿದರು.

***

‘ಆಶ್ರಯ ಮನೆಗಳ ಹಂಚಿಕೆ ಮಾಡಿ’

‘ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಜೈಗ್ರಾಮ ಗ್ರಾಮದಲ್ಲಿ ಕಳೆದ 18 ವರ್ಷಗಳಿಂದ ಸರ್ವೇ ನಂ 257ರಲ್ಲಿ 5 ಎಕರೆ 33 ಗುಂಟೆಯಲ್ಲಿ ಬಡವರಿಗೆ ಆಶ್ರಯ ಕಾಲೊನಿಯ ಸುಮಾರು 30ಕ್ಕೂ ಹೆಚ್ಚು ಮನೆಗಳು ಹಂಚಿಕೆಯಾಗದೇ ಸರ್ಕಾರದ ಯೋಜನೆ ಹಾಗೂ ಜನರ ತೆರಿಗೆ ಹಣ ಹಳ್ಳ ಹಿಡಿದು ಹಾಳಾಗಿ ಹೋಗುತ್ತಿದೆ. ಈ ಕಾಲೊನಿಯಲ್ಲಿ ಸಿಸಿ ರಸ್ತೆ ಮಾಡಲಾಗಿದೆ. 2011 ರಲ್ಲಿಯೇ ಕುಡಿಯುವ ನೀರಿನ ಮೇಲ್ತೊಟ್ಟಿ ನಿರ್ಮಿಸಲಾಗಿದೆ.

ಇಷ್ಟೆಲ್ಲ ಸೌಕರ್ಯಗಳನ್ನುಒದಗಿಸಿದರೂ ಇದುವರೆಗೆ ಜನವಸತಿಯಾಗದೇ ಸ್ಮಶಾನದಂತಾಗಿ ಹಾಳುಬಿದ್ದಿದ್ದು, ಜಾಲಿಕಂಟಿ ಬೆಳೆದು ಹೋಗಲಾಗದಂತೆ ಕಾಡಿನಂತಾಗಿದೆ.ಕೂಡಲೇ ಅಶ್ರಯ ಮನೆಗಳನ್ನು ದುರಸ್ತಿ ಮಾಡಿ ಜನರಿಗೆ ಹಸ್ತಾಂತರ ಮಾಡಬೇಕು’ ಎಂದು ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಒತ್ತಾಯಿಸಿದ್ದಾರೆ.

***

ಗಡಿಯಲ್ಲಿ ಹಲವು ಸಮಸ್ಯೆಗಳು ತಾಂಡವವಾಡುತ್ತಿವೆ. ಅಧಿಕಾರಿ, ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ರೈತರಿಗೆ ಸೌಲಭ್ಯಗಳು ಸಿಗುತ್ತಿಲ್ಲ. ಶಾಲಾ ಕಟ್ಟಡಗಳ ದುರಸ್ತಿ ಮಾಡಬೇಕು. ಗಂಗಾಕಲ್ಯಾಣ ದುರುಪಯೋಗವಾಗಿದೆ
ಪ್ರಕಾಶ ಪಾಟೀಲ ಜೈಗ್ರಾಮ, ಆರ್ಥಿಕ ವಿಶ್ಲೇಷಕ

***

ಗ್ರಾಮದ ಹೊರವಲಯದಲ್ಲಿ ನಿರ್ಮಿಸಿದ ಆಶ್ರಯ ಮನೆಗಳು ಫಲಾನುಭವಿಗಳಿಗೆ ನೀಡದೆ ಪಾಳು ಬಿದ್ದಿವೆ. ಶೀಘ್ರವೇ ಸಂಬಂಧಪಟ್ಟವರಿಗೆ ಹಕ್ಕು ಪತ್ರದೊಂದಿಗೆ ಹಂಚಿಕೆ ಮಾಡಬೇಕು
ವೆಂಕಟರೆಡ್ಡಿ ಭೀಮರೆಡ್ಡಿಗ್ರಾಮಸ್ಥ

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT